ಅವರಿವರ ಭಯಾಗ್ರಫಿ 1


ಖ್ಯಾತರ, ಪ್ರಸಿದ್ಧ ವ್ಯಕ್ತಿಗಳ, ಮೇಧಾವಿ, ಕಲಾವಿದ, ವಿಜ್ಞಾನಿಗಳ ಬದುಕಿನಲ್ಲಿ ನಡೆದ ರಸ ಪ್ರಸಂಗಗಳಿದ್ದರೆ ಕಳುಹಿಸಿ ಅವನ್ನು ಇಲ್ಲಿ ಸಂಗ್ರಹಿಸಿಟ್ಟುಕೊಳ್ಳೋಣ.

…………………………………………………………………….

ಸಿಗಾರ್ ಪ್ರೇಮಿ

ಲೇಖಕ ಮಾರ್ಕ್ ಟ್ವೈನ್ ಅಸಾಧಾರಣ ಧೂಮಪಾನಿಯಾಗಿದ್ದರು. ಇದರಿಂದ ಅವರ ಪತ್ನಿ ಒಲಿವಿಯಾ ಅಲ್ಲದೆ ಅನೇಕ ಪರಿಚಿತರಿಗೆ ವಿಪರೀತ ತೊಂದರೆಯಾಗುತ್ತಿತ್ತು. ಕಾದಂಬರಿಕಾರ ವಿಲಿಯಂ ಡೀನ್ ಹೊವೆಲ್ಸ್ ನೆನಪಿಸಿಕೊಳ್ಳುವಂತೆ, ಒಮ್ಮೆ ಟ್ವೈನ್ ಕೆಲವು ದಿನಗಳ ಮಟ್ಟಿಗೆ ಹೊವೆಲ್ಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಆಗ ಹೊವೆಲ್ಸ್ ಕಿಟಕಿಗಳನ್ನೆಲ್ಲ ಸಂಪೂರ್ಣವಾಗಿ ತೆರೆದು ಮನೆಯಿಡೀ ಗಾಳಿಯಾಡುವಂತೆ ವ್ಯವಸ್ಥೆ ಮಾಡಬೇಕಿತ್ತು. ಏಕೆಂದರೆ ಟ್ವೈನ್ ಬೆಳಗಿನ ತಿಂಡಿಯ ಸಮಯದಿಂದ ಹಿಡಿದು ರಾತ್ರಿ ಹಾಸಿಗೆ ಸೇರುವವರೆಗೂ ಒಂದೇ ಸಮನೆ ಸಿಗಾರ್ ಸೇದುತ್ತಿದ್ದರು. ಕೆಲವು ಸಲ ನನ್ನ ಅಗ್ನಿ ಅಪಘಾತ ವಿಮೆಯ ನೆನಪಾಗಿ ಟ್ವೈನ್ ಕೋಣೆಗೆ ಓಡುತ್ತಿದ್ದೆ. ಗಾಢವಾಗಿ ನಿದ್ರಿಸುತ್ತಿದ್ದ ಆತನ ತುಟಿಯಿಂದ ಉರಿಯುತ್ತಿದ್ದ ಸಿಗಾರ್ ತೆಗೆದುಕೊಂಡು ಬರಲು!

ಪುಟ್ಟ ಟಿಪ್ಪಣಿ

ಒಮ್ಮೆ ದಿನಪತ್ರಿಕೆಯೊಂದನ್ನು ಓದುತ್ತಿದ್ದ ರುಡ್ಯಾರ್ಡ್ ಕಿಪ್ಲಿಂಗ್ ಕುತೂಹಲಕಾರಿ ಸುದ್ದಿಯೊಂದನ್ನು ಓದಿದರು. ಕೂಡಲೇ ಪತ್ರಿಕೆಯ ಸಂಪಾದಕರಿಗೆ ಒಂದು ಟಿಪ್ಪಣಿ ಬರೆದರು:

“ನಾನು ಸತ್ತಿರುವ ಸುದ್ದಿಯನ್ನು ಇದೀಗ ತಾನೆ ನಿಮ್ಮ ಪೇಪರ್‌ನಲ್ಲಿ ಓದಿದೆ. ನಿಮ್ಮ ಪತ್ರಿಕೆಯ ಚಂದಾದಾರರ ಪಟ್ಟಿಯಿಂದ ನನ್ನ ಹೆಸರು ತೆಗೆದುಹಾಕುವುದನ್ನು ಮರೆಯಬೇಡಿ.”

ಪ್ಯಾರಶೂಟ್ ಜಂಪರ್

೧೯೯೯ರ ಜೂನ್ ೧೨ರಂದು ಜಾರ್ಜ್ ಹರ್ಬರ್ಟ್ ವಾಕರ್ ಬುಶ್ ತಮ್ಮ ಎಪ್ಪತ್ತೈದನೆಯ ಹುಟ್ಟುಹಬ್ಬವನ್ನು ಎರೋಪ್ಲೇನ್ ಒಂದರಿಂದ ಪ್ಯಾರಶೂಟ್ ಕಟ್ಟಿಕೊಂಡು ಜಿಗಿಯುವುದರ ಮೂಲಕ ಆಚರಿಸಿಕೊಂಡರು. ಪತ್ನಿ ಬಾರ್ಬರಾಗೆ ಅದು ಸಹನೀಯವೆನಿಸಲಿಲ್ಲ. ಮುಂದೆ ತನ್ನ ಎಂಬತ್ತನೆಯ ವಯಸ್ಸಿನಲ್ಲಿಯೂ ಇಂಥದ್ದೇ ಸಾಹಸಕ್ಕೆ ಬುಶ್ ಮುಂದಾದಾಗ ಬಾರ್ಬರಾ, “ಆ ಜಿಗಿತ ಅವರನ್ನು ಕೊಲ್ಲದಿದ್ದರೆ, ನಾನೇ ಆ ಕೆಲಸ ಮಾಡುವೆ” ಎಂದಿದ್ದರು ಬೇಸತ್ತು.

ಸ್ವಾರಸ್ಯವೆಂದರೆ ಬಾರ್ಬರಾರ ಬಯಕೆ ನಿಜವಾಗಿ ಬಿಡುತ್ತಿತ್ತು! ಪ್ಯಾರಶೂಟ್ ಕಟ್ಟಿಕೊಂಡು ಪ್ಲೇನಿನಿಂದ ಜಿಗಿದ ಬುಶ್ ಪ್ಯಾರಶೂಟ್ ಬಿಚ್ಚುವ ಹಗ್ಗವನ್ನು ಎಳೆಯುವುದನ್ನು ‘ಮರೆತಿದ್ದರು.’ (ಆದರೆ ಜೊತೆಗಿದ್ದ ಜಂಪರ್‌ ಸಮಯ ಸ್ಪೂರ್ತಿಯಿಂದ ಆ ಕೆಲಸ ಮಾಡಿ ಬುಶ್‌ರನ್ನು ಉಳಿಸಿದ್ದ!)

…………………………………………………………….

ಭಾರತದ ತಂಡ ಟ್ವೆಂಟಿ ೨೦ ವಿಶ್ವಕಪ್‌ನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದರೂ ಭಾರತೀಯರಲ್ಲಿ ಕ್ರಿಕೆಟ್ ಜ್ವರ ಕಮ್ಮಿಯಾಗುವ ಲಕ್ಷಣ ಕಾಣುತ್ತಿಲ್ಲ. ಕೋಣಕ್ಕೆ ಬಂದ ಜ್ವರಕ್ಕೆ ಎಮ್ಮೆಗೆ ಬರೆ ಹಾಕುವಂತೆ ಅಲ್ಲಲ್ಲಿ ಕೆಲವರು ಆಟಗಾರರ ಪ್ರತಿಕೃತಿ ದಹಿಸುವ, ಚಪ್ಪಲಿಯಲ್ಲಿ ಹೊಡೆಯುವ ಚಿಕಿತ್ಸೆಯನ್ನು ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕ್ರಿಕೆಟಿಗೆ ಸಂಬಂಧಿಸಿದ ಕೆಲವು ರಸವತ್ತಾದ ಅನೆಕ್ಡೋಟುಗಳನ್ನು ಮೆಲುಕು ಹಾಕುವುದಕ್ಕೆ ಸಾಮ್ರಾಟರು ತೀರ್ಮಾನಿಸಿದ್ದಾರೆ.

ಅತೀಂದ್ರಿಯವಾದಿಯ ಪವಾಡ!

ಮಾಜಿ ಬ್ರಿಟೀಷ್ ಪ್ರಧಾನಿ ಜಾನ್ ಮೇಜರ್ ಹೇಳಿದ ಘಟನೆಯಿದು: “೧೯೬೦ರಲ್ಲಿ ನೈಜೀರಿಯಾದಲ್ಲಿ ನಡೆದ ಗಂಭೀರ ಕಾರ್ ಅಪಘಾತದಲ್ಲಿ ನನ್ನ ಕಾಲು ಮುರಿದ ನಂತರ ನಾನು ಕ್ರಿಕೆಟ್ ಆಡಲಿಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ಅನೇಕ ಮಂದಿ ಹಿಂದೆ ನನಗೆ ಸಂಭವಿಸಿದ ಘಟನೆಯ ಬಗ್ಗೆ ಅಸಾಧಾರಣವಾಗಿ ಮಾತನಾಡುವುದನ್ನು ಕಂಡಿದ್ದೇನೆ. ಅತೀಂದ್ರಿಯವಾದಿಗಳು ಭವಿಷ್ಯದಲ್ಲಿನ ಎಲ್ಲಾ ಥರದ ವಿಚಿತ್ರ ಘಟನೆಗಳನ್ನು ಕಾಣಬಲ್ಲವರಂತೆ ಕಾಣುತ್ತಾರೆ. ಹಿಂದೆ ನಡೆದಿದ್ದ ಘಟನೆಗಳನ್ನು ಬದಲಾಯಿಸುವ ಶಕ್ತಿ ಹೊಂದಿರುವವರಂತೆ ತೋರುತ್ತಾರೆ.

“ಒಮ್ಮೆ ಇಂಥ ಅತೀಂದ್ರಿಯವಾದಿ ಒಬ್ಬಾಕೆ ನನಗಾದ ಅಪಘಾತದ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾ, ‘ನಿಮಗೆ ಸಂಭವಿಸಿದ ಅಪಘಾತ ದುರದೃಷ್ಟಕರ. ಅದು ನಿಮ್ಮೆದುರಿದ್ದ ಕಾರಿಗೆ ಸಂಭವಿಸಬೇಕಾದ ಅಪಘಾತವಾಗಿತ್ತು’ ಎಂದಳು.

“ಆಕೆಗೇನು ಉತ್ತರಿಸಬೇಕೆಂದು ನನಗೆ ತಿಳಿಯಲಿಲ್ಲ. ನಾನು ಹೇಳಿದೆ: ‘ಹಾಗಾದರೆ ಅದೃಷ್ಟ ನನ್ನ ಕಾಲುಗಳನ್ನು ಮತ್ತೆ ಸರಿ ಪಡಿಸಲು ಸಾಧ್ಯವೇ?’ ‘ತುಂಬಾ ಕಷ್ಟ’ ಆಕೆ ಹೇಳಿದಳು, ‘ಕಾಲು ಮುರಿದಿದೆ, ಲಿಗಮೆಂಟುಗಳು ಹರಿದಿವಿ, ಮಂಡಿ ಚಿಪ್ಪು ಚೂರಾಗಿದೆ. ಅವನ್ನೆಲ್ಲ ಸರಿ ಪಡಿಸುವುದು ಅಸಾಧ್ಯ. ಆದರೆ ನಾನು ಸಮಾಧಾನಕರ ಬಹುಮಾನವಾಗಿ ನಿಮಗೆ ಒಂದು ವರವನ್ನು ಕೊಡಬಲ್ಲೆ.’ ‘ಅದ್ಭುತ!’ ನಾನಂದೆ, ‘ಮುಂದಿನ ಟೆಸ್ಟ್ ಮ್ಯಾಚಿನಲ್ಲಿ ದಯವಿಟ್ಟು ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುಸಿತವನ್ನು ತಪ್ಪಿಸು.’ ಆಕೆ ತುಸು ಆಲೋಚಿಸಿ, ‘ಎಲ್ಲಿ, ನಿಮ್ಮ ಕಾಲನ್ನೊಮ್ಮೆ ತೋರಿಸಿ’ ಎಂದಳು.

ಕ್ರಿಕೆಟ್ ಕಲಿಸಿದ ಪಾಠ

ಗ್ರೀಸ್ ದೊರೆ ಎರಡನೆಯ ಜಾರ್ಜ್ ಶಾಲೆಯಲ್ಲಿ ಕ್ರಿಕೆಟ್ ಆಡುವಾಗ ಒಮ್ಮೆ ಮೊದಲ ಎಸೆತಕ್ಕೆ ಬೌಲ್ಡ್ ಆಗಿದ್ದರು. ಆ ಘಟನೆಯನ್ನು ಆತ ಎಂದಿಗೂ ಮರೆಯಲಿಲ್ಲ. ಅದು ಆತನಿಗೆ ಜರ್ಮನ್ ಸೇನೆಯ ಅತಿಕ್ರಮಣದ ದಿನಗಳಲ್ಲಿನ ಬಡತನದ ಅಜ್ಞಾತವಾಸದ ಜೀವನವನ್ನು ಸಹನೀಯವಾಗಿಸಿತ್ತು ಎಂದು ಆತ ನೆನಪಿಸಿಕೊಳ್ಳುತ್ತಾನೆ.

ಗ್ರೀಸಿನಿಂದ ಹೊರದೂಡಲ್ಪಟ್ಟ ದುರದೃಷ್ಟವನ್ನು ಮರೆತು ಅದನ್ನು ತನ್ನ ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳುವುದಕ್ಕೆ ಆ ಘಟನೆ ಆತನಿಗೆ ನೆರವಾಯಿತೆಂದು ಆತನ ಗೆಳೆಯರು ನೆನಪಿಸಿಕೊಳ್ಳುತ್ತಾರೆ.

ಹುಡುಗೀರು ಏನು ಮಾಡ್ತಿದ್ರು?

ಖ್ಯಾತ ಕ್ರಿಕೆಟ್ ಪಟು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಡಗ್ಲಾಸ್ ಜಾರ್ಡಿನ್ ವಿಜಯ್ ಮಾಧವ್ ಜೀ ಮರ್ಚೆಂಟ್‌ರನ್ನು ಭಾರತ ಕಂಡ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಹೊಗಳಿರಬಹುದು, ಆದರೆ ಅವರ ಆಟವನ್ನು ನೋಡುವುದು ಬೋರು ಹೊಡೆಸುತ್ತಿತ್ತು.

೧೯೬೦ರ ಬಾಂಬೆ ಟೆಸ್ಟ್ ಮ್ಯಾಚ್ ಸಂದರ್ಭದಲ್ಲಿ ಅಬ್ಬಾಸ್ ಅಲಿ ಬೇಗ್ ಎಂಬ ಆಟಗಾರನಿಗೆ ಪ್ರೇಕ್ಷಕರ ಸಾಲಿನಲ್ಲಿ ಹುಡುಗಿಯೊಬ್ಬಳು ಚುಂಬಿಸಿದಳು.

“ನಾನು ಬ್ಯಾಟ್ ಮಾಡುವಾಗ ಈ ಹುಡುಗಿಯರೆಲ್ಲಾ ಏನು ಮಾಡುತ್ತಿದ್ದರು?” ಕೇಳಿದರು ಮರ್ಚೆಂಟ್. ಅದಕ್ಕೆ ಎ.ಎಫ್.ಎಸ್.ತಲ್ಯಾರ್‌ಖಾನ್ ಉತ್ತರಿಸಿದರು, “ನಿದ್ದೆ ಮಾಡುತ್ತಿದ್ದರು!”

…………………………………………………………….

ಪೆದ್ದ ಡಕಾಯಿತ

ಅಮೇರಿಕಾದ ಸ್ಯಾನ್ ಫ್ರಾನಿಸ್ಕೋದಲ್ಲಿ ನಡೆದ ಘಟನೆ ಇದು. ಬ್ಯಾಂಕ್ ಆಫ್ ಅಮೇರಿಕಾದಲ್ಲಿ ದರೋಡೆ ಮಾಡಬೇಕೆಂದು ತೀರ್ಮಾನಿಸಿದ ವ್ಯಕ್ತಿಯೊಬ್ಬ ಅದರ ಬ್ರಾಂಚಿಗೆ ಹೋಗಿ ಒಂದು ಫಾರಂ ತೆಗೆದುಕೊಂಡು ಹೀಗೆ ಬರೆದ,  “this iz a stikkup. Put all your muny in this bag.” (ನಾನು ದರೋಡೆ ಮಾಡಲಿದ್ದೇನೆ. ನನ್ನ ಬಳಿ ಗನ್ ಇದೆ. ನಿನ್ನ ಬಳಿಯಿರುವ ಹಣವನ್ನೆಲ್ಲಾ ಈ ಚೀಲದಲ್ಲಿ ಹಾಕು)

ಕ್ಯಾಶ್ ಕೌಂಟರ್ ಒಂದರ ಎದುರು ಸಾಲಿನಲ್ಲಿ ನಿಂತು ಕೊಂಡ. ಹೀಗೆ ನಿಂತಿರುವಾಗ ಆತನಿಗೆ ತನ್ನನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಎಂದು ಭಯ ಶುರುವಾಯಿತು. ತಾನು ಬರೆದದ್ದನ್ನು ಯಾರಾದರೂ ಕದ್ದು ನೋಡಿ ಪೊಲೀಸರಿಗೆ ಕರೆಸಿದರೆ ಎಂದು ಆತಂಕವಾಯಿತು. ಕೂಡಲೇ ಆ ಬ್ಯಾಂಕಿನಿಂದ ಹೊರ ಬಂದು ರಸ್ತೆ ದಾಟಿ ವೆಲ್ಸ್ ಫಾರ್ಗೊ ಬ್ಯಾಂಕನ್ನು ಹೊಕ್ಕ.

ಅಲ್ಲಿನ ಕ್ಯಾಶ್ ಕೌಂಟರಿನ ಸಾಲಿನಲ್ಲಿ ನಿಂತು ಕಾದು ಕ್ಯಾಶಿಯರ್ ಕೈಗೆ ಈ ಬೆದರಿಕೆ ಪತ್ರ ಕೊಟ್ಟ. ಈತನ ಪತ್ರದಲ್ಲಿನ ಸ್ಪೆಲ್ಲಿಂಗ್ ದೋಷಗಳನ್ನು ಕಂಡು ಈತ ಪೆದ್ದನಿರಬೇಕು ಎಂದೆನಿಸಿ ಆ ಕ್ಯಾಶಿಯರ್ ಆತನಿಗೆ ಹೀಗೆಂದಳು, ‘ನೋಡಿ ಇದು ಬ್ಯಾಂಕ್ ಆಫ್ ಅಮೇರಿಕಾದ ಫಾರಂ. ನಾನು ನಿಮಗೆ ಹಣ ನೀಡಲು ಸಾಧ್ಯವಿಲ್ಲ. ನಿಮಗೆ ಎರಡು ಆಯ್ಕೆಗಳಿವೆ. ಒಂದು: ವೆಲ್ಸ್ ಫಾರ್ಗೋ ನ ಫಾರಂ ತುಂಬಿಕೊಂಡು ಬರಬೇಕು.ಇಲ್ಲವಾದರೆ ನೀವು ಬ್ಯಾಂಕ್ ಆಫ್ ಅಮೇರಿಕಾಗೆ ಹೋಗಬೇಕು.”

‘ಸರಿ’ ಎಂದು ಹೇಳಿದ ಆ ವ್ಯಕ್ತಿ ಪುನಃ ನೇರವಾಗಿ ಬ್ಯಾಂಕ್ ಆಫ್ ಅಮೇರಿಕಾಗೆ ಹೋದ, ಪೊಲೀಸರ ಅತಿಥಿಯಾದ!


……………………………..ಅದೃಷ್ಟ-ನಂಬಿಕೆ

ಭೌತಶಾಸ್ತ್ರದಲ್ಲಿ ಖ್ಯಾತನಾಮನಾದ ನೀಲ್ಸ್ ಬೋರ್‌ರ ಹಳ್ಳಿ ಮನೆಗೆ ಒಬ್ಬ ಭೇಟಿ ನೀಡಿದ. ಗೋಡೆಯ ಮೇಲೆ ನೇತು ಹಾಕಿದ್ದ ಕುದುರೆ ಲಾಳ (horse shoe) ಕಂಡು ಬೋರ್‌ರನ್ನು ಗೇಲಿಮಾಡಿದ. “ನೀವು ಸಹ ಎಲ್ಲರ ಹಾಗೆ ಈ ಕುದುರೆ ಲಾಳ ಅದೃಷ್ಟ ತರುತ್ತೆ ಅಂತ ನಂಬ್ತೀರಾ?”.

“ಖಂಡಿತಾ ಇಲ್ಲ” ಬೋರ್ ಹೇಳಿದ, “ಆದರೆ ನಾನು ನಂಬಲಿ ಬಿಡಲಿ ಅದು ಅದೃಷ್ಟವನ್ನು ತಂದುಕೊಡುತ್ತದೆ ಎಂಬುದು ನನಗೆ ಗೊತ್ತು.”


……………………………..1729

ಶ್ರೀನಿವಾಸ ರಾಮಾನುಜಂ ಜಗತ್ತು ಕಂಡ ಅಪ್ರತಿಮ ಗಣಿತಜ್ಞ. ಅವರ ಗೆಳೆಯ ಜಿ.ಎಚ್.ಹಾರ್ಡಿ ಹೇಳಿದ್ದು : “ಪುಟ್ನಿಯಲ್ಲಿ ಆತ ರೋಗಗ್ರಸ್ತನಾಗಿ ಮಲಗಿರುವಾಗ ನಾನು ಭೇಟಿಯಾಗಿದ್ದೆ. ಆಗ ನಡೆದ ಒಂದು ಘಟನೆ ನನಗೆ ನೆನಪಿನಲ್ಲಿದೆ. ನಾನು 1729 ನಂಬರಿನ ಟ್ಯಾಕ್ಸಿಕ್ಯಾಬಿನಲ್ಲಿ ಅಲ್ಲಿಗೆ ಹೋಗಿದ್ದೆ. ಆ ಸಂಖ್ಯೆ ನನಗೆ ತೀರಾ ಸಪ್ಪೆಯಾಗಿ ಕಂಡಿತ್ತು. ಇದು ಅಪಶಕುನದ ಸಂಖ್ಯೆ ಆಗದಿರಲಿ ಎಂದು ಆಶಿಸಿದ್ದೆ ಎಂದು ಹೇಳಿದೆ.

“ ‘ಇಲ್ಲ’ ಆತ ಹೇಳಿದ, ‘ಅದು ತುಂಬಾ ಇಂಟರಸ್ಟಿಂಗ್ ಆದ ಸಂಖ್ಯೆ. It is the smallest number expressible as the sum of two cubes in two different ways.’ ” (ತಿಳಿದವರು ಈ ವಾಕ್ಯವನ್ನು ಕನ್ನಡಕ್ಕೆ ತನ್ನಿ 🙂 )

……………………………..ವಿರಾಮ ಚಿಹ್ನೆಗಳು

೧೮೦೨ರಲ್ಲಿ ತಿಮೋತಿ ಡೆಕ್ಸ್ಟರ್ “A Pickle for the Knowing Ones” ಎಂಬ ಹೆಸರಿನಲ್ಲಿ ಇಪ್ಪತ್ನಾಲ್ಕು ಪುಟಗಳ ಕರಪತ್ರವೊಂದನ್ನು ಪ್ರಕಟಿಸಿದ. ಅದರ ವಿಶೇಷತೆ ಎಂದರೆ ಇಡೀ ಪಾಂಪ್ಲೆಟಿನಲ್ಲಿ ಎಲ್ಲೆಂದರೆಲ್ಲೂ ಒಂದೂ ವಿರಾಮ ಚಿಹ್ನೆಯನ್ನು (punctuation) ಬಳಸಿರಲಿಲ್ಲ!

ಓದುಗರ ಒತ್ತಾಯದ ಮೇರೆಗೆ ಪರಿಷ್ಕೃತ ಆವೃತ್ತಿಯಲ್ಲಿ ವಿರಾಮ ಚಿಹ್ನೆಗಳನ್ನು ಬಳಸಿಕೊಂಡ. ಆದರೆ ಅವನ್ನು  ಬರಹದ ಮೇಲೆ ಎಲ್ಲೆಂದರಲ್ಲಿ ಸಿಂಪಡಿಸುವ ಬದಲೂ ಎಲ್ಲಾ ಚಿಹ್ನೆಗಳನ್ನು ಕರಪತ್ರದ ಕಡೆಯ ಪುಟದಲ್ಲಿ ನೀಡಿ ಒಂದು ಟಿಪ್ಪಣಿ ಪ್ರಕಟಿಸಿದ್ದ: “the nowing ones complane of my book the fust edition had no stops I put in a nuf here and thay may peper and solt it as they please”! (ನನ್ನ ಪುಸ್ತಕದ ಮೊದಲ ಆವೃತ್ತಿಯಲ್ಲಿ ವಿರಾಮಗಳಿಲ್ಲ ಎಂದು  ತಿಳಿದವರು ಆರೋಪಿಸಿದ್ದಾರೆ ನಾನು ಅವುಗಳನ್ನು ಇಲ್ಲಿ ಕೊಟ್ಟಿದ್ದೇನೆ ಅವರು ತಮಗಿಷ್ಟವಾದ ಹಾಗೆ ಅವನ್ನು ಸಿಂಪಡಿಸಿಕೊಳ್ಳಲಿ/ ಈ ವಾಕ್ಯದಲ್ಲಿನ ಸ್ಪೆಲ್ಲಿಂಗ್ ದೋಷಗಳನ್ನು ಗಮನಿಸಿ 🙂 )


……………………………..ಬರವಣಿಗೆ ತಿಳಿದಿಲ್ಲ

ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್ ಪತ್ರಿಕೆಯ ಸಂಪಾದಕ ರುಡ್ಯಾರ್ಡ್ ಕಿಪ್ಲಿಂಗಿಗೆ ಒಂದು ಪತ್ರವನ್ನು ಬರೆದ, ‘‘ಮಿ. ಕಿಪ್ಲಿಂಗ್ ನಾವು ನಿಮ್ಮ ಲೇಖನವನ್ನು ಪ್ರಕಟಿಸಿದ್ದೇವೆ. ಆದರೆ ಇನ್ನು ಮುಂದೆ ನಿಮ್ಮ ಯಾವುದೇ ಬರಹವನ್ನು ಪ್ರಕಟಿಸಬಾರದು ಎಂದು ತೀರ್ಮಾನಿಸಿದ್ದೇವೆ ಎಂದು ತಿಳಿಸಲು ವಿಷಾದಿಸುತ್ತೇವೆ. ಇಂಗ್ಲೀಷನ್ನು ಬಳಸುವುದು ಹೇಗೆ ಎಂಬುದೇ ನಿಮಗೆ ತಿಳಿದಿಲ್ಲ. ನೆನಪಿರಲಿ ನಮ್ಮ ಪತ್ರಿಕೆ ಹವ್ಯಾಸಿ ಬರಹಗಾರರ ನರ್ಸರಿ ಅಲ್ಲ.”

ಈ ಪತ್ರ ಬಂದ ಎಂಟು ವರ್ಷಗಳ ನಂತರ ಕಿಪ್ಲಿಂಗ್‌ರಿಗೆ ಸಾಹಿತ್ಯದಲ್ಲಿ ನೊಬೆಲ್ ಬಂದಿತು!

………………………………………………………………………………………

ಬೂಟ್ ಪಾಲಿಶ್

ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ತಮ್ಮ ಬೂಟುಗಳನ್ನು ತಾವೇ ಪಾಲಿಶ್ ಮಾಡಿಕೊಳ್ಳುವ ಸಂಪ್ರದಾಯವನ್ನು ಪಾಲಿಸುತ್ತಿದ್ದರು.
ಒಮ್ಮೆ ಸೆನೆಟ್ ಸದಸ್ಯರೊಬ್ಬರು ಅವರನ್ನು ಕೆಣಕಿದರು, ‘ಮಿ.ಲಿಂಕನ್ ನೀವು ನಿಮ್ಮ ಬೂಟುಗಳನ್ನು ನೀವೇ ಪಾಲಿಶ್ ಮಾಡಿಕೊಳ್ಳುತ್ತೀರಾ?’
ತಡಮಾಡದೆ ಲಿಂಕನ್ ಉತ್ತರಿಸಿದರು, ‘ಹೌದು. ನೀವು  ಯಾರ ಬೂಟು ಪಾಲಿಶ್ ಮಾಡುತ್ತೀರಿ?’

……………………………

ಭೀಷಣ ಭಾಷಣ

ಬ್ರಿಟನ್ ಪಾರ್ಲಿಮೆಂಟಿನಲ್ಲಿ ಒಬ್ಬ ಎಂ.ಪಿ ಭಾಷಣ ಬಿಗಿಯುತ್ತಿದ್ದ. ಭಾರಿ ಬೋರಿನ ಭಾಷಣ. ಮತ್ತೊಬ್ಬ ಎಂಪಿ ವೃದ್ಧ, ಕಿವಿ ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಆದರೂ ಕಿವಿ ಆ ಕಡೆ ಈ ಕಡೆ ತಿರುಗಿಸಿ ಕಷ್ಟ ಪಟ್ಟು ಕೇಳಲು ಯತ್ನಿಸುತ್ತಿದ್ದ.
ಆಗ ವಿನ್‌ಸ್ಟನ್ ಚರ್ಚಿಲ್ ಆ ಕಡೆ ನೋಡಿ ತನ್ನ ಪಕ್ಕದ ಸದಸ್ಯರಿಗೆ ಗಟ್ಟಿಯಾಗಿ ಹೇಳಿದರು: why does that idiot deny himself his natural advantage?  ( ಆ ಮೂರ್ಖ ತನ್ನ ಸಹಜ ಕಿವುಡುತನದ ಲಾಭ ಪಡೆಯದೆ ಏಕೆ ಹೀಗೆ ಕಷ್ಟ ಪಡುತ್ತಿದ್ದಾನೆ?)

……………………………

ಘಾ ಉವಾಚ

ಟಿ.ಪಿ.ಕೈಲಾಸಂ ಒಮ್ಮೆ ಹೇಳಿದ್ದರು, “Grey hairs are respected (ಬಿಳಿ ಕೂದಲು ಗೌರವಕ್ಕೆ ಪಾತ್ರವಾಗುತ್ತದೆ)” ಎಂದು.
ಇದಕ್ಕೆ ಕೊಂಚ ಒಗ್ಗರಣೆ ಬೆರೆಸಿ ವೈ.ಎನ್.ಕೆ ಸೃಷ್ಠಿಯಾದ ಶ್ರೀಮಾನ್ ಘಾ ಹೀಗೆ ಬರೆಯುತ್ತಾರೆ: ವಯಸ್ಸಾದರೂ ಕರಿ ಕೂದಲಿದ್ದರೆ ಜನ ನಂಬದೆ ಬಣ್ನ ಹಾಕಿದ ಶಂಕೆ ಇರುವಾಗ – black hairs are suspected ಎನ್ನಬಹುದು!

……………………………

ಚಿಮಣಿ

ಮಾರ್ಕ್ ಟ್ವೈನ್‌ರ ಪರಿಚಿತರಿಗೆ ಅವರ ಸಿಗರೇಟ್ ಸೇವನೆಯು ಬಹಳ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಮುಂಜಾನೆ ಎಚ್ಚವಾದಾಗಿನಿಂದ ಹಿಡಿದು ರಾತ್ರಿ ಹಾಸಿಗೆಯಲ್ಲಿ ಮಲಗಿ ನಿದ್ರೆಗೆ ಜಾರುವವರೆಗೂ ನಿರಂತರವಾಗಿ ಎಡೆಬಿಡದೆ ಸಿಗರೇಟು ಸೇದುತ್ತಿದ್ದರು ಎಂಬುದು ಅಂಬೋಣ. ಅವರನ್ನು ಮಿತ್ರರು ನಿರಂತರವಾಗಿ ಹೊಗೆ ಬಿಡುವ ಚಿಮಣಿಗೆ ಹೋಲಿಸುತ್ತಿದ್ದರಂತೆ!
ತಮ್ಮ ಮೇಲಿನ ಆರೋಪಗಳಿಂದ ವಿಚಲಿತರಾಗದ ಟ್ವೈನ್ ಒಮ್ಮೆ ಹೀಗೆ ಹೇಳಿದ್ದರಂತೆ, “ನಾನು ಸಿಗರೇಟು ಸೇವನೆ ಕಡಿಮೆ ಮಾಡಿದ್ದೇನೆ. ಹೇಗೆ ಅಂತೀರಾ? ನಾನೀಗ ಸೇದುವುದು ಒಂದು ಬಾರಿಗೆ ಒಂದೇ ಸಿಗರೇಟು!”

……………………………

ಗೌರವ

ಆಲಿವರ್ ಹರ್ಫೋರ್ಡ್ ತಮ್ಮ ಹಾಸ್ಯ ಪ್ರಜ್ಞೆಗೆ ಹೆಸರಾದವರು. ಒಮ್ಮೆ ತಮ್ಮ ಸೋದರ ಅಳಿಯನಾದ ಚಿಕ್ಕ ಹುಡುಗನನ್ನು ಕರೆದುಕೊಂಡು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಹುಡುಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಹರ್ಫೋರ್ಡ್ ಬಸ್ಸಿನಲ್ಲಿ ಆಸೀನರಾಗಿದ್ದರು. ಆ ಸಂದರ್ಭದಲ್ಲಿ ಒಬ್ಬ ಸುಂದರ ತರುಣಿ ಬಸ್ಸನ್ನೇರಿದಳು. ಬಸ್ಸಿನಲ್ಲಿ ಸೀಟಿಲ್ಲದ್ದನ್ನು ಕಂಡು ಆಕೆ ಅಲ್ಲೇ ನಿಂತುಕೊಂಡಳು.

ಒಡನೆಯೇ ಹರ್ಫೋರ್ಡ್ ಹುಡುಗನ ತಲೆ ಸವರುತ್ತಾ, “ಮಗು, ಈ ಆಂಟಿಗೆ ನಿನ್ನ ಸೀಟು ಬಿಟ್ಟು ಕೊಡುತ್ತೀಯಾ” ಎಂದು ಕೇಳಿದರು!

………………………………………………………………………………………

ಕತ್ತೆಗಳ ಆಗ್ರಹ!

ಅಬ್ರಹಾಂ ಲಿಂಕನ್ ಅಮೇರಿಕಾದ ಅಧ್ಯಕ್ಷರಾದ ಮೊದಲಲ್ಲಿ ಅನೇಕರು ತಮ್ಮನ್ನು ಮಂತ್ರಿ ಮಾಡಿ ಎಂದು ಅವರನ್ನು ಕಾಡುತ್ತಿದ್ದರು. ಒಮ್ಮೆ ಒಬ್ಬಾತ ತುಂಬಾ ಕಾಡಿದಾಗ ಲಿಂಕನ್ ಈ ಕಥೆ ಹೇಳಿದರು:

“ಒಬ್ಬ ರಾಜ ಮಂತ್ರಿಯ ಜೊತೆಯಲ್ಲಿ ಸಂಚಾರ ಹೊರಟಿದ್ದ. ಎದುರುಗಡೆಯಿಂದ ಒಬ್ಬ ಅಗಸ ಕತ್ತೆ ಹೊಡೆದುಕೊಂಡು ಬಂದವನು, ತಮ್ಮ ಮಹಾರಾಜರನ್ನು ನಿಂತು ನೋಡಿ ನಮಸ್ಕಾರ ಮಾಡಿ ಹೇಳಿದನು, ‘ಮಹಾಸ್ವಾಮಿ, ಮುಂದಕ್ಕೆ ಹೋಗಬೇಡಿ. ಮಳೆ ಬರುತ್ತಿದೆ’. ಅಷ್ಟು ಹೇಳಿ ಅವನು ಹೊರಟುಹೋದ. ರಾಜ ಮಂತ್ರಿಯ ಕಡೆ ನೀಡಿದ. ಅವನು, ‘ಇಲ್ಲ ಸ್ವಾಮಿ ಮಳೆ ಬರುವುದಿಲ್ಲ. ಒಂದೂ ಮೋದ ಇಲ್ಲ. ನಡೆಯಿರಿ ಮುಂದೆ ಹೋಗೋಣ.’ ಇಬ್ಬರೂ ಹೋದರು. ಮಳೆ ಸುರಿಯಿತು. ರಾಜ ಕಿಡಿಕಿಡಿಯಾದ.

ಅರಮನೆಗೆ ಹಿಂತಿರುಗಿದ ಮೇಲೆ ಅಗಸನನ್ನು ಕರೆಸಿ ಕೇಳಿದ: ‘ಮಳೆ ಬರುತ್ತೆ ಅಂತ ನಿನಗೆ ಹೇಗಯ್ಯಾ ಗೊತ್ತಾಯ್ತು?’ ಅಗಸ: ‘ಅದೇನು ಮಹಾ ವಿಷಯ? ಮಹಾಸ್ವಾಮಿ? ನನ್ನ ಕತ್ತೆ ಹೇಳುತ್ತೆ, ಮಳೆಯ ಸೂಚನೆ ಸಿಕ್ಕಿದ ಕೂಡಲೇ ನನ್ನ ಕತ್ತೆ ಕಿವಿ ಬಡಿಯುತ್ತದೆ.’ ರಾಜನಿಗೆ ಸಂತೋಷವಾಯಿತು. ಮಂತ್ರಿಯನ್ನು ವಜಾಮಾಡಿ ಕತ್ತೆಯನ್ನೇ ಮಂತ್ರಿಯನ್ನಾಗಿ ಮಾಡಿಕೊಂಡ.

ಅಲ್ಲಿದ್ದ ಯಾರೋ ‘ಆಮೇಲೆ?’ ಅಂದರು. ಅದಕ್ಕೆ ಲಿಂಕನ್ ಹೇಳಿದರು, ‘ಆಮೇಲೇನು? ಗೊತ್ತೇ ಇದೆ. ಊರಿನ ಕತ್ತೆಗಳೆಲ್ಲಾ ರಾಜನ ಹತ್ತಿರ ಬಂದು ತನನ್ನು ಮಂತ್ರಿ ಮಾಡಿ, ನನ್ನನ್ನು ಮಂತ್ರಿಯನ್ನಾಗಿ ಮಾಡಿ ಅಂತ ಕಾಡಲು ಮೊದಲಿಟ್ಟವು!’

……………………………

ಹಲ್ ಸೆಟ್ಟು!


ಕ್ವೆಯಿ ಎಂಬ ಚೀಣೀ ಸೈನ್ಯಾಧಿಕಾರಿ ಜಾರ್ಜ್ ಬರ್ನಾಡ್ ಷಾ ಅವರನ್ನು ನಖಶಿಖಾಂತ ವರ್ಣಿಸಿ ಹೊಗಳಲು ತೊಡಗಿದ. ಬೇಸತ್ತ ಷಾ ಎಷ್ಟು ಪ್ರಯತ್ನಿಸಿದರೂ ಅವನ ಬಾಯಿ ಮುಚ್ಚಿಸಲು ಸಾಧ್ಯವಾಗಲಿಲ್ಲ. ಕ್ವೆಯಿ ಒಂದು ಹಂತದಲ್ಲಿ ಷಾರವರ ಹಲ್ಲುಗಳನ್ನು ಹಾಡಿ ಹೊಗಳಲು ಶುರು ಮಾಡಿದ ಕೂಡಲೇ ಷಾ ತಮ್ಮ ಬಾಯಿಂದ ಹಲ್ಲು ಸೆಟ್ಟನ್ನು ತೆಗೆದು ಅವನ ಮುಂದೆ ಹಿಡಿದು, ‘ತಗೋ, ಇದನ್ನು ಹತ್ತಿರದಿಂದಲೇ ನೋಡಿ ಹಾಡಿ ಹೊಗಳು’ ಎಂದರು!

……………………………

ರೆಡಿ ಟು ಈಟ್!


ಮೂಲಭೂತ ಸಂಶೋಧನೆಗೂ, ಅಭಿವೃದ್ಧಿಗೂ ಬಹಳಷ್ಟು ವ್ಯತ್ಯಾಸವಿದೆ. ಅಭಿವೃದ್ಧಿಗೆ ದಿಢೀರ್ ಕಾರ್ಯಕ್ರಮ ಹಾಕಬಹುದು. ಆದರೆ ಮೂಲಭೂತ ಸಂಶೋಧನೆ ಹಾಗೆ ಫಲಿಸುವಂತಹುದಲ್ಲ. ದಿಢೀರ್ ಸಂಶೋಧನೆ ಮಾಡುವುದು ಸಾಧ್ಯವಿಲ್ಲ ಎಂಬುದನ್ನು ವಿವರಿಸಲು ವಿಜ್ಞಾನಿ ರಿಚರ್ಡ್ ಡಾಲ್ ಹೇಳಿದ್ದು:
“ಒಂದೇ ತಿಂಗಳಲ್ಲಿ ಮಗುವನ್ನು ಪಡೆಯುತ್ತೇವೆ ಎಂದು ಏಕಕಾಲದಲ್ಲಿ ಒಂಬತ್ತು ಮಹಿಳೆಯರನ್ನು ಗರ್ಭಿಣಿಯರನ್ನಾಗಿ ಮಾಡಿದಂತೆ.”

……………………………

ಮುಂದಿನವನ ಶರ್ಟಿಗೆ ಒರೆಸೋ!


ನಾ. ಕಸ್ತೂರಿಯವರು ಒಮ್ಮೆ ಸುಮಾರು ೨೦ ಜನ ವಿದ್ಯಾರ್ಥಿಗಳನ್ನು – ಮದರಾಸು ತೋರಿಸಲು ಕರೆದುಕೊಂಡು ಹೋದ ಸಂದರ್ಭವನ್ನು ಪ್ರಭುಶಂಕರ್ ತಮ್ಮ ‘ಪ್ರಭು ಜೋಕ್ಸ್’ ಪುಸ್ತಕದಲ್ಲಿ ಹೀಗೆ ನೆನಪಿಸಿಕೊಳ್ಳುತ್ತಾರೆ:
ಆಗ ಗಾಂಧೀಜಿ ಮದರಾಸಿಗೆ ಬಂದಿದ್ದರು. ಅವರ ಭಾಷಣ ಸಂಜೆ ೫ಕ್ಕೆ. ನಮ್ಮನ್ನೆಲ್ಲ ಕಸ್ತೂರಿಯವರು ಮಧ್ಯಾಹ್ನ ೨ ಗಂಟೆಗೇ ಸಭೆ ನಡೆಯಬೇಕಾಗಿದ್ದ ಬಯಲಿನಲ್ಲಿ ಕೂರಿಸಿದರು. ಬಿಸಿಲು, ದಾಹ ತಡೆಯಲಾರದಷ್ಟು. ಮಧ್ಯೆ ಐಸ್‌ಕ್ರೀಮ್ ಮಾರುವವನು ಬಂದ, ನಮಗೆಲ್ಲಾ ಐಸ್ ಕ್ರೀಮು ಕೊಡಿಸಿದರು ನಮ್ಮ ಮೇಷ್ಟ್ರು ಕಸ್ತೂರಿಯವರು. ತಿಂದೆವು. ಕೈ ಒರೆಸಬೇಕಲ್ಲಾ, ನಾನೂ ಪರದಾಡುತ್ತಿದ್ದೆ. ಮೇಷ್ಟ್ರು ನನ್ನ ಹಿಂದೆಯೇ ಕುಳಿತಿದ್ದರು. ನನ್ನ ಕಷ್ಟ ನೋಡಿ ಹೇಳಿದರು: ‘ಒರೆಸೋ, ನಿನ್ನ ಮುಂದೆ ಕುಳಿತಿದ್ದಾನಲ್ಲಾ, ಅವನ ಶರ್ಟಿಗೆ ಒರೆಸು. ಅವನಿಗೇನೂ ಕಾಣೋದಿಲ್ಲ.’ ನನ್ನ ಮುಂದೆ ಕುಳಿತಿದ್ದ ನನ್ನ ಸಹಪಾಠಿ ಸೊಗಸಾದ ಸಿಲ್ಕ್ ಶರ್ಟ್ ಹಾಕಿಕೊಂಡಿದ್ದ. “ಛೇ, ಬೇಡ ಸರ್, ಅವನ ಶರ್ಟು ಹಾಳಾಗುತ್ತೆ” ಎಂದೆ. ಕಸ್ತೂರಿಯವರು, ‘ಒರೆದೋ ಪರವಾಗಿಲ್ಲ. ಈಗ ನೋಡು ನಾನು ನನ್ನ ಕೈಯನ್ನು ನಿನ್ನ ಷರ್ಟಿಗೆ ಒರೆಸಿಲ್ಲವೇ? ಒರೆಸೋ.’

……………………………

ನಾನು ಉಪವಾಸ ಮಾಡಲ್ಲ!


ಒಮ್ಮೆ ಗಾಂಧೀಜಿ ಉಪವಾಸ ಪ್ರಾರಂಭಿಸಿದರು. ಪಕ್ಕದಲ್ಲೇ ವಲ್ಲಭಭಾಯಿ ಪಟೇಲರು ನಿಂತಿದ್ದರು. ಗಾಂಧೀಜಿ ಅವರಿಗೆ ಹೇಳಿದರು: ‘ವಲ್ಲಭ ಭಾಯಿ, ನಿಮಗೂ ಅಪ್ಪಣೆ ಕೊಡುತ್ತೇನೆ ಉಪವಾಸ ಮಾಡಬಹುದು.’

‘ಬೇಡಿ ಬಾಪೂಜಿ, ಖಂಡಿತಾ ಬೇಡಿ. ನಾನಂತೂ ಉಪವಾಸ ಪ್ರಾರಂಭಿಸೋಲ್ಲ’ ಎಂದರು ವಲ್ಲಭಭಾಯಿ.

‘ಏಕೆ?’ ಆಶ್ಚರ್ಯದಿಂದ ಕೇಳಿದರು ಗಾಂಧೀಜಿ.

‘ನೀವು ಉಪವಾಸ ಮಾಡಿದರೆ ಬೇಡ ಎಂದು ಬೇಡಿಕೊಳ್ಳುವವರು ನೂರಾರು ಜನ. ಹಾಗೆ ಮಾಡಿ ನೀವು ಉಪವಾಸ ಮಾಡುವುದನ್ನು ತಪ್ಪಿಸುತ್ತಾರೆ. ನಾನು ಉಪವಾಸ ಮಾಡಿದರೆ ಬೇಡ ಎಂದು ಹೇಳಿ ನಿಲ್ಲಿಸುವವರು ಯಾರೂ ಇಲ್ಲವಲ್ಲ!’

……………………………………………………………………….

ಚರ್ಚಿಲ್ ಭಾಷಣ

ಬ್ರಿಟನ್ನಿನ ಪ್ರಧಾನಿಯಾಗಿದ್ದ ಚರ್ಚಿಲ್ ಬಿಬಿಸಿ ಯಲ್ಲಿ ಭಾಷಣ ಮಾಡಲು ಹೋಗುತ್ತಿದ್ದ್ದರು.ಎಷ್ಟು ಹೊತ್ತಾದರೂ ಅವರಿಗೆ ಒಂದು ಟ್ಯಾಕ್ಸಿ ಅವರಿಗೆ ಸಿಕ್ಕಲಿಲ್ಲ.ಕೊನೆಗೆ ಒಬ್ಬ ಟ್ಯಾಕ್ಸಿಯವನು ನಿಲ್ಲಿಸಿದ.ಚರ್ಚಿಲ್ ಹತ್ತಲು ಹೊರಟರು.ಅವನು ‘ಆಗುವುದಿಲ್ಲ ಸ್ವಾಮಿ.೬.೩೦ಕ್ಕೆ ಚರ್ಚಿಲ್ ರವರ ಭಾಷಣ ಇದೆ ರೇಡಿಯೋದಲ್ಲಿ,ಕೇಳಲೇಬೇಕು.ಅದಕ್ಕೆ ಹೋಗುತ್ತಿದ್ದೇನೆ’ ಅಂದ.ಚರ್ಚಿಲ್ ಮಾತಿಲ್ಲದೆ ಹತ್ತು ಪೌಂಡಿನ ಒಂದು ನೋಟನ್ನು ಅವನ ಕೈಯಲ್ಲಿರಿಸಿದರು.ತಕ್ಷಣವೆ ಅವನು ‘ಹತ್ತಿ ಸ್ವಾಮಿ,ಚರ್ಚಿಲ್ ಏನೂ ಬೇಕಾದರೂ ಬೊಗಳಿಕೊಳ್ಳಲಿ,’ಎಂದು ಹೇಳಿ ಅವರನ್ನು ಕೂರಿಸಿಕೊಂಡು ಹೊರಟ!

ನೀವು ಹೆಂಡತಿಯಾಗಿದ್ರೆ

ಚರ್ಚಿಲ್ ಅವರನ್ನು ಕುರಿತು ಲೇಡಿ ಆಸ್ಟರ್ ಹೇಳಿದ್ದು:
“ನಾನು ನಿಮ್ಮ ಹೆಂಡತಿಯಾಗಿದ್ದರೆ ನಿಮಗೆ ವಿಷ ಕೊಡುತ್ತಿದ್ದೆ!”
ಥಟ್ಟನೆ ಚರ್ಚಿಲ್ ಕೊಟ್ಟ ಉತ್ತರ, “ನಾನು ನಿಮ್ಮ ಗಂಡನಾಗಿದ್ದರೆ ಅದನ್ನು ಗಟಗಟನೇ ಕುಡಿದುಬಿಡುತ್ತಿದ್ದೆ.”

ಅಂಥದ್ದೊಂದು ಇದ್ದರೆ!

ಪ್ರಸಿದ್ಧ ನಾಟಕಕಾರ ಬರ್ನಾಡ್ ಷಾರವರ ಹೊಸ ನಾಟಕವೊಂದು ಮೊದಲ ಬಾರಿಗೆ ಪ್ರದರ್ಶನವಾಗುತ್ತಲಿತ್ತು. ಪ್ರಥಮ ಪ್ರದರ್ಶನಕ್ಕೆ ಎಂದು ಷಾ ಎರಡು ಟಿಕೆಟುಗಳನ್ನು ಚರ್ಚಿಲ್ಲರಿಗೆ ಕಳುಹಿಸಿ ಕೊಟ್ಟರು. ಜೊತೆಯಲ್ಲಿ ಒಂದು ಚೀಟಿ ಇಟ್ಟರು.
“ಒಂದು ಟಿಕೆಟ್ ನಿಮಗೆ. ಇನ್ನೊಂದಕ್ಕೆ ನಿಮ್ಮ ಸ್ನೇಹಿತರನ್ನು ಕರೆತನ್ನಿ. ಅಂಥವರೊಬ್ಬರು ಇದ್ದರೆ.”
ಚರ್ಚಿಲ್ ಟಿಕೆಟುಗಳನ್ನು ಹಿಂದಕ್ಕೆ ಕಳುಹಿಸಿದರು ಜೊತೆಗೆ ಒಂದು ಚೀಟಿ, “ಟಿಕೆಟ್ ಕಳುಹಿಸಿದ್ದಕ್ಕೆ ವಂದನೆಗಳು. ಆದರೆ ಬೇರೆ ಕೆಲಸವಿರುವುದರಿಂದ ಮೊದಲ ಪ್ರದರ್ಶನಕ್ಕೆ ಬರಲಾರೆ. ಎರಡೆನೆಯ ಪ್ರದರ್ಶನಕ್ಕೆ ಬರುತ್ತೇನೆ. ಅಂಥದ್ದೊಂದು ಇದ್ದರೆ.”

ಖಾಯಂ ಹಾಗೂ ಹಂಗಾಮಿ

ಬ್ರಿಟೀಷ್ ಪ್ರಧಾನಿ ಚರ್ಚಿಲ್ ಪಾರ್ಲಿಮೆಂಟಿನಲ್ಲಿ ಮಾತನಾಡುತ್ತಿದರು. ವಿರೋಧ ಪಕ್ಷದ ಮಹಿಳೆಯೊಬ್ಬರು ನಡುವೆ ಬಾಯಿ ಹಾಕಿ ಅಧ್ಯಕ್ಷರನ್ನುದ್ದೇಶಿಸಿ ಹೇಳಿದರು, “ಸ್ವಾಮಿ ಚರ್ಚಿಲ್ಲರಿಗೆ ಮುಂದಕ್ಕೆ ಮಾತನಾಡಲು ಅವಕಾಶವನ್ನು ಕೊಡಕೂಡದು. ಅವರು ಮಸೂದೆಯನ್ನು ಕುರಿತು ಖಾಯಂ ಪರಿಣಾಮ, ಹಂಗಾಮಿ ಪರಿಣಾಮ ಎಂದು ಏನೇನೋ ಹೇಳುತ್ತಿದ್ದಾರೆ. ಏನು ಮಾತಾಡುತ್ತಿದ್ದಾರೆ ಎಂಬುದು ಅವರಿಗೇ ಗೊತ್ತಾಗುತ್ತಿಲ್ಲ. ಅವರು ಕುಡಿದಿದ್ದಾರೆ.”
ಚರ್ಚಿಲ್ ಶಾಂತವಾಗಿ ಉತ್ತರ ಕೊಟ್ಟರು, “ತಾಯಿ, ಖಾಯಂ ಹಾಗೂ ಹಂಗಾಮಿಗಳ ನಡುವೆ ಇರುವ ವ್ಯತ್ಯಾಸ ಏನು ಅನ್ನೋದನ್ನ ನಾನು ಬಲ್ಲೆ. ನಾನು ಕುಡಿದಿದ್ದೇನೆ ಅನ್ನೋದು ಹಂಗಾಮಿ. ತಾವು ಕುರೂಪಿ ಅನ್ನೋದು ಖಾಯಂ.”

ಫರ್ಸ್ಟ್ ಯೂ ಮೇಡಂ

ಆಲಿವರ್ ಹರ್ಫೋರ್ಡ್ ತನ್ನ ಪುಟ್ಟ ಅಳಿಯನೊಂದಿಗೆ ಕಿಕ್ಕಿರಿದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ. ಹರ್ಫೋರ್ಡ್‌ರ ಅಳಿಯ ಅವರ ತೊಡೆಯ ಮೇಲೆ ಕುಳಿತಿದ್ದ. ಆಗ ಪ್ರಯಾಣಿಕರ ನಡುವೆ ಸುಂದರಿ ಯುವತಿಯೊಬ್ಬಳು ಸೀಟಿಗಾಗಿ ತಡಕಾಡುತ್ತಿದ್ದದ್ದು ಕಾಣಿಸಿತು. ಆಗ ಹರ್ಫೋರ್ಡ್ ತಮ್ಮ ಅಳಿಯನಿಗೆ, “ಮಗು, ಆ ಆಂಟಿಗೆ ನಿನ್ನ ಸೀಟು ಬಿಟ್ಟು ಕೊಡು” ಎಂದು ಹೇಳಿದರು!

………………………………………………………………..

ಕಡ್ಡಿ ಮುರಿದಂತೆ


ರಾಜಕಾರಣಿಗಳ ಮಾತು ಎಂದರೆ ಉಪ್ಪು ಖಾರವಿಲ್ಲದ ಸಪ್ಪೆ ಅಡುಗೆ ಎಂಬುದು ಜನ ಸಾಮಾನ್ಯರ ಅಭಿಪ್ರಾಯ. ಆದರೆ ಎಲ್ಲರೂ ಹಾಗಿರೋದಿಲ್ಲ. ಅವರಲ್ಲೂ ಕಡ್ಡಿ ಮುರಿದ ಹಾಗೆ, ಗುಂದು ಹಾರಿಸಿದ ಹಾಗೆ ಮಾತನಾಡುವವರೂ ಇರುತ್ತಾರೆ.
ಅಂಥವರಲ್ಲಿ ಬಂಗಾರಪ್ಪನವರೂ ಒಬ್ಬರು. ಅವರು ಪಕ್ಷದಿಂದ ಪಕ್ಷಕ್ಕೆ ಹಾರುವುದರಲ್ಲಿ ಗುರುತಿಸಲ್ಪಟ್ಟಂತೆಯೇ ಚುರುಕು ಮಾತಿಗೂ ಹೆಸರಾದವರು.
ಕಾಂಗ್ರೆಸ್ಸಿನಲ್ಲಿದ್ದಾಗ ಅವರನ್ನು ಮೂಲೆಗುಂಪು ಮಾಡಲಿಕ್ಕೆ ಜನಾರ್ಧನ ಪೂಜಾರಿಯವರು ‘ಬಂ ಅವರನ್ನು ಪ್ರಚಾರ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ’ಎಂದರು. ಬಂ ಮರು ದಿನವೇ ‘ಪೂಜಾರಿಯವರೇ ದೊಡ್ಡ ಮೈಕು. ಇನ್ನು ಪ್ರಚಾರ ಸಮಿತಿಗೆ ನಾನ್ಯಾಕೆ ಬೇಕು?’ ಎಂದು ಧೂಳು ಕೊಡವಿಕೊಂಡು ಕಾಂಗ್ರೆಸ್ಸಿನಿಂದ ಎದ್ದು ಹೋದರು!

……………………….

ಆನ್ ಆಪನ್ ಎ ಡೇ…


ಬಿ.ಜಿ.ಎಲ್ ಸ್ವಾಮಿಯವರು ಲೇಖನವೊಂದರಲ್ಲಿ ತಮ್ಮ ತಾತನ ಬಗೆಗೊಂದು ರಸ ನಿಮಿಷವನ್ನು ನೆನೆಸಿಕೊಂಡಿದ್ದಾರೆ. ‘ಪಂಚ್’ ಪತ್ರಿಕೆಯಲ್ಲಿ An apple a Day keeps the doctor away ಎಂಬ ಜಾಹೀರಾತು ನೋಡಿ ಸ್ವಾಮಿಯವರ ತಾತ ತಾವೂ ದಿನಕ್ಕೊಂದು ಸೇಬು ತಿನ್ನಬೇಕು ಎಂದು ಮನಸ್ಸು ಮಾಡಿದರು.
ಅವರಿಗೆ ಯಾವ ರೋಗವೂ ಇರಲಿಲ್ಲ ಡಾಕ್ಟರರನ್ನು ಕಾಣಲು. ಮೇಲಾಗಿ ಸೇಬು ತಿನ್ನುವುದಕ್ಕೆ ಅವರ ಬಾಯಲ್ಲಿ ಹಲ್ಲುಗಳೂ ಇರಲಿಲ್ಲ. ಹಠ ಬಿಡದೆ ಅವರು ಸೇಬನ್ನು ಬೇಯಿಸಿಕೊಡಲು ಹೇಳಿದರು. ಬೇಯಿಸಿದ ಸೇಬು ತಿಂದು ಬೇಧಿ ಕಿತ್ತುಕೊಂಡಿತು. ಡಾಕ್ಟರರನ್ನು ಕರೆಸಬೇಕಾಯಿತು.
An apple a Day…

……………………….

ಕೋಗಿಲೆ ಹಾಡಿದೆ ಕೇಳಿದಿರಾ


ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಾ.ಕಸ್ತೂರಿ, ಎ.ಎನ್.ಮೂರ್ತಿರಾಯರು, ತೀನಂಶ್ರೀ, ನಾರಾಯಣಶಾಸ್ತ್ರಿ, ಶಿವರಾಮ ಶಾಸ್ತ್ರಿಗಳಂತಹ ಘಟಾನುಘಟಿಗಳು ಅಧ್ಯಾಪಕರಾಗಿದ್ದರು. ಅವರ ನಡುವಿನ ಅನೇಕ ಸರಸ ಸಂಭಾಷಣೆಗಳು ಹೆಸರುವಾಸಿಯಾಗಿವೆ.
ಗಡಸು ಕಂಠದ ತೀನಂಶ್ರೀ ಅಂದು ಒಮ್ಮೆ  ತಾವು ಅಪರೂಪಕ್ಕೊಮ್ಮೆ ಕವಿತೆ ರಚಿಸಿ ಹಾಡಿದ ಬಗ್ಗೆ ವಿವರಿಸಿದರು.
ಎ.ಎನ್.ಮೂರ್ತಿರಾಯರು: ಮೌನವೃತಾಪಾರಿಯಾದ ಕೋಗಿಲೆಯಿಂದು ಮೌನವಂ ಬಿಟ್ಟುಲಿಯತೊಡಗಿಹುದು…
ನಾ.ಕಸ್ತೂರಿ: ಕೋಗಿಲೇನ ಯಾಕೆ ಅಣಕಿಸ್ತೀರಯ್ಯಾ? ಅದ್ಯಾವ ಅಪರಾಧ ಮಾಡಿದೆ ಹೇಳಿ.
ನಾರಾಯಣ ಶಾಸ್ತ್ರಿ: ಈ ಕೋಗಿಲೆ ಗಂಟಲಿನಿಂದ ಹಾಡಲ್ಲ, ಲೇಖನಿಯಿಂದ ಹಾಡತ್ತೆ.
ಶಿವರಾಮಶಾಸ್ತ್ರಿ: ನಾವು ಬದುಕಿದೆವು. ದೇವರ ದಯ!
ತೀ.ನಂ.ಶ್ರೀ: ಹೀಗೆಲ್ಲಾ ಗೇಲಿ ಮಾಡಿದರೆ ನಾನು ಗಂಟಲಿನಿಂದಲೇ ಹಾಡಿಬಿಡುತ್ತೇನೆ ಹುಶಾರ್!
ಎಲ್ಲರೂ ಭಯವನ್ನು ನಟಿಸುತ್ತಾ ‘ನಿಮ್ಮ ದಮ್ಮಯ್ಯ ಕಣ್ರೀ ಬೇಡ’ ಎಂದು ಗೋಗರೆದರು.
ತೀನಂಶ್ರೀ: ದಮ್ಮಯ್ಯ ಗಿಮ್ಮಯ್ಯಾನ ನಾನು ಲೆಕ್ಕಕ್ಕಿಡ್ತಾ ಇಲ್ಲ. ಆದರೆ ನನ್ನ ಸಂಗೀತ ನನಗೂ ಕೇಳಿಸುತ್ತದಲ್ಲ, ಅದೇ ಹೆದರಿಕೆ…

……………………….

ಶ್ರೀಮಾನ್ ಘಾ


ವಂಡರ್ ವೈಎನ್‌ಕೆ ಪನ್ನಿಗೆ ಹೆಸರಾದವರು. ಲಘು ಬರಹದ ಧಾಟಿ ಅವರ ಮಾಧ್ಯಮವಾಗಿತ್ತು. ಅದರಲ್ಲೇ ಅವರು ವಿಮರ್ಶೆ ಮಾಡುತ್ತಿದ್ದರು. ವರದಿ ಕೊಡುತ್ತಿದ್ದರು. ವ್ಯಕ್ತಿ ಪರಿಚಯವೂ ಮಾಡಿಕೊಡುತ್ತಿದ್ದರು.
ಒಮ್ಮೆ ಅವರ ಅಭಿಮಾನಿಯೊಬ್ಬರು ತಮ್ಮ ನಾಟಕ ಪ್ರದರ್ಶನಕ್ಕೆ ವೈ.ಎನ್.ಕೆಯವರನ್ನು ಆಹ್ವಾನಿಸಿದ್ದರು. ತಮ್ಮ ವಾರದ ಅಂಕಣದಲ್ಲಿ ಅವರು ಆ ನಾಟಕದ ಬಗ್ಗೆ ವಿಮರ್ಶೆ ಬರೆದಿದ್ದರು. ಆ ನಾಟಕದ ಹೆಸರು ‘ಭ್ರಮೆ’. ವೈ.ಎನ್.ಕೆ ಬರೆದದ್ದು ಇಷ್ಟು ‘ಕಳೆದ ವಾರ ‘ಭ್ರಮೆ’ ಹೆಸರಿನ ಒಂದು ನಾಟಕ ನೋಡಿದೆ. ಅದನ್ನು ಒಂದು ನಾಟಕ ಎಂದು ತಿಳಿದಿದ್ದಾರಲ್ಲ ಅದು ನಾಟಕಕಾರನ ಭ್ರಮೆ. ಹಾಗೆಯೇ, ಅದು ಚೆನ್ನಾಗಿರಬಹುದೇನೋ ಎಂದು ನಿರೀಕ್ಷಿಸ್ತಾರಲ್ಲ, ಅದು ಪ್ರೇಕ್ಷಕರ ಇನ್ನೊಂದು ಭ್ರಮೆ.’

……………………….

ರಾಕ್ಷಸರ ಪಾತ್ರ


ಯಕ್ಷಗಾನದಲ್ಲಿ ಸ್ತ್ರೀಪಾತ್ರವನ್ನೂ ಗಂಡಸರೇ ಹಾಕುವುದು ರೂಢಿ.
ಒಂದು ಯಕ್ಷಗಾನದ ಕಾರ್ಯಕ್ರಮದಲ್ಲಿ ಶಿವರಾಮ ಕಾರಂತರು ಹಾಜರಿದ್ದರು. ಹಿರಿಯರೊಬ್ಬರು ‘ಯಕ್ಷಗಾನದಲ್ಲಿ ಸ್ತ್ರೀಯರ ವೇಷವನ್ನು ಸ್ತ್ರೀಯರೇ ಹಾಕಬೇಕು ಅಲ್ಲವೇ?’ ಎಂದು ಕೇಳಿದರು.
ಅವರ ಮಾತಿನಲ್ಲಿನ ಮೊನಚನ್ನು ಗ್ರಹಿಸಿದ ಕಾರಂತರು, ‘ಹಾಗಾದರೆ ರಾಕ್ಷಸರ ವೇಷವನ್ನು ರಾಕ್ಷಸರೇ ಹಾಕಬೇಕು’ ಎಂದರು!

……………………….……………………….……………………….

ಸಮುದ್ರ ತೀರವೇ ಇಲ್ಲ

ಅಮೇರಿಕನ್ ಸರಕಾರದ ಕಾರ್ಯದರ್ಶಿ ಪನಾಮಾ ಕಾಲುವೆಯ ಉದ್ಘಾಟನೆಗೆ ಎಲ್ಲಾ ರಾಷ್ಟ್ರಗಳಿಗೆ ಸಂಪ್ರದಾಯದ ಹಾಗೆ ಹಡಗುಗಳನ್ನು ಕಳುಹಿಸುವಂತೆ ಕೋರಿ ಪತ್ರ ಬರೆದ. ಹಾಗೆಯೇ ಒಂದು ಕೋರಿಕೆಯ ಪತ್ರ ಸ್ವಿಟ್ಝರ್ ಲ್ಯಾಂಡನ್ನು ತಲುಪಿತು. “ನಿಮ್ಮ ರಾಷ್ಟ್ರದ ಹಡಗನ್ನು ಕಳುಹಿಸಿ”. ವಿನೋದದ ವಿಷಯವೆಂದರೆ ಸ್ವಿಟ್ಝರ್‌ಲ್ಯಾಂಡಿನಲ್ಲಿ ಸಮುದ್ರತೀರವೂ ಇಲ್ಲ, ಅಲ್ಲಿ ನೌಕಾಪಡೆಯಂತೂ ಇಲ್ಲವೇ ಇಲ್ಲ!

……………………….

ನನ್ನ ರೂಪು, ನಿನ್ನ ಬ್ರೈನು!

ಜಾರ್ಜ್ ಬರ್ನಾಡ್ ಬ್ರಿಟನ್ನಿನ್ನ ಅತ್ಯಂತ ಮೇಧಾವಿ ನಾಟಕಕಾರ. ಸಾಮಾನ್ಯ ರೂಪಿನ ಜಾರ್ಜ್ ಬರ್ನಾಡ್ ಷಾ ತಮ್ಮ ಕಟು ವ್ಯಂಗ್ಯೋಕ್ತಿಗಳಿಗೆ ಹೆಸರು ವಾಸಿಯಾದವರು. ಒಮ್ಮೆ ಪಾರ್ಕೊಂದರಲ್ಲಿ ಬರ್ನಾಡ್ ಶಾ ಕುಳಿತಿರುವಾಗ ಸುರಸುಂದರಿಯೊಬ್ಬಳು ಅವರ ಬಳಿಗೆ ಬಂದು, ‘ಮಿಸ್ಟರ್ ಷಾ ನಾವಿಬ್ಬರೂ ಮದುವೆಯಾದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೇ? ನಮ್ಮ ಮಕ್ಕಳಿಗೆ ನನ್ನ ಸೌಂದರ್ಯ ಹಾಗೂ ನಿಮ್ಮ ಬುದ್ಧಿವಂತಿಕೆ ಬರುತ್ತದೆ” ಎನ್ನುವ ಮೂಲಕ ಬರ್ನಾಡ್ ಷಾರನ್ನು ಕಿಚಾಯಿಸಿದಳು.
ಸ್ವಲ್ಪವೂ ತಡವಿಲ್ಲದೆ ಷಾ ಉತ್ತರಿಸಿದರು, “ಮೈ ಡಿಯರ್ ಲೇಡಿ, ಅಕಸ್ಮಾತ್ ನೀನು ಹೇಳಿದ್ದು ಉಲ್ಟಾ ಆಗಿ ನಮ್ಮ ಮಕ್ಕಳಿಗೆ ನನ್ನ ರೂಪು ಹಾಗೂ ನಿನ್ನ ಬುದ್ಧಿವಂತಿಕೆ ಬಂದು ಬಿಟ್ಟರೆ…”

……………………….

ಕತ್ತೆಗಳ ಬಣ್ಣ ಒಂದೇ

ಒಮ್ಮೆ ರಾಧಾಕೃಷ್ಣನ್‌ರನ್ನು ಅವರ ಬ್ರಿಟೀಷ್ ಸ್ನೇಹಿತನೊಬ್ಬ ಪ್ರಶ್ನಿಸಿದ: “ಮಿ. ರಾಧಾಕೃಷ್ಣನ್, ನಿಮ್ಮ ದೇಶ ನಿಜವಾಗಿಯೂ ವಿಚಿತ್ರವಾಗಿದೆ. ಇಲ್ಲಿಯ ಹಲವು ಪ್ರಜೆಗಳ ಬಣ್ಣ ಕಪ್ಪು, ಕೆಲವರದು ಬಿಳಿ, ಇನ್ನು ಕೆಲವರ ಬಣ್ಣ ಕೆಂಪು. ಅದೇ ನಮ್ಮ ದೇಶದಲ್ಲಿ ನೋಡಿ- ಎಲ್ಲಾ ಪ್ರಜೆಗಳದೂ ಒಂದೇ ಬಣ್ಣ.”
ರಾಧಾಕೃಷ್ಣನ್ ಮಾತಿನ ಚುರುಕು ಬ್ರಿಟೀಷನಿಗೆ ಮುಟ್ಟಿಸುತ್ತಾ, “ಇರಬಹುದು. ಜಗತ್ತಿನಲ್ಲಿ ಬಣ್ಣ ಬಣ್ಣದ ಕುದುರೆಗಳಿವೆ. ಆದರೆ ಕತ್ತೆಗಳ ಬಣ್ಣ ಮಾತ್ರ ಒಂದೇ!”

……………………….

ಕಾಲಲ್ಲಿ ರುಜು?

ಸಣ್ಣ ಕಥೆಗಳ ಜಗತ್ತಿನಲ್ಲಿ ಓ ಹೆನ್ರಿಯ ಹೆಸರು ಕೇಳದವರಿಲ್ಲ. ಆತ ತನ್ನ ಕಥೆಗಳನ್ನು ಪ್ರಕಾಶಕನೊಬ್ಬನಿಗೆ ಕಳುಹಿಸಿದ್ದ. ಆದರೆ ಬಹಳಷ್ಟು ಸಮಯ ಕಳೆದರೂ ಪ್ರಕಾಶಕನಿಂದ ಸಂಭಾವನೆ ಸಿಕ್ಕಲಿಲ್ಲ. ಕಾರಣ ಏನೆಂದು ತಿಳಿದುಕೊಳ್ಳಲು ಪ್ರಕಾಶಕನ ಬಳಿಗೆ ಹೋದ. ಅಂಗಡಿಯಲ್ಲಿ ಪ್ರಕಾಶಕ ಇರಲಿಲ್ಲ. ಬೇರೆ ಹುಡುಗನಿಬ್ಬ ಇದ್ದ. ಹೆನ್ರಿ ಪ್ರಕಾಶಕನ ಬಗ್ಗೆ ವಿಚಾರಿಸಿದಾಗ, ಪ್ರಕಾಶಕನು ಕಾಲು ಉಳುಕಿನಿಂದಾಗಿ ಅಂಗಡಿಗೆ ಬರುತ್ತಿಲ್ಲವೆಂದು ತಿಳಿಯಿತು. ಹೆನ್ರಿ ಆ ಹುಡುಗನಿಗೆ, “ಆಶ್ಚರ್ಯ, ನಿಮ್ಮ ಪ್ರಕಾಶಕರು ತಮ್ಮ ಕಾಲಿನಿಂದ ಚೆಕ್ಕಿಗೆ ರುಜು ಹಾಕುತ್ತಾರೆ ಎಂದು ಈಗ ಗೊತ್ತಾಯಿತು.” ಎಂದ.

……………………….

ಪತ್ತೇದಾರಿಕೆ!

ಶೆರ್ಲಾಕ್ ಹೋಮ್ಸ್ ಎಂಬ ಅದ್ಭುತವಾದ ಪಾತ್ರವನ್ನು ಸೃಷ್ಟಿಸಿದ ಸರ್ ಆರ್ಥರ್ ಕಾನನ್ ಡಾಯಲ್ ಹೋಮ್ಸ್ ಪತ್ತೇದಾರಿಕೆಯ ಕಥೆಗಳಲ್ಲಿ ಸೂಕ್ಷ್ಮವಾದ ಗಮನಿಸುವಿಕೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದ.
ಒಮ್ಮೆ ಡಾಯಲ್ ಫ್ರಾನ್ಸಿನಲ್ಲಿ ಒಡಾಡುವಾಗ ಒಂದು ಕ್ಯಾಬಿನಲ್ಲಿ ಪ್ರಯಾಣಿಸಿದರು. ಪ್ರಯಾಣದ ಕೊನೆಯಲ್ಲಿ ಹಣ ಪಡೆಯುವಾಗ ಆತ ಡಾಯಲ್‌ರಿಗೆ, “ಸರ್, ನೀವು ಆರ್ಥರ್ ಕಾನನ್ ಡಾಯಲ್ ಅಲ್ಲವೇ?” ಎಂದು ಕೇಳಿದ.
ಆಶ್ಚರ್ಯಚಕಿತರಾದ ಡಾಯಲ್, “ನಿನಗೆ ಹೇಗೆ ತಿಳಿಯಿತು?” ಎಂದರು.
“ಸರ್, ನೀವು ದಕ್ಷಿಣ ಫ್ರಾನ್ಸಿನಿಂದ ಪ್ಯಾರಿಸ್ಸಿಗೆ ಬರುತ್ತಿದ್ದೀರಿ ಎಂಬುದನ್ನು ಪತ್ರಿಕೆಗಳಲ್ಲಿ ಓದಿ ತಿಳಿದಿದ್ದೆ. ನಿಮ್ಮ ದಿರಿಸು, ವೇಷಭೂಷಣ ನೋಡಿ ನೀವೊಬ್ಬ ಇಂಗ್ಲೀಷಿನವರು ಎಂಬುದು ತಿಳಿಯಿತು. ನಿಮ್ಮ ತಲೆ ಕೂದಲು ದಕ್ಷಿಣ ಫ್ರಾನ್ಸಿನ ಕ್ಷೌರಿಕನ ಬಳಿ ಅಚ್ಚುಕಟ್ಟಾಗಿ ಕತ್ತರಿಸಲ್ಪಟ್ಟಿದ್ದನ್ನು ಗುರುತಿಸಿದೆ. ಇವೆಲ್ಲಾ ಸಂಗತಿಗಳನ್ನು ತಾಳೆ ನೋಡಿದಾಗ ನೀವೇ ಆರ್ಥರ್ ಕಾನನ್ ಡಾಯಲ್ ಎಂಬುದನ್ನು ತೀರ್ಮಾನಿಸಿದೆ.” ಎಂದ ಆ ಕ್ಯಾಬ್ ಡ್ರೈವರ್.
“ಉಹ್… ಕುತೂಹಲಕರವಾಗಿದೆ. ನಾನೇ ಡಾಯಲ್ ಅನ್ನಲಿಕ್ಕೆ ನಿನ್ನ ಬಳಿ ಮತ್ತೇನು ಸಾಕ್ಷಿ ಇದೆ?” ಎಂದರು ಡಾಯಲ್.
“ಇದೆ ಸಾರ್…ಅದೂ… ನಿಮ್ಮ ಲಗೇಜಿನ ಮೇಲೆ ನಿಮ್ಮ ಹೆಸರು ಬರೆದಿದೆ..” ಎಂದ ತುಟಿಯಂಚಲ್ಲಿ ಕೊಂಕು ನಗೆಯನ್ನು ಸೂಸುತ್ತಾ!


……………………….……………………….……………………….

ನಾನು ಫ್ರೀಯಾಗಿ ಮಾಡ್ತೀನಿ

ಜೆ.ಎಚ್.ಪಟೇಲರು ರಸಿಕತೆಗೆ ಹೆಸರಾಗಿದ್ದ ಮುತ್ಸದ್ಧಿ. ಒಮ್ಮೆ ಅವರು ಥಾಯ್ಲ್ಯಾಂಡ್ನಲ್ಲಿ ಲೈವ್ಸಂಭೋಗ ಷೋ ನೋಡಲು ಹೋಗಿದ್ದರಂತೆ. ಷೋ ನೀಡಿದ ಯುವಕನನ್ನು ಕರೆದು ಪಟೇಲರು ನಿನಗೆ ಎಷ್ಟು ಕೊಡ್ತಾರೆ ಎಂದು ಕೇಳಿದ್ದಕ್ಕೆ ಆತ  “ಪ್ರತಿ ಷೋಗೆ ಹತ್ತು ಸಾವಿರ ರೂ.” ಎಂದನಂತೆ. ಅದಕ್ಕೆ ಪಟೇಲರು ಮ್ಯಾನೇಜರ್ನನ್ನು ಕರೆದು “ನನ್ನನ್ನು ಸೇರಿಸಿಕೊಳ್ಳಿ. ನಾನು ಫ್ರೀ ಆಗಿ ಮಾಡುತ್ತೇನೆ” ಎಂದರಂತೆ!

……………………….

ಲೇಖಕರ ವಿಲಾಸಗಳು

ಮುಧೋಳ ಸಾಹಿತ್ಯ ಸಮ್ಮೇಳನದಲ್ಲಿ ರವಿ ಬೆಳಗೆರೆ, ಚಂಪಾ ಮೀಟ್ ಆದ್ರು. ಚಂಪಾ ಹೇಳಿದ್ರು-
ರವಿ, ಹೊಸ ಪುಸ್ತಕ ತರ್ತಿದೀನಿ “ಲೇಖಕರ ವಿಳಾಸಗಳು” ಅಂತ…
ತಕ್ಷಣ ರವಿ ಬೆಳಗೆರೆ ಹೇಳಿದ್ರು-
ಚಂಪಾ, ಆ ಹೆಸ್ರು ಬೇಡ “ಲೇಖಕರ ವಿಲಾಸಗಳು” ಅಂತ ಇಡಿ. ಸಖತ್ತಾಗಿ ಸೇಲಾಗುತ್ತೆ…

……………………….

ಚಂದಾ ಹೆಣ

ಸಂಕ್ರಮಣ ಚಂದಾ ಕ್ಯಾಂಪೈನ್ ನಡೀತಾ ಇತ್ತು. ಚಂಪಾ ಶಾಂತರಸರ ಮನೆಗೆ ಫೋನ್ ಮಾಡಿದ್ರು-
ರಾಯಚೂರಲ್ಲಿ ಚಂದಾ ಮಾಡಿಸಿಕೊಡ್ರಿ ಅಂತ.
ಶಾಂತರಸರ ಶ್ರೀಮತಿ ಸಜೆಶನ್ ಕೊಟ್ರಂತೆ-
ಅದಕ್ಕೇನು ಚಂಪಾ ಅವ್ರೆ, ಬನ್ನಿ.
ಚಂಪಾ ಕೇಳಿದ್ರಂತೆ-
ಅದಕ್ಯಾಕೆ ಅಲ್ಲಿಗೆ ಬರೋದು, ನೀವೇ ಮಾಡಿಸಿಬಿಡಿ.
ತಕ್ಷಣ ಶ್ರೀಮತಿ ಶಾಂತರಸರು ಅಂದ್ರಂತೆ-
ಚಂಪಾ ಅವರೆ, ಹೆಣ ಮುಂದಿದ್ರೆ ಅಳೋಕೆ ಚಂದ ಅಂತ.

……………………….

ಮನೆ ಒಂದು ಸಂಸಾರ ಎರಡು

ಹಂಪನಾ ಯಾವ್ದೋ ಯೂನಿವರ್ಸಿಟಿಗೆ ಬಂದಿದ್ರು. ವಾಮನ ನಂದಾವರ ದಂಪತಿಗಳು ಆಗ ತಾನೆ ಹೊಸ ಮನೆ ಕಟ್ಟಿ ಮುಗಿಸಿದ್ರು. ಹಳೇ ಮನೇನ ಮಾರಿರಲಿಲ್ಲ. ಯಾರೋ ನಂದಾವರ ಅವರನ್ನ ಹಂಪನಾಗೆ ಇಂಟ್ರೊಡ್ಯೂಸ್ ಮಾಡ್ತಾ-
ಸಾರ್, ಎಲ್ಲಾದ್ರೂನೂ ಸಾಹಿತಿಗಳಿಗೆ ಎರಡು ಮನೆ ಇರೋದು ಕೇಳಿದ್ರಾ ಅಂದ್ರು.
ಹಂಪನಾ ಯಥಾಪ್ರಕಾರ ಮೀಸೆ ತುದೀಲೇ ನಗ್ತಾ-
ಇಲ್ಲಪ್ಪ, ಆದ್ರೆ ಎರಡು ಸಂಸಾರ ಇರೋದ್ ಮಾತ್ರ ಕೇಳಿದೀನಿ ಅಂದ್ರು.

……………………….

ಡಾಕಾಯಿತ ರಾಣಿಯ ಡಕಾಯಿತಿ

ಚಂಬಲ್ ಕಣಿವೆ ರಾಣಿ ಎಂದೇ ಖ್ಯಾತಿ ಹಾಗೂ ಕುಖ್ಯಾತಿಯನ್ನು ಸಂಪಾದಿಸಿದ್ದವರು ಪೂಲನ್ ದೇವಿ. ಆಕೆ ಡಕಾಯಿತಿಯನ್ನು ರಾಜಕೀಯವನ್ನು ಪ್ರವೇಶಿಸಿದ್ದರು. ಒಮ್ಮೆ ಕೆಲಸ ಮುಗಿಸಿಕೊಂಡು ಟಾಟಾ ಸುಮೋದಲ್ಲಿ ಮನೆಗೆ ಹಿಂತಿರುಗುವಾಗ ಮೊಟಾರ್ ಬೈಕ್ ಸವಾರನೊಬ್ಬ ಆಕೆಯನ್ನು ಅಡ್ಡಗಟ್ಟಿ ಗನ್ ತೋರಿಸಿ ಬೆದರಿಸಿ ಪರ್ಸ್ ಕದ್ದು ಮುವತ್ತೈದು ಸಾವಿರ ರೂಪಾಯಿ ದರೋಡೆ ಮಾಡಿದ್ದ!

…………………………………………………………………………
ಸಣ್ಣವರಿಗೆ ಮೊದಲು

ಮಾಸ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದ ಸಂದರ್ಭವದು. ಆಗ ಸನ್ಮಾನ ಸಮಾರಂಭದಲ್ಲಿ ಹಾಜರಿದ್ದ ರಾಮಕೃಷ್ಣ ಹೆಗಡೆಯವರು ಆಡಿದ “ಮಾಸ್ತಿಯವರಿಗೆ ಜ್ಞಾನಪೀಠ ತುಂಬ ಮೊದಲೇ ಬರಬೇಕಿತ್ತು” ಎಂಬ ಸರಳ ಮಾತು ತೀವ್ರವಾದ ಮುಜುಗರಕ್ಕೆ ಕಾರಣವಾಗುವಂತಿತ್ತು.

ಆದರೆ ಮಾಸ್ತಿಯವರು ತಮ್ಮ ಭಾಷಣದಲ್ಲಿ, “ನನಗೆ ಈ ಪ್ರಶಸ್ತಿ ತಡವಾಗಿ ಬಂದದ್ದರ ಬಗ್ಗೆ ಯಾವ ತಕರಾರೂ ಇಲ್ಲ. ಮನೆಯಲ್ಲಿ ಸಿಹಿಯನ್ನು ಮಾಡಿದಾಗ ಮೊದಲು ಮಕ್ಕಳಿಗೆ ಕೊಡುವುದಿಲ್ಲವೇ?” ಎನ್ನುವುದರ ಮೂಲಕ ಇಡೀ ಸಭೆಯನ್ನು ನಗೆಯ ಕಡಲಲ್ಲಿ ತೇಲಿಸಿದರು.

…………………………

ತಲೆಯಲ್ಲಿ ಫ್ಯಾನು

ತೀನಂಶ್ರೀ ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಪಾಠದ ನಡುವೆ ತಮ್ಮ ನೋಟ್ಸ್ ನೋಡಲು ಬಗ್ಗಿದರು ಆಗ ಎದುರು ಬೆಂಚಿನಲ್ಲಿ ಕುಳಿತಿದ್ದ ಇಬ್ಬರು ಹುಡುಗರು ಕಿಸಕ್ಕನೆ ನಕ್ಕುಬಿಟ್ಟರು.

ಸಿಟ್ಟಾದ ತೀ.ನಂ.ಶ್ರೀಕಂಠಯ್ಯನವರು ಅವರಿಬ್ಬರನ್ನು ಎದ್ದುನಿಲ್ಲಿಸಿ, ‘‘ನೀವು ನಕ್ಕಿದ್ದು ಯಾಕೆ ಎಂದು ಸತ್ಯ ಹೇಳಿಬಿಟ್ಟರೆ ಬಿಟ್ಟುಬಿಡುವೆ” ಎಂದರು.

ಆಗ ಒಬ್ಬ ಹುಡುಗ, “ ಸಾರ್ ನೀವು ನೋಟ್ಸ್ ನೋಡಲು ತಲೆ ಬಗ್ಗಿಸಿದಾಗ ತಮ್ಮ ತಲೆಯಲ್ಲಿ ಫ್ಯಾನ್ ತಿರುಗುತ್ತಿರುವುದರ ಪ್ರತಿಬಿಂಬ ಕಾಣಿಸಿತು” ಎಂದ. ಇಡೀ ತರಗತಿ ನಗೆಯಲ್ಲಿ ಮುಳುಗಿತು. ತಮ್ಮ ಬೊಕ್ಕ ತಲೆಯನ್ನು ಸವರಿಕೊಳ್ಳುತ್ತಾ ತೀನಂಶ್ರೀಯವರೂ ನಗೆಯಲ್ಲಿ ಭಾಗಿಯಾದರು.

ಹಾಗೆ ಮಾತನಾಡಿದ ಹುಡುಗನೇ ಅ.ರಾ.ಮಿತ್ರ, ಮತ್ತೊಬ್ಬ ಹುಡುಗ ಶ್ರೀನಿವಾಸ ಶರ್ಮ.

…………………………

ಕೈಲಾಸಂ ಪನ್

ಶಬ್ಧಗಳ ನೇರ ಅರ್ಥವನ್ನು ಬದಿಗಿರಿಸಿ ಅವನ್ನು ತಿಕ್ಕಿ ತೀಡಿ ಅನೇಕ ಚಮತ್ಕಾರಿ ಅರ್ಥಗಳನ್ನು ಹೊಳೆಸುವುದಕ್ಕೆ ಪನ್ (pun) ಎನ್ನುತ್ತಾರೆ. ಕನ್ನಡಕ್ಕೊಬ್ಬನೇ ಕೈಲಾಸಂ ಎಂದು ಹೆಸರುವಾಸಿಯಾಗಿದ್ದ ಟಿ.ಪಿ.ಕೈಲಾಸಂ ಇಂತಹ ಪನ್ನಿಗೆ ಹೆಸರು ವಾಸಿಯಾಗಿದ್ದರು. ಲಕ್ಷ್ಮಿಯನ್ನು ದೂರ ಕಳುಹಿಸಿ, ಅಂದರೆ ಬಡತನದ ಬದುಕಿಗಿಳಿದರೆ ಸರಸ್ವತಿ ಬಾ ಎಂದು ಕರೆಯುತ್ತಾಳೆ ಎಂಬ ಮಾತನ್ನು ಕೈಲಾಸಂ ಈ ರೀತಿಯಾಗಿ ಹೇಳಿದ್ದರು.

“If you say ಛೀ ರಂಡಿ to lakshmi and get down in ಚರಂಡಿ then Vani will welcome you with ಚಿ. ರಾಂಡಿ(ಬನ್ನಿ).”

…………………………

ಸರಕಾರಿ ಅಂತ್ಯ ಸಂಸ್ಕಾರ

ಬ್ರಿಟೀಷ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಬಗೆಗಿನ ದಂತ ಕಥೆಯಿದು.

ಒಮ್ಮೆ ಆಕೆ ಮರ್ಸೆ ನದಿಯ ಬಳಿ ಓಡಾಡುವಾಗ ಆಯ ತಪ್ಪಿ ನದಿಯಲ್ಲಿ ಬಿದ್ದು ಬಿಡುತ್ತಾಳೆ. ಸಹಾಯಕ್ಕಾಗಿ ಅರಚುತ್ತಿದ್ದ ಆಕೆಯ ಕೂಗನ್ನು ಕೇಳಿ ಹುಡುಗನೊಬ್ಬ ಈಜು ಹಾಕಿ ಆಕೆಯನ್ನು ದಡಕ್ಕೆಳೆದು ತರುತ್ತಾನೆ. ಅನಂತರ ಆಕೆ ಮಾರ್ಗರೇಟ್ ಥ್ಯಾಚರ್ ಎಂದು ಗೊತ್ತಾಗುತ್ತದೆ. ಬಾಲಕನ ಸಹಾಯವನ್ನು ಕೃತಜ್ಞತೆಯಿಂದ ನೆನೆಯುತ್ತಾ, ಥ್ಯಾಚರ್ ನಿನಗೆ ಏನು ಬೇಕು ಕೇಳು ಎನ್ನುತ್ತಾಳೆ.

ಆಗ ಆ ಬಾಲಕ, “ವೈಭವ ಪೂರ್ಣವಾದ ಸರಕಾರಿ ಅಂತಿಮ ಸಂಸ್ಕಾರ” ಎನ್ನುತ್ತಾನೆ.

ಗಾಬರಿ ಬಿದ್ದ ಥ್ಯಾಚರ್ ಏಕೆ ಎಂದು ಕೇಳಿದಾಗ ಹುಡುಗ, “ನಾನು ನಿಮ್ಮನ್ನು ಉಳಿಸಿದ್ದು ದೇಶದ ಯಾರಿಗಾದರೂ ಗೊತ್ತಾದರೆ ನನ್ನ ಕೊಂದೇ ಬಿಡುತ್ತಾರೆ.’’ ಎಂದ.

…………………………

ಇನ್ನೂ ಹೆಚ್ಚಿನ ಪ್ರಸಿದ್ಧಿ

ನೊಬೆಲ್ ಪ್ರಶಸ್ತಿ ಪ್ರಕಟವಾಗುವುದು ಸ್ಟಾಕ್ ಹೋಮ್‌ನಲ್ಲಿ. ಅದು ಪ್ರಕಟವಾದಾಗ ಅಮೇರಿಕಾದಲ್ಲಿ ಮಧ್ಯ ರಾತ್ರಿಯಾಗಿರುತ್ತದೆ.

ಅಮೇರಿಕಾದ ಖ್ಯಾತ ಭೌತ ಶಾಸ್ತ್ರಜ್ಞ ಹಾಗೂ ತನ್ನ ಹಾಸ್ಯ ಪ್ರವೃತ್ತಿಗೆ ಹೆಸರುವಾಸಿಯಾದ ರಿಚರ್ಡ್ ಫೀಮನ್‌ಗೆ ಆ ವರ್ಷದ ನೊಬೆಲ್ ಬಂದಿತ್ತು. ಅವರ ಗೆಳೆಯ ಸ್ಟಾಕ್ ಹೋಮ್ ನಿಂದ ಬೆಳಿಗ್ಗೆ ನಾಲ್ಕು ಘಂಟೆಗೆ ಫೋನ್ ಮಾಡಿ ಅಭಿನಂದಿಸಿದ.

ಆಗ ಫೀಮನ್, “ನನಗೆ ಈ ಪ್ರಸಿದ್ಧಿ, ಪ್ರಚಾರ ಅಂದರೆ ಅಲರ್ಜಿ, ನೊಬೆಲನ್ನು ನಿರಾಕರಿಸಿಬಿಟ್ಟರೆ ಹೇಗೆ?” ಎಂದು ಕೇಳಿದರು.

ಆಗ ಅವರ ಗೆಳೆಯ, “ಆಗ ಇನ್ನೂ ಹೆಚ್ಚಿನ ಪ್ರಸಿದ್ಧಿ ಬರುತ್ತದೆ” ಎಂದ.

ಗಾಬರಿಯಾದ ಫೀಮನ್, “ಹಾಗಾದರೆ ನೊಬೆಲ್ ಪಡೆದುಕೊಳ್ಳುವುದೇ ಉತ್ತಮ” ಎಂದರು!
…………………………………………………………………………………………………

ಷಿಲ್ಲಿಂಗಿನಿಂದ ಉಳಿದ ಪ್ರಾಣ

ಭಾರತ ಮೂಲದ ಖ್ಯಾತ ಇಂಗ್ಲೀಷ್ ಲೇಖಕ ವಿ.ಎಸ್.ನಾಯ್ಪಾಲ್ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಲಂಡನ್ನಿನಲ್ಲಿ ವಾಸಿಸುವಾಗ ಅಪಾರವಾದ ಮಾನಸಿಕ ಕಿರಿಕಿರಿಯಿಂದ ತೊಳಲಾಡುತ್ತಿದ್ದರು. ಅವರು ಯಾವ ಮಟ್ಟಿಗೆ ಡಿಪ್ರೆಸ್ ಆಗಿದ್ದರೆಂದರೆ ಒಮ್ಮೆ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.

ತಮ್ಮ ಕೋಣೆಗೆ ಕೊಟ್ಟಿದ್ದ ಗ್ಯಾಸ್ ಸಂಪರ್ಕದ ಪೈಪಿಗೆ ಬಾಯಿ ಕೊಟ್ಟು ಗ್ಯಾಸ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದರು. ಆದರೆ ಗ್ಯಾಸ್ ಮೀಟರಿಗೆ ಹಾಕಲು ಷಿಲ್ಲಿಂಗ್ ಇಲ್ಲದೆ ಬಚಾವಾದರು.

…………………………

ಒಂಥರಾ ಹಸಿರೇ

ಕಾಲೇಜೊಂದರ ಪ್ರಯೋಗಶಾಲೆಗೆ ಗಣ್ಯರೊಬ್ಬರು ಭೇಟಿ ನೀಡಿದ್ದರು. ಅಲ್ಲಿದ್ದ ಕಾಪರ್ ಸಲ್ಫೇಟ್ ನೋಡಿ ಅದು ಹಸಿರಾಗಿದೆಯಲ್ಲವೇ ಎಂದರು.

ಅಲ್ಲಿಯೇ ಇದ್ದ ಕೈಲಾಸಂ, ‘May I hazard to refresh your memory of your high school days, sir? Yes, sir, it is green a particular shade of green, popularly known as blue.’ ಎಂದು ಪರೋಕ್ಷವಾಗಿ ಕುಟುಕುವ ಮೂಲಕ ಗಣ್ಯ ವ್ಯಕ್ತಿಯ ನೀರಿಳಿಸಿದ್ದರು.

…………………………

ಅದು ಹಮ್ ಬಗ್

ಅದು ಚಾರ್ಲ್ಸ್ ಡಾರ್ವಿನ್ ವಿಕಾಸವಾದವನ್ನು ಮಂಡಿಸಿದ್ದ ಸಂದರ್ಭ. ಆತನ ವಿಕಾಸವಾದ ಇಡೀ ಜಗತ್ತಿನಲ್ಲಿ ಕೋಲಾಹಲವನ್ನೇ ಉಂಟು ಮಾಡಿತ್ತು. ಡಾರ್ವಿನ್ ಸಮಾಜ ಅನೇಕರಿಂದ ತೀವ್ರವಾದ ವಿರೋಧವನ್ನು ಎದುರಿಸಬೇಕಾಗಿತ್ತು.

ಹೀಗಿರುವಾಗ ಒಂದಷ್ಟು ಮಂದಿ ತುಂಟ ವಿದ್ಯಾರ್ಥಿಗಳು ಡಾರ್ವಿನ್ ನನ್ನು ಅವಮಾನಿಸಬೇಕೆಂದು ತೀರ್ಮಾನಿಸಿ ಒಂದು ಹುಳುವಿಗೆ ರೆಕ್ಕೆ ಅಂಟಿಸಿ ಇದ್ಯಾವ ಬಗ್ ಎಂದು ಪ್ರಶ್ನಿಸಿದ್ದರು.

ಡಾರ್ವಿನ್ ಕೂಲಂಕುಶವಾಗಿ ಪರಿಶೀಲಿಸಿ ‘ಅದು ಹಮ್ ಮಾಡುತ್ತದೆಯೇ(ಗುಯ್ ಗುಟ್ಟುತ್ತದೆಯೇ)?’ ಎಂದು ಕೇಳಿದ.

‘ಹೌದು’ ಎಂದರು ವಿದ್ಯಾರ್ಥಿಗಳು.

‘ಹಾಗಾದರೆ ಅದು ಹಮ್ ಬಗ್’ ಎಂದ ಡಾರ್ವಿನ್. ಇಂಗ್ಲೀಷಿನಲ್ಲಿ ಹಮ್ ಬಗ್ (Hum bug) ಎಂದರೆ ಮೋಸ, ವಂಚನೆ ಎಂದರ್ಥ! ಪೆಚ್ಚಾಗುವ ಸರದಿ ವಿದ್ಯಾರ್ಥಿಗಳದ್ದಾಗಿತ್ತು.

…………………………

ಘಾಸಿ ಮಾಡಿದ ‘ಘಾ’

ಬೀಚಿಯವರು ‘ತಿಮ್ಮ’ನನ್ನು ಸೃಷ್ಟಿಸಿದ ಹಾಗೆ ವೈ.ಎನ್.ಕೆಯವರು ‘ಶ್ರೀಮಾನ್ ಘಾ’ ಎಂಬ ಪಾತ್ರವನ್ನು ಸೃಷ್ಟಿಸಿಕೊಂಡಿದ್ದರು. Gha ಎಂದರೆ ‘ಗುಂಡು ಹಾಕುವ ಆಸಾಮಿ’ ಎಂತಲೂ ಆಗುತ್ತಿತ್ತು, ‘ಗುಂಡು ಹಾಕದ ಆಸಾಮಿ’ ಎಂತಲೂ ಆಗುತ್ತಿತ್ತು.

ಎಲಿಯಟ್‌ನ ಈ ಪದ್ಯ ‘ಘಾ’ ಕೈಗೆ ಸಿಕ್ಕು ಎಷ್ಟು ಘಾಸಿಗೊಂಡಿತ್ತು ಎಂಬುದನ್ನು ಗಮನಿಸಿ.

Mornings, evenings, afternoons
I measure out my life in coffee spoons

ಎಂದು ಎಲಿಯಟ್ ಬರೆದದ್ದನ್ನು ಘಾ

ಬೆಳಿಗ್ಗೆ ಸಂಜೆ ಮಧ್ಯಾನ
ಕುಡೀತೀನ್ ನಾನು ಮದ್ಯಾನಾ
ಅಳೀತೀನಿ ಪೆಗ್‍ನಲ್ಲಿ ಜೀವನಾನಾ

ಎಂದು ರೂಪಾಂತರಿಸಿದ್ದರು!

…………………………

ಥ್ಯಾಚರ್ ಅದೃಷ್ಟ

ಬ್ರಿಟನ್ನಿನ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ದ ಸಮಯವದು. ಅವರನ್ನು ಕೊಲ್ಲಲು ಅನೇಕ ಪ್ರಯತ್ನಗಳು ನಡೆಯುತ್ತಿದ್ದವು. ಒಂದು ಹೋಟೆಲ್‍ನಲ್ಲಿ ಥ್ಯಾಚರ್ ತಂಗಿದ್ದಾಗ ಅದರ ಸಮೀಪದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಆದರೆ ಅದೃಷ್ಟವಶಾತ್ ಥ್ಯಾಚರ್ ಬದುಕಿಕೊಂಡಿದ್ದಳು.

ಆಗ ಉಗ್ರರ ಮುಖಂಡ ನೀಡಿದ್ದನೆಂದು ಹೇಳಲಾದ ಹೇಳಿಕೆ ಭಾರಿ ಸುದ್ದಿ ಮಾಡಿತ್ತು. We should be lucky once she should be lucky always.(ಆಕೆ ಪ್ರತಿಬಾರಿಯೂ ಅದೃಷ್ಟವಂತೆಯಾಗಿರಬೇಕು, ಆದರೆ ಅವಳನ್ನು ಕೊಲ್ಲಲು ನಾವು ಒಂದು ಬಾರಿ ಅದೃಷ್ಟವಂತರಾದರೆ ಸಾಕು)

………………………………………………………………………………

‘ಗುಂಡು’ ಪ್ರೇಮ

ಸೂರ್ಯ ಮುಳುಗಲಿ ಬಿಡಲಿ ಸಂಜೆಯ ಸಮಯವಾಗುತ್ತಿದ್ದಂತೆ ವೈ.ಎನ್.ಕೆಯವರಿಗೆ ‘ಗುಂಡಿ’ನ ಸಮಾರಾಧನೆಯಾಗಲೇ ಬೇಕಿತ್ತು. ಅಂತಹ ಪಾನ ಪ್ರಿಯರು ಅವರು. ತಮ್ಮ ‘ಗುಂಡು’ ಅಭಿಮಾನವನ್ನು ಅವರು ಹೇಗೆ ಹೇಳ್ತಾರೊ ಕೇಳಿ:
ಕುಡಿಯುವ ಮುನ್ನ ಚೌಕಾಕಾರ ರೂಮು, ನಂತರ ’ಗುಂಡು’ ರೂಮು!
ಬೆಳಿಗ್ಗೆ, ಸಂಜೆ ಮಧ್ಹ್ಯಾನ, ಕುಡೀತೀನಿ ನಾನು ಮದ್ಯಾನ!
ಕರುಣಾಳು ಬಾ ಬೆಳಕೆ ಮುಸುಕಿದೀ ಪಬ್ಬಿನಲಿ, ಕೈ ಹಿಡಿದು ಕುಡಿಸೆನ್ನನು!
…………………………….

ಹಾಗಂತ ನನಗೇನು ಗೊತ್ತು?

ಭಾರತದ ಮೊದಲ ಪ್ರಧಾನಿಯಾದ ಜವಾಹರ್ ಲಾಲ್ ನೆಹರೂರಿಗೆ ಮಕ್ಕಳೆಂದರೆ ಅಪಾರ ಒಲವು. ಮಕ್ಕಳು ಅವರನ್ನು ಪ್ರೀತಿಯಿಂದ ’ಚಾಚಾ’ ಎಂದು ಕರೆಯುತ್ತಿದ್ದರು.
ನೆಹರೂ ಪ್ರಧಾನಿಯಾಗಿದ್ದಾಗ ರಶಿಯಾದ ಮಕ್ಕಳಿಗಾಗಿ ಒಂದು ಆನೆಯ ಮರಿಯನ್ನು ಕೊಡುಗೆಯಾಗಿ ಕಳುಹಿಸಿಕೊಟ್ಟರು. ಜಪಾನಿನ ಮಕ್ಕಳಿಗೆ ಸಿಂಹದ ಮರಿಯನ್ನು ಗಿಫ್ಟ್ ಕೊಟ್ಟರು.
ಒಮ್ಮೆ ಭಾರತದ ಮಕ್ಕಳೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ ಒಂದು ಮಗು “ಚಾಚಾ, ನೀವು ಪ್ರಾಣಿಗಳ ಮಕ್ಕಳನ್ನು ಬೇರೆ ದೇಶಗಳಿಗೆ ಕಳುಹಿಸುತ್ತೀರಿ. ನಮ್ಮನ್ನೇಕೆ ಕಳುಹಿಸೋದಿಲ್ಲ?” ಎಂದು ಕೇಳಿತು.
ಆಗ ನೆಹರೂ, “ನನಗೇನು ಗೊತ್ತು ನೀವೂ ಪ್ರಾಣಿಗಳ ಮಕ್ಕಳೆಂದು?” ಎಂದು ಮುಗ್ಧತೆ ನಟಿಸುತ್ತಾ ಮರುಪ್ರಶ್ನಿಸಿದಾಗ ಇಡಿಯ ಸಭಾಂಗಣ ನಗೆಯ ಕಡಲಲ್ಲಿ ತೇಲಿತು.
…………………………….

ರಸಿಕತೆ-ವ್ಯಭಿಚಾರ

ಕವಿ ಸಿದ್ಧಲಿಂಗಯ್ಯನವರು ಹೇಳುತ್ತಿದ್ದ ಸುಪ್ರಸಿದ್ಧ ಜೋಕೊಂದಿದೆ.
ರಸಿಕತೆಗೂ, ವ್ಯಭಿಚಾರಕ್ಕೂ ವ್ಯತ್ಯಾಸವೇನು?
ರಸಿಕತೆಗೂ, ವ್ಯಭಿಚಾರಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲವಂತೆ: ನನ್ನ ಮಗ ಮಾಡಿದರೆ ರಸಿಕತೆ; ಪಕ್ಕದ ಮನೆ ಮಗ ಮಾಡಿದರೆ ವ್ಯಭಿಚಾರ ಅಷ್ಟೆ!
…………………………….

ಒಂದೇ ಕಲ್ಚರ್

ಗಾನ ಕೋಗಿಲೆ ಎಂದು ಹೆಸರುವಾಸಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಸರೋಜಿನಿ ನಾಯ್ಡು. ಅವರ ಹಾಸ್ಯ ಪ್ರಜ್ಞೆ ಅನನುಕರಣೀಯವಾದದ್ದು. ಅವರ ಹಾಸ್ಯದ ಮೊನಚು, ಟೈಮಿಂಗಿನ ಬಗ್ಗೆ ಎರಡು ಮಾತಿಲ್ಲ.
ಒಮ್ಮೆ ಯಾವುದೋ ವಿಚಾರವಾಗಿ ಗಹನವಾದ ಚರ್ಚೆ ನಡೆಯುತ್ತಿದ್ದಾಗ ಒಬ್ಬರು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಏನೂ ಗೊತ್ತಿಲ್ಲ ಎಂದಾಗ ಸರೋಜಿನಿ ನಾಯ್ಡು ಹೇಳಿದ್ದರಂತೆ- “ಪಟೇಲ್‌ಗೆ ಗೊತ್ತಿರುವುದು ಒಂದೇ ಕಲ್ಚರ್. ಅದು ಅಗ್ರಿಕಲ್ಚರ್.”
…………………………….

ಬ್ಲಾಕ್ ಸ್ಪಾಟ್

ಕೈಲಾಸಂ ತಮ್ಮ ವಿಲಕ್ಷಣತೆ, ಹಾಸ್ಯ ಪ್ರಜ್ಞೆ, ಪ್ರತಿಭೆಯಿಂದ ಕನ್ನಡದ ಪಾಲಿಗೆ ಟಿಪಿಕಲ್ ಕೈಲಾಸಂ ಆದವರು.
ಅವರ ತಂದೆ ಬಹಳ ಶಿಸ್ತಿನ ವ್ಯಕ್ತಿ. ಮಗನ ಶಿಸ್ತುರಹಿತ ಜೀವನದಿಂದ ರೋಸಿ ಹೋಗಿ ಅವರನ್ನು ತಮ್ಮ ಮನೆ ‘ವೈಟ್ ಹೌಸ್’ನಿಂದ ಹೊರಹಾಕಿದರು.
ಕೈಲಾಸಂ ತಮಗೆ ಸಿಕ್ಕವರ ಬಳಿ ಮನೆಯಿಂದ ಹೊರಹಾಕಿದ ಸುದ್ದಿ ಹೇಳುವಾಗ, “I am a black spot in the white house” ಎನ್ನುತ್ತಿದ್ದರಂತೆ!

…………………………………………………………………………………………

ಹಂಪನಾ ಜಹಂಪನಾ!

ಸಾಹಿತಿ ಹಂಪನಾ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದ ಸಂಘಟಕರು ಹಂಪನಾರನ್ನು ಪರಿಚಯಿಸುತ್ತಾ, “ಹಂಪನಾ, ನೀವು ನಮ್ಮ ಜಹಂಪನಾ” ಎಂಬ ಧಾಟಿಯಲ್ಲಿ ಹೊಗಳಿದರು. ಅನಂತರ ಹಂಪನಾ ಮಾತನಾಡಲು ಎದ್ದು ಬಂದರು. ಮೊದಲೇ ಕುಳ್ಳಗಿದ್ದರಲ್ಲ ಹಂಪನಾ, ಮೈಕು ಎತ್ತರದಲ್ಲಿತ್ತು. ಮೈಕ್‍ ಸೆಟ್‍ನ ಹುಡುಗ ಬಂದು ಮೈಕನ್ನು ಹಂಪನಾರ ಎತ್ತರಕ್ಕೆ ಸರಿಯಾಗಿ ಕೆಳಕ್ಕಿಳಿಸಿದ. ಅನಂತರ ಆ ಮೈಕ್ ಸೆಟ್‍ನ ಹುಡುಗನನ್ನು ತೋರುತ್ತಾ ಹಂಪನಾ, “ಇವನೊಬ್ಬನಿಗೇ ನೋಡಿ ನನ್ನ ಸರಿಯಾದ ಎತ್ತರ ಗೊತ್ತಿರುವುದು.” ಎಂದರು.

…………………………….

ನೀನು ಇದ್ದೀಯೋ?

ದಾ. ರಾ ಬೇಂದ್ರೆ ಯವರು ದೈವಭಕ್ತರು, ಅವರ ಕಾವ್ಯ ನಾಮವೇ ಅಂಬಿಕಾತನಯ ದತ್ತ. ಮನೆಯ ಒಳಗೂ ಹೊರಗೂ ಹುಲಿ ಯಂತೆಯೇ ಬಾಳಿ ಬದುಕಿದವರು. ಅಂಥವರ ಬಳಿಯಲ್ಲಿ ಒಬ್ಬ ವಿದ್ಯಾರ್ಥಿ ಹೋಗಿ ಪ್ರಶ್ನೆ ಕೇಳಿದ್ದ- ಕುಹುಕ ಧ್ವನಿಯಿಂದ
“ಸಾರ್, ದೇವರು ಇದ್ದಾನೆಯೇ?”
ಬೇಂದ್ರೆ ಅವರು ಆ ಹುಡುಗನ ಕೆನ್ನೆಗೆ ಒಂದು ಬಾರಿಸಿದರು. ಹುಡುಗ ತಬ್ಬಿಬ್ಬಾಗಿ ಹೋದ. ಬೇಂದ್ರೆ ಅವನನ್ನು ದುರುಗುಟ್ಟಿ ನೋಡುತ್ತಾ ಪ್ರಶ್ನಿಸಿದರು:- “ನೀನು ಇದ್ದೀಯಾ….?”
“ಹೌದು ಸಾರ್ ಇದ್ದೇನೆ” ಎಂದ. “ನೀನು ಎಂಬುವವನು ಒಬ್ಬ ಇದ್ದ ಮೇಲೆ,’ಅವನು’ ಎಂಬುವವನೊಬ್ಬ ಇದ್ದೇ ಇರುತ್ತಾನೆ” ಎಂದರು. ವಿದ್ಯಾರ್ಥಿ ಮೌನವಾಗಿ ಹಿಂದಿರುಗಿದ್ದ.

…………………………….

ಇದು ನಿಜವೇ….?

ಕೃಷ್ಣ ಮೆನನ್ ರವರು ಬಿ.ಬಿ.ಸಿ ಸಂದರ್ಶನಕ್ಕೆ ಭಾರತದ ಪ್ರತಿನಿಧಿಯಾಗಿ ಸಂಭಾಷಿಸುತ್ತಿದ್ದರು. ನೇರಪ್ರಸಾರದ ಕಾರ್ಯಕ್ರಮ. ಯೋಚಿಸುವಷ್ಟೂ ಸಮಯವಿಲ್ಲದ ಹಾಗೆ ಪ್ರಶ್ನೆಗಳೆ ಸುರಿಮಳೆ ಹೆಸರಾಂತ ಬಿ.ಬಿ.ಸಿ ಸಂದರ್ಶಕಾರನಿಂದ ಸಾಗಿತ್ತು. ಒಮ್ಮೆಗೇ ಆತ ಪ್ರಶ್ನಿಸಿದ್ದ-
” ತಾವು ಬಹಳ ಮಟ್ಟಿಗೆ ಕಮ್ಯೂನಿಸಂ ತತ್ವಗಳಿಗೇ ಬೆಲೆ ಕೊಡುವುದಾಗಿ ಕೇಳಿದ್ದೇನೆ…. ನೀವೇನು ಕಮ್ಯುನಿಷ್ಠರೇ..?”
ಸ್ವಾಭಿಮಾನಿ ಕೃಷ್ನ ಮೆನನ್ ರೆಪ್ಪೆ ಆಡಿಸುವಷ್ಟರಲ್ಲೇ ಪ್ರಶ್ನಿಸಿದವನನ್ನೇ ಪ್ರತಿ ಪ್ರಶ್ನೆ ಕೇಳಿ ಬಿಟ್ಟಿದ್ದರು-
“ತಾವು ಸ್ವಚ್ಚಂದ ಕಾಮ ಜೀವನ ನಡೆಸುವವರು, ತಾವೊಬ್ಬ ವ್ಯೇಶ್ಯೆ ಮಗನೆಂದು ಕೇಳಿದ್ದೀನೆ- ಇದು ನಿಜವೆ?”
ಬಿ.ಬಿ.ಸಿ ಸಂದರ್ಶನಗಾರನೊಬ್ಬನೇ ಅಲ್ಲ, ವೀಕ್ಷಿಸುತ್ತಿದ್ದ ಲಕ್ಷಾಂತರ ಬ್ರಿಟೀಷರು ಬೆವೆತು ಹೋಗಿದ್ದರು. ಕೃಷ್ಣ ಮೆನನ್ ಮಾತ್ರ ತಣ್ಣಗೆ ಕುಳಿತಿದ್ದರು.

…………………………….

ಗಡ್ಡಾಪಹರಣ

ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರ ಹೆಸರನ್ನು ಯಾರು ಕೇಳಿಲ್ಲ? ಅವರ ಬದುಕು, ಸಾಧನೆಯನ್ನು ಕಂಡ ಹಿರಿಯರೋರ್ವರು ’ಕಾರಂತರು ಒಬ್ಬ ವ್ಯಕ್ತಿಯಲ್ಲ, ಅವರು ಒಂದು ವಿಶ್ವವಿದ್ಯಾಲಯ’ ಎಂದದ್ದು ಬಾಯಿಮಾತಿನ ಪ್ರಶಂಸೆಯಲ್ಲ.
ಕಾರಂತರ ಜೀವನ ಚರಿತೆಯನ್ನು ದಾಖಲಿಸಿಡಬೇಕು ಎನ್ನುವುದು ಅವರ ಗೆಳೆಯರನೇಕರ ಆಶಯವಾಗಿತ್ತು. ಆ ಬಗ್ಗೆ ಕಾರಾಂತರೋಂದಿಗೆ ಅವರು ಅನೆಕ ಬಾರಿ ಚರ್ಚಿಸಿಯೂ ಆಗಿತ್ತು. ಆದರೆ ಕಾರಂತರು ಅವರಿಗೆ ’ನನ್ನ ಕೊಲೆಯನ್ನು ನೀವು ಮಾಡಬೇಕಿಲ್ಲ ನಾನೇ ಮಾಡಿಕೊಳ್ಳುತ್ತೇನೆ’ ಎಂದು ಛೇಡಿಸಿ ತಮ್ಮ ಜೀವನದ ಕತೆಯನ್ನು ಬರೆಯಲು ಕೂತರು. ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ಸೃಷ್ಟಿಯಾಯಿತು. ಕನ್ನಡದಲ್ಲಿ ಹೆಸರಿಸಬಹುದಾದ ಕೆಲವೇ ಕೆಲವು ಅದ್ಭುತವಾದ ಆತ್ಮಚರಿತ್ರೆಗಳಲ್ಲಿ ಇದೂ ಒಂದು.
ಸ್ವಾತಂತ್ರ ಹೋರಾಟದ ಸಮಯದಲ್ಲಿ ಗಾಂಧೀಜಿಯವರ ಆದರ್ಶವನ್ನು ನೆಚ್ಚಿ ತೆರೆದ ಖಾದಿ ಅಂಗಡಿ ಹಾಗೂ ಅನಂತರ ಪ್ರಾರಂಭಿಸಿದ ’ವಸಂತ’ ಎಂಬ ಮಾಸಪತ್ರಿಕೆಗಾಗಿ ಮಾಡಿದ ಸಾಲದ ನೆನಪಿಗಾಗಿ ಕಾರಂತರು ಗಡ್ಡ ಬಿಡುವುದಕ್ಕೆ ಪ್ರಾರಂಭಿಸಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುವ ಸ್ವಭಾವದ ಕಾರಂತರು ಆಗ ವಾಸ್ತು ಶಿಲ್ಪದ ಅಧ್ಯಯನಕ್ಕಾಗಿ ಕಾರ್ಲದಲ್ಲಿನ ಚೈತ್ಯಾಲಯನ್ನು ನೋಡಹೋಗಿದ್ದರು. ಕತ್ತಲಾಗುತ್ತಿರುವಾಗ ಹತ್ತಿರದ ಲೋನಾವಳಕ್ಕೆ ಸೇರುವ ಆತುರದಲ್ಲಿ ಹೊರಟ ಕಾರಂತರನ್ನು ಒಬ್ಬಾತ ಹಿಂಬಾಲಿಸುತ್ತಿದ್ದ. ಕಾರಂತರು ಆತನನ್ನು ಪ್ರಶ್ನಿಸಿದಾಗ ಆತ ’ನೀವು ಸಾಧುಗಳೆ?’ ಎಂದು ಕೇಳಿದ. ಅಲ್ಲದೆ ತನ್ನ ಮನೆಗೆ ಬಂದು ದರ್ಶನ ನೀಡುವಂತೆ ವಿನಂತಿಸಿದ. ನೀಳವಾದ ಗಡ್ಡವನ್ನು ಬಿಟ್ಟು ಕಾರ್ಲದ ಗವಿಯಿಂದ ಹೊರಬಿದ್ದಿದ್ದ ಕಾರಂತರನ್ನು ಆತ ಸಂನ್ಯಾಸಿಯೆಂದೇ ತಿಳಿದಿದ್ದ.
ಮುಂದೊಮ್ಮೆ ಕಾರಂತರು ಹುಬ್ಬಳ್ಳಿಯ ದುರ್ಗದಬೈಲಿನ ಬೀದಿಗಳಲ್ಲಿ ಅಡ್ಡಾಡುತ್ತಿರುವಾಗ ಒಬ್ಬ ಅವರನ್ನು ನಿಲ್ಲಿಸಿದ. ಮುಖಮುಖ ನೋಡುತ್ತಾ ನಿಂತ. ಕಾರಂತರು ಏನೂ ತಿಳಿಯದೆ ಆಶ್ಚರ್ಯದಿಂದ ಆತನನ್ನು ನೋಡುತ್ತಿದ್ದಂತೆಯೇ ಆತ ಅವರ ಕಾಲಿಗೆರಗಿ ನಮಸ್ಕರಿಸಿ ಹೋದ!
ಅಲ್ಲಿಂದ ಕಾನೂರಿಗೆ ತಲುಪಿದ ಕಾರಂತರು ಮಾಡಿದ ಮೊದಲ ಕೆಲಸವೆಂದರೆ ತಮ್ಮ ಗಡ್ಡಾಪಹರಣ!

…………………………….

ಮಾತಲ್ಲೇ ಚುರುಕು ಮುಟ್ಟಿಸಿದವರು

ಕೆಲವು ಮಂದಿ ಜ್ಞಾನಿಗಳು, ಹಿರಿಯರು, ವಿದ್ವಾಂಸರು ಯಾವತ್ತೂ ತಮ್ಮ ಸ್ವಾಭಿಮಾನವನ್ನು ಬಿಟ್ಟು ಕೊಟ್ಟವರಲ್ಲ. ಹಾಗಂತ, ಮೂರನೆ ದರ್ಜೆಯ ನಡೆ-ನುಡಿ ಕನಸಿನಲ್ಲೂ ಆಡಿದವರಲ್ಲ. ಉಪಾಯವಾಗೆ ತಿದ್ದಲು ಯತ್ನಿಸುವವರು. ಅಂತಹ ಹಿರಿಯ ಚೈತನ್ಯರಲ್ಲಿ ಕುವೆಂಪು ಒಬ್ಬರು.
ಒಮ್ಮೆ ರಾಮಾಯಣ ದರ್ಶನಂ ಓದಿದ ವಿದ್ಯಾರ್ಥಿಯೊಬ್ಬ ತನ್ನ ಮೆಚ್ಚುಗೆ ತಿಳಿಸಿ, ಕುವೆಂಪು ಅವರನ್ನು ಅಭಿನಂದಿಸಲು ಬಂದಿದ್ದ. ಸ್ವಲ್ಪ ಹೊತ್ತು ಹೊಗಳಿ, ಮೆಚ್ಚುಗೆ ವ್ಯಕ್ತ ಪಡಿಸಿ ನಂತರ ಆ ವಿದ್ಯಾರ್ಥಿ ಹೇಳಿದ:
“ಸಾರ್ ಪುಸ್ತಕಕ್ಕೆ 250/-ರೂ ಬೆಲೆ ಜಾಸ್ತಿ ಆಯಿತಲ್ಲವೇ?” ಕುವೆಂಪು ರವರು ಅವನ ಕಾಲನ್ನು ಗಮನಿಸಿದಂತೆ, ಒಳ್ಳೆ ಬಾಟಾ ಶೂ ಧರಿಸಿದ್ದ.
“ಶೂ ಮಾಡೆಲ್ ಚೆನ್ನಾಗಿದೆ. ಎಷ್ಟು ಕೊಟ್ತೆ” ಎಂ
ದು ವಿಚಾರಿಸಿದರು ಕುವೆಂಪು. ತನ್ನ ಶೂ ಆಯ್ಕೆ ಬಗ್ಗೆ ಹೆಮ್ಮೆ ಯಿಂದ ಉಬ್ಬಿ ಹೋದ ಆ ವಿದ್ಯಾರ್ಥಿ ಹೇಳಿದ-
“ಸಾರ್, ಇದಕ್ಕೆ 450/- ರೂಪಾಯಿ ಕೊಟ್ಟೆ” ಎಂದ. ಅಷ್ಟು ಸಾಕಿತ್ತು, ಕುವೆಂಪು ಅವರು ಜಾಡಿಸಿದ್ದರು ಮಾತಲ್ಲೇ ಚುರುಕು ಮುಟ್ತಿಸುತ್ತಾ-
“ಏನಪ್ಪಾ ವರ್ಷಾನುಗಟ್ಟಲೇ ತಪಸ್ಸಿನಂತೆ ವಿಚಾರ ಕಲೆ ಹಾಕಿ, ಹಗಲು ರಾತ್ರಿ ಎನ್ನದೇ ಬರೆದ ಕೃತಿ ರಾಮಾಯಣ ದರ್ಶನಂ. ನಿನ್ನ ಒಂದು ಜೊತೆ ಶೂ ಗಿಂತಲೂ, ನನ್ನ ಕೃತಿ ಬೆಲೆ ಹೆಚ್ಚಾಗಿದೆಯೇ” – ಎಂದು ಮುಖ ನೋಡಿದ್ದರು.
ಆ ವಿದ್ಯಾರ್ಥಿ ತಲೆ ತಗ್ಗಿಸಿ, ಕ್ಷಮೆ ಯಾಚಿಸಿ ಹೊರಟಿದ್ದ. ಮಾತಿನ ಚುರುಕು, ಚಾಟಿ ಏಟಿಗಿಂತ ಜೋರಲ್ಲವೇ..?

…………………………………………………………………………………………

24 Responses to “ಅವರಿವರ ಭಯಾಗ್ರಫಿ 1”

  1. ರಾಜೇಶ್ ಫೆಬ್ರವರಿ 3, 2008 at 4:25 ಅಪರಾಹ್ನ #

    ನಗೆ ಸಾಮ್ರಾಟ ರೆ……ಸೂಪರ್………..

  2. nagenagaaridotcom ಫೆಬ್ರವರಿ 3, 2008 at 8:21 ಅಪರಾಹ್ನ #

    ಧನ್ಯವಾದ
    ರಾಜೇಶರೇ…

  3. Ganesh K ಏಪ್ರಿಲ್ 11, 2008 at 9:02 ಫೂರ್ವಾಹ್ನ #

    ಮತ್ತೊಂದಿಷ್ಟು ಭಯಾಗ್ರಫಿ ಬರಲೆಂದು ಆಶಿಸುವ
    ನಿಮ್ಮವ

  4. prabhakar joshi ಮೇ 9, 2008 at 3:34 ಅಪರಾಹ್ನ #

    ಮಾನ್ಯರೆ
    ಅದ್ಭುತವಾದ ಸಂಗತಿಗಳನ್ನು ಕಲೆಹಾಕಿದ ಕಲಾವಿದರು ನೀವು.
    -ಪ್ರಭಾಕರ ಜೋಶಿ, ಸೇಡಮ್

  5. nagenagaaridotcom ಮೇ 11, 2008 at 11:20 ಫೂರ್ವಾಹ್ನ #

    ಗಣೇಶರೆ,
    ನಿಮ್ಮ ಆಸೆಯನ್ನು ಪೂರೈಸಲು ನಗಾರಿ ಸರ್ವ ಪ್ರಯತ್ನಗಳನ್ನೂ ಮಾಡುತ್ತದೆ…

    ನಗೆ ಸಾಮ್ರಾಟ್

  6. nagenagaaridotcom ಮೇ 11, 2008 at 11:27 ಫೂರ್ವಾಹ್ನ #

    ಜೋಶಿಯವರೇ,
    ನಗಾರಿಗೆ ಭೇಟಿಯಿತ್ತು ಬೆನ್ನು ತಟ್ಟಿದ್ದಕ್ಕೆ ಧನ್ಯವಾದಗಳು… ಆಗಾಗ ಬರುತ್ತಿರಿ…

    ನಗೆ ಸಾಮ್ರಾಟ್

  7. hema ಜುಲೈ 5, 2008 at 6:21 ಅಪರಾಹ್ನ #

    bari bereyavar biography maatra baradre henge samratare nimma autobiography yavag baritira adarallenu hasyavilve?

  8. Sunil Hegde ಜುಲೈ 9, 2008 at 7:49 ಅಪರಾಹ್ನ #

    ದಿಗ್ಗಜರ ಬದುಕಿನ ರಸಘಳಿಗಳನ್ನು ಆಸ್ವಾದಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು…
    ನಗೆ ಸಾಮ್ರಾಟರ `ನಗಿಸುವ’ ದಿಗ್ವಿಜಯ ಹೀಗೆ ನಿರಂತರವಾಗಿ ಸಾಗುತ್ತಿರಲಿ…

  9. Nage samrat ಜುಲೈ 10, 2008 at 11:51 ಫೂರ್ವಾಹ್ನ #

    ರಸಗಳಿಗೆಗಳನ್ನು ರಸಗುಳಿಗೆಗಳ ಹಾಗೆ ಸ್ವೀಕರಿಸುವ ನಿಮ್ಮಂಥ ಶ್ರದ್ಧೆಯ ಸಜ್ಜನರಿರುವಾಗ ನನಗ್ಯಾವ ಚಿಂತೆ. ಮುಂದಿನದು ದಿಗ್ವಿಜಯವೇ. ಆದರೆ ಯಾವ ದಿಕ್ಕು ಅನ್ನೋದರ ಬಗ್ಗೆ ತೀವ್ರವಾದ ಚರ್ಚೆ ನಡೆಯುತ್ತಿದೆ.

    ನಗೆಸಾಮ್ರಾಟ್

  10. suma ಸೆಪ್ಟೆಂಬರ್ 1, 2008 at 3:02 ಅಪರಾಹ್ನ #

    After reading this my tention was released.i was very much refreshed, thanks for the jokes ,hope this will continue in future.

  11. Nage samrat ಸೆಪ್ಟೆಂಬರ್ 2, 2008 at 8:22 ಅಪರಾಹ್ನ #

    dear suma,
    thank u very much for making time to visit this blog and to enjoy its contents. u r welcome….

    nagesamrat

  12. Vinayak ಫೆಬ್ರವರಿ 12, 2009 at 6:25 ಫೂರ್ವಾಹ್ನ #

    It is the smallest number expressible as the sum of two cubes in two different ways.’ ” (ತಿಳಿದವರು ಈ ವಾಕ್ಯವನ್ನು ಕನ್ನಡಕ್ಕೆ ತನ್ನಿ 🙂 )
    ಕನ್ನಡಕ್ಕೆ ತರುವುದು ದೂರದ ಮಾತು.. ಅದರ ಅರ್ಥವೇ ಆಗಲಿಲ್ಲ
    http://en.wikipedia.org/wiki/Taxicab_number

    • Nage samrat ಫೆಬ್ರವರಿ 12, 2009 at 9:36 ಅಪರಾಹ್ನ #

      🙂

  13. ಕೃಷ್ಣಮೂರ್ತಿ ಮೇ 27, 2009 at 4:25 ಅಪರಾಹ್ನ #

    ನಿಜ ಜೀವನದ ಹಾಸ್ಯ ಪ್ರಸಂಗಗಳು, ವ್ಯವಸ್ಥಿತವಾಗಿ ಒಂದೆಡೆ ಸೇರುತ್ತಿದೆ, ುತ್ತಮ ಪ್ರಯತ್ನ.

    • Nage samrat ಮೇ 29, 2009 at 7:57 ಅಪರಾಹ್ನ #

      ಧನ್ಯವಾದ.

      ನಿಮ್ಮ ಬಳಿಯಲ್ಲಿ ಸಂಗ್ರಹಯೋಗ್ಯ ಅನೆಕ್ ಡೋಟುಗಳಿದ್ದರೆ ಕಳಿಸಿಕೊಡಿ.

      – ನಗೆ ಸಾಮ್ರಾಟ್

  14. Dharwadadinda ಡಿಸೆಂಬರ್ 22, 2009 at 1:27 ಫೂರ್ವಾಹ್ನ #

    This is my first visit to this blog. Really liked. Appreciate your effort NS!

  15. Vishwanath Gudsi Sedam ಮಾರ್ಚ್ 27, 2010 at 4:04 ಫೂರ್ವಾಹ್ನ #

    ware wah, best, best

    • Nage samrat ಮಾರ್ಚ್ 29, 2010 at 2:36 ಅಪರಾಹ್ನ #

      thank you thank you

  16. Gireesh.N.M. ನವೆಂಬರ್ 29, 2011 at 12:11 ಅಪರಾಹ್ನ #

    Nice one, collectable

  17. ನಂದೀಶ ಆಗಷ್ಟ್ 11, 2018 at 9:35 ಅಪರಾಹ್ನ #

    ಸೂಪರ್

Trackbacks/Pingbacks

  1. ಅವರಿವರ ಭಯಾಗ್ರಫಿ! « ನಗೆ ನಗಾರಿ ಡಾಟ್ ಕಾಮ್ - ಜುಲೈ 3, 2008

    […] ಅವರಿವರ ಭಯಾಗ್ರಫಿ […]

  2. ಕಂಡವರ ಭಯಾಗ್ರಫಿ « ನಗೆ ನಗಾರಿ ಡಾಟ್ ಕಾಮ್ - ಸೆಪ್ಟೆಂಬರ್ 12, 2008

    […] ಅವರಿವರ ಭಯಾಗ್ರಫಿ […]

  3. ಇವ್ರ ಭಯಾಗ್ರಫಿಗಳು « ನಗೆ ನಗಾರಿ ಡಾಟ್ ಕಾಮ್ - ನವೆಂಬರ್ 13, 2008

    […] ಅವರಿವರ ಭಯಾಗ್ರಫಿ […]

  4. ಅವರಿವರ ಭಯಾಗ್ರಫಿ « ನಗೆ ನಗಾರಿ ಡಾಟ್ ಕಾಮ್ - ಜೂನ್ 16, 2009

    […] ಅವರಿವರ ಭಯಾಗ್ರಫಿ […]

Leave a reply to ಕೃಷ್ಣಮೂರ್ತಿ ಪ್ರತ್ಯುತ್ತರವನ್ನು ರದ್ದುಮಾಡಿ