ನಗಾರಿ ಸದ್ದಿಗೆ ಪತರಗುಟ್ಟಿದವರು!

31 ಜನ

ಆಗಾಗ ನಗೆ ಸಾಮ್ರಾಟರು ಹಾಸ್ಯವನ್ನು ಅಷ್ಟು ಲೈಟಾಗಿ ನೋಡಬೇಡಿ ಅಂತ ಸೀರಿಯಸ್ಲೀ ಸೀರಿಯಸ್ಸಾಗಿ ಯೋಚಿಸುತ್ತಾ ಕುಳಿತುಬಿಡುತ್ತಾರೆ. ಆಗ ನಗಾರಿಯ ಸಾರಥ್ಯವಹಿಸುವುದಕ್ಕಾಗಿ ಅಂತಲೇ ಸಾಮ್ರಾಟರು ಮತ್ತೊಂದು ದೇಹ ಧರಿಸಿ ಅವತರಿಸುತ್ತಾರೆ. ಒಂದೇ ವ್ಯತ್ಯಾಸವೆಂದರೆ ಈ ದೇಹದಲ್ಲಿ ಮಿದುಳು ಮಿಸ್ಸಾಗಿರುತ್ತದೆ. ಹಾಗಂತ ಇವರನ್ನು ಸಂಪಾದಕರು ಅನ್ನದೇ ಇರಲಾದೀತೇ? ಹೀಗೆ ಮಿದುಳೇ ಇಲ್ಲದ ಕೋಟಿ ಕೋಟಿ ಮಂದಿಯನ್ನು ನಾವು ಅಧಿಕಾರದ ಗಾದಿಯ ಮೇಲೆ ಕೂರಿಸಿಲ್ಲವೇ?

ಅದು ಜನವರಿ ಇಪ್ಪತ್ತಾರರ ಮಧ್ಯರಾತ್ರಿ. ದೇಶವಿಡೀ ಗಣತಂತ್ರದಿನ ಮುಗಿಸಿ ಸುಸ್ತಾಗಿ ಮಲಗಿದೆ. ಬೇರೆ ಬೇರೆ ವರ್ಗದ ಜನರ ಸುಸ್ತಿಗೆ ಬೇರೆ ಬೇರೆ ಕಾರಣಗಳಿದ್ದವು. ಐಟಿ,ಬಿಟಿ,ಕಾಲ್ ಸೆಂಟರ್ರು, ಫ್ಯಾಕ್ಟರಿಗಳ ಕೂಲಿಗಳಿಗೆ ‘ಗಣತಂತ್ರ ದಿವಸ’ 1157543301_f1cbc833fa.jpgಎಂಬುದು ಜನವರಿಯಲ್ಲಿ ಸಿಕ್ಕ ಮತ್ತೊಂದು ರಜಾದಿನದ ನೆಪಮಾತ್ರದ ಹೆಸರು ಅಷ್ಟೇ, ತಮ್ಮ ವಾರದ ದುಡಿಮೆಯ ದಣಿವನ್ನು ಒಂದೇ ಮುಟಿಗೆಯಲ್ಲಿ ತೀರಿಸಿಕೊಳ್ಳುವವರಂತೆ ಸಿನೆಮಾ ಥಿಯೇಟರುಗಳಿಗೆ, ಪಿಜ್ಜಾ ಗುಡಿಸಲುಗಳಿಗೆ, ಪ್ರವಾಸಿ ತಾಣಗಳಿಗೆ, ಬಾರ್ ರೆಸ್ಟೋರೆಂಟುಗಳೆಂಬ ‘ತೀರ್ಥ’ಸ್ಥಾನಗಳಿಗೆ ಲಗ್ಗೆ ಇಟ್ಟು ಕುಡಿದು, ಕುಣಿದು, ಕೆರಳಿ, ನರಳಿ ಸುಸ್ತಾಗಿದ್ದರು. ಇನ್ನು ಕೇಂದ್ರ, ರಾಜ್ಯ ಸರಕಾರ ಕೃಪಾಪೋಷಿತ ಕಛೇರಿಗಳ ನೌಕರರು ‘ಗಣತಂತ್ರ ದಿನ’ದ ಅನಿವಾರ್ಯವಾದ ಧ್ವಜಾರೋಹಣಾ, ಅಧ್ಯಕ್ಷರ ಕರ್ಣಕಠೋರವಾದ ಭಾಷಣ, ಬಿಗ್ಗ ಬಿಸಿಲಲ್ಲಿ ಪರೇಡುಗಳಲ್ಲಿ ಭಾಗವಹಿಸಿ ಒಂದು ಕಡೆ ದೇಶದ ಹಬ್ಬದ ದಿನದಂದು ದೇಶವನ್ನು ನೆನೆಯುತ್ತಿದ್ದೇವಲ್ಲಾ ಅಂತ ಸಂಭ್ರಮಿಸುತ್ತಾ, ಮತ್ತೊಂದು ಕಡೆ ಅನ್ಯಾಯವಾಗಿ ಒಂದು ರಜಾ ದಿನ ಕೈತಪ್ಪಿತಲ್ಲಾ ಅಂತ ಕೈ ಕೈ ಹಿಸುಕಿಕೊಳ್ಳುತ್ತ ದಣಿದಿದ್ದರು. ಇನ್ನು ಶಾಲೆಯ ಮಕ್ಕಳು ಉಪಧ್ಯಾಯರಿಗಂತೂ ದಣಿವಾಗುವುದು ಸಹಜವೇ, ಬೆಳಿಗ್ಗೆ ಆರು-ಏಳು ಗಂಟೆಗೆ ಎದ್ದು ಹಾಲು ಬ್ರೆಡ್ಡು ತಿಂದು ಹಿಂದಿನ ದಿನ ಅಮ್ಮ ಒಗೆದು ಕೊಟ್ಟ ಬಿಳಿಯ ಯೂನಿಫಾರ್ಮು, ಬಿಳಿಯ ಕ್ಯಾನ್ವಾಸ್ ಶೂ ಮೆಟ್ಟಿಕೊಂಡು, ಮುಖಕ್ಕೆ ಪೌಡರು ಮೆತ್ತಿಕೊಂಡು ಶರ್ಟಿನ ಜೇಬಿನ ಮೇಲೆ ದೇಶದ ತಿರಂಗಾದ ಧ್ವಜ ಸಿಕ್ಕಿಸಿಕೊಂಡು ಶಾಲೆಯ ಮೈದಾನಕ್ಕೆ ಹೋಗಿ ಮೂರ್ನಾಲ್ಕು ತಾಸು ಪರೇಡು, ಸಾಂಸ್ಕೃತಿಕ ಕಾರ್ಯಕ್ರಮಗಳೆಂಬ ಕಸರತ್ತು ಮುಗಿಸಿ ಕಾರ್ಯಕ್ರಮದ ಕೊನೆಯಲ್ಲಿ ಕೊಡುವ ಪೆಪ್ಪರ್ ಮೆಂಟಿಗಾಗಿ ನಿರೀಕ್ಷಿಸುತ್ತ ಸಮಯ ಕಳೆವ ಮಕ್ಕಳಿಗೆ, ಅವರನ್ನು ನೋಡಿಕೊಳ್ಳಲು ಹೆಣಗಾಡಿ ಜೀವ ಸವೆಸುವ ಟೀಚರುಗಳಿಗೆ ದಣಿವಾಗುವುದು ಸಹಜ. ಇನ್ನು ಜನನಾಯಕರು… ಊರಿನ ಯುವಕ ಸಂಘ, ಗಣೇಶ ಚೌತಿ ಸಮಿತಿಯಿಂದ ಹಿಡಿದು ದೆಹಲಿಯ ಕೆಂಪುಕೋಟೆಯವರೆಗೂ ನಡೆಯುವ ಧ್ವಜಾರೋಹಣವನ್ನು ನೆರವೇರಿಸಿ, ಕಾಟಾಚಾರಕ್ಕೆಂಬಂತೆ ನಾಲ್ಕು ನುಡಿಮುತ್ತುಗಳನ್ನು ತಮ್ಮ ‘ಜ್ಞಾನ’ದ ಖಜಾನೆಯಿಂದ ಹೊರತೆಗೆದು ಚೆಲ್ಲಿ ಕೇಳು’ಗರ’ನ್ನು ಪುನೀತರನ್ನಾಗಿಸಿ, ಇಲ್ಲದ ನದಿಗಳಿಗೆ ಸೇತುವೆಗಳನ್ನು ಕಟ್ಟಿಕೊಡುವ, ಮಂಗಳ ಗ್ರಹದಿಂದ ನೀರು ಸಪ್ಲೇ ಮಾಡಿಸುವ ಆಶ್ವಾಸನೆಗಳನ್ನು ಕೊಟ್ಟು ಕಿವಿಗಡಕಿಚ್ಚುವ ಚಪ್ಪಾಳೆ ಸಹಿಸಿಕೊಳ್ಳುವಷ್ಟರಲ್ಲೇ ದಣಿದು ಬಸವಳಿದು ಹೋಗಿರುತ್ತಾರೆ.

ಹೀಗೆ ಇಡೀ ದೇಶವೇ ದಣಿದು ಹಾಸಿಗೆಯ ಮೇಲೆ ಮೈಚೆಲ್ಲಿ ಮಲಗಿದಾಗ ಸದ್ದು ಮಾಡಲಾರಂಭಿಸಿತು ‘ನಗೆ ನಗಾರಿ ಡಾಟ್ ಕಾಮ್’! ಸವಿನಿದ್ದೆಯ ಮಡಿಲಲ್ಲಿ ತೇಲಾಡುತ್ತಿದ್ದ ನಿರ್ಲಜ್ಜರೆಲ್ಲಾ ದಿಗಿಲು ಬಿದ್ದವರಂತೆ ಎದ್ದು ಕುಳಿತರು. ದೊಡ್ಡ ದೊಡ್ಡ ಮನುಷ್ಯರ ಸಣ್ಣತನಗಳೆಲ್ಲ ನಗಾರಿಯ ಹರಿತವಾದ ಸದ್ದಿಗೆ ನಲುಗಿದವು. ರಾಜಕಾರಣಿಗಳಿಗೆ ಮೊಟ್ಟ ಮೊದಲ ಬಾರಿಗೆ ‘ಮಾನ’ವಿರುವುದರ ಅರಿವಾಯಿತು. ಮರ್ಯಾದೆ, ಲಜ್ಜೆಯನ್ನೆಲ್ಲ ಊರ ಹೊರಗೆ ಬಿಟ್ಟು ಮಠ ಮಾನ್ಯಗಳ ಒಳಗೆ ಅವಿತ ಕಾವಿಗೆ ನಗಾರಿಯ ಸದ್ದು ಕಾವು ಹುಟ್ಟಿಸಿತು. ಟೇಬಲ್ಲಿನ ಕೆಳಗೆ ಚಾಚಿದ ಕೈ, ಒಂದು ಕೈಯಲ್ಲಿ ಲಾಠಿ, ಸ್ಟೆತಾಸ್ಕೋಪು, ಮ್ಯಾಪು ಹಿಡಿದು ಮತ್ತೊಂದನ್ನು ಅಮಾಯಕರ ಜೇಬಿನೊಳಕ್ಕೆ ತೂರಿಸುತ್ತಿದ್ದವರ ಬೆನ್ನ ಹುರಿಯಲ್ಲಿ ಭಯದ ಝಳಕು! ಏಕೆಂದರೆ ‘ನಗೆ ನಗಾರಿ ಡಾಟ್ ಕಾಮ್’ ಅಂದು ಕಣ್ಣು ತೆರೆದಿತ್ತು.

ನಗಾರಿ ಹರಿತವಾದ ಸದ್ದನ್ನು ಮಾತ್ರ ಮಾಡುತ್ತದೆ ಎಂದು ಮೂಗು ಮುರಿಯುವ ವಿಮರ್ಶಕರೆಲ್ಲಾ ಪತರಗುಟ್ಟಿಹೋಗುವಂತೆ ನಗಾರಿ ‘ಮಿಡಿಯಲಾರಂಭಿಸಿತು’. ಸಮಾಜದ ಕಟ್ಟಳೆಗಳ ಬಂಧನದಲ್ಲಿ ನಲುಗಿದ ಜೀವಗಳ ಅಂತರಂಗದ ಜೀವಸೆಲೆಗೆ ಅಭಿವ್ಯಕ್ತಿಯ ಮಾಧ್ಯಮವಾಯಿತು ನಗಾರಿ. ಆಫೀಸು, ಕೆಲಸದ ಪರಿಸರ, ಆರೋಪಗೊಂಡ ವ್ಯಕ್ತಿತ್ವದ ಘನತೆಯ ಬೇಲಿ, ಅವರಿವರ ಹಂಗು, ತಾವೇ ಕಟ್ಟಿಕೊಂಡ ಕೋಟೆಯ ದಿಡ್ಡಿ ಬಾಗಿಲನ್ನು ದಾಟಿ ಹೊರಬರುವ ಹಾದಿಯಾಯಿತು ನಗಾರಿ. ಬದುಕೆಂಬ ಕ್ರೂರ ನ್ಯಾಯಾಧೀಶ ವಿಧಿಸಿದ ಎಲ್ಲಾ ಮೂರ್ಖ ಶಿಕ್ಷೆಗಳನ್ನು ‘ಹ್ಹೆ..ಹ್ಹೆ..’ ಎನ್ನುವಂತೆ ಎಡಗಾಲಲ್ಲಿ ಒದ್ದು ಮುನ್ನಡೆಯುವ ಹುಮ್ಮಸ್ಸಾಯಿತು ನಗಾರಿ!

ಇನ್ನು ನಗಾರಿಯ ಸದ್ದು ನಿಲ್ಲೋದಿಲ್ಲ. ಈ ನಗಾರಿಯ ಗುಣವೇ ಅಂಥದ್ದು, ಮೇಲಿಂದ ಮೇಲೆ ಬೀಳುವ ಏಟಿನ ತೀವ್ರತೆ ಹೆಚ್ಚಾದಷ್ಟೂ ನಗಾರಿ ಮನಃಪೂರ್ವಕವಾಗಿ ಮಿಡಿಯುತ್ತದೆ. ಆ ಸದ್ದು ನಾಲ್ಕು ದಿಕ್ಕುಗಳಲ್ಲೂ ಮಾರ್ದನಿಸಿ ಸಾವಿರ ಕಿವಿಗಳನ್ನು ತಲುಪಿ ಅವುಗಳ ಮೆದುಳಿಲ್ಲದ ತಲೆಗಳಲ್ಲಿ ನೂರ್ಮಡಿಯಾಗಿ ಪ್ರತಿಧ್ವನಿಗೊಂಡು ಮತ್ತೆ ನಗಾರಿಯ ಮೇಲೆ ಅಪ್ಪಳಿಸುತ್ತದೆ… ನಗಾರಿಯ ಸದ್ದು ನೆಲವನ್ನೇ ಕಂಪಿಸುತ್ತದೆ.

– ‘ಸಂಪಾದನೆ’ಯಿಲ್ಲದ ಕರು


Technorati : , , , ,

2 Responses to “ನಗಾರಿ ಸದ್ದಿಗೆ ಪತರಗುಟ್ಟಿದವರು!”

 1. Tina ಜನವರಿ 31, 2008 at 4:34 ಅಪರಾಹ್ನ #

  ಚನಾಗಿದೆ ಕಣ್ರೀ ಬೆನ್ತಟ್ಕೊಂಡಿರೋ ರೀತಿ!
  ಓದೋಕೆ ಶುರುಮಾಡಿದೀನಿ. ನಗೆಬುಗ್ಗೆಯುಕ್ಕಿಸುವ ಭರವಸೆ ನೀಡಿಬಿಟ್ಟಿದೀರಿ! ಗಾಳಿಪಟದ ಮೇಲಿನ ಬರಹ ಚೆನ್ನಾಗಿದೆ. ಶುಭ ಹಾರೈಸುತ್ತೇನೆ.
  -ಟೀನಾ.

 2. nagenagaaridotcom ಜನವರಿ 31, 2008 at 4:41 ಅಪರಾಹ್ನ #

  ನಮ್ಮ ಬೆನ್ನು ನಮಗೇ ಕಾಣೊಲ್ಲ ಅಂದರೆ ಬೇರೆಯವರು ಕಂಡದ್ದು ಎಷ್ಟು ನಿಜ ಅಂತ ಹೇಗೆ ಹೇಳೋದು? ಅಲ್ಲವೇ?
  ಭರವಸೆ ನೀಡೋದು ನಮ್ಮ ಕೆಲಸ ಅಲ್ಲ ಅದನ್ನು ನೀವೇ ಪಡೆದುಕೊಂಡಿರುವುದರಿಂದ ನಾವು ಹರ್ಷ ಚಿತ್ತರಾಗಿದ್ದೇವೆ.
  ಶುಭ ಹಾರೈಕೆಗೆ ತಲೆಬಾಗುತ್ತೇವೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: