ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
ಸಸ್ಯಪ್ರಿಯರಿಗೊಂದು ಎಚ್ಚರಿಕೆಯ ಸುದ್ದಿ. ಪೊದೆಗಳನ್ನು ಬೆಳೆಸಿ ಆದರೆ ಗೂಗಲ್ ಅರ್ಥ್‌ಗೆ ಕಾಣದ ಹಾಗೆ ಬೆಳಸಿ. ಎನ್ನುತ್ತಾನೆ ಸುದ್ದಿ ಕ್ಯಾತ. ಲಂಡನ್ನಿನ್ನ ಮಹಿಳೆಯೊಬ್ಬಳ ಕಥೆಯನ್ನು ಹೇಳಿ ಹೀಗೆ ನೀತಿಯನ್ನು ಹೇಳುತ್ತಾನೆ: “ಈ ಕಥೆಯ ನೀತಿ. ಭಗವಂತ ಕಾಣದ ಕಡೆ ಬಾಳೆಯ ಹಣ್ಣು ತಿನ್ನುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಗ್ಲೂಗಲ್ ಅರ್ಥ್‌ನ ಕ್ಯಾಮರಾ ಕಾಣದಂತೆ ಪೊದೆಗಳನ್ನು ಬೆಳೆಸುವುದು.”
ಪ್ರಜಾವಾಣಿಯಲ್ಲಿ ತಮ್ಮ ಗೆರೆಗಳ ಮೂಲಕ ಹೆಸರು ಮಾಡಿರುವ ಪಿ.ಮಹಮ್ಮದ್ ಸಿಇಟಿ ‘ಸೀಟು’ ಹಂಚಿಕೆಯನ್ನು ತಮ್ಮ ಗೆರೆಗಳ ಮೊನಚಿನಲ್ಲಿ ಕುಟುಕಿದ್ದಾರೆ. ಇಲ್ಲಿದೆ ಗೆರೆಗಳ ಗಾರುಡಿಯ ಸೃಷ್ಟಿ.
ಈ-ಟಿವಿಯ ವಾರ್ತೆಯಲ್ಲಿ ಕಾರ್ಟೂನುಗಳನ್ನು ಬರೆಯುವುದರ ಮೂಲಕ ಮನೆ ಮಾತಾದ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ತಮ್ಮ ಕಾರ್ಟೂನುಗಳಿಗಾಗಿ ಒಂದು ಬ್ಲಾಗು ತೆರೆದಿದ್ದಾರೆ. ಪ್ರಕಾಶ್ ಶೆಟ್ಟಿಯವರ ಬ್ಲಾಗ್ ಈ ಸಂಚಿಕೆಯ ಹೈಲೈಟ್…
ಬೊಗಳೆ ಬಿಡುವುದರಲ್ಲಿ ನಿಸ್ಸೀಮರಾದ ಅಸತ್ಯ ಅನ್ವೇಷಿಯವರನ್ನೇ ಬೆಕ್ಕಸ ಬೆರಗಾಗುವಂತೆ ಬೊಗಳೆ ಬಿಟ್ಟ ಅಮೇರಿಕಾದ ಅಧಕ್ಷ ಜಾರ್ಜ್ ವಾಕರಿ’ಕೆ ಬುಶ್‌ರಿಗೆ ಬೊಗಳೆ ಬ್ಯೂರೋ ಮಂದಿ ಗಾಳ ಹಾಕಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆ ಹೆಚ್ಚಲು ಭಾರತದ ಮಿಡ್ಲ್ ಕ್ಲಾಸ್ ಜನರ ತಿಂಡಿಪೋತತನವೇ ಕಾರಣ ಎಂದು ಬೊಗಳೆ ಬಿಟ್ಟು ಮೆಕ್ ಡೋನಾಲ್ಡ್ ತಿಂದು ಉಬ್ಬಿ ಕೊಬ್ಬಿ ಬೊಬ್ಬಿರಿಯುತ್ತಿರುವ ಅಮೇರಿಕನ್ನರ ಹಿಂದೆ ಸ್ವಸ್ಥ ಅಡಗಿ ಕುಳಿತಿರುವ ಬುಶ್ ‘ಪೊದೆ’ಗೆ ಗಾಳ ಹಾಕಲು ಹೊರಟಿರುವ ಅನ್ವೇಷಿಯವರಿಗೆ ನಗೆ ಸಾಮ್ರಾಟರ ಪರವಾಗಿ ಶುಭಾಶಯ…
ಪತ್ರಿಕೆಗಳಲ್ಲೆಲ್ಲಾ ರಾಜಕೀಯ ಪಕ್ಷಗಳ ಜಾಹೀರಾತು ನೋಡಿ ಕಣ್ಣು ಕೆಂಪಗಾಗಿರುವವರಿಗೆ ‘ಮಜಾವಾಣಿ’ಯಲ್ಲಿನ ಈ ಜಾಹೀರಾತು ರುಚಿಸಬಹುದು.
ಪಂಚಿಸುವುದರಲ್ಲಿ ಅಪಾರವಾಗಿ ಕೆಲಸ ಮಾಡುತ್ತಿರುವ ಗಣೇಶ್ ಸುಂದರವಾಗಿರದ ಹೆಂಡತಿಯನ್ನು ಪಡೆದವರೆಲ್ಲರೂ ಸಮಾಜ ಸೇವಕರಾಗಬಹುದು ಎಂದುಸಲಹೆಯನ್ನು ನೀಡಿದ್ದಾರೆ. ಮಲ್ಲಿಕಾ ಶೆರಾವತಳ ಶಾಶ್ವತ ಅಭಿಮಾನಿಯಾದ ಗಣೇಶ್ ಆಕೆ ಟಿಫಾನೀಸ್ ತೆರೆದರೆ ಹೇಗೆ ಅಂತಲೂ ಯೋಚಿಸಿದ್ದಾರೆ.
ಕಳೆದ ಸಂಚಿಕೆಯ ಬ್ಲಾಗ್ ಬೀಟ್
ನಿಮ್ಮದೊಂದು ಉತ್ತರ