ಸ್ವಲ್ಪಾದ್ರೂ ಸೀರಿಯಸ್ ಆಗ್ರಿ! – 1


ಇದು ಅಪ್ಪಟ ಹಾಸ್ಯಮಯವಾದ ನಗೆಹನಿಗಳ ಸಂಗ್ರಹ ಪುಟ. ನಿಮ್ಮಲ್ಲೂ ನೆಗೆಯುಕ್ಕಿಸುವ ನಗೆಹನಿಗಳಿದ್ದರೆ ಹಂಚಿಕೊಳ್ಳಿ. ನಗೆಯನ್ನು ಹಂಚಿದಷ್ಟೂ ವೃದ್ಧಿಸುತ್ತದೆ. ನಮ್ಮ ವಿಳಾಸ nagesamrat@gmail.com
…………………………………………………………………………
(ಕುಶ್ವಂತ್ ಸಿಂಗ್ ಜೋಕ್ಸ್ ಪುಸ್ತಕದಿಂದ ಆಯ್ದದ್ದು)

ನಿನಗದರ ಅಭ್ಯಾಸವಿದೆ

ಹಷೀಮ್ ಅಲಿ ಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಈ ಕೆಳಗಿನ ದಂತ ಕತೆಯೊಂದನ್ನು ಹೇಳಿದಾಗ ಸಭಿಕರಲ್ಲಿ ಒಡಕು ಕಾಣಿಸಿತು:

ಒಬ್ಬ ಉಪಕುಲಪತಿ ತೀರಿಕೊಂಡ. ಅವನ ವಿಧಿ ನಿರ್ಣಯವಾಗುವ ಮೊದಲೇ ಸ್ವರ್ಗದ ಬಾಗಿಲ ಬಳಿ ಪ್ರಶ್ನೋತ್ತರಕ್ಕಾಗಿ ಕರೆತರಲಾಯಿತು. “ನೀನು ಜೀವಿಸಿದ್ದಾಗ ಏನು ಮಾಡುತ್ತಿದ್ದೆ?” ಧರ್ಮರಾಜ ಕೇಳಿದ.

“ನಾನು ವಿಶ್ವವಿದ್ಯಾನಿಲಯವೊಂದರ ಉಪಕುಲಪತಿಯಾಗಿದ್ದೆ.”

“ಓಕೆ, ನೀನು ನರಕದ ಯಾತನೆಗಳನ್ನು ಭೂಲೋಕದಲ್ಲಿಯೇ ಅನುಭವಿಸಿದ್ದಿ. ನಿನಗೆ ಸ್ವರ್ಗಲೋಕದ ಅಗತ್ಯವಿದೆ.” ಹೇಳಿದ ಧರ್ಮರಾಜ.

ಮುಂದೆ ಬಂದ ಒಬ್ಬನಿಗೂ ಇದೇ ಪ್ರಶ್ನೆ ಹಾಕಲಾಯಿತು.

“ನಾನು ಮೂರು ಬಾರಿ ವಿಶ್ವವಿದ್ಯಾನಿಲಯವೊಂದರ ಉಪಕುಲಪತಿಯಾಗಿದ್ದೆ.” ಅವನು ಉತ್ತರಿಸಿದ.

ಧರ್ಮರಾಜ, “ಇವನನ್ನು ನರಕಕ್ಕೆ ಒಯ್ಯಿರಿ. ಇವನಿಗೆ ಅದು ಅಭ್ಯಾಸವಾಗಿ ಹೋಗಿದೆ.” ಎಂದು ಆಜ್ಞೆ ಮಾಡಿದ.

***
ಸ್ವರ್ಗದ ಗೋಡೆ

ದೇವರು ಮತ್ತು ಸೈತಾನ ಇವರಿಬ್ಬರಲ್ಲಿ ಸ್ವರ್ಗ ಮತ್ತು ನರಕಗಳನ್ನು ವಿಭಾಗಿಸುವ ಗೋಡೆಯ ದುರಸ್ತಿ ಮಾಡಿಸುವಲ್ಲಿ ವಾದ ಉಂಟಾಯಿತು. ದೇವರು ಹೇಳಿದ: “ಗೋಡೆ ಮುರಿದುಬಿದ್ದುದೆಲ್ಲ ನರಕದಲ್ಲಿನ ಜನರಿಂದ, ಆದುದರಿಂದ ಸೈತಾನನೇ ದುರಸ್ತಿಯ ಖರ್ಚು ವಹಿಸಲಿ.”

ಸೈತಾನ ವಜ್ರ ಹೃದಯಿ, ಕಠೋರ ವ್ಯಕ್ತಿ. ಖರ್ಚನ್ನು ದೇವರೇ ವಹಿಸಿಕೊಳ್ಳಲಿ ಎಂದ. ವಾದಕ್ಕೆ ಪರಿಹಾರ ಸಿಕ್ಕಲಿಲ್ಲ. ಕಡೆಗೆ ಸೈತಾನ್, “ನಾವು ಮಧ್ಯಸ್ಥರೊಬ್ಬರನ್ನು ನೇಮಕ ಮಾಡಿಕೊಳ್ಳೋಣ ನಮ್ಮ ವಕೀಲರು ನಮಗಾಗಿ ವಾದ ಮಾಡಲಿ” ಎಂದು ಹೇಳಿದ.

ದೇವರು ಉತ್ತರಿಸುತ್ತ, “ಮಧ್ಯಸ್ಥನಿಟ್ಟುಕೊಳ್ಳಲು ನನ್ನದೇನೂ ಆಕ್ಷೇಪವಿಲ್ಲ. ಆದರೆ ನಿಮಗೆ ಇದರಿಂದ ಒಂದು ಅನುಕೂಲವಿದೆ. ಸ್ವರ್ಗದಲ್ಲಿ ನನಗೆ ಯಾರೂ ವಕೀಲರಿಲ್ಲ. ಅವರೆಲ್ಲ ನಿಮ್ಮ ಕಡೆಯೇ ಇದ್ದಾರೆ” ಎಂದ.

***
ಅವರು ಜನಸೇವಕರು

ಭಾರತವನ್ನು ಸಂದರ್ಶಿಸಲೆಂದು ಬಂದ ಅಮೆರಿಕನ್ ನಿಯೋಗವೊಂದಕ್ಕೆ ರಾಜಧಾನಿಯ ಸುತ್ತ ತೋರಿಸಲಾಗುತ್ತಿತ್ತು. ಸಂಜೆ ವಿಧಾನಸೌಧದ ಬಳಿ ಸುತ್ತುನೋಟದ ವೀಕ್ಷಣೆಗಾಗಿ ಸೆಕ್ರೆಟರಿಯೇಟ್ ಬಳಿಗೆ ಕರೆದೊಯ್ಯಲಾಯಿತು. ಕಛೇರಿ ಮುಗಿಯುವ ವೇಳೆ. ಸಾವಿರಾರು ಗುಮಾಸ್ತರು ತಮ್ಮ ಕಛೇರಿಗಳಿಂದ ಹೊರಗೆ ಬಂದರು. ಇಡೀ ಸ್ಥಳ ಬೈಸಿಕಲ್‌ಗಳು ಹಾಗೂ ಪಾದಚಾರಿಗಳಿಂದ ತುಂಬಿಹೋಯ್ತು.

“ಈ ಜನರೆಲ್ಲ ಯಾರು?” ಎಂದು ಅಮೇರಿಕನ್ ನಿಯೋಗ ಕೇಳಿತು.

“ಇವರೆಲ್ಲ ಭಾರತದ ಜನ ಸಾಮಾನ್ಯರು. ದೇಶವನ್ನು ನಿಜವಾಗಿ ಆಳುವವರು.” ಭಾರಿ ಜಂಬದಿಂದ ಮಂತ್ರಿವರ್ಯರು ಸಂದರ್ಶಕರಿಗೆ ಹೇಳಿದರು.

ಕೆಲವು ನಿಮಿಷದ ನಂತರ ಮೋಟರ್ ಬೈಕುಗಳ ಮೇಲೆ ಕುಳಿತ ಪೈಲಟ್‌ಗಳು, ಸಶಸ್ತ್ರಧಾರಿಗಳಾದ ಪೋಲೀಸರಿಂದ ತುಂಬಿದ್ದ ಜೀಪುಗಳ ರಕ್ಷಣೆಯೊಂದಿಗೆ ಧ್ವಜ ಹೊತ್ತು ಬಂಡಿಗಳ ಸೇನೆಯೇ ಬಂದಿತು. ಅಮೇರಿಕನ್, “ಇದರಲ್ಲಿರುವವರೆಲ್ಲ ಯಾರು?” ಎಂದು ಕೇಳಿದ.

ಮಂತ್ರಿವರ್ಯರು ಅದೇ ಜಂಬದಿಂದ ಉತ್ತರಿಸಿದರು, “ಇವರೆಲ್ಲ ನಾವೇ. ಜನರ ಸೇವಕರು.”

***
ನನಗೇನು ಗೊತ್ತು?

ಒಬ್ಬ ಶ್ರೀಮಂತ ಮಾರವಾಡಿ ಗೆಳೆಯನೊಬ್ಬನಿಗೆ ತನ್ನ ಹೆಂಡತಿಯ ದುಂದು ವೆಚ್ಚದ ಅಭ್ಯಾಸಗಳ ಬಗ್ಗೆ ಹೇಳುತ್ತಿದ್ದ: “ಒಂದು ದಿನ ಅವಳು ನನ್ನನ್ನು ಹತ್ತು ರುಪಾಯಿ ಕೇಳಿದಳು. ಮರುದಿನ ಇಪ್ಪತ್ತು ರೂಪಾಯಿ ಕೇಳಿದಳು. ಈ ದಿನ ಬೆಳಗ್ಗೆ ಇಪ್ಪತ್ತೈದು ಕೇಳುತ್ತಾಳೆ.”

ಗೆಳೆಯ, “ಹೌದು, ಆ ಹಣದಿಂದ ಅವಳೇನಯ್ಯ ಮಾಡ್ತಾಳೆ?” ಕೇಳಿದ.

“ನನಗೇನು ಗೊತ್ತು? ನಾನವಳಿಗೆ ಯಾವತ್ತೂ ಹಣವನ್ನು ಕೊಟ್ಟೇ ಇಲ್ಲ.” ಮಾರವಾಡಿ ಉತ್ತರಿಸಿದ.

***
ಕೆನ್ನೆಗೆ ಏಟು

ಗಂಡಾಳು ಅಳುತ್ತ ಯಜಮಾನರೆಡೆಗೆ ಬಂದು, “ಸಾಹೇಬರೇ, ಅಮ್ಮಾವರು ಕೆನ್ನೆಗೆ ಹೊಡೆದರು” ಎಂದು ಹೇಳಿದ.

ಯಜಮಾನ, “ಅದಕ್ಕೇನೀಗ? ನಾನೆಂದಾದರೂ ಅಳುವುದನ್ನು ನೋಡಿದ್ದೀಯೋ?” ಎನ್ನಬೇಕೆ?

………………………………….
ಹಂದಿಜ್ವರ, ಚಿಕೂನ್ ಗುನ್ಯಾ ಜ್ವರಗಳ ಪ್ರಮುಖ ಲಕ್ಷಣವಾಗಿರುವ ಮಂದಿ ಜ್ವರದ ಪರಿಣಾಮ ಎಸ್.ಎಂ.ಎಸ್ ಹಾಗೂ ಇ-ಮೇಲುಗಳ ಮುಖಾಂತರ ವ್ಯಾಪಕವಾಗಿ ಹರಡುತ್ತಿರುವ ನಗೆ ಜ್ವರವನ್ನು ಅಳೆಯುವ ಮೀಟರ್ ಹಿಡಿದು ನಗೆ ಸಾಮ್ರಾಟರು ಸಂಚಾರ ಹೊರಟಾಗ ದಕ್ಕಿದ ಕೀಟಾಣುಗಳು ಇವು:

೧. ಒಂದು ಕಾಲ್ ಇಲ್ಲ, ಕನಿಷ್ಠ ಪಕ್ಷ ಮಿಸ್ ಕಾಲೂ ಇಲ್ಲ, ಒಂದೇ ಒಂದು ಮೆಸೇಜ್ ಕೂಡ ಇಲ್ಲ… ನಂಗೆ ಭಯ ಆಗಿದೆ ಹಂದಿ ಜ್ವರ ತಗುಲಿದೆಯಾ ಎಂದು… ನಿನ್ನ ಮೊಬೈಲಿಗೆ! (ಕಳಿಸಿದವರು: ಸಿಂಧು)

೨. ಜಿಂಕೆ ಹಾಗೂ ಸೊಳ್ಳೆ ಇಬ್ಬರೂ ಒಳ್ಳೆಯ ಗೆಳೆಯರು.
ಜಿಂಕೆ ಒಂದು ಹಾಡು ಹೇಳು ಎಂದು ಸೊಳ್ಳೆಯನ್ನು ಕೇಳಿತು.
ಸೊಳ್ಳೆ ಶುರು ಮಾಡಿತು, “ನೀ ಜಿಂಕೆ ಮರೀನಾ, ನೀ ಜಿಂಕೆ ಮರೀನಾ, ನೀ ಜಿಂಕೆ ಜಿಂಕೆ ಮರೀನಾ…”
ತಾನೇನು ಕಡಿಮೆ ಎಂದು ಜಿಂಕೆ ಹಾಡಿತು, ‘‘ನಿನ್ನಿಂದಲೇ, ನಿನ್ನಿಂದಲೇ ಚಿಕೂನ್ ಗುನ್ಯಾ ಶುರುವಾಗಿದೆ…”  (ಕಳಿಸಿದವರು: ಸಿಂಧು)

೩. H1N1 ಎಂದರೇನು?
ಹಂದಿ ಒಂದೇ ನೀನೂ ಒಂದೇ!

೪. ಅದೇನು ಜನವೋ, ತೊಂಭತ್ತು ಮಂದಿಗೆ ಹಂದಿಜ್ವರ ತಗುಲಿತು ಅಂದರೆ ಇಡೀ ಜಗತ್ತೇ ಮಾಸ್ಕ್ ತೊಡಲು ಸಿದ್ಧವಾಗುತ್ತೆ.
ಇಪ್ಪತ್ತು ಮಿಲಿಯನ್ ಮಂದಿಗೆ ಏಡ್ಸ್ ತಗುಲಿದ್ದರೂ ಎಲ್ಲರೂ ಕಾಂಡೋಮ್ ಧರಿಸಲೊಲ್ಲರು!

………………………………………..
ಇದು ನನ್ನದಲ್ಲ

ಕೆಲಸದಲ್ಲಿ ತೊಡಗಿದ್ದ ಇಂಜಿನಿಯರ್ ಬಳಿ ಕಾರ್ಪೆಂಟರ್ ಒಬ್ಬ ದಡಬಡಿಸಿ ಬಂದ. “ಸರ್! ಮಹಡಿ ಮೇಲಿಂದ ಯಾರೋ ಅಯೋಗ್ಯ ಬ್ಲೇಡು ಬೀಳಿಸಿದ. ಅದು ನನ್ನ ಕಿವಿಯನ್ನು ಕತ್ತರಿಸಿ ಹಾಕಿದೆ!”

ಇಂಜಿನಿಯರ್ ಕೂಡಲೆ ಹತ್ತಿರದಲ್ಲಿದ್ದ ಜನರನ್ನು ಕೆಳಕ್ಕೆ ಕಳಿಸಿ ಆತನ ಕಿವಿಯನ್ನು ಹುಡುಕಲು ಆಜ್ಞಾಪಿಸಿದ. ಆಸ್ಪತ್ರೆಗೆ ಅದನ್ನು ಒಯ್ದರೆ ಸರ್ಜರಿಯ ಮೂಲಕ ಕಿವಿಯನ್ನು ಮತ್ತೆ ಕೂರಿಸ ಬಹುದು ಎಂಬುದು ಆತನ ಎಣಿಕೆಯಾಗಿತ್ತು.

ಕೆಳಕ್ಕೆ ಹೋದ ಮಂದಿ ಅಲ್ಲಿ ಬಿದ್ದಿದ್ದ ಕಿವಿಯ ತುಂಡನ್ನು ಜೋಪಾನವಾಗಿ ಎತ್ತಿ ತಂದು ತೋರಿಸಿದರು. ಅದನ್ನೊಂದು ಕ್ಷಣ ಗಮನಿಸಿದ ಕಾರ್ಪೆಂಟರ್ “ಸರ್, ಇದು ನನ್ನದಲ್ಲ. ನನ್ನ ಕಿವಿಯ ಮೇಲೆ ನಟರಾಜ ಪೆನ್ಸಿಲ್ ಇತ್ತು.” ಎಂದ!

ಬೆತ್ತಲೆ ಗಂಡಸು

ಮಧ್ಯರಾತ್ರಿಯ ನೀರವತೆಯಲ್ಲಿ ಪೊಲೀಸ್ ಸ್ಟೇಷನ್ನಿನ ಫೋನು ಕಿರುಚಿಕೊಂಡಿತು.

“ಹೆಲೋ, ಆಫೀಸರ್, ಇಲ್ಲೊಬ್ಬ ಗಂಡಸು ಬೆತ್ತಲೆ ತಿರುಗುತ್ತಿದ್ದಾನೆ.”

“ಹೌದಾ ಮೇಡಂ, ನಿಮ್ಮ ಅಡ್ರೆಸ್ ಕೊಡಿ ನಾವೀಗಲೇ ಬರ್ತಿದೀವಿ. ಬಾಗಿಲು ಚಿಲಕ ಹಾಕಿಕೊಳ್ಳಿ ಗಾಬರಿಯಾಗಬೇಡಿ.”

ಐದು ನಿಮಿಷದಲ್ಲಿ ಪೊಲೀಸ್ ಆಫೀಸರ್ ಆಕೆಯ ಮನೆಯಲ್ಲಿದ್ದ.

“ಎಲ್ಲಿ ಮೇಡಂ?”

“ಇತ್ತ ಬನ್ನಿ ಆಫೀಸರ್. ನೋಡಿ ಅವನಿನ್ನೂ ನಾಚಿಕೆ ಇಲ್ಲದೆ ನಿಂತಿದ್ದಾನೆ.”

ಸುತ್ತ ಮುತ್ತ ಕಣ್ಣಾಡಿಸಿದ ಆಫೀಸರ್‌ಗೆ ಯಾರೂ ಕಾಣಲಿಲ್ಲ.

“ಎಲ್ಲಿ ಮೇಡಂ, ನನಗ್ಯಾರೂ ಬೆತ್ತಲೆ ಗಂಡಸು ಕಾಣಿಸುತ್ತಿಲ್ಲ.”

“ಅಯ್ಯೋ ಅಲ್ಲಲ್ಲ. ಬನ್ನಿ, ಇಲ್ಲಿ ಈ ಟೆಲಿಸ್ಕೋಪಿನಿಂದ ನೋಡಿ.”

ರಜೆ ಬೇಕಾ?

ಹೊಸತಾಗಿ ಸೇನೆಯನ್ನು ಸೇರಿದ್ದ ಇಸ್ರೇಲಿ ಸೈನಿಕ ಮೂರು ದಿನ ರಜೆಗಾಗಿ ತನ್ನ ಮೇಲಿನ ಅಧಿಕಾರಿಗೆ ಅರ್ಜಿ ಕಳುಹಿಸಿದ.

ಅಧಿಕಾರಿ ಕೇಳಿದ: “ನಿನಗೇನು ತಲೆ ಕೆಟ್ಟಿದೆಯಾ? ಈಗ ತಾನೆ ಸೇನೆಗೆ ಸೇರಿದ್ದೀಯಾ ಆಗಲೇ ಮೂರು ದಿನ ರಜೆಗೆ ಅರ್ಜಿ ಹಾಕಿದ್ದೀಯಲ್ಲ? ಏನಾದರೂ ಅದ್ಭುತವಾದ ಸಾಧನೆಯನ್ನು ಮಾಡಿ ತೋರಿಸಿದರೆ ನಿನ್ನ ರಜೆಯನ್ನು ಮಂಜೂರು ಮಾಡಲಾಗುತ್ತೆ.”

ಮರುದಿನ ಆ ಸೈನಿಕ ಒಂದು ಅರಬ್ ಟ್ಯಾಂಕರ್‌ನೊಂದಿಗೆ ಹಿಂದಿರುಗಿದ! ಅಧಿಕಾರಿಗೆ ವಿಪರೀತ ಸಂತೋಷವಾಯ್ತು, “ಹೇಗೆ ಮಾಡಿದೆ?” ಎಂದ ಕುತೂಹಲದಿಂದ.

“ಏನಿಲ್ಲ, ನಾನು ನಮ್ಮ ಟ್ಯಾಂಕ್ ಒಂದರಲ್ಲಿ ಹತ್ತಿಕೊಂಡು ಅರಬ್ ಗಡಿ ಹತ್ತಿರಕ್ಕೆ ಹೋದೆ. ಅತ್ತ ಕಡೆಯಿಂದ ಅರಬ್ ಟ್ಯಾಂಕೊಂದು ಧಾವಿಸಿತು. ನಾನು ಬಿಳಿಯ ಧ್ವಜ ಹಾರಿಸಿದೆ. ಅತ್ತ ಕಡೆಯಿಂದಲೂ ಬಿಳಿ ಧ್ವಜದ ಪ್ರತಿಕ್ರಿಯೆ ಬಂತು. ಆ ಟ್ಯಾಂಕಿನಲ್ಲಿದ್ದ ಅರಬ್ ಸೈನಿಕನಿಗೆ ನಾನು ಕೇಳಿದೆ, ‘ನಿನಗೆ ಮೂರು ದಿನ ರಜೆ ಬೇಕಾ?’ ಆತ ‘ಹೂಂ’ ಅಂದ. ನಾವಿಬ್ಬರೂ ಟ್ಯಾಂಕುಗಳನ್ನು ಬದಲಾಯಿಸಿಕೊಂಡ್ವಿ.”

ಸತ್ತ ಮೇಲೆ

ಅಪಘಾತವೊಂದರಲ್ಲಿ ಕಾರಿನಲ್ಲಿದ್ದ ಮೂವರು ಗೆಳೆಯರು ಸತ್ತು ಹೋದರು.

ಸ್ವರ್ಗದ ದ್ವಾರದೆದುರು ನಿಂತಾಗ ದ್ವಾರಪಾಲಕ ಅವರನ್ನು ಪ್ರಶ್ನಿಸುತ್ತಿದ್ದ, “ಭೂಮಿಯ ಮೇಲೆ ನಿಮ್ಮ ಶವವನ್ನಿಟ್ಟುಕೊಂಡು ನಿಮ್ಮ ಪರಿಚಿತರು, ನಿಮ್ಮ ಕುಟುಂಬದವರು ದುಃಖಿಸುತ್ತಿದ್ದಾರೆ. ಕಡೆಯ ಬಾರಿಗೆ ನಿಮ್ಮ ಶವವನ್ನು ಕಂಡು ಅವರು ಏನು ಹೇಳಬೇಕೆಂದು ಬಯಸುತ್ತೀರಿ?”

ಮೊದಲನೆಯ ಹೇಳಿದ, “ನಾನೊಬ್ಬ ಒಳ್ಳೆಯ ಡಾಕ್ಟರ್ ಆಗಿದ್ದೆ. ಒಳ್ಳೆಯ ಮಗನಾಗಿದ್ದೆ, ಒಳ್ಳೆಯ ಗಂಡನಾಗಿದ್ದೆ, ಒಳ್ಳೆಯ ತಂದೆಯಾಗಿದ್ದೆ ಎಂದು ಹೇಳಿದರೆ ಸಾಕು.”

ಎರಡನೆಯವ ಹೀಗಂದ, “ನಾನೊಬ್ಬ ಅಸಾಮಾನ್ಯ ಶಿಕ್ಷಕನಾಗಿದ್ದೆ. ಮಕ್ಕಳಿಗೆ ಅದ್ಭುತವಾದ ಶಿಕ್ಷಣವನ್ನು ನೀಡಿದೆ. ಪ್ರೀತಿಯ ಗಂಡನಾಗಿದ್ದೆ ಎಂದು ಹೇಳಿದರೆ ನನಗೆ ಸಂತೋಷ.”

ಮೂರನೆಯವನು ಗಂಟಲು ಸರಿಸಿ ಪಡಿಸಿಕೊಂಡ, “ನನ್ನ ಶವದೆದುರು ನೆರೆದವರು ‘ನೋಡಲ್ಲಿ, ಅವನ ಬೆರಳುಗಳು ಅಲ್ಲಾಡ್ತಿದಾವೆ.’ ಎಂದರೆ ಸಾಕು”.

ಎಲ್ಲಿಯವರು

ಒಬ್ಬ ಬ್ರೀಟಿಷ್, ಇಬ್ಬ ಫ್ರಾನ್ಸಿನವ ಹಾಗೂ ವರ್ಲ್ಡ್ ಬ್ಯಾಂಕಿನ ಅರ್ಥಶಾಸ್ತ್ರಜ್ಞನೊಬ್ಬ ಮ್ಯೂಸಿಯಮ್ಮಿನಲ್ಲಿ ಆಡಂ ಹಾಗೂ ಈವ್‌ರ ಪೇಂಟಿಂಗ್‌ಗಳನ್ನು ನೋಡುತ್ತಿದ್ದರು.

“ಅವರಿಬ್ಬರ ಗಾಂಭೀರ್ಯ, ನೆಮ್ಮದಿ ನೋಡಿದ್ರೆ ಅವ್ರು ಬ್ರಿಟೀಷ್ ಅಂತ ಗೊತ್ತಾಗುತ್ತೆ.” ಹೇಳಿದ ಬ್ರಿಟೀಷ್ ವ್ಯಕ್ತಿ.

“ಇಲ್ಲ, ಅವ್ರು ಬೆತ್ತಲಾಗಿದ್ದಾರೆ ಹಾಗೂ ಈಡನ್ ತೋಟದಲ್ಲಿ ಆರಾಮಾಗಿ ಸುತ್ತಾಡಿಕೊಂಡಿದ್ದಾರೆ ಎಂದರೆ ಅವ್ರು ಫ್ರೆಂಚರೇ” ವಾದಿಸಿದ ಫ್ರಾನ್ಸಿನವ.

ವರ್ಲ್ಡ್ ಬ್ಯಾಂಕಿನವ ಹೇಳಿದ, “ನಿಮ್ಮಿಬ್ಬರ ಊಹೆ ತಪ್ಪು. ಅವರಿಬ್ಬರಿಗೆ ಉಡಲು ಬಟ್ಟೆಯಿಲ್ಲ, ತಲೆ ಮೇಲೆ ಸೂರಿಲ್ಲ. ಅವರಿಬ್ಬರಿಗೆ ತಿನ್ನಲು ಇರೋದು ಒಂದೇ ಸೇಬು. ಆದರೆ ಅವರಿಗೆ ತಾವಿರುವುದು ಸ್ವರ್ಗದಲ್ಲಿ ಎಂದು ಹೇಳಲ್ಪಟ್ಟಿದೆ. ಹಾಗಾಗಿ ಅವರು ನಿಜವಾಗಿಯೂ ಜಿಂಬಾಬ್ವೆಯವರು!”

…………………………………………………………………………
ದೇಶದ ಹೆಸ್ರು
ಟೀಚರ್: ಮಕ್ಕಳೇ ನೀವೆಲ್ಲ ಚೆನ್ನಾಗಿ ಓದಿ ದೇಶಕ್ಕೆ ಒಳ್ಳೆ ಹೆಸರು ತರ್ಬೇಕು.
ವಿದ್ಯಾರ್ಥಿ: ಯಾಕೆ ಮೇಡಂ, ಭಾರತ ಅನ್ನೋ ಹೆಸರು ಚೆನ್ನಾಗಿಲ್ವಾ?

……………………………………..

ಟ್ಯಾಕ್ಸಿ ಬಾಡಿಗೆ

ಕುಡುಕನೊಬ್ಬ ಟ್ಯಾಕ್ಸಿ ನಿಲ್ಲಿಸಿ ಕೂತು ಚಾರ್-ಮಿನಾರ್ ಕಡೆಗೆ ಬಿಡು ಎಂದ, ಸ್ವಲ್ಪ ಹೊತ್ತಾದ ನಂತರ ಚಾರ್-ಮಿನಾರ್ ಬಂತು:
ಕುಡುಕ: ಬಾಡಿಗೆ ಎಷ್ಟಾಯ್ತು ?
ಡ್ರೈವರ್: ಇಪ್ಪತ್ತು ರೂಪಾಯಿ
ಕುಡುಕ: ಜೇಬಿನಿಂದ ಹತ್ತು ರೂಪಾಯಿಯ ನೋಟೊಂದನ್ನು ಡ್ರೈವರಿಗೆ ಕೊಟ್ಟ.
ಡ್ರೈವರ್: ಇದು ಹತ್ತು ರೂಪಾಯಿ
ಕುಡುಕ: ನೀನು ನನ್ನ ಹುಚ್ಚ ಅಂದ್ಕೊಂಡಿದ್ದಿಯೇನು ? ನೀನೂ ನನ್ನ ಜೊತೆಗೆ
ಕೂತ್ಕುಂಡಿರಲಿಲ್ವ ? ನಿನ್ನಬಾಡಿಗೆ ನಾನು ಕೊಡ್ಲ ???

……………………………………..
ದೇವರ ಸಂಕಟ

ಅರವತ್ತು ವರ್ಷ ವಯಸ್ಸಾದ ಅಜ್ಜಿಯೊಬ್ಬಳು ರಸ್ತೆ ದಾಟುತ್ತಿರುವಾಗ ಆಕಾಶದಿಂದ ಧ್ವನಿಯೊಂದು ಮೊಳಗಿದಂತೆ ಕೇಳಿತು: “ನೀನು ನೂರು ವರ್ಷ ಬದುಕುತ್ತೀಯ.” ಅಜ್ಜಿ ತಲೆಯೆತ್ತಿ ನೋಡಿದಳು ಯಾರೂ ಕಾಣಲಿಲ್ಲ. ಎಲ್ಲ ತನ್ನ ಭ್ರಮೆ ಅಂದುಕೊಂಡು ಆಕೆ ರಸ್ತೆ ದಾಟಿದಳು.

ಮತ್ತೊಮ್ಮೆ ಸುಸ್ಪಷ್ಟವಾಗಿ ಧ್ವನಿಯು ಕೇಳಿತು: ‘‘ನಿನ್ನ ಆಯಸ್ಸು ನೂರು ವರ್ಷ”. ಈ ಬಾರಿ ಅಜ್ಜಿಗೆ ಅದು ದೇವರ ಅಭಯ ಎನ್ನುವುದು ಮನದಟ್ಟಾಯಿತು. ತನಗಿನ್ನೂ ಬದುಕುವುದಕ್ಕೆ ನಲವತ್ತು ವರ್ಷಗಳ ಕಾಲಾವಕಾಶವಿದೆ ಎಂದು ಖುಶಿಯಾದಳು.

ಕೂಡಲೆ ಆಕೆ ಪ್ಲಾಸ್ಟಿಕ್ ಸರ್ಜನ್ ಬಳಿ ತೆರಳಿ ತನ್ನ ಮುಖದ ಮೇಲಿನ ನೆರಿಗೆಗಳಿಗೆಲ್ಲಾ ಗತಿ ಕಾಣಿಸಿದಳು. ಅರವತ್ತು ವರ್ಷದ ಮುಪ್ಪನ್ನು ವೈದ್ಯ ವಿಜ್ಞಾನದ ನಾನಾ ಸಲಕರಣೆಗಳ ನೆರವಿನಿಂದ ಮರೆಯಾಗಿಸಿಕೊಂಡಳು. ಕೆನ್ನೆ ಹೇಮಾ ಮಾಲಿನಿಯದಾಯಿತು. ಇನ್ನು ನಲವತ್ತು ವರ್ಷ ಮಹಾರಾಣಿಯ ಬದುಕು ತನ್ನದು ಎಂದುಕೊಂಡು ಕ್ಲಿನಿಕ್ಕಿನಿಂದ ಹೊರ ಬಂದಳು.

ರಸ್ತೆ ದಾಟುವಾಗ ಬಸ್ಸೊಂದು ಢಿಕ್ಕಿ ಹೊಡೆದು ಆಕೆ ಪ್ರಾಣ ಬಿಟ್ಟಳು. “ನನಗಿನ್ನೂ ನಲವತ್ತು ವರ್ಷ ಆಯಸ್ಸಿದೆ ಎಂದಿದ್ದೆಯಲ್ಲ, ಈಗಲೇ ಕರೆದುಕೊಂಡದ್ದು ಯಾವ ನ್ಯಾಯ?” ದೇವರನ್ನು ದಬಾಯಿಸಿದಳು ಮುದುಕಿ.

ದೇವರು ಹೇಳಿದ, “ಹೋ ಅದು ನೀನೇನಾ, ನನಗೆ ಗುರುತೇ ಸಿಕ್ಕಲಿಲ್ಲ.”

……………………………………..

ಈ ಬಾರಿ ಹುಶಾರು

ಆಗ ತಾನೆ ತೀರಿ ಹೋದ ಹೆಂಗಸಿನ ಅಂತಿಮ ಸಂಸ್ಕಾರಕ್ಕೆ ಏರ್ಪಾಟಾಗಿತ್ತು. ಆಕೆಯ ಶವವಿದ್ದ ಶವಪೆಟ್ಟಿಗೆಯನ್ನು ಹೊತ್ತ ನಾಲ್ಕು ಮಂದಿ ಸ್ಮಶಾನಕ್ಕೆ ತೆರಳುವ ದಾರಿಯಲ್ಲಿ ಗೋಡೆಯೊಂದಕ್ಕೆ ಗುದ್ದಿದರು.

ಅವರಿಗಾಗ ಶವಪೆಟ್ಟಿಗೆಯೊಳಗಿಂದ ಸಣ್ಣ ಧ್ವನಿ ಕೇಳಿತು. ಪೆಟ್ಟಿಗೆ ತೆರೆದು ನೋಡಿದರು, ಆ ಹೆಂಗಸು ಇನ್ನೂ ಉಸಿರಾಡುತ್ತಿದ್ದಳು.

ಹಾಗೆ ಮರು ಹುಟ್ಟು ಪಡೆದ ಆಕೆ ಹತ್ತು ವರ್ಷ ಜೀವಿಸಿದಳು. ಕಡೆಗೆ ಆಕೆ ಸತ್ತಾಗ ಆಕೆಯ ಶವಪೆಟ್ಟಿಗೆಯನ್ನು ಹೊತ್ತ ನಾಲ್ಕು ಮಂದಿ ಸ್ಮಶಾನದೆಡೆಗೆ ಸಾಗಿದ್ದರು.

ಆಕೆಯ ಗಂಡ ಅರಚಿದ, “ಈ ಬಾರಿ ಹುಶಾರು! ಗೋಡೆ ನೋಡಿಕೊಂಡು ಹೋಗಿ…”.

……………………………………..

ಒಳ್ಳೆಯ ಕನ್ನಡಿ


ಬಾಸು : ನನ್ನ ಮುಖ ಚೆನ್ನಾಗಿ ಕಾಣುವ ಒಳ್ಳೆ ಕನ್ನಡಿ ಕೊಂಡುಕೊಂಡು ಬಾ….. ಹೋಗು.
ಸಾಮ್ರಾಟ್ : ಎಲ್ಲಾ ಅಂಗಡಿಯಲ್ಲಿ ಹುಡುಕಿದೆ ಸಾ…… ಎಲ್ಲೂ ನಿಮ್ ಮುಖ ಕಾಣೋ ಕನ್ನಡಿ ಸಿಗ್ಲಿಲ್ಲಾ…… ಎಲ್ಲದ್ರಲ್ಲೂ ನನ್ ಮುಖನೇ ಕಾಣ್ತಾ ಇತ್ತು..!!! ……………………………………………………………………………………………………………………

ಕುಡುಕರ ಚಳಿ

ನಡುರಾತ್ರಿ ಕುಡುಕನೊಬ್ಬ ಖಾಲಿ ಗೋರಿಯೊಳಗೆ ಬಿದ್ದು ‘ಚಳಿ ತಾಳೋಕಾಗ್ತಾ ಇಲ್ಲ…ಯಾರದರೂ ಬನ್ನಿ’ ಎಂದು ಕೂಗುತ್ತಾ ಇದ್ದ.

ಇನ್ನೊಬ್ಬ ಕುಡುಕ ಬಂದು ಕೆಳಗೆ ಬಾಗಿ ನೋಡಿ…’ಚಳಿಯಾಗದೆ ಇನ್ನೇನಾದೀತು? ಮೂರ್ಖರು! ನಿನ್ನನ್ನು ಗೋರಿಗೆ ಇಳಿಸಿದ ಮೇಲೆ ಮಣ್ಣು ಮುಚ್ಚಲು ಮರೆತ್ತಿದ್ದಾರೆ’ ಎಂದು ಗೋರಿಗೆ ಮಣ್ಣು ತುಂಬತೊಡಗಿದ.

…………………………………….

ಲವ್ ಲೆಟರು

ನಡುವಯಸ್ಸು ದಾಟಿ ತೆಲೆಯ ಕೂದಲು ಅಮೃತಶಿಲೆಯ ಬಣ್ಣ ತಾಳುತ್ತಿದ್ದ ವಕೀಲನೊಬ್ಬ ಸಾಮ್ರಾಟರಿಗೆ ಗೆಳೆಯ.

ಅಂದು ಫೆ.೧೩. ವ್ಯಾಲಂಟೈನ್ಸ್ ಡೇ ಮುನ್ನ ದಿನ . ಅಂದು ಆತನ ಆಫೀಸಿಗೆ ಹೋದ ಸಾಮ್ರಾಟರಿಗೆ ಆಶ್ಚರ್ಯ ಕಾದಿತ್ತು. ಆತ ನೂರಾರು ಗ್ರೀಟಿಂಗ್ ಕಾರ್ಡುಗಳಿಗೆ ಸೆಂಟು ಹಾಕಿ ಪೋಸ್ಟ್ ಮಾಡಲು ಅಣಿಯಾಗುತ್ತಿದ್ದ.

ಸಾಮ್ರಾಟರು ಕುತೂಹಲ ತಾಳಲಾರದೆ ಸಮಾಚಾರ ಏನೆಂದು ಕೇಳಿದರು.

ಏನಿಲ್ಲ, ಈ ವರ್ಷ ಯಾವ ಡೈವೋರ್ಸ್ ಕೇಸೂ ಬರಲಿಲ್ಲ. ಅದ್ಕೇ ಈ ಏರಿಯಾದ ಎಲ್ಲಾ ಗಂಡಂದಿರ ಹೆಸರಿನಲ್ಲಿ ಈ ಲವ್ ಲೆಟರಗಳನ್ನು ಬರೆದು ಅವರ ಹೆಂಡತಿಯರಿಗೆ ಸಿಕ್ಕುವ ಹಾಗೆ ಪೋಸ್ಟ್ ಮಾಡುತ್ತಿರುವೆ!

………………………………..

ಪ್ರಾರ್ಥನೆ

ಸಾಮ್ರಾಟರು ಹಾಗೂ ಅವರ ಚೇಲ ಕುಚೇಲ ದೇವಸ್ಥಾನದ ಎದುರು ಹಾದು ಹೋಗುತ್ತಿದ್ದರು. ಸಾಮ್ರಾಟರಿಗೆ ಕೀಟಲೆ ಮಾಡಬೇಕೆನಿಸಿತು. ‘ಪ್ರಾರ್ಥನೆ ಮಾಡುವಾಗ ಸಿಗರೇಟು ಸೇದಬಹುದಾ?’ ಎಂದು ಕೇಳಿದರು.

‘ಅಯ್ಯೋ ತಪ್ಪು ತಪ್ಪು ಅದರ ಯೋಚನೆಯೂ ಮಾಡಬಾರದು’ ಎಂದ ಕುಚೇಲ.

‘ನಾನು ಸೇದಬಹುದು ಎಂದು ಸಾಬೀತು ಮಾಡಲೇ? ಈ ದೇವಸ್ಥಾನದ ಪೂಜಾರಿಯೇ ಒಪ್ಪಬೇಕು ಹಾಗೆ ಮಾಡಿದರೆ ನನಗೊಂದು ಪ್ಯಾಕ್ ಸಿಗರೇಟು ನಿನ್ನ ಖರ್ಚಿನಲ್ಲಿ. ಆಗಬಹುದೋ?’

‘ಅದು ಅಸಾಧ್ಯ. ಸೋತರೆ ನನಗೆ ಎರಡು ಪ್ಯಾಕ್ ಸಿಗರೇಟು.’

ಸರಿ ಕುಚೇಲ ಹೋಗಿ ದೇವಸ್ಥಾನದ ಪೂಜಾರಿಯನ್ನು ಕೇಳಿದ, ‘ಸ್ವಾಮಿ ಪ್ರಾರ್ಥನೆ ಮಾಡುವಾಗ ಸಿಗರೇಟು ಸೇದಬಹುದೇ?’

‘ತಪ್ಪು ಮಗು, ಅದು ದೈವಕ್ಕೆ ಅಪಮಾನ ಮಾಡಿದ ಹಾಗೆ’ ಎಂದ ಪೂಜಾರಿ.

‘ನಾನು ಹೇಳಲಿಲ್ಲವೇ, ಪೂಜಾರಿ ಪ್ರಾರ್ಥನೆ ಮಾಡುವಾಗ ಸಿಗರೇಟು ಸೇದುವುದು ತಪ್ಪು ಎಂದ. ಎಲ್ಲಿ ನನ್ನ ಸಿಗರೇಟ್ ಪ್ಯಾಕು’ ಎಂದ ಕುಚೇಲ.

ನಸು ನಕ್ಕ ಸಾಮ್ರಾಟರು ಪೂಜಾರಿಗೆ ಕೇಳಿದರು, ‘ ಸ್ವಾಮಿ ಸಿಗರೇಟು ಸೇದುವಾಗ ದೇವರನ್ನು ನೆನೆಸಬಹುದೇ?’

ಪೂಜಾರಿ ಹೇಳಿದ: ‘ಆವಶ್ಯಕವಾಗಿ, ದೇವರನ್ನು ನೆನೆಸುವುದಕ್ಕೆ ಇಂಥದ್ದೇ ಸಮಯ ಎಂದೇನೂ ಇಲ್ಲ’

………………………………..

ಪರಿಚಯ

ಪ್ರತಿಷ್ಟಿತ ಕ್ಲಬ್ಬಿನ ಪಾರ್ಟಿಯೊಂದರಲ್ಲಿ ಅಪ್ರತಿಮ ಸುಂದರಿಯಾದ ಯುವತಿಯೊಬ್ಬಳ ಬಳಿಗೆ ಯುವಕನೊಬ್ಬ ಬಂದ. ಆಕೆಯ ಸೌಂದರ್ಯವನ್ನು ಹೊಗಳಿದ, ಆಕೆಯ ಡ್ರೆಸ್ಸನ್ನು ಮೆಚ್ಚಿದ. ಆಕೆ ಖುಶಿಯಾದಳು.

ಹೀಗೆ ಒಂದರ್ಧ ಗಂಟೆ ಸರಸವಾಗಿ ಮಾತಾಡಿದ ನಂತರ ಯುವಕ ಆಕೆಯೆದುರು ತನ್ನ ಪ್ರೇಮನಿವೇದನ್ನು ಮಾಡಿ ತನ್ನನ್ನು ಮದುವೆಯಾಗುವಂತೆ ಕೋರಿದ.

ಯುವತಿಗೆ ಆತನನ್ನು ನೋಯಿಸುವ ಮನಸ್ಸಾಗಲಿಲ್ಲ. ‘ಸಂತೋಷ ಆದರೆ ಕೇವಲ ಅರ್ಧ ಗಂಟೆಯ ಮುನ್ನ ನಾವು ಭೇಟಿಯಾಗಿದ್ದೆವು. ನನ್ನ ಬಗ್ಗೆ ಏನೂ ತಿಳಿದುಕೊಳ್ಳದೆ ಪ್ರಪೋಸ್ ಮಾಡುವುದು ಸರಿ ಅನ್ನಿಸುತ್ತದಾ’ ಎಂದು ನಯವಾಗಿ ಕೇಳಿದ.

ಆ ಯುವಕ ಅಷ್ಟೇ ಪ್ರಾಮಾಣಿಕವಾಗಿ ಉತ್ತರಿಸಿದ, ‘ನನಗೆ ನಿಮ್ಮ ಬಗ್ಗೆ ತಿಳಿದಿಲ್ಲ ಎಂದವರು ಯಾರು? ನಿಮ್ಮಪ್ಪ ಅಕೌಂಟ್ ಹೊಂದಿರುವ ಬ್ಯಾಂಕಿನಲ್ಲೇ ನಾನು ಕಳೆದ ಆರು ವರ್ಷಗಳಿಂದ ಕೆಲಸ ಮಾಡುತ್ತಿರುವುದು.’

………………………………..

ಈಜುಕೊಳ

ನಿರ್ದೇಶಕ : ನೀವು ೧೦ನೇ ಮಹಡಿಯಿಂದ ಈಜುಕೊಳಕ್ಕೆ ಧುಮುಕಬೇಕು.

ನಟ : ಆದರೆ ನನಗೆ ಈಜು ಬರುವುದಿಲ್ಲ ?

ನಿರ್ದೇಶಕ : ಯೋಚಿಸಬೇಡಿ, ಅದರಲ್ಲಿ ನೀರು ಇರುವುದಿಲ್ಲ. !!!

…………………………………………………………………………

ನಾವು ಬಂದಿರುವುದೂ ಅದಕ್ಕೇ

ಒಂದು ಸಣ್ಣ ಊರು. ಚರ್ಚಿನ ಬಳಿ ಸಾವಿರಾರು ಮಂದಿ ಸೇರಿದ್ದರು. ಶವ ಸಂಸ್ಕಾರಕ್ಕೆ ಮುನ್ನ ಪಾದ್ರಿ ಪುಟ್ಟದೊಂದು ಭಾಷಣ ಮಾಡಿದರು. “ಮಿತ್ರರೇ, ಈಕೆ ಅಪಘಾತದಿಂದ ಸತ್ತರು. ಒಂದು ಕತ್ತೆ ಬಲವಾಗಿ ಒದ್ದುದೇ ಈಕೆಯ ಸಾವಿಗೆ ಕಾರಣವಾಯಿತು. ನಮ್ಮ ಊರಿನಲ್ಲಿ ಈಕೆಯಷ್ಟು ಬಜಾರಿ ಬೇರೆ ಯಾರೂ ಇಲ್ಲ ಎಂದು ಜನ ಹೇಳುತ್ತಿದ್ದರು. ಆದರೆ ನೀವು ಇಷ್ಟೊಂದು ಜನ ಶವಸಂಸ್ಕಾರಕ್ಕೆ ಬಂದಿರುವುದು ನೋಡಿದರೆ ಈಕೆ ಎಲ್ಲರಿಗೂ ಬೇಕಾದವರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.”
ಅಷ್ಟರಲ್ಲಿ ದೂರದಿಂದ ಒಬ್ಬ ಕೂಗಿದ. “ನಾವು ಬಂದಿರುವುದು ಈಕೆಯನ್ನು ಒದ್ದ ಕತ್ತೆಯನ್ನು ಕೊಳ್ಳುವುದಕ್ಕೆ.” ಉಳಿದವರೆಲ್ಲಾ ದನಿ ಕೂಡಿಸಿದರು, “ನಾವು ಬಂದಿರುವುದೂ ಅದಕ್ಕೇ.”
…………………..

ಮಗು ಯಾರದು?
ಗಾಂಪರೆಲ್ಲ ಸಭೆ ಸೇರಿದರು. ಎಲ್ಲರೂ ತಮ್ಮನ್ನು ಗಾಂಪರು ಎಂದು ಕರೆಯುವುದನ್ನು ಕೇಳಿ ಅವರ ಮನಸ್ಸು ನೊಂದಿತ್ತು. ಆದ್ದರಿಂದ ತಮ್ಮಲ್ಲೇ ಒಬ್ಬನನ್ನು ಆರಿಸಿ ಈ ವಿಷಯವಾಗಿ ಸಂಶೋಧನೆ ಮಾಡಿಸಬೇಕು ಎಂದುಕೊಂಡರು. ಆ ಠರಾವಿನ ಪ್ರಕಾರ ಒಬ್ಬ ಗಾಂಪ ಹೋಗಿ ಅಮೇರಿಕಾದಲ್ಲಿ ಒಬ್ಬ ಪ್ರಾಧ್ಯಾಪಕರ ಮನೆಯಲ್ಲಿ ತಳವೂರಿದ. ಪ್ರಾಧ್ಯಾಪಕರು ಇವನ ಮೇಲೆ ಸಂಶೋಧನೆ ಪ್ರಾರಂಭಿಸಿದರು. ಸರಳವಾದ ಪ್ರಶ್ನೆಗಳನ್ನು ಹಾಕುತ್ತಾ ಅವರು ಕೇಳಿದರು.
ಪ್ರಾ: ನೋಡಿ, ನಮ್ಮ ಮನೆಯಲ್ಲಿ ಇರುವವರು ಮೂರೇ ಜನ. ನಾನು, ನನ್ನ ಹೆಂಡತಿ, ಒಂದು ಮಗು. ಈ ಮಗು ಯಾರದ್ದೆಂದು ಹೇಳುತ್ತೀರಾ?
ಗಾಂಪ ತಲೆ ಕೆರೆದುಕೊಂಡ. ಹುಲುಸಾಗಿ ಬೆಳೆದಿದ್ದ ಗಡ್ಡ ಕೆರೆದುಕೊಂಡ. ಏನು ಮಾಡಿದರೂ ಉತ್ತರ ಹೊಳೆಯಲಿಲ್ಲ. “ಸೋತೆ ಸ್ವಾಮಿ, ಉತ್ತರ ಗೊತ್ತಾಗಲಿಲ್ಲ” ಎಂದ.
ಪ್ರಾ: ಅದರಲ್ಲೇನಿದೆ ಕಷ್ಟ? ಮಗು ನನ್ನದು.
ಗಾಂಪನಿಗೆ ತುಂಬಾ ಸಂತೋಷವಾಯಿತು. ಮಾರನೆಯ ದಿನವೇ ತನ್ನ ದೇಶಕ್ಕೆ ಹಿಂದಿರುಗಿ ಬಂದ.  ತಕ್ಷಣವೇ ಗಾಂಪರ ಸಭೆ ಸೇರಿಸಿದ. ಹೇಳಿದ, “ಮಿತ್ರರೇ, ಜನ ನಮ್ಮನ್ನು ಏಕೆ ಗಾಂಪರು ಎನ್ನುತ್ತಾರೆ ಎಂಬುದನ್ನು ತಿಳಿದುಕೊಂಡು ಬಿಟ್ಟಿದ್ದೇನೆ. ಈಗ ನಾನೊಂದು ಸರಳವಾದ ಪ್ರಶ್ನೆ ಕೇಳುತ್ತೇನೆ. ಉತ್ತರ ಹೇಳುತ್ತೀರಾ?”
“ಆಗಲಿ..” ಎಂದರು ಸಭಿಕರು.
“ಸರಿ, ನಮ್ಮ ಮನೆಯಲ್ಲಿ ಇರುವವರು ಮೂರೇ ಮಂದಿ. ನಾನು,ನನ್ನ ಹೆಂಡತಿ, ಒಂದು ಮಗು. ಎಲ್ಲೀ ಹೇಳಿ ನೋಡೋಣ, ಮಗು ಯಾರದ್ದು?”
ಗಾಂಪರೆಲ್ಲ ತಲೆ ಕೆರೆದುಕೊಂಡರು. ಕೆಲವರು ಗಡ್ಡವನ್ನೂ ಕೆರೆದುಕೊಂಡರು. ಹಲ್ಲು ಕಚ್ಚಿದರು. ಏನೇನು ಮಾಡಿದರೂ ಪ್ರಯೋಜನವಾಗಲಿಲ್ಲ. ಅವರಿಗೆ ಉತ್ತರ ಹೊಳೆಯಲಿಲ್ಲ. ತಲೆಯಾಡಿಸಿದರು.
ಅಮೇರಿಕಾದಿಂದ ಹಿಂದಿರುಗಿದ್ದ ಗಾಂಪ ಮಂದ ಹಾಸ ಬೀರುತ್ತಾ ಹೇಳಿದ: “ಅದಕ್ಕೇ ನಿಮ್ಮನ್ನು ಜನ ಗಾಂಪರು ಎನ್ನುವುದು.ಇಷ್ಟೂ ಗೊತ್ತಾಗಲಿಲ್ಲವೇ? ಅಮೇರಿಕಾದಲ್ಲಿದ್ದಾರಲ್ಲಾ ಪ್ರೊಫೆಸರು, ಅವರದು ಮಗು.”
…………………..

ಸಕ್ಕರೆ ಪ್ರಮಾಣ
ಸಾಮ್ರಾಟರು ರಾತ್ರಿಯಿಡೀ ಆಗಾಗ ಎದ್ದು ಅಡುಗೆ ಮನೆಗೆ ಹೋಗಿ ಬರುತ್ತಿದ್ದುದನ್ನು ಗಮನಿಸಿದ ಅವರ ಪತ್ನಿ ಸಮಾಚಾರವೇನೆಂದು ಕೇಳಿದರು.
ಅದಕ್ಕೆ ಸಾಮ್ರಾಟರು, “ಸಕ್ಕರೆ ಪ್ರಮಾಣವನ್ನು ಆಗಾಗ ಪರೀಕ್ಷಿಸುತ್ತಿರಬೇಕು ಎಂದು ಡಾಕ್ಟರ್ ಹೇಳಿದ್ದಾರೆ. ನಂಗೆ ಡಯಾಬಿಟಿಸ್ ಅಲ್ವಾ, ಅದ್ಕೇ ಆಗ್ಲಿಂದ ಅಡುಗೆ ಮನೆಗೆ ಹೋಗಿ ಸಕ್ಕರೆ ಡಬ್ಬಿ ತೆಗೆದು ಅದರ ಪ್ರಮಾಣ ನೋಡುತ್ತಿದ್ದೇನೆ. ಚಿಂತೆ ಪಡುವ ಆವಶ್ಯಕತೆ ಇಲ್ಲ. ಅದರ ಪ್ರಮಾಣದಲ್ಲಿ ಯಾವ ಏರುಪೇರೂ ಆಗಿಲ್ಲ!”
…………………..

ಸ್ವರ್ಗದ ದಾರಿ
ಸಾಮ್ರಾಟರು ಚಿಕ್ಕ ಮಕ್ಕಳಿಗೆ ಉತ್ತಮ ಕರ್ಮ ಹಾಗೂ ಸ್ವರ್ಗದ ಬಗ್ಗೆ ತಿಳಿಸಿಕೊಡುತ್ತಿದ್ದರು.
“ನಾನು ಅಪ್ಪ ಅಮ್ಮರನ್ನು ತುಂಬಾ ಚೆನ್ನಾಗಿ ನೋಡಿಕೊಂಡರೆ ಸ್ವರ್ಗಕ್ಕೆ ಹೋಗಬಹುದೇ?”, ಸಾಮ್ರಾಟರು ಮಕ್ಕಳಿಗೆ ಕೇಳಿದರು. ಮಕ್ಕಳು ಒಕ್ಕೊರಲಿನಿಂದ “ಇಲ್ಲ” ಎಂದರು.
“ನಾನು ಪ್ರತಿದಿನ ಮರೆಯದೆ ಎಲ್ಲಾ ಪ್ರಾರ್ಥನೆಗಳನ್ನು, ಪೂಜೆ ಪುನಸ್ಕಾರಗಳನ್ನು ಮಾಡಿದರೆ ಸ್ವರ್ಗಕ್ಕೆ ಹೋಗಬಹುದೇ?”
“ಇಲ್ಲ”
“ನಾನು ಸಮಾಜ ಸೇವೆ ಮಾಡಿ ಬಡವರ ಉದ್ಧಾರಕ್ಕಾಗಿ ನನ್ನೆಲ್ಲಾ ಸಂಪತ್ತನ್ನು ತ್ಯಾಗ ಮಾಡಿದರೆ ಸ್ವರ್ಗಕ್ಕೆ ಹೋಗಲು ಸಾಧ್ಯವೇ?”
“ಇಲ್ಲ”
ಸಾಮ್ರಾಟರಿಗೆ ಪೇಚಿಗಿಟ್ಟುಕೊಂಡಿತು.
“ಹಾಗಾದ್ರೆ ಸ್ವರ್ಗಕ್ಕೆ ಹೋಗಲು ನಾನೇನು ಮಾಡಬೇಕು?”
ಮಕ್ಕಳು ಮತ್ತೆ ಒಕ್ಕೊರಲಿನಿಂದ ಉತ್ತರಿಸಿದರು, “ನೀವು ಮೊದಲು ಸಾಯಬೇಕು!”
…………………..
ನನ್ನ ವಯಸ್ಸು
ಸಾಮ್ರಾಟರು ತಮ್ಮ ಹೊಸ ತರಗತಿಯ ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಪರೀಕ್ಷಿಸುವ ಮೂಡಿನಲ್ಲಿದ್ದರು.
“ಇನ್ನೂರು ಮೈಲು ಉದ್ದದ ಸುರಂಗವಿದೆ ಎಂದುಕೊಳ್ಳಿ. ನೂರು ಮೈಲುದ್ದದ ರೈಲು ಅದನ್ನು ಮುವ್ವತ್ತು ನಿಮಿಷದಲ್ಲಿ ಕ್ರಮಿಸಿದರೆ ನನ್ನ ವಯಸ್ಸು ಎಷ್ಟು?” ಎಂದು ಪ್ರಶ್ನಿಸಿ ತರಗತಿಯೆಡೆಗೆ ಗಂಭೀರ ನೋಟ ಬೀರಿದರು.
“ಇದು ಸುಲಭವಾದ ಪ್ರಶ್ನೆ ಸಾರ್” ತತ್‌ಕ್ಷಣದಲ್ಲಿ ಉತ್ತರ ತೂರಿ ಬಂತು.
“ನಿಮ್ಮ ವಯಸ್ಸು ಐವತ್ತು ವರ್ಷ” ಹುಡುಗ ಚಕ್ಕಂತ ಉತ್ತರ ಕೊಟ್ಟಿದ್ದ.
“ಹೌದು ಸರಿ. ಆದರೆ ಹೇಗೆ ಗೊತ್ತಾಯ್ತು?” ತಡವರಿಸುತ್ತಾ ಸಾಮ್ರಾಟರು ಕೇಳಿದರು.
“ಏನಿಲ್ಲ ನಮ್ಮ ಮನೆ ಎದುರು ಒಬ್ಬ ಸೆಮಿ ಕ್ರ್ಯಾಕ್ ಇದ್ದಾನೆ. ಆತನಿಗೆ ಇಪ್ಪತ್ತೈದು ವರ್ಷ.”
…………………..…………………..…………………..…………………..
ಹುಚ್ಚಾಸ್ಪತ್ರೆ ನೋಡಲು ಒಬ್ಬ ಗಣ್ಯ ಮಹಿಳೆ ಬಂದಿದ್ದಳು. ಮೇಲ್ವಿಚಾರಕರು ಎಲ್ಲಾ ಬಾಗಿಲುಗಳನ್ನು ತೋರಿಸಿಕೊಂಡು ಬಂದರು. ಗೇಟಿನಿಂದ ಹೊರಕ್ಕೆ ಬಂದು ಆಕೆ ಇನ್ನೇನು ಕಾರು ಹತ್ತಬೇಕು, ಅಷ್ಟರಲ್ಲಿ ಇನ್ನೊಬ್ಬ ಮಹಿಳೆ ಅಲ್ಲಿದ್ದದ್ದು ಕಣ್ಣಿಗೆ ಬಿತ್ತು. ತಲೆ ಕೆದರಿದೆ, ಕಣ್ಣು ಕೆಂಡವಾಗಿದೆ. ಒಮ್ಮೆ ಮೇಲ್ವಿಚಾರಕರನ್ನೂ, ಒಮ್ಮೆ ತನ್ನನ್ನೂ ಸರದಿಯ ಪ್ರಕಾರ ದುರುದುರನೆ ನೋಡುತ್ತಿದ್ದಾಳೆ. ಗಣ್ಯ ಮಹಿಳೆ ವಾರ್ಡನಿಗೆ ಹೇಳಿದಳು, “ಏನೇ ಆದರೂ ಹೀಗೆಲ್ಲಾ ರೋಗಿಗಳನ್ನು ಹೊರಕ್ಕೆ ಬಿಡುವುದು ತಪ್ಪಲ್ಲವೇ? ಮೊದಲು ಅವಳನ್ನು ಹಿಡಿದು ಗೇಟಿನೊಳಕ್ಕೆ ತಳ್ಳಿ.” ವಾರ್ಡನ್ ನಿಟ್ಟುಸಿರು ಬಿಟ್ಟು ಮೆತ್ತಗಿ ಹೇಳಿದರು, “ನನ್ನ ಆಸೆಯೂ ಅದೇ ತಾಯಿ. ಆದರೆ ಅವಳನ್ನು ಮುಟ್ಟುವ ಹಾಗಿಲ್ಲ. ಅವಳು ನನ್ನ ಹೆಂಡತಿ.”
…………………..
ನಗೆ ಸಾಮ್ರಾಟರು ದೆಹಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದರು. ಅವರು ಕುಳಿತಿದ್ದದ್ದು ಕೊನೆಯ ಡಬ್ಬಿಯಲ್ಲಿ. ಆ ರೈಲೋ ಮೈಲುದ್ದದ್ದು. ನಿಲ್ದಾಣದಲ್ಲಿ ರೈಲು ನಿಂತಾಗಲೆಲ್ಲಾ ಅವನ ಡಬ್ಬಿ ಪ್ಲಾಟ್ ಫಾರಮ್‌ನಿಂದ ಬಹುದೂರವಿರುತ್ತಿತ್ತು. ಇವನಿಗೆ ಟೀ ಕಾಫಿ ಸಿಕ್ಕುವುದೂ ಕಷ್ಟವಾಗುತ್ತಿತ್ತು.
ಅಂತೂ ಇಂತೂ ಬೆಂಗಳೂರು ತಲುಪಿದ್ದಾಯ್ತು. ನಗೆ ಸಾಮ್ರಾಟರಿಗೆ ಹಸಿವು. ತಿಂಡಿ ತಿನ್ನುವುದಕ್ಕೂ ಮೊದಲು ಸ್ಟೇಷನ್ ಮಾಸ್ಟರರ ಕೊಠಡಿಗೆ ನುಗ್ಗಿದ ಕಂಪ್ಲೆಂಟ್ ಪುಸ್ತಕ ಕೇಳಿದ. ಮಾಸ್ಟರ್ ಕೊಟ್ಟರು. ನಗೆ ಸಾಮ್ರಾಟರು ಪರಪರನೆ ಬರೆದರು, “ಇಂಥ ಉದ್ದದ ರೈಲಿನಲ್ಲಿ ಕೊನೆಯ ಡಬ್ಬಿ ಇರಲೇ ಕೂಡದು.” ಹೀಗೆ ಬರೆದರೆ ಯಾರಾದರೂ ತನ್ನನ್ನು ಗಾಂಪ ಅನ್ನಬಹುದು ಅಂತ ಅವನಿಗೆ ತಕ್ಷಣ ಅನ್ನಿಸಿ ಮತ್ತೆ ಮುಂದುವರೆಸಿದ: “ಒಂದು ವೇಳೆ ಕೊನೆಯ ದಬ್ಬಿ ಇರಬೇಕಾದರೆ ಮಧ್ಯದಲ್ಲಿ ಇರಲಿ!”

…………………..

ಪಟ್ಟಕ್ಕೆ ಬಂದ ಕೆಲವೇ ತಿಂಗಳಲ್ಲಿ ಮರಿ ಸ್ವಾಮಿಗಳು ತೀರಿಕೊಂಡು ಬಿಟ್ಟರು. ಯಮದೂತರು ಅವರನ್ನು ನರಕಕ್ಕೆ ಎಳೆದುಕೊಂಡು ಹೋಗಿ ಒಂದು ಕೋಣೆಯಲ್ಲಿ ದೂಡಿದರು. ಮರಿ ಸ್ವಾಮಿಗಳು ಒಂದೇ ಸಮ ಕಿರುಚುತ್ತಿದ್ದರು. “ಏಯ್ ನನ್ನನ್ನು ನರಕಕ್ಕೆ ಏಕಯ್ಯಾ ತಂದಿರಿ? ನಾನು ಸ್ವಾಮಿ ಕಣಯ್ಯ, ಬಿಡಿರಯ್ಯ” ಭಟರು ಹೇಳಿದರು, “ಶ್! ಜೋರಾಗಿ ಒದರಾಡಬೇಡಿ. ಪಕ್ಕದ ಕೊಠಡಿಯಲ್ಲಿ ಹಿರಿಯ ಸ್ವಾಮಿಗಳು ನಿದ್ದೆ ಮಾಡುತ್ತಿದ್ದಾರೆ.”

…………………..

ಚರ್ಚಿನ ಪ್ರಧಾನ ಗುರುಗಳು ಕಿರಿಯ ಪಾದ್ರಿಗಳ ಗುಂಪಿಗೆ ತರಬೇತಿ ನೀಡುತ್ತಿದ್ದರು. “ನೋಡಿ, ಸ್ವರ್ಗದ ವೈಭವವನ್ನು ಕುರಿತು ವರ್ಣಿಸುವಾಗ ಜನ ನಿಮ್ಮ ಮುಖ ನೋಡಿಯೇ ಸ್ವರ್ಗ ಇದೆಯೆಂಬುದಾಗಿ ನಂಬುವಂತೆ ಆಗಬೇಕು. ಅದಕ್ಕೆ ಸ್ವರ್ಗದ ವಿಷಯ ಹೇಳುವಾಗ ನೀವು ಹೇಗಾದರೂ ಮಾಡಿ ನಿಮ್ಮ ಮುಖದಲ್ಲಿ ಸಂತೋಷ ಉಕ್ಕಿ ಹರಿಯುವ ಹಾಗೆ ನೋಡಿಕೊಳ್ಳಿ.
“ಇನ್ನು ನರಕದ ವಿಷಯ, ಅದಕ್ಕೆ ನಿಮ್ಮ ಮುಖ ಹೀಗೇ ಇದ್ದರೆ ಸಾಕು.’’

…………………..

ಅವನು ಭಾರಿ ಜಮೀನುದಾರ. ಪಾಳೇಗಾರಿಕೆ ನಡೆಸುತ್ತಿದ್ದ. ಯಾವ ರೈತ ಏನು ಬೆಳೆದರೂ ಮೊದಲು ಅವನಿಗೆ ಸ್ವಲ್ಪ ಭಾಗವನ್ನು ಕಾಣಿಕೆಯಾಗಿ ಅರ್ಪಿಸಬೇಕಾಗಿತ್ತು. ಒಮ್ಮೆ ಒಬ್ಬ ರೈತ ಬಂದು ಗೊಂಚಲು ದ್ರಾಕ್ಷಿ ತಂದು ಒಪ್ಪಿಸಿದ. ದರ್ಬಾರಿನಲ್ಲಿದ್ದ ಜಮೀನುದಾರ ಒಂದೇ ಒಂದು ದ್ರಾಕ್ಷಿಯನ್ನು ಬಾಯಿಯಲ್ಲಿ ಹಾಕಿಕೊಂಡ. ಅದು ಹುಪ್ಪಟ್ಟೆ ಹುಳಿ. ಅವನಿಗೆ ತಡೆಯಲಾರದ ಕೋಪ ಬಂತು. “ಈ ಕೂಡಲೇ ಈ ಬಡವನನ್ನು ಅಂಗಾತ ನೇತು ಹಾಕಿ ಇಷ್ಟೂ ದ್ರಾಕ್ಷಿಯನ್ನು ಅವನ ಗುದದ್ವಾರದಲ್ಲಿ ತುರುಕಿ.” ಎಂದು ಅಪ್ಪಣೆ ಮಾಡಿದ.
ಅದರಂತೆ ಪ್ರಕ್ರಿಯೆ ಆರಂಭವಾಯಿತು. ಹತ್ತು ಹನ್ನೆರಡು ದ್ರಾಕ್ಷಿ ತುರುಕಿರಬಹುದು. ಭಯಂಕರ ಯಾತನೆಯನ್ನು ಅನುಭವಿಸುತ್ತಿದ್ದ ರೈತ ಗಟ್ಟಿಯಾಗಿ ನಗಲು ಪ್ರಾರಂಭಿಸಿದ. ಸುತ್ತ ಇದ್ದವರು ಏನಾಯಿತು, ಏನಾಯಿತು ಎಂದು ಒಂದೇ ಉಸಿರಿನಲ್ಲಿ ಕೇಳಿದರು.
ರೈತ ಹೇಳಿದ. “ಏನೂ ಇಲ್ಲ. ಅಲ್ಲಿ ನೋಡಿ ನನ್ನ ದಾಯಾದಿ ಬರುತ್ತಿದ್ದಾನೆ. ಅವನು ಧಣಿಗಳಿಗೆ ಒಪ್ಪಿಸುವುದಕ್ಕೆ ಅಂತ ಅನಾನಸ್ಸನ್ನು ತರುತ್ತಿದ್ದಾನೆ. ಅದೂ ನನ್ನ ದ್ರಾಕ್ಷಿ ಬೆಳೆದ ನೆಲದಲ್ಲಿ ಬೆಳೆದದ್ದೇ.”
…………………………………………………………………………

ಭಾರತೀಯರೊಬ್ಬರು ಅಮೇರಿಕನ್ ಮಹಿಳೆಯೊಬ್ಬರ ಮನೆಗೆ ಊಟಕ್ಕೆ ಹೋಗಿದ್ದರು. ಅವರಿಗೆ ಅಲ್ಲಿ ಒಂದಕ್ಕೆ ಹೋಗಬೇಕಾಯಿತು. ಅವರು ಮನೆಯೊಡತಿಯನ್ನು ಕುರಿತು, “ಇಲ್ಲಿ ಬಾತ್‍ರೂಮ್ ಎಲ್ಲಿದೆ, ನಾನು ಒಂದಕ್ಕೆ ಹೋಗಬೇಕು” ಎಂದು ಕೇಳಿದರು.
ಆಕೆಗೆ ಈ ಮಾತು ಕೇಳಿ ಶಾಕ್ ಆಯಿತು. ಆಕೆ ಹೇಳಿದರು, “ನೋಡಿ, ಈ ದೇಶದಲ್ಲಿ ಹಾಗೆ ಹೋಗಬೇಕಾದಾಗ ‘ನಾನು ಕೈ ತೊಳೆಯಬೇಕು’ ಎಂದು ಹೇಳಿ” ಎಂದು ಹೇಳಿಕೊಟ್ಟರು.
ಈತ ಸರಿ ಎಂದರು.
ಒಮ್ಮೆ ಈತ ಭಾರತೀಯ ಮಿತ್ರರೊಬ್ಬರ ಮನೆಗೆ ಊಟಕ್ಕೆ ಹೋದರು. ಅವರು ಬಹಳ ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದವರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು ಎನ್ನುವಾಗ ಅವರು ಈ ಮಿತ್ರರನ್ನು, “ಊಟಕ್ಕೇಳಿ, ಕೈ ತೊಳೆಯುತ್ತೀರಾ?” ಎಂದು ಕೇಳಿದರು. ಈತ ಹೇಳಿದರು, “ಇಲ್ಲ, ನಿಮ್ಮ ಮನೆಯೊಳಕ್ಕೆ ಬರುವುದಕ್ಕೆ ಮುಂಚೆಯೇ ಆಚೆ ಲೈಟ್ ಕಂಬದ ಹತ್ತಿರ ಕೈ ತೊಳೆದುಕೊಂಡೆ.” ……………………… ತಂದೆಯ ಬಳಿಗೆ ಮೇಷ್ಟ್ರು ದೂರು ತಂದರು. “ಸ್ವಾಮಿ ನಿಮ್ಮ ಮಗ ನಾನು ಇಲ್ಲದಾಗ ತಾನೇ ನನ್ನ ಖುರ್ಚಿಯ ಮೇಲೆ ಕುಳಿತು ‘ನಾನೇ ಮೇಷ್ಟ್ರು’ ಅನ್ನುತ್ತಾನೆ”
ತಂದೆ ಮಗನಿಗೆ ಅಲ್ಲೇ ನಾಲ್ಕು ಬಿಗಿದು, ಛೀಮಾರಿ ಹಾಕಿದರು. “ನಿನಗೇಕೋ ಬೇಕಿತ್ತು, ಆ ಮುಟ್ಠಾಳ ಕೆಲಸ” ………………………

ಒಬ್ಬ ಪಾದ್ರಿ, ಒಬ್ಬ ಮೌಲ್ವಿ ಮತ್ತು ಒಬ್ಬ ಪೂಜಾರಿ ಸ್ವರ್ಗದ ಕಾವಲುಗಾರನೊಂದಿಗೆ ವಾದ ಮಾಡುತ್ತಿದ್ದರು. ಅವನು ಹೇಳುತ್ತಿದ್ದ, “ಒಳಕ್ಕೆ ಬಿಡಬಹುದು ಎಂದು ಅಪ್ಪಣೆಯಾಗಿರುವವರ ಪಟ್ಟಿಯನ್ನು ನೀವೇ ನೋಡಿ. ಇಲ್ಲಿ ನಿಮ್ಮ ಯಾರ ಹೆಸರೂ ಇಲ್ಲವಲ್ಲ.” ಅವರು ವಾದ ಮುಂದುವರೆಸುತ್ತಲೇ ಇದ್ದರು. ಅಷ್ಟರಲ್ಲಿ ಒಬ್ಬ ದಢೂತಿ ಆಸಾಮಿ ವೇಗವಾಗಿ ಬಂದು ಇವರನ್ನು ಪಕ್ಕಕ್ಕೆ ನೂಕಿ ಒಳಕ್ಕೆ ನುಗ್ಗಿ ಹೊರಟೇ ಹೋದ. ಇವರು ಮೂವರೂ ಏಕಕಂಠದಲ್ಲಿ ಕೂಗಿದರು.
“ಅವನ್ನ ಏಕಯ್ಯಾ ಒಳಕ್ಕೆ ಬಿಟ್ಟೆ?”
ಕಾವಲುಗಾರ ಶಾಂತನಾಗೇ ಹೇಳಿದ, “ನೀವು ಮೂರು ಜನರೂ ಕೂಡಿ ಕಳುಹಿಸಲಾರದಷ್ಟು ಜನರನ್ನು ಅವನು ಒಬ್ಬನೇ ಸ್ವರ್ಗಕ್ಕೆ ಕಳುಹಿಸಿದ್ದಾನೆ. ಅವನು ಬಿ.ಎಂ.ಟಿ.ಸಿ ಬಸ್ ಡ್ರೈವರ್. ಅಷ್ಟು ಜನರು ಭಗವಂತನನ್ನು ನೆನೆಯುವಂತೆ ಮಾಡಿರುವುದು ಅವನು ಮಾತ್ರವೇ.”

………………………

ಭಾರತದ ಒಂದು ಹೋಟೇಲಿನಲ್ಲಿ ಒಮ್ಮೆ ಒಬ್ಬ ಅಮೇರಿಕನ್, ಒಬ್ಬ ಚೀನೀಯ ಮತ್ತು ಒಬ್ಬ ಭಾರತೀಯ ಟೀ ತರಲು ಹೇಳಿ ಮಾತನಾಡುತ್ತಾ ಕುಳಿತರು. ಮೂರೂ ಜನರ ಕಪ್ಪುಗಳಲ್ಲೂ ನೊಣ ಬಿದ್ದದ್ದು ಕಾಣಿಸಿತು. ಅಮೇರಿಕನ್, ಮಾಣಿಯನ್ನು ಕರೆದು ಬೇರೆ ಚಹಾ ತರಲು ಹೇಳಿದ. ಭಾರತೀಯ ಒಂದು ಬೆರಳಿನಲ್ಲಿ ನೊಣ ತೆಗೆದು ಹಾಕಿ ಚಹಾ ಕುಡಿಯತೊಡಗಿದ. ಚೀನೀಯ ಚಹಾವನ್ನು ಚೆಲ್ಲಿ ನೊಣವನ್ನು ಬಾಯಿಗೆ ಹಾಕಿಕೊಂಡ.ನಗೆ ಸಾಮ್ರಾಟರು ಅಲ್ಲೇ ಪಕ್ಕದಲ್ಲಿದ್ದವರು ತಮ್ಮ ಲೋಟದಲ್ಲಿ ಬಿದ್ದಿದ್ದ ನೊಣವನ್ನು ತೆಗೆದು ಪಕ್ಕದಲ್ಲಿಟ್ಟು ಅರ್ಧ ಕಪ್ಪಿನವರೆಗೆ ಟೀ ಹೀರಿ ಅನಂತರ ಲೋಟದಲ್ಲಿ ನೊಣವನ್ನು ಹಾಕಿ ಇನ್ನೊಂದು ಕಪ್ ಟೀ ತರಲು ಹೇಳಿದರು!

………………………

ಒಂದು ಊರಿಗೆ ಒಮ್ಮೆ ಒಬ್ಬ ಮಹಾ ಕೊಳಕ ಬಂದಿದ್ದನಂತೆ. ಅವನನ್ನು ಶುದ್ಧ ಮಾಡಲು ಏಳು ದಿನ ಹಗಲು ರಾತ್ರಿ ಬೆಣಚುಕಲ್ಲು, ಸೀಗೆಪುಡಿ ಹಾಕಿ ಉಜ್ಜಬೇಕಾಯಿತಂತೆ. ಹಾಗಂತ ಯಾರೋ ಹೇಳಿದ್ದನ್ನು ಕೇಳಿ ಇನ್ನೊಬ್ಬ ಹೇಳಿದನಂತೆ : ‘ಅದೇನು ಮಹಾ ಬಿಡಿ ಸ್ವಾಮಿ, ನಮ್ಮೂರಿಗೆ ಬಂದಿದ್ದ ಅಸಾಧ್ಯ ಕೊಳಕನೊಬ್ಬನನ್ನು ಏಳು ದಿನ ಬೆಣಚುಕಲ್ಲು, ಸೀಗೆಪುಡಿ ಹಾಕಿ ಉಜ್ಜಿದೆವು. ಆಗ ಅವನ ಮೈಮೇಲೆ ಒಂದು ಷರ್ಟು ಇದ್ದದ್ದು ಕಾಣಿಸಿತು!

……………………….

‘ಇಂದು ನಾನು ಡಾಕ್ಟರ್ ಹತ್ತಿರ ಹೋಗೋಣ ಅಂತಿದ್ದೆ’ ಎಂದು ಲಾಲೂ ಹೇಳಿದಾಗ, ಕಿಲೂ ಮಧ್ಯೆ ಬಾಯಿ ಹಾಕಿ ‘ಹಾಗಾದರೆ ಯಾಕೆ ಹೋಗಲಿಲ್ಲ?’ ಎಂದು ಕೇಳಿದ. ಅದಕ್ಕೆ ಲಾಲೂ ಹೇಳಿದ ‘ಹೋಗೋಣ ಅಂದ್ರೆ ಆರೋಗ್ಯ ಸರಿ ಇರಲಿಲ್ಲ. ಗುಣವಾದ ಬಳಿಕ ಹೋಗುತ್ತೇನೆ. ಅಂಥಾ ಅರ್ಜೆಂಟೇನಿಲ್ಲ.’

……………………….


ಸಾಮ್ರಾಟರಿಗೂ ಆಟಕ್ಕೂ ಅಷ್ಟಕ್ಕಷ್ಟೇ. ಅವತ್ತೊಂದು ದಿನ ಅವರ ಜೀವದ ಗೆಳೆಯ ಇವರನ್ನು ಚೆಸ್ ಆಡುವುದಕ್ಕೆ ಕರೆದ. ಗೆಳೆಯನನ್ನು ನೋಯಿಸಬಾರದೆಂದು ನಗೆ ಸಾಮ್ರಾಟರು ಹೇಳಿದರು, ‘ಸರಿ, ನೀನು ಮುಂದೆ ಹೊರಡು ನಾನು ಶೂ ಹಾಕಿಕೊಂಡು ರೆಡಿಯಾಗಿ ಬರ್ತೇನೆ.’

……………………….

ಅಲ್ಲೊಂದು ಅಪಘಾತ ನಡೆದಿತ್ತು. ಒಬ್ಬನು ‘ಅಯ್ಯೋ ನನ್ನ ಕೈ ಹೋಯ್ತು’ ಅಂತ ಅಳುತ್ತಿದ್ದ. ನಗೆ ಸಾಮ್ರಾಟರು ಧಡಧಡನೆ ಆತನ ಬಳಿಗೆ ಹೋಗಿ ಗದರಿದರು, ‘ಏಯ್ ಬಾಯ್ ಮುಚ್ಚೋ, ಬರೀ ಕೈ ಕಳೆದುಕೊಂಡಿರೋದಕ್ಕೆ ಹಿಂಗಾಡ್ತೀಯಾ, ಅಲ್ಲಿ ನೋಡು ಅವನಿಗೆ ತಲೆಯೇ ಇಲ್ಲ ಆದರೂ ಸುಮ್ಮನಿಲ್ವಾ, ಅವನೇನು ಅಳ್ತಿದಾನಾ?’


……………………….


ಸೊಳ್ಳೆಗಳಿಂದ ಡೆಂಗ್ಯು ಬರುತ್ತದೆ, ಮಲೇರಿಯಾ ಬರುತ್ತದೆ, ಚಿಕ್ಕೂನ್ ಗುನ್ಯಾ ಬರುತ್ತದೆ ಎಂದು ಓದಿದ ನಗೆ ಸಾಮ್ರಾಟರಿಗೆ ಸೊಳ್ಳೆಗಳನ್ನು ನಿಯಂತ್ರಿಸಲೇ ಬೇಕು ಅನ್ನಿಸಿತು. ಅದಕ್ಕಾಗಿ ಅವರು ಆರೋಗ್ಯ ಅಧಿಕಾರಿ ಬಳಿ ಹೋಗಿ ಅವರಿಗೆ ಸೊಳ್ಳೆಗಳನ್ನು ಸಾಯಿಸುವ ಒಂದು ಉಪಾಯ ಹೇಳಿ ಬಂದರು.
‘ರಾತ್ರಿ ಮಲಗುವ ಮುಂಚೆ ಎಲ್ಲರೂ ಒಂದು ಲೋಟ ವಿಷ ಕುಡಿದು ಮಲಗಿಬಿಡಬೇಕು. ಆಗ ಕಡಿಯುವ ಸುಳ್ಳೆಗಳೆಲ್ಲಾ ವಿಷ ಇರುವ ರಕ್ತ ಕುಡಿದು ಸತ್ತು ಬೀಳುತ್ತವೆ. ಸೊಳ್ಳೆಗಳ ನಿಯಂತ್ರಣವಾಗುತ್ತದೆ.’
ಆರೋಗ್ಯ ಅಧಿಕಾರಿ ಆಸ್ಪತ್ರೆಯಲ್ಲಿದ್ದಾರೆ, ಅವರಿಗೆ ಇಬ್ಬರು ಗಂಡು ಮಕ್ಕಳು.


……………………….


ಸಾಮ್ರಾಟರು ನಗೆ ನಗಾರಿ ಡಾಟ್ ಕಾಮ್‌ನಲ್ಲಿ ಕೆಲಸವಿಲ್ಲದಿದ್ದಾಗೆ ಆಗಾಗ ಟೂರಿಸ್ಟ್‌ಗಳಿಗೆ ಗೈಡ್ ಆಗಿ ಕೆಲಸ ಮಾಡಲು ಹೋಗುತ್ತಾರೆ. ಒಮ್ಮೆ ಒಬ್ಬ ಜರ್ಮನಿಯವ ಒಂದು ದೊಡ್ಡ ಅಸ್ಥಿಪಂಜರವನ್ನು ತೋರಿಸಿ ಇದು ಯಾರದು ಎಂದು ಕೇಳಿದ.
ನಗೆ ಸಾಮ್ರಾಟ್: ಇದು ಟಿಪ್ಪು ಸುಲ್ತಾನರ ಅಸ್ಥಿ ಪಂಜರ.
ಟೂರಿಸ್ಟ್: ಹಾಗಾದರೆ ಆ ಚಿಕ್ಕದು?
ನಗೆ ಸಾಮ್ರಾಟ್: ಓ ಅದಾ, ಅದು ಟಿಪ್ಪು ಸುಲ್ತಾನ್‌ರದೇ. ಅವರು ಚಿಕ್ಕವರಾಗಿದ್ರಲ್ಲಾ ಅವಾಗಿನದು.……………………….……………………….……………………….
ಸಂದರ್ಶಕ: ನೀನು ಹುಟ್ಟಿದ್ದು ಎಲ್ಲಿ?
ನಗೆ ಸಾಮ್ರಾಟ್: ಕರ್ನಾಟಕ
ಸಂದರ್ಶಕ: ಯಾವ ಭಾಗ?
ನಗೆ ಸಾಮ್ರಾಟ್: ಯಾವ ಭಾಗ ಅಂತೇನಿಲ್ರೀ, ನಾನು ಪೂರ್ತಿ ಹುಟ್ಟಿದ್ದು ಅಲ್ಲೇ.

……………………….

ನಗೆ ಸಾಮ್ರಾಟ್‌ರು ಭಯೋತ್ಪಾದಕರಾಗಿಬಿಟ್ಟಿದ್ದರು.
ಒಮ್ಮೆ ಒಂದು ಮಿಷನ್ನಿನ ಮೇಲೆ ಗಾಡಿಯೊಂದರ ಕೆಳಗೆ ಬಾಂಬ್ ಫಿಕ್ಸ್ ಮಾಡಲು ಹೊರಟಿದ್ದರು. ಆಗ ಅವನ ಜೂನಿಯರ್ ಕೇಳಿದ.
‘ಸಾರ್  ನೀವು ಫಿಕ್ಸ್ ಮಾಡುವಾಗಲೇ ಬಾಂಬ್ ಸ್ಫೋಟಗೊಂಡುಬಿಟ್ಟರೆ?’
ನಗೆ ಸಾಮ್ರಾಟರು ಸಮಾಧಾನದಿಂದ ಮುಗುಳ್ನಗುತ್ತಾ ಹೇಳಿದರು, ‘ಅದಕ್ಕೇ ನಾನು ಯಾವಾಗಲೂ ಒಂದು ಸ್ಪೇರ್ ಬಾಂಬ್ ಇಟ್ಟುಕೊಂಡಿರ್ತೀನಿ.’

……………………….

ಸಾಮ್ರಾಟರ ಗೆಳೆಯ ಹೊಸ ಕಾರನ್ನು ಖರೀದಿಸಿದ್ದ. ಸಾಮ್ರಾಟರು ಅದರ ಬಗ್ಗೆ ವಿಚಾರಿಸುವ ಹುಮ್ಮಸ್ಸಿನಲ್ಲಿದ್ದರು.
‘ಹೌದು, ನಿನ್ನ ಗಾಡಿಯ ಹೆಸರೇನಯ್ಯಾ?’
‘ಅಯ್ಯೋ ಹೆಸರು ಮರೆತು ಹೋಗಿದೆ ಕಣೋ, ಆದರೆ ಅದು ‘ಟಿ’ ಇಂದ ಶುರುವಾಗುತ್ತೆ.’
‘ಓಹ್, ವಂಡರ್‌ಫುಲ್ ಕಣಯ್ಯಾ. ಪೆಟ್ರೋಲು, ಡಿಸೇಲು ರೇಟು ಜಾಸ್ತಿಯಾಗಿರುವುದು ನೋಡಿದರೆ ನಿನ್ನ ‘ಟೀ’ ಇಂದ ಶುರುವಾಗುವ ಕಾರೇ ಒಳ್ಳೆಯದು ಅನ್ನಿಸುತ್ತೆ.’

……………………….

ಅಂದು ಏಪ್ರಿಲ್ ಒಂದನೆಯ ತಾರೀಖು. ಯಾರನ್ನಾದರೂ ಫೂಲ್ ಮಾಡಬೇಕೆಂದು ನಗೆ ಸಾಮ್ರಾಟರಿಗೆ ಹುಕಿ ಶುರುವಾಯಿತು. ಸರಿ ಚಾಮರಾಜಪೇಟೆಯಿಂದ ಮೆಜೆಸ್ಟಿಕ್ಕಿಗೆ ಬಿಎಂಟಿಸಿ ಬಸ್ಸು ಹತ್ತಿಕೊಂಡರು.
ಕಂಡಕ್ಟರನ್ನು ಕರೆದು ಏಳು ರುಪಾಯಿ ಕೊಟ್ಟು ಮೆಜೆಸ್ಟಿಕ್ಕಿಗೆ ಟಿಕೆಟ್ ಪಡೆದು ‘ನೀನು  ಫೂಲ್ ಆದೆ ನನ್ನ ಹತ್ರ ಪಾಸ್ ಇತ್ತು’ ಎಂದರು.

……………………….

ಒಂದು ಸಲ ನಗೆ ಸಾಮ್ರಾಟರು ಮ್ಯೂಸಿಯಂ ಒಂದಕ್ಕೆ ಭೇಟಿ ನೀಡಿದ್ದರು. ಯಾವುದೋ ವಸ್ತುವನ್ನು ಗಾಢವಾಗಿ ಅಧ್ಯಯನ ಮಾಡುವಾಗ ಅದರ ಪಕ್ಕದಲ್ಲಿದ್ದ ಶಿಲ್ಪವೊಂದರ ಮೇಲೆ ಒರಗಿದರು. ಆ ಶಿಲ್ಪ ನಗೆ ಸಾಮ್ರಾಟರ ಭಾರವನ್ನು ತಡೆಯಲಾರದೆ ಕೆಳಕ್ಕುರುಳಿದರೆ, ಅದು ಸಾಮ್ರಾಟರ ತಪ್ಪೇ?
ಮ್ಯೂಸಿಯಮ್ಮಿನ ಮ್ಯಾನೇಜರ್ ಬಂದು, ‘ರೀ ಮಿಸ್ಟರ್ ನೀವು ಈಗ ಒಡೆದು ಹಾಕಿದ ಶಿಲ್ಪ ಸಾವಿರ ವರ್ಷ ಹಳೆಯದು ಅಂತ ಗೊತ್ತೇ?’ ಎಂದು ದಬಾಯಿಸಿದ.
ಗಾಬರಿಯಾಗಿದ್ದ ನಗೆ ಸಾಮ್ರಾಟರು ಸಮಾಧಾನದ ನಿಟ್ಟುಸಿರು ಬಿಡುತ್ತಾ, ‘ಓ ಹೌದಾ, ನಾನೆಲ್ಲೋ ಹೊಸಾದೇನೋ ಅಂದುಕೊಂಡಿದ್ದೆ.’ ಎಂದರು.

……………………….……………………….……………………….
ಹೆಂಡತಿ: ರೀ.. ಪಕ್ಕದ್ಮನೆಗೆ ಹೊಸದಾಗಿ ಬಾಡಿಗೆಗೆ ಬಂದವಳು ತುಂಬಾ ಒಳ್ಳೆಯವಳು ರೀ…
ಗಂಡ: ಹಾಗೇನಿಲ್ಲ. ಸ್ವಲ್ಪ ದಿನ ಆದ ಮೇಲೆ ನೀನೇ ಹೇಳುವೆ ಅವಳು ತುಂಬಾ ಕೆಟ್ಟವಳೂಂತ.
ಹೆಂಡತಿ: ಅದು ಹ್ಯಾಗೆ ಹೇಳ್ತೀರ ನೀವು? ಮೊದ್ಲಿಂದ್ಲೇ ಏನಾದ್ರೂ ಅವಳ ಪರಿಚಯ ಇತ್ತಾ ನಿಮಗೆ?
ಗಂಡ: ಅಯ್ಯೋ ಮಾರಾಯ್ತೀ… ಅವಳ ಪರಿಚಯವೇನೂ ಇಲ್ಲ. ಆದರೆ ನಿನ್ನ ಪರಿಚಯ ಚೆನ್ನಾಗಿದೆಯಲ್ಲಾ!

……………………….
ಸರಳುಗಳ ನಡುವೆ ಇದ್ದ ಒಂದು ನೀರಾನೆಯನ್ನು ನೋಡುತ್ತಾ ಮಹಿಳಾ ಸಂದರ್ಶಕಿಯೊಬ್ಬಳು ಆ ಪ್ರಾಣಿ ಸಂಗ್ರಹಾಲಯದ ಗೈಡನ್ನು ‘ಅದು ಗಂಡೇ ಅಥವಾ ಹೆಣ್ಣೇ?’.
ಅದಕ್ಕೆ ಆ ಗೈಡು ‘ಮೇಡಮ್, ಆ ಸಂಶಯ ಇರಬೇಕಾದ್ದು ಇನ್ನೊಂದು ನಿರಾನೆಗೆ ಮಾತ್ರ’ ಎಂದ.

……………………….
ವಕೀಲ: ಹಾಗಾದರೆ ನಿಮಗೆ ನನ್ನ ಪ್ರಾಮಾಣಿಕ ಅಭಿಪ್ರಾಯ ಬೇಕು ಅನ್ನಿ…
ಕ್ಲೈಂಟ್: ಅಲ್ಲ, ನಿನ್ನ ಪ್ರೊಫೆಶನಲ್ ಅಭಿಪ್ರಾಯ ಸಾಕು…

……………………….

ಅಂಚೆ ಇಲಾಖೆಯಲ್ಲಿ ಅಂಚೆ ಬಟವಾಡೆಯ ಕೆಲಸಕ್ಕಾಗಿ ಸಂದರ್ಶನ ನಡೆಯುತ್ತಿತ್ತು. ಕೆಲಸ ಯಾರಿಗೆ ಕೊಡಬೇಕು ಎಂಬುದು ಮೊದಲೇ ನಿರ್ಧಾರವಾಗಿತ್ತಾದ್ದರಿಂದ ಸಂದರ್ಶನಕ್ಕೆ ಹಾಜರಾದ ಇತರ ಅಭ್ಯರ್ಥಿಗಳಿಗೆ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಅವರು ಉತ್ತರಿಸಲು ಆಗದ ಹಾಗೆ ಮಾಡಲಾಗುತ್ತಿತ್ತು.
ಕಡೆಯಲ್ಲಿ ನಗೆ ಸಾಮ್ರಾಟರು ಸಂದರ್ಶನ ಕೋಣೆಯೊಳಕ್ಕೆ ಹೋದರು.
ಸಂದರ್ಶಕ ಕೇಳಿದ: ಭೂಮಿಯಿಂದ ಚಂದಿರ ಎಷ್ಟು ದೂರದಲ್ಲಿದೆ.
ನಗೆ ಸಾಮ್ರಾಟರು ಉತ್ತರಿಸಿದರು, ಸಾರ್ ನನಗೆ ಆ ರೂಟಿನ ಬಗ್ಗೆ ಆಸಕ್ತಿಯಿಲ್ಲ. ನನಗೆ ಅಲ್ಲಿ ಡ್ಯೂಟಿ ಬೇಡ.

……………………….
ನಗೆ ಸಾಮ್ರಾಟರಿಗೆ ತುಂಬಾ ಮರೆವು. ಅವರ ಮರೆವಿನ ಬಗ್ಗೆ ಅವರ ಮಾತುಗಳಲ್ಲೇ ಕೇಳಿ…
“ನನಗೆ ಮೂರು ಸಂಗತಿಗಳ ಬಗ್ಗೆ ತುಂಬಾ ಮರೆವು. ಒಂದು: ದಿನಾಂಕಗಳು. ನನಗೆ ಯಾವ ದಿನಾಂಕವನ್ನೂ ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಎರಡು: ಮುಖಗಳು. ಹತ್ತು ನಿಮಿಷದ ಕೆಳಗೆ ಮಾತನಾಡಿಸಿದ ವ್ಯಕ್ತಿ ಎದುರು ಬಂದರೆ ನನಗೆ ಆತನನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇನ್ನು ಮೂರನೆಯದು… ಯಾವುದಪ್ಪಾ ಅದು… ನೆನಪೇ ಆಗುತ್ತಿಲ್ಲ…”

……………………….……………………….……………………….

ಹೆಸರಾಂತ ಸಂಗೀತಗಾರರೊಬ್ಬರು ತಮ್ಮ ಅದ್ಭುತವಾದ ಕಚೇರಿರ ನಂತರ ಮಾತನಾಡುತ್ತ, ಕಚೇರಿಯ ಕೊನೆಯವರೆಗೂ ಜೀವ ಉಳಿಸಿಕೊಂಡು ಕುಳಿತ ಕೆಲವೇ ಕೆಲವು ವೀರರನ್ನು ಕುರಿತು, ‘ಮ್ಯೂಸಿಯಂಗಳಲ್ಲಿ ಯಾರ್ಯಾರೋ ರಾಜರ ಕತ್ತಿ, ಕಠಾರಿ, ಸಿಂಹಾಸನ, ಚಪ್ಪಲಿ-ಚಡಾವು, ಅಂಗಿ-ಪಂಚೆ-ಲಂಗೋಟಿಗಳನ್ನು ಇಟ್ಟ್ರಿರ್ತಾರೆ. ಓಬಿರಾಯನ ಕಾಲದ ಗಡಿಯಾರ, ಪಿಸ್ತೂಲು, ಟೆಲಿಫೋನು, ಕಾರು, ವಿಮಾನಗಳನ್ನೆಲ್ಲಾ ಕೂಡಿಹಾಕಿರುತ್ತಾರೆ. ಅದೆಲ್ಲದರ ಜೊತೆಗೆ ನಮ್ಮ ಸಂಗೀತ ವಾದ್ಯಗಳನ್ನು ಇಡಬೇಕು. ಸಂಗೀತಗಾರ ಉಪಯೋಗಿಸಿದ ಉಪಕರಣಗಳನ್ನು ಮ್ಯೂಸಿಯಂಗಳಲ್ಲಿ ಇಡಬೇಕು. ಇದಕ್ಕೆ ನೀವೇನಂತೀರಿ?’ ಎಂದರು ಚಿದ್ವಿಲಾಸದ ನಗೆ ನಗುತ್ತಾ.

ಮುಂದೇ ಕೂತಿದ್ದ ಮೈಕ್ ಸೆಟ್, ಜಮಖಾನ ಸಾಗಿಸುವ ನಗೆಸಾಮ್ರಾಟರು, ‘ಹೌದು ಬಿಡ್ರಿ ಉಸ್ತಾದ್. ನೀವ್ ಹೇಳಾದು ಖರೇ ಅದ. ಮುಂದಿನ್ ತಲೆಮಾರ್ನೋರು ನಾವು ಯಾವಾವ ಕಷ್ಟಗಳನ್ನು ಸಹಿಸ್ಕೋತಿದ್ವಿ ಅನ್ನೋದು ತಿಳೀ ಬೇಕ್ ಬಿಡ್ರೀ.’ ಎಂದರು ತಲೆ ಕೆರೆದುಕೊಳ್ಳುತ್ತಾ!

……………………….

ನಗೆ ಸಾಮ್ರಾಟರು ತಮ್ಮ ಸಾಫ್ಟ್ವೇರು ಇಂಜಿನಿಯರ್ ಮಗನ ಜೊತೆಗೆ ಅಮೇರಿಕಾಕ್ಕೆ ಮೊದಲ ಬಾರಿಗೆ ಬಂದಿದ್ದರು.

ಅಲ್ಲಿನ ಒಂದು ಆಹಾರ ಪದಾರ್ಥಗಳ ಮಳಿಗೆಯಲ್ಲಿ ಸಾಮ್ರಾಟರು ಒಂದೊಂದೇ ಮಹಡಿಗಳನ್ನು ಹತ್ತಿ ಇಳಿಯುತ್ತಾ ಎಲ್ಲವನ್ನೂ ಅವಲೋಕಿಸುತ್ತಿದ್ದರು.

ನಗೆ ಸಾಮ್ರಾಟರು ತಮ್ಮ ಮಗನಿಗೆ, “ಏನಿದು” ಎಂದು ಕೇಳಿದರು ಒಂದು ಪದಾರ್ಥವನ್ನು ತೋರಿಸುತ್ತಾ.

ಸಾಮ್ರಾಟರ ಮಗ, “ಅದು ಆರೆಂಜ್ ಪುಡಿ. ಇದನ್ನ ನೀರಿನಲ್ಲಿ ಹಾಕಿ ಕಲೆಸಿದರೆ ಸಾಕು ಆರೆಂಜ್ ಜ್ಯೂಸ್ ರೆಡಿಯಾಗುತ್ತದೆ”. ಎಂದ.

ಸ್ವಲ್ಪ ಸಮಯದ ನಂತರ ಸಾಮ್ರಾಟರು ಇನ್ನೊಂದು ಪದಾರ್ಥವನ್ನು ತೋರಿಸುತ್ತಾ, “ಇದೇನಿದು?” ಎಂದು ಕೇಳಿದರು.

ಸಾಮ್ರಾಟರ ಮಗ, “ಇದು ಹಾಲಿನ ಪುಡಿ” ಎಂದ.

“ಹಾಲಿನ ಪುಡಿಯಾ?” ಕೇಳಿದರು ಸಾಮ್ರಾಟ್.

“ಹೌದಪ್ಪಾ, ಇದನ್ನ ನೀರಿನಲ್ಲಿ ಬೆರೆಸಿದರೆ ಹಾಲು ರೆಡಿ!” ಎಂದ ಉದ್ವೇಗದಲ್ಲಿ.

ಸ್ವಲ್ಪ ಸಮಯದ ನಂತರ ಸಾಮ್ರಾಟರು ಸಖೇದಾಶ್ಚರ್ಯದಿಂದ ತಮ್ಮ ಮಗನನ್ನು ಕೂಗಿ ಕರೆದರು. “ನೋಡಿಲ್ಲಿ, ಏನಿದೆ ಅಂತ! ಇದು ಬೇಬಿ ಪೌಡರ್! ಎಂಥಾ ದೇಶವಪ್ಪಾ ಇದು… ನಿಜಕ್ಕೂ ಅದ್ಭುತ.” ಎಂದು ಉದ್ಗರಿಸಿದರು.

……………………….

ಒಬ್ಬ ಕಳ್ಳ ತನ್ನ ಚಪ್ಪಲಿಯನ್ನು ಕಳೆದುಕೊಂಡಿದ್ದ. ಎಲ್ಲಿ ಹುಡುಕಿದರೂ ಸಿಕ್ಕಲಿಲ್ಲ. ಕೊನೆಗೆ ಆತ ಒಂದು ಉಪಾಯ ಮಾಡಿದ. ಸಾಮ್ರಾಟರು ಹರಿಕಥೆ ಮಾಡುತ್ತಿದ್ದ ದೇವಸ್ಥಾನಕ್ಕೆ ಹೋಗುವುದು, ದೇವಸ್ಥಾನದ ಹೊರಗಡೆ ಬಿಟ್ಟ ಚಪ್ಪಲಿಗಳಲ್ಲಿ ಯಾವುದಾದರೊಂದನ್ನು ಎಗರಿಸಿಕೊಂಡು ಬರುವುದು ಎಂಬುದಾಗಿ ಯೋಜಿಸಿದ.

ಸಾಮ್ರಾಟರ ಹರಿಕಥೆ ಓತಪ್ರೋತವಾಗಿ ನಡೆಯುತ್ತಿತ್ತು. ಸಾಮ್ರಾಟರು ಭಾವ ಪರವಶರಾಗಿ, ಮನುಷ್ಯನನ್ನು ಹಾದಿ ತಪ್ಪಿಸುವ ಮಹಾ ಪಾತಕಗಳ ಬಗ್ಗೆ ಮಾತನಾಡಿದರು. ಅದನ್ನು ಕೇಳಿದ ಕಳ್ಳ ಚಪ್ಪಲಿ ಕದಿಯುವ ಯೋಜನೆಯನ್ನೇ ಬಿಟ್ಟು ಬಿಟ್ಟ.

ಸಾಮ್ರಾಟರ ಹರಿಕಥೆ ಮುಗಿದ ನಂತರ ಅವರ ಬಳಿಗೆ ತೆರೆಳಿದ ಕಳ್ಳ, “ಸಾಮ್ರಾಟರೆ, ನಾನಿಲ್ಲಿಗೆ ಒಂದು ಜೊತೆ ಚಪ್ಪಲಿಯನ್ನು ಕದಿಯಲು ಬಂದಿದ್ದೆ. ನಿಮ್ಮ ಹರಿಕಥೆ ಕೇಳಿದ ಮೇಲೆ ಆ ಯೋಜನೆಯನ್ನು ಬಿಟ್ಟು ಬಿಟ್ಟೆ.” ಎಂದ.

ಈ ಮಾತನ್ನು ಕೇಳಿ ಸಂತೋಷದಿಂದ ಉಬ್ಬಿ ಹೋದ ಸಾಮ್ರಾಟರು, “ಓಹ್, ತುಂಬಾ ಸಂತೋಷವಪ್ಪಾ… ನಾನು ಹೇಳಿದ ಯಾವ ವಿಚಾರದಿಂದ ನಿನ್ನ ಮನಃಪರಿವರ್ತನೆಯಾಯಿತು?” ಎಂದು ಪ್ರಶ್ನಿಸಿದರು.

ಕಳ್ಳ, “ಸ್ವಾಮಿ ನೀವು ವ್ಯಭಿಚಾರದ ಬಗ್ಗೆ ಹೇಳ್ತಿದ್ರಲ್ಲಾ, ಆಗ ನನಗೆ ನನ್ನ ಚಪ್ಪಲಿ ಎಲ್ಲಿ ಮರೆತು ಬಿಟ್ಟಿದ್ದೆ ಎಂಬುದು ನೆನಪಾಯ್ತು.” ಎಂದ ಸಮಾಧಾನದಿಂದ.

……………………….

ಸಾಮ್ರಾಟರಿಗೆ ಅದ್ಯಾಕೋ ಪಕ್ಷಿ ಪ್ರೇಮ ವಿಪರೀತವಾಗಿತ್ತು. ಸಂಜೆಯಾಗುತ್ತಿದ್ದ ಹಾಗೆಯೇ ತಮ್ಮ ಮನೆಯ ಹಿತ್ತಲಲ್ಲಿ ಕುಳಿತು ವಿವಿಧ ಪಕ್ಷಿಗಳ ಧ್ವನಿಯನ್ನು ಅನುಕರಿಸುತ್ತಿದ್ದರು. ಆದರೆ ಯಾವ ಪಕ್ಷಿಯೂ ಇವರ ಅನುಕರಣೆಗೆ ಸ್ಪಂದಿಸಿರಲಿಲ್ಲ.

ಒಮ್ಮೆ ಸಾಮ್ರಾಟರು ಗೂಬೆಯ ದನಿಯನ್ನು ಅನುಕರಿಸಿ ‘ಗೂಕ್..ಗೂ..ಗೂಕ್’ ಎಂದು ಕೂಗಿದರು. ಅವರ ಆಶ್ಚರ್ಯಕ್ಕೆ ಕೆಲ ಸಮಯದ ನಂತರ ಸ್ವಲ್ಪ ದೂರದಿಂದ ಇನ್ನೊಂದು ಗೂಬೆಯ ಕೂಗು ಕೇಳಿಬಂದಿತು. ಇವರು ಮತ್ತೆ ಕೂಗಿದರು ಅತ್ತ ಕಡೆಯಿಂದ ಉತ್ತರ ಬಂದಿತು. ಹೀಗೆ ಒಂದು ವಾರ ನಿರಂತರವಾಗಿ ಸಾಮ್ರಾಟರು ಗೂಬೆ ಸಂವಾದದಲ್ಲಿ ಬ್ಯುಸಿಯಾಗಿದ್ದರು.

ಸಾಮ್ರಾಟರ ಈ ಹೊಸ ಸಾಹಸದಿಂದ ಶ್ರೀಮತಿ ಸಾಮ್ರಾಟರಿಗೆ ವಿಪರೀತ ಹೆಮ್ಮೆಯಾಯಿತು. ತನ್ನ ಯಜಮಾನರು ಗೂಬೆಗಳೊಂದಿಗೆ ಮಾತನಾಡಬಲ್ಲರು ಎಂಬುದು ಆಕೆಗೆ ಅಭಿಮಾನದ ವಿಷಯವಾಗಿತ್ತು. ಪಕ್ಕದ ಮನೆಯವಳೊಂದಿಗೆ ತನ್ನ ಜಂಭವನ್ನು ತೋರುತ್ತಾ, “ನನ್ನ ಯಜಮಾನರು ರಾತ್ರಿಯಿಡೀ ಗೂಬೆಯೊಂದಿಗೆ ಮಾತನಾಡುತ್ತಾರೆ ಗೊತ್ತಾ?” ಎಂದಳು.

ಪಕ್ಕದ ಮನೆಯಾಕೆ, “ಎಂಥಾ ಆಶ್ಚರ್ಯ! ನಮ್ಮೆಜಮಾನ್ರೂ ಕೂಡ ರಾತ್ರಿಯಿಡೀ ಗೂಬೆಯೊಂದಿಗೆ ಸಂವಾದಿಸುತ್ತಾ ಕೂತಿರ್ತಾರೆ.” ಎಂದಳು ಬೆರಗಿನಿಂದ.

……………………….

ಸಾಮ್ರಾಟರು ಕೆಲವು ಸಾಮಾಜಿಕ ಉಪಯುಕ್ತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಆಸೆಯಿಂದ ಪ್ರತಿ ತಿಂಗಳು ಹುಚ್ಚಾಸ್ಪತ್ರೆಗೆ ಹೋಗಿ ಅಲ್ಲಿನ ರೋಗಿಗಳನ್ನು ಕಲೆಹಾಕಿ ಅವರಿಗೆ ಭಾಷಣ ಮಾಡಿ ಬರುತ್ತಿದ್ದರು.

ಒಮ್ಮೆ ಹೀಗೆ ಒಂದು ಆಸ್ಪತ್ರೆಯ ರೋಗಿಗಳಿಗೆ ಭಗವಂತನ ಮಹಿಮೆಯ ಬಗ್ಗೆ ಎರಡು ತಾಸು ಭಾಷಣ ಬಿಗಿದರು. ಹುಚ್ಚಾಸ್ಪತ್ರೆ ಎಂದರೆ ಕೇಳಬೇಕೆ, ಅವರವರ ಲೋಕದಲ್ಲಿ ಅವರವರು ವಿಹರಿಸುತ್ತಿದ್ದಾಗ ಸಾಮ್ರಾಟರ ಭಾಷಣವನ್ನು ಯಾರು ಕೇಳಬೇಕು? ಆದರೂ ಒಬ್ಬ ರೋಗಿ ತದೇಕಚಿತ್ತದಿಂದ ಮೊದಲಿನಿಂದ ಕೊನೆಯವರೆಗೂ ಸಾಮ್ರಾಟರ ಭಾಷಣವನ್ನು ಕೇಳಿದ.

ಆತನನ್ನು ಮಾತನಾಡಿಸಿ ಅಭಿನಂದಿಸಬೇಕೆಂದು ಸಾಮ್ರಾಟರು ಹೊರಟರು. ಆತನನ್ನು ಕಂಡು, “ನನ್ನ ಭಾಷಣ ಕೇಳಿ ಏನನ್ನಿಸಿತಪ್ಪಾ?” ಎಂದು ಪ್ರಶ್ನಿಸಿದರು. ಅದಕ್ಕೆ ಆ ರೋಗಿ, “ಮೊದಲಿಂದಲೂ ನಿಮ್ಮ ಭಾಷಣವನ್ನು ಕೇಳಿದೆ. ನಿಮ್ಮಂಥವರನ್ನು ಹೊರಗೆ ಬಿಟ್ಟು ನಮ್ಮನ್ಯಾಕೆ ಇಲ್ಲಿ ಒಳಕ್ಕೆ ಹಾಕಿದ್ದಾರೆ ಎನ್ನಿಸಿತು.” ಎಂದ ಕೂಲಾಗಿ!

…………………………………………………………………………

ಸಾಮ್ರಾಟರ ಕಛೇರಿಯ ಕಾರಕೂನನಿಗೆ ಕಛೇರಿಯ ತುಂಬ ತುಂಬಿದ್ದ ತುಂಬಾ ಹಳೆಯ ಕಾಗದ ಪತ್ರಗಳಿಂದ ಕಿರಿಕಿರಿಯಾಗುತ್ತಿತ್ತು. ಆತ ಸಾಮ್ರಾಟರಿಗೆ ತುಂಬಾ ಹಳೆಯ, ಅನುಪಯುಕ್ತವಾದ ಕಾಗದ ಪತ್ರಗಳನ್ನು ಸುಟ್ಟು ಹಾಕಲು ಅನುಮತಿ ಕೋರಿ ಪತ್ರ ಬರೆದ.
ಅವನ ಪತ್ರಕ್ಕೆ ಕೂಡಲೇ ಉತ್ತರಿಸಿದ ಸಾಮ್ರಾಟರು, “ಆವಶ್ಯಕವಾಗಿ ಸುಟ್ಟು ಹಾಕು. ಆದರೆ ಸುಡುವ ಮೊದಲು ಆ ಎಲ್ಲಾ ಕಾಗದ ಪತ್ರಗಳ ಎರಡೆರಡು ಝೆರಾಕ್ಸ್ ಪ್ರತಿ ಮಾಡಿಸಿಟ್ಟುಬಿಡು..” ಎಂದರು.
……………………….ಸಾಮ್ರಾಟರು ಅಂದು ಕೆಂಪಗಾಗಿದ್ದ ತಮ್ಮೆರಡು ಕಿವಿಗಳನ್ನು ಡಾಕ್ಟರಿಗೆ ತೋರಿಸಿದರು. ಡಾಕ್ಟರ್ ಆಶ್ಚರ್ಯದಿಂದ ಹೇಗಾಯ್ತು ಇದು ಎಂದು ಕೇಳಿದರು.
ಸಾಮ್ರಾಟರು, “ಸಾರ್, ನಾನು ಮನೆಯಲ್ಲಿ ನನ್ನ ಶರ್ಟ್ ಐರನ್ ಮಾಡಿಕೊಳ್ಳುತ್ತಿದ್ದೆ. ಆಗ ಫೋನ್ ರಿಂಗಾಯಿತು. ನಾನು ರಿಸೀವರ್ ಅಂದುಕೊಂಡು ಐರನ್ ಬಾಕ್ಸನ್ನು ಕಿವಿಗಿಟ್ಟುಕೊಂಡೆ” ಎಂದರು.
ಡಾಕ್ಟರ್ ಕೇಳಿದ, “ಅದು ಸರಿ, ಈ ಇನ್ನೊಂದು ಕಿವಿ ಸುಟ್ಟಿರುವುದು ಏಕೆ?”
“ಆ ಮುಠ್ಠಾಳ ಮತ್ತೆ ಫೋನ್ ಮಾಡಿದ ಸಾರ್…” ಎಂದರು ಸಾಮ್ರಾಟ್!
……………………….ನಗೆ ಸಾಮ್ರಾಟರು ಮಧ್ಯ ರಾತ್ರಿ ಗೊರಕೆ ಹೊಡೆಯುತ್ತಾ ನಿದ್ರಿಸುತ್ತಿದ್ದರು. ಆಗ ಮನೆಯ ಫೋನು ರಿಂಗಿಣಿಸಲಾರಂಭಿಸಿತು. ಸಾಮ್ರಾಟರು ಫೋನ್ ಎತ್ತಿಕೊಂಡು, “ಹಲೋ ಎಂದರು”
ಅತ್ತ ಕಡೆಯಿಂದ: ಹಲೋ, ಇದು ಒಂದು ಒಂದು ಒಂದು ಒಂದು ನಂಬರ್ರಾ?
ಸಾಮ್ರಾಟ್: ಅಲ್ಲಾರಿ ಇದು, ಹನ್ನೊಂದು ಹನ್ನೊಂದು.
ಅತ್ತ ಕಡೆಯಿಂದ: ನಿಜಕ್ಕೂ ಇದು ಒಂದು ಒಂದು ಒಂದು ಒಂದು ಅಲ್ವಾ?
ಸಾಮ್ರಾಟ್: ಅಲ್ಲಾ, ಇದು ಹನ್ನೊಂದು ಹನ್ನೊಂದು.
ಅತ್ತ ಕಡೆಯಿಂದ: ಕ್ಷಮಿಸಿ, ಇಷ್ಟು ಮಧ್ಯ ರಾತ್ರಿಯಲ್ಲಿ ನಿಮ್ಮನ್ನು ಎಬ್ಬಿಸಿ ತೊಂದರೆ ಕೊಟ್ಟೆ.
ಸಾಮ್ರಾಟ್: ಪರವಾಗಿಲ್ಲ ಬಿಡಿ, ನಾನು ಹೇಗೂ ಫೋನ್ ಎತ್ತಿಕೊಳ್ಳಲು ಏಳಲೇ ಬೇಕಿತ್ತು.
……………………….ಒಂದು ಸಣ್ಣ ಸ್ಪರ್ಧೆ ನಡೆಯುತ್ತಿತ್ತು. ಅಲ್ಲಿ ಎಲ್ಲರೂ ವಿಚಿತ್ರವಾಗಿ, ವ್ಯಂಗ್ಯವಾಗಿ ತಮ್ಮ ಮುಖವನ್ನು ತೋರಿಸಬೇಕಿತ್ತು. ಯಾರ ಮುಖ ಹೆಚ್ಚು ತಮಾಷೆಯಾಗಿರುತ್ತದೆಯೋ ಅವರಿಗೆ ಬಹುಮಾನ ಎಂದು ಘೋಷಿತವಾಗಿತ್ತು.
ಆ ಕಾರ್ಯಕ್ರಮ ಮುಗಿದ ನಂತರ ಜಡ್ಜ್ ನೇರವಾಗಿ ಸಾಮ್ರಾಟರ ಬಳಿಗೆ ಬಂದು ಅವರ ಕೈಗೆ ಟ್ರೋಫಿಯನ್ನು ಕೊಟ್ಟು ಅವರೇ ವಿಜಯಿ ಎಂದು ಘೋಷಿಸಿದರು.
ಗಾಬರಿಬಿದ್ದು “ಅಯ್ಯೋ ನಿಲ್ಲಿ, ನಾನು ಸ್ಪರ್ಧೆಯಲ್ಲಿ ಭಾಗವಹಿಸಿಯೇ ಇರಲಿಲ್ಲ” ಎಂದರು ಸಾಮ್ರಾಟರು.
……………………….

ನಗೆ ಸಾಮ್ರಾಟ್ ಹಾಗೂ ಸಖತ್ ಸಾಮ್ರಾಟ್ ತಾವು ಹೇಗೆ ಸಾಯಬಯಸುತ್ತೇವೆ ಎಂದು ಮಾತನಾಡುತ್ತಾ ಕುಳಿತಿದ್ದರು.
ನಗೆ ಸಾಮ್ರಾಟ್: ನಾನು ನನ್ನ ತಾತನ ಹಾಗೆ ಶಾಂತಿಯಿಂದ ಸಾಯಲು ಬಯಸುತ್ತೇನೆ. ಆದರೆ ಅವರ ಜೊತೆಗೇ ಸತ್ತ ಅವರ ಗೆಳೆಯರ ಹಾಗೆ ಅರಚಿ, ಕೂಗಾಡಿ, ರೇಗಾಡಿಕೊಂಡು ಸಾಯುವುದಿಲ್ಲ.
ಸಖತ್ ಸಾಮ್ರಾಟ್: ಹೌದು, ಅವರ್ಯಾಕೆ ಅರಚಿಕೊಂಡು ಸತ್ತರು?
ನಗೆ ಸಾಮ್ರಾಟ್: ಏನಿಲ್ಲ, ನನ್ನ ತಾತ ಅವರಿದ್ದ ಕಾರ್ ಡ್ರೈವ್ ಮಾಡುತ್ತಿದ್ದರು.

…………………………………………………………………………

ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಪ್ರತಿವರ್ಷ ಮರೆತು ಸಂಕಷ್ಟಕ್ಕೆ ಈಡಾಗುತ್ತಿದ್ದ ಸಾಮ್ರಾಟರಿಗೆ ತಮ್ಮ ಈ ಹೊಸ ಉಪಾಯ ಫಲ ನೀಡಬಹುದು ಎನ್ನಿಸಿತು.

ಬೊಕೆ ಅಂಗಡಿಗೆ ಮುಂಗಡ ಹಣವನ್ನು ನೀಡಿ ಪ್ರತಿವರ್ಷ ತನ್ನ ಹೆಸರಿನಲ್ಲಿ ತನ್ನ ಹೆಂಡತಿಯ ಹುಟ್ಟುಹಬ್ಬದಂದು ಬೊಕೆ ನೀಡುವಂತೆ ವ್ಯವಸ್ಥೆ ಮಾಡಿದರು. ಪ್ರತಿ ಹುಟ್ಟು ಹಬ್ಬದಂದು ಗಂಡನಿಂದ ಬೊಕೆ ಪಡೆದು ಶ್ರೀಮತಿ ಸಾಮ್ರಾಟ್ ಖುಷ್ಕುಶಿಯಾಗಿರುತ್ತಿದ್ದರು.

ಅವತ್ತು ಆಕೆಯ ಹುಟ್ಟುಹಬ್ಬದಂದು ಮನೆಗೆ ಬಂದ ಸಾಮ್ರಾಟರು ಹೂವಿನ ಬೊಕೆ ನೋಡಿ ಬಾಯ್ತಪ್ಪಿ, ‘ಇಷ್ಟು ಒಳ್ಳೆಯ ಹೂಗಳನ್ನು ಎಲ್ಲಿಂದ ತಂದೆ?’ ಎಂದು ಕೇಳಿಬಿಟ್ಟರು!

……………………….

ಸಾಮ್ರಾಟರು ಜೂ ಒಂದರಲ್ಲಿ ಗೈಡ್ ಆಗಿ ಕೆಲಸ ಮಾಡುತ್ತಿದ್ದರು. ಶಾಲಾ ಮಕ್ಕಳ ಗುಂಪೊಂದಕ್ಕೆ ಪ್ರಾಣಿಗಳ ಬಗ್ಗೆ ತಿಳಿಸಿಕೊಡುತ್ತಿರುವಾಗ ಒಬ್ಬ ಬಾಲಕ ಸಾಮ್ರಾಟರಿಗೆ, “ನೀವು ಸಿಂಹವನ್ನು ಮುಖಾಮುಖಿಯಾಗಿ ಎದುರಿಸಿದ್ದೀರಾ?” ಎಂದು ಕೇಳಿತು.

ಕೂಡಲೇ ಸಾಮ್ರಾಟರು ಲಹರಿಗೆ ಬಂದವರಂತೆ, “ಹೌದು. ನಾನು ಸಿಂಹವನ್ನು ಮುಖಾಮುಖಿಯಾಗಿ ಎದುರಿಸಿದ್ದೇನೆ. ಅವತ್ತೊಂದು ದಿನ ನನ್ನೆದುರು ಸಿಂಹ ಬಾಯ್ತೆರೆದು ಜೋರಾಗಿ ಗರ್ಜಿಸುತ್ತಿತ್ತು. ನಾನು ಸುಮ್ಮನೆ ನೋಡುತ್ತಾ ನಿಂತಿದ್ದೆ. ಆ ಸಿಂಹ ನನ್ನ ಕಡೆಗೆ ಹೆಜ್ಜೆ ಹಾಕುತ್ತಿತ್ತು… ನಾನಲ್ಲೇ ನಿಂತಿದ್ದೆ…” ಎಂದು ಕೊಂಚ ಕಾಲ ಸುಮ್ಮನಾದರು.

ಕುತೂಹಲ ತಡೆಯಲಾಗದ ಮಕ್ಕಳು, “ಆಮೇಲೆ ಏನು ಮಾಡಿದ್ರಿ?” ಎಂದರು.

“ಎಷ್ಟು ಹೊತ್ತು ಅಂತ ಹಾಗೇ ನಿಂತಿರಲಿ? ಬೋರಾಗಿ ಮುಂದಿನ ಬೋನಿನತ್ತ ನಡೆದೆ” ಎಂದರು ಸಾಮ್ರಾಟರು!

……………………….

“ಯಾಕೋ ತಲೆ ನೋಯುತ್ತಿದೆ. ಡಾಕ್ಟರರಿಗೆ ಫೋನ್ ಮಾಡ್ತೀನಿ” ಅಂದರು ಸಾಮ್ರಾಟ್.

“ಅದಕ್ಯಾಕೆ ಡಾಕ್ಟರು? ನನಗೂ ಮೊನ್ನೆ ಹೀಗೇ ತಲೆ ನೋಯುತ್ತಿತ್ತು. ನಾನು ಸೀದಾ ನನ್ನ ಮನೆಗೆ ಹೋಗಿ ನನ್ನ ಹೆಂಡತಿಗೆ ಮುತ್ತು ಕೊಟ್ಟೆ ಆಮೇಲೆ ತಲೆ ನೋವು ಮಾಯವಾಯ್ತು” ಎಂದ ಅವರ ಕೊಲೀಗ್ ಸಖತ್ ಸಾಮ್ರಾಟ್.

“ಹೌದಾ? ಎಂಥಾ ಆಶ್ಚರ್ಯ! ಹಾಗಾದ್ರೆ ಮನೆಗೆ ಫೋನ್ ಮಾಡಿ ನಿನ್ನ ಹೆಂಡತಿಗೆ ನಾನು ಬರುತ್ತಿದ್ದೀನಿ ಅಂತ ತಿಳಿಸು” ಎಂದವರೇ ಅಲ್ಲಿಂದ ಕಾಲ್ಕಿತ್ತರು ನಗೆ ಸಾಮ್ರಾಟ್!

……………………….

ಸಾಮ್ರಾಟರು ತಮ್ಮ ಮಗನನ್ನು ಕಾಣಲು ರೈಲಿನಲ್ಲಿ ಹೊರಟಿದ್ದರು. ಜಲಬಾಧೆ ತೀರಿಸಲು ಟಾಯ್ಲೆಟ್ಟಿನೆಡೆಗೆ ನಡೆದರು. ಟಾಯ್ಲೆಟ್ ಬಾಗಿಲನ್ನು ನೂಕಿದವರೇ ಎದುರಿನ ಕನ್ನಡಿಯನ್ನು ನೋಡಿದರು.

ಒಳಗೆ ಯಾರೋ ಇದ್ದಾರೆ ಎಂದು ಕೊಂಡು ವಾಪಸ್ಸಾದರು. ಸ್ವಲ್ಪ ಸಮಯದ ನಂತರ ಮತ್ತೆ ಒಳಗೆ ಹೋಗಿ ಕನ್ನಡಿಯಲ್ಲಿ ತಮ್ಮನ್ನೇ ಕಂಡು ಯಾರೋ ಇದ್ದಾರೆ ಅಂದುಕೊಂಡು ವಾಪಸ್ಸಾದರು. ಹೀಗೇ ಒಂದಿಪ್ಪತ್ತು ಸಾರಿ ಅಲೆದ ಸಾಮ್ರಾಟರಿಗೆ ಕೋಪ ನೆತ್ತಿಗೇರಿತು. ಕೂಡಲೇ ಟಿ.ಸಿಯನ್ನು ಕರೆದು “ಏನಾಗುತ್ತಿದೆ ಇಲ್ಲಿ?” ಎಂದರು ಗಂಭೀರವಾಗಿ.

ಆಶ್ಚರ್ಯದ ಸಂಗತಿಯೆಂದರೆ ಆ ಟಿ.ಸಿ ಸಹ ಒಬ್ಬ ಸಾಮ್ರಾಟನೇ! ಟಾಯ್ಲೆಟ್ಟಿನ ಬಾಗಿಲು ನೂಕಿ ಕನ್ನಡಿಯಲ್ಲಿ ನೋಡಿ, ಹೊರಗೆ ಬಂದು “ಸಾರಿ ಸರ್, ಅವರು ರೇಲ್ವೆ ಸ್ಟಾಫು. ನಾನೇನೂ ಹೇಳೋದಕ್ಕೆ ಆಗೋದಿಲ್ಲ” ಎಂದ!

……………………….

ಇಬ್ಬರು ಸಾಮ್ರಾಟರು ಮೂರಂತಸ್ಥಿನ ಮನೆಯ ತಾರಸಿಯ ಮೇಲೆ ಕೆಲಸ ಮಾಡುತ್ತಿದ್ದರು. ನಗೆ ಸಾಮ್ರಾಟ್ ಅಲ್ಲಿಂದ ಜಾರಿ ನೆಲದ ಮೇಲೆ ಬಿದ್ದುಬಿಟ್ಟರು. ಆಗ ಸಖತ್ ಸಾಮ್ರಾಟ್ ತಾರಸಿಯಿಂದ ಬಗ್ಗಿ, “ನೀನು ಬದುಕಿದ್ದೀಯೋ, ಸತ್ತಿದ್ದೀಯೋ” ಎಂದರು.

ನಗೆ ಸಾಮ್ರಾಟ್, “ಬದುಕಿದ್ದೇನೆ” ಎಂದು ಗೊಣಗಿದರು.

ಸಖತ್ ಸಾಮ್ರಾಟ್, “ನೀನೊಬ್ಬ ಸುಳ್ಳ.ನಿನ್ನನ್ನು ನಂಬಬೇಕೋ ಬಿಡಬೇಕೋ ಗೊತ್ತಾಗುತ್ತಿಲ್ಲ.”ಎಂದರು.

“ಹಾಗಾದರೆ ನಾನು ಸತ್ತಿರಲೇಬೇಕು. ಇಲ್ಲವಾದಲ್ಲಿ ನನ್ನನ್ನು ಸುಳ್ಳ ಅನ್ನುವಷ್ಟು ಧೈರ್ಯ ನೀನು ಮಾಡುತ್ತಿರಲಿಲ್ಲ.” ಎಂಬ ತೀರ್ಮಾನಕ್ಕೆ ಬಂದರು.

…………………………………………………………………………

ಮೇಷ್ಟ್ರು: ನಿಮ್ಮ ಮಗ ಸಿಗರೇಟು ಸೇದ್ತಾನೆ. ನೀವೇನು ಕೇಳೊದಿಲ್ವಾ?
ನಗೆ ಸಾಮ್ರಾಟ್: ಕೇಳ್ತೀನಿ ಸರ್, ಆದರೆ ಕೊಡೋದಿಲ್ಲ ಅಂತಾನೆ ಕಳ್ಳ ನನ್ಮಗ.

……………………….

‘ನನ್ಮಗ ತುಂಬಾ ಕುಡೀತಾನೆ ಏನ್ಮಾಡೋದು’ ಅಂದ ಸಾಮ್ರಾಟರ ಗೆಳೆಯ.‘ಮದುವೆ ಮಾಡ್ಬಿಡು ಕುಡಿಯೋದು ಕಡಿಮೆ ಮಾಡ್ತಾನೆ’ ಅಂದ್ರು ಸಾಮ್ರಾಟ್.

‘ಅದು ಹೇಗೆ?’

‘ಮದುವೆ ಮುಂಚೆ ದುಃಖ ಜಾಸ್ತಿಯಾದಾಗ ಕುಡೀತಾರೆ. ಮದುವೆಯಾದ ಮೇಲೆ ಸಂತೋಷ ಜಾಸ್ತಿಯಾದಾಗ ಮಾತ್ರ ಕುಡೀತಾರೆ.’

……………………….

ಒಬ್ಬ: ನಾನು ತೆಂಗಿನ ಮರ ಹತ್ತಿ ನೋಡಿದರೆ ಇಂಜಿನಿಯರಿಂಗ್ ಕಾಲೇಜು ಹುಡುಗೀರು ಕಾಣ್ತಾರೆ ಗೊತ್ತಾ?

ಇನ್ನೊಬ್ಬ: ಅಲ್ಲಿಂದ ಕೈಬಿಟ್ಟು ನೋಡು ಮೆಡಿಕಲ್ ಕಾಲೇಜು ಹುಡುಗೀರು ಕಾಣಿಸ್ತಾರೆ!

……………………….

ಬಾಸು: ಆಫೀಸೀಗೆ ಯಾಕೆ ಲೇಟು?

ಕ್ಲರ್ಕ್: ಅಡುಗೆ ಮಾಡಿ ಬರ್ಬೇಕಿತ್ತು ಸಾರ್.

ಬಾಸು: ನಾನು ಅಡುಗೆ ಮಾಡಿ ಪಾತ್ರೆ ತೊಳೆದಿಟ್ಟು ಬರೋದಿಲ್ವಾ?

……………………….

ಸಾಮ್ರಾಟರು ಹೊಸ ಕೆಲಸಕ್ಕೆ ಅರ್ಜಿ ಹಾಕಿದ್ದರು.

ಸಂದರ್ಶಕ: ಹಳೆಯ ಕೆಲಸವನ್ನೇಕೆ ಬಿಟ್ಟೆ?

ಸಾಮ್ರಾಟ್: ನಾನಿದ್ದ ಆಫೀಸ್ ಸ್ಥಳಾಂತರಿಸಿದ್ದರು, ಆದರ ಹೊಸ ಅಡ್ರೆಸ್ ನಂಗೆ ತಿಳಿಸಲೇ ಇಲ್ಲ.

…………………………………………………………..

ಶ್ರೀಯುತ ನಗೆ ಸಾಮ್ರಾಟರು ಚಿಕ್ಕವರಾಗಿದ್ದಾಗ ಅವರ ಇಂಗ್ಲೀಷ್ ಜ್ಞಾನ ಅದ್ಭುತವಾಗಿತ್ತು.
ಒಮ್ಮೆ ಅವರ ತರಗತಿಯ ಉಪಾಧ್ಯಾಯರು ಸಾಮ್ರಾಟರ ಅತ್ಯುತ್ತಮ ಗೆಳೆಯನ ಹೆಸರನ್ನು ಇಂಗ್ಲೀಷಿನಲ್ಲಿ ಬರೆಯಲು ಹೇಳಿದರು. ಸಾಮ್ರಾಟರು ಮುದ್ದಾಗಿ ‘Beautiful red underwear’ ಎಂಬುದಾಗಿ ಬರೆದರು.
ಅದನ್ನು ನೋಡಿ ಅವಾಕ್ಕಾದ ಶಿಕ್ಷಕರು ಏನಿದು ಅಂತ ಸಾಮ್ರಾಟರನ್ನು ಕೇಳಿದರು.
ಸಾಮ್ರಾಟ್, ‘ಮೇಡಂ, ನನ್ನ ದೋಸ್ತ್ ನ ಹೆಸರು ಕನ್ನಡದಲ್ಲಿ ಸುಂದರ್ ಲಾಲ್ ಚಡ್ಡಿ ಎಂದರು.

………………………….

ನಗೆ ಸಾಮ್ರಾಟರ ಇಂಗ್ಲೀಷ್ ಜ್ಞಾನದ ಬಗ್ಗೆ ಜಗತ್ತಿಗೇ ತಿಳಿದಿತ್ತು. ಒಮ್ಮೆ ಅವರು ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರನ್ನು ನೋಡಿಕೊಳ್ಳುತ್ತಿದ್ದ ನರ್ಸ್‌ಳ ಸೌಂದರ್ಯಕ್ಕೆ ಬೆರಗಾಗಿ ಸಾಮ್ರಾಟರು ಆಕೆಯನ್ನು ಪ್ರೀತಿಸಲಾರಂಭಿಸಿದರು.
ಸರಿ, ಪ್ರೀತಿಯೆಂದ ಮೇಲೆ ಪ್ರೇಮ ಪತ್ರ ಬರೆಯ ಬೇಕಲ್ಲವಾ? ಇವರು ತಮ್ಮ ಇಂಗ್ಲೀಷ್ ಜ್ಞಾನವನ್ನು ಬಳಸಿ ‘I love you sister’ ಎಂದು ಒಂದು ಪತ್ರ ಬರೆದು ಕೊಟ್ಟೇ ಬಿಟ್ಟರು!

………………………….

ಮಿಸೆಸ್ ನಗೆ ಸಾಮ್ರಾಟ್: ಇವತ್ತು ನಮ್ಮ wedding anniversary ಅಲ್ವ,ಇವತ್ತು ಏನ್ ಮಾಡೋಣ
ನಗೆ ಸಾಮ್ರಾಟ್:-ಎರಡು ನಿಮಿಷ ಮೌನಾಚರಣೆ ಮಾಡೋಣ

………………………….

ಒಂದು ತಿಂಗಳ ವಿದೇಶಿ ಪ್ರವಾಸವನ್ನು ಮುಗಿಸಿದ್ದರು ನಗೆ ಸಾಮ್ರಾಟರು.
ನಗೆ ಸಾಮ್ರಾಟ್:ನಾನು ವಿದೇಶಿಯವನ ಹಾಗೆ ಕಾಣ್ತೀನ?
ಮಿಸೆಸ್ ಸಾಮ್ರಾಟ್: ಇಲ್ಲವಲ್ಲ
ನಗೆ ಸಾಮ್ರಾಟ್:ಏನ್ ಇಲ್ಲ ಮೊನ್ನೆ ಇಂಗ್ಲೆಂಡಿನಲ್ಲಿ ಒಬ್ಬಳು ಹೆಂಗಸು ತಾವು ವಿದೇಶಿಯರೇ ಎಂದು ಕೇಳಿದ್ಲು,ನಾನ್ ಹಾಗೆ ಕಾಣ್ತೀನೇನೋ ಅಂದುಕೊಂಡೆ

…………………………..

ಸಂದರ್ಶಕ :- ರಾಮ, ಕೃಷ್ಣ, ಗಾಂಧಿ, ಏಸು ಈ ನಾಲ್ಕು ಜನಕ್ಕೆ ಇರೋ ಸಮಾನ ಅಂಶ ಯಾವುದು
ನಗೆ ಸಾಮ್ರಾಟ್ :- ಎಲ್ಲರೂ ಸರ್ಕಾರಿ ರಜದಿನಗಳಲ್ಲೇ ಹುಟ್ಟಿದ್ದು.

…………………………………………………………..

ಇಬ್ಬರು ಡಕಾಯಿತರು ಒಂದು ಬ್ಯಾಂಕನ್ನು ಲೂಟಿ ಮಾಡಿದರು. ಅದರಲ್ಲೊಬ್ಬ ಆತುರದಿಂದ ಇನ್ನೊಬ್ಬನಿಗೆ ದುಡ್ಡನ್ನು ಎಣಿಸೋಣವೇ ಎಂದ. ಅದಕ್ಕೆ ಮೊದಲನೆಯವನು ಆತುರ ಯಾಕೆ ಗೆಳೆಯ, ನಾಳೆ ಬೆಳಿಗ್ಗೆ ಪೇಪರ್‌ನಲ್ಲಿ ಪ್ರಿಂಟ್ ಮಾಡ್ತಾರೆ ಅಂದ.

………………………….

ರಷ್ಯಾದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಿಂತು “ಕ್ರುಶ್ಚೇವ್ ಅಯೋಗ್ಯ! ಕ್ರುಶ್ಚೇವ್ ಅಯೋಗ್ಯ!” ಎಂದು ಕೂಗಿದನು.ಕ್ರುಶ್ಚೇವ್ ಆಗಿನ ರಷ್ಯಾದ ಅಧ್ಯಕ್ಷನಾಗಿದ್ದ. ಪೊಲೀಸರು ಆತನನ್ನು ಹಿಡಿದೊಯ್ದರು.
ಕೋರ್ಟಿನಲ್ಲಿ ವಿಚಾರಣೆ ನಡೆಯಿತು. ನ್ಯಾಯಾಧೀಶರು ತೀರ್ಪನ್ನು ನೀಡಿದರು. ಆ ವ್ಯಕ್ತಿಗೆ ಹನ್ನೊಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಯ್ತು.  ತೀರ್ಪಲ್ಲಿ ಹೀಗೆ ಬರೆದಿತ್ತು: ಒಂದು ವರ್ಷ ಜೈಲುವಾಸ- ಅಧ್ಯಕ್ಷರನ್ನು ಬೈದದ್ದಕ್ಕಾಗಿ. ಉಳಿದ ಹತ್ತು ವರ್ಷದ ಶಿಕ್ಷೆ ರಾಜತಾಂತ್ರಿಕ ರಹಸ್ಯವನ್ನು ಬಯಲು ಮಾಡಿದ್ದಕ್ಕೆ!

………………………….

ಪರೀಕ್ಷೆಯೊಂದರ ಉತ್ತರ ಪತ್ರಿಕೆಯ ಕೊನೆಗೆ ಹೀಗೆ ಬರೆಯಲಾಗಿತ್ತು:
ನಾನು ಬರೆದಿರುವುದಿಲ್ಲವೂ ಕಾಲ್ಪನಿಕ
ಇತರರ್ಯಾರದರೂ ಅದೇ ಬರೆದಿದ್ದರೆ ಅದು ಕಾಕತಾಳೀಯ!

………………………….

ಒಂದು ದಿನ ಸಾಮ್ರಾಟರ ಮಗ ಮರಿ-ಸಾಮ್ರಾಟ್ ಮನೆಯಲ್ಲಿದ್ದ ಲೈಟುಗಳ ಮೇಲೆಲ್ಲಾ ಸಾಮ್ರಾಟ್‍ರವರ ಹೆಸರು ಬರೆಯುತಿದ್ದ. ತುಂಬಾ ಹೊತ್ತು ಯೋಚನೆ ಮಾಡಿದ ಸಾಮ್ರಾಟರು ಏನೆಂದು ಅರ್ಥವಾಗದೆ ಮಗನನ್ನು, ‘ಕರೆದು ಏನ್ ಪುಟ್ಟಾ? ಏನ್ ಮಾಡ್ತೀದೀಯ ಮರಿ..?’ ಎಂದರು.
ಮರಿ ಸಾಮ್ರಾಟರು, ‘ಅಪ್ಪಯ್ಯ ನಮ್ಮ ಮೇಷ್ಟ್ರು ಎಲ್ಲರೂ ಅವರ ತಂದೆಯ ಹೆಸರನ್ನು ಬೆಳಗಿಸಬೇಕೆಂದು ಹೇಳಿದ್ದಾರೆ, ಅದಕ್ಕೆ ಎಲ್ಲ ಲೈಟುಗಳ ಮೇಲೆ ನಿಮ್ಮ ಹೆಸರು ಬರೀತಿದೀನಿ.’ ಎಂದರು!

………………………….

ಒಂದಿನ ಸಾಮ್ರಾಟರು jurassic park ಸಿನಿಮಾ ನೋಡಲು ಹೋದರು. Dinosaur ನೋಡಿ ಭಯದಿಂದ ನಡುಗುತ್ತಿದ್ದ ಸಾಮ್ರಾಟರನ್ನು ಕಂಡಾತ “ಎನ್ರೀ ಸಾಮ್ರಾಟರೇ, ಯಾಕ್ರೀ ಹಾಗೆ ನಡುಗುತ್ತಾ ಇದ್ದೀರಾ ಇದು ಬರೇ ಸಿನಿಮಾ ಕಣ್ರೀ” ಎಂದ
ಸಾಮ್ರಾಟರು ಉತ್ತರಿಸುತ್ತ, “ಅಯೋ ಇದು ಸಿನಿಮಾ ಅಂತ ನನಗೊತ್ತು ನಿಮಗೆ ಗೊತ್ತು ಆದರೆ ಆ ಪ್ರಾಣಿಗಳಿಗೇನ್ ಗೊತ್ತು ಇದು ಸಿನಿಮಾ ಅಂತ?”

………………………………………………………..

ಹೆಂಡತಿ: ನಿಮಗೆ ನನ್ನ ಸೌಂದರ್ಯ ಇಷ್ಟವೋ? ನನ್ನ ಜಾಣತನ ಇಷ್ಟವೋ?
ಗಂಡ: ಹಾಸ್ಯ ಮಾಡುವ ನಿನ್ನ ಈ ಗುಣ ನನಗಿಷ್ಟ!

………………………….

ಶಿಕ್ಷಕರು: ಈ ಕ್ಲಾಸಿನಲ್ಲಿ ಯಾರು ಮೂರ್ಖರೋ ಅವರು ಎದ್ದು ನಿಲ್ಲಿರಿ.
ಶ್ಯಾಮು ಒಬ್ಬನೇ ನಿಲ್ಲುತ್ತಾನೆ.
ಶಿಕ್ಷಕರು: ಏನು? ಸ್ವತಃ ನೀನು ಮೂರ್ಖನೆಂದು ತಿಳಿದಿದ್ದಿ?
ಶ್ಯಾಮು: ಸಾರ್, ನೀವೊಬ್ಬರೇ ನಿಂತಿದ್ದನ್ನು ಕಂಡು, ನಿಮಗೆ ಜೊತೆ ಸಿಗಲಿ ಎಂದು ನಾನು ನಿಂತಿದ್ದೇನೆ!!

………………………….

ವೆಂಕ ಕುಡಿದು ಮನೆಗೆ ಬರುತ್ತಿದ್ದನು. ಜೋರಾಗಿ ಮಳೆ ಬಂತು. ಚರಂಡಿಯಲ್ಲಿ ಬಿದ್ದನು! ಕೆಲ ಹೊತ್ತಿನಲ್ಲಿ ಸಿಡಿಲಿನ ಬೆಳಕು ಕಂಡಿತು.
ದೇವರ ಕಡೆಗೆ ನಮಸ್ಕರಿಸುವವನಂತೆ, ಆಗಸದತ್ತ ಕೈಮುಗಿದು ವೆಂಕ ಅಂದನು- “ದೇವರೇ! ಮಳೆ ಬೀಳಿಸಿ, ನನ್ನನ್ನು ಜಾರಿಸಿದ್ದಿ! ಮೇಲಾಗಿ, ನನ್ನ ಫೋಟೋ ಏಕೆ ತೆಗೆಯುತ್ತಿ?”

………………………….

ಒಬ್ಬನು ಕಂಪೆನಿಯ ನೌಕರಿಗಾಗಿ ಸಂದರ್ಶನಕ್ಕೆ ಹೋಗಿದ್ದನು.
ಸಾಹೇಬರು: ಜಗತ್ತಿನ ಮೂರು ಪ್ರಸಿದ್ಧ ವ್ಯಕ್ತಿಗಳು ಯಾರು?
ಅಭ್ಯರ್ಥಿ: ಮಹಾತ್ಮ ಗಾಂಧಿ, ಜಾರ್ಜ್ ಬುಶ್ ಹಾಗೂ ನೀವು.
ಆತನ ಆಯ್ಕೆಯಾಯಿತು.

………………………….

ಬಂತಾ: ನೀರಿನಿಂದ ವಿದ್ಯುತ್ ಯಾಕೆ ತೆಗೀತಾರೆ ಹೇಳು?
ಸಂತಾ: ನೀರು ಕುಡಿಯುವಾಗ
ನಮಗೆ ಶಾಕ್ ಹೊಡೆಯಬಾರದು ಅಂತ.
…………………………………………………………..

26 Responses to “ಸ್ವಲ್ಪಾದ್ರೂ ಸೀರಿಯಸ್ ಆಗ್ರಿ! – 1”

  1. panditaradhya ಏಪ್ರಿಲ್ 6, 2008 at 3:56 ಫೂರ್ವಾಹ್ನ #

    ಪ್ರತಿಯೊಬ್ಬರಿಗೂ ತಾವು ಮೂರ್ಖರಾಗಿರುವ ಬಗ್ಗೆ ಅಬಿಮಾನಪಟ್ಟುಕೊಳ್ಳುವಂತೆ ಸಂಚಿಕೆ ಮೂಡಿಬಂದಿದೆ.
    ನಿಮಗೆ ಆತ್ಮೀಯ ಅಭಿನಂದನೆಗಳು!

  2. nagenagaaridotcom ಏಪ್ರಿಲ್ 6, 2008 at 7:23 ಅಪರಾಹ್ನ #

    ಆರಾಧ್ಯರೇ,
    ಧನ್ಯವಾದಗಳು. ಆಗಾಗ ಬರುತ್ತಿರಿ…

    ನಗೆ ಸಾಮ್ರಾಟ್

  3. panditaradhya ಜೂನ್ 8, 2008 at 12:52 ಅಪರಾಹ್ನ #

    ನಿಮ್ಮ ಈ ಅಂಕಣದ ಹೆಸರನ್ನು ಬದಲಾಯಿಸಬೇಕೆಂದು ತೋರುತ್ರದೆ. ಇಲ್ಲಿ ನನಗೆ ಒಬ್ಬನಿಗೇ ನಿಂತಿರಲು ಸಂಕೋಚವಾಗುತ್ತಿದೆ!

  4. Nage samrat ಜೂನ್ 9, 2008 at 8:06 ಫೂರ್ವಾಹ್ನ #

    ನಿಮ್ಮೊಡನೆ ನಾನೂ ಯಾವಾಗಲೂ ಇರುತ್ತೇನೆ ಬಿಡಿ…

    ನಗೆ ಸಾಮ್ರಾಟ್

  5. hema ಜುಲೈ 5, 2008 at 6:33 ಅಪರಾಹ್ನ #

    murkhara jokegalu matraa idhe idaralli thamma swantha anubhavadhu esto? 🙂

  6. Nage samrat ಜುಲೈ 5, 2008 at 6:39 ಅಪರಾಹ್ನ #

    ಮೂರ್ಖರ ಜೋಕುಗಳು ಎಂದು ಸರಿಯಾಗಿ ಗುರುತಿಸಿ ಅವೆಲ್ಲವೂ ನಮ್ಮ ಅನುಭವಗಳಲ್ಲ ಎಂದು ಹೇಳಿರುವುದು ನಮಗೆ ಮಾಡಿರುವ ಅಪಮಾನ ಎಂದು ತಿಳಿಯಲಾಗಿದೆ.

    ನಗೆ ಸಾಮ್ರಾಟ್

  7. hema ಜುಲೈ 5, 2008 at 6:41 ಅಪರಾಹ್ನ #

    hagadre nage samrataru murkhare che

  8. prasad ಆಗಷ್ಟ್ 23, 2008 at 3:09 ಅಪರಾಹ್ನ #

    samratare,

    “jokugale naguvina moolavayya”
    aaddarinda thaavu innondishtu, maththondishtu magadondishtu hanigalannu surisidare aagli maha “Prasada” vendenayya.

    Prasad

  9. nilgiri ಸೆಪ್ಟೆಂಬರ್ 6, 2008 at 12:08 ಅಪರಾಹ್ನ #

    hahaha sakath jokes 🙂

  10. Nage samrat ಸೆಪ್ಟೆಂಬರ್ 6, 2008 at 7:00 ಅಪರಾಹ್ನ #

    prasad and nilgiri,
    thank u for ur visit.. enjoy the sweetness of laughter

    nage samrat

  11. yellappa setty ಮೇ 17, 2009 at 4:25 ಅಪರಾಹ್ನ #

    ella halasalu jokes

    • Nage samrat ಮೇ 29, 2009 at 7:58 ಅಪರಾಹ್ನ #

      ಧನ್ಯವಾದ.
      ಜೋಕು ಹಳಸಲೇ ಅಥವಾ ನಗು ಹಳಸಲೇ ಎಂಬುದು ತೀವ್ರ ಜಿಜ್ಞಾಸೆಗೆ ಈಡು ಮಾಡುವ ಪ್ರಶ್ನೆ. ಇಂಥವು ನಮಗಿಷ್ಟವಿಲ್ಲವಾದ್ದರಿಂದ ನೀವು ಬಚಾವ್ ಆದಿರಿ 🙂

      – ನಗೆ ಸಾಮ್ರಾಟ್

  12. RAVINDRA H R ಜೂನ್ 3, 2009 at 9:35 ಅಪರಾಹ್ನ #

    wonderfull

    • Nage samrat ಜೂನ್ 4, 2009 at 3:55 ಅಪರಾಹ್ನ #

      🙂

  13. Madhu ಆಗಷ್ಟ್ 4, 2009 at 4:24 ಅಪರಾಹ್ನ #

    Few are very serious jokes…

    • Nage samrat ಆಗಷ್ಟ್ 5, 2009 at 11:40 ಫೂರ್ವಾಹ್ನ #

      ನಮ್ಮ ಚೇಲನನ್ನು ಅಟ್ಟಿ ಈ ಕೂಡಲೇ ಆ ಕೆಲವೇ ಕೇವಲು ಗಂಭೀರ ಜೋಕುಗಳನ್ನು ನಗೆ ಸಾಮ್ರಾಜ್ಯದಿಂದ ಹೊರಗಟ್ಟುತ್ತೇವೆ.

      – ನಗೆ ಸಾಮ್ರಾಟ್

      • RAGHAVENDRA ಡಿಸೆಂಬರ್ 24, 2010 at 6:08 ಅಪರಾಹ್ನ #

        ಜೋಕುಗಳು ತುಂಬ ಚೆನ್ನಾಗಿವೆ………..

        ನಿವು ನಿಜವಾಗಿಯು ನಗೆ ಸಾಮ್ರಾಟ್

  14. balakrishna ಅಕ್ಟೋಬರ್ 11, 2009 at 10:34 ಅಪರಾಹ್ನ #

    ಗಂಭೀರ ಜೋಕುಗಳ ಹಳೆಯ ಕಂತೆ ಕೆಲವೇ ಜೋಕು ಹಳಸಲೇ ಅಥವಾ ನಗು ಹಳಸಲೇ ಎಂಬುದು ತೀವ್ರ ಜಿಜ್ಞಾಸೆಗೆ ಈಡು ಮಾಡುವ ಪ್ರಶ್ನೆ. hahaha ಜೋಕುಗಳು ಹೇಗೆ?’

    • RAGHAVENDRA ಡಿಸೆಂಬರ್ 24, 2010 at 6:06 ಅಪರಾಹ್ನ #

      WONDERFUL

  15. B P Bharathi Naidu ಜನವರಿ 18, 2017 at 6:12 ಅಪರಾಹ್ನ #

    sir yama loka dalli Yama Dharma Raja iruthane Dharma Raja irolla plz correct this……..

Trackbacks/Pingbacks

  1. ಛೇ… ಸ್ವಲ್ಪಾದ್ರೂ ಸೀರಿಯಸ್ ನೆಸ್ ಬ್ಯಾಡ್ವಾ? « ನಗೆ ನಗಾರಿ ಡಾಟ್ ಕಾಮ್ - ಜುಲೈ 4, 2008

    […] ಸ್ವಲ್ಪಾದ್ರೂ ಸೀರಿಯಸ್ ಆಗ್ರಿ! ← ವಿಶೇಷ ಸಂದರ್ಶನ: ಸುದ್ದಿ ಮಾಧ್ಯಮ ಪ್ರತಿನಿಧಿಯೊಂದಿಗೆ […]

  2. ಛೇ! ಇಷ್ಟೋಂದು ಸಿಲ್ಲಿಯಾದ್ರೆ ಹೇಗೆ? « ನಗೆ ನಗಾರಿ ಡಾಟ್ ಕಾಮ್ - ಆಗಷ್ಟ್ 22, 2008

    […] ಸ್ವಲ್ಪಾದ್ರೂ ಸೀರಿಯಸ್ ಆಗ್ರಿ! ← ನಗು ಸಹಜವೋ, ಗಾಂಭೀರ್ಯ ಸಹಜವೋ? […]

  3. ನಗಲೇಬೇಕಂತೇನಿಲ್ಲ! « ನಗೆ ನಗಾರಿ ಡಾಟ್ ಕಾಮ್ - ಸೆಪ್ಟೆಂಬರ್ 6, 2008

    […] ಸ್ವಲ್ಪಾದ್ರೂ ಸೀರಿಯಸ್ ಆಗ್ರಿ! ← ನಗಾರಿ ರೆಕಮಂಡೇಶನ್ 13 […]

  4. ತಮಾಶೆ ಜಾಸ್ತಿಯಾಯ್ತು! « ನಗೆ ನಗಾರಿ ಡಾಟ್ ಕಾಮ್ - ನವೆಂಬರ್ 10, 2008

    […] ಸ್ವಲ್ಪಾದ್ರೂ ಸೀರಿಯಸ್ ಆಗ್ರಿ! ← ಉತ್ತಮ ಕವಿಯಾಗಲು ಪಂಚ ಸೂತ್ರಗಳು! […]

  5. ಇನ್ನಾದ್ರೂ ಸ್ವಲ್ಪ ಸೀರಿಯಸ್ ಆಗ್ರೀ… « ನಗೆ ನಗಾರಿ ಡಾಟ್ ಕಾಮ್ - ಜೂನ್ 17, 2009

    […] ಸ್ವಲ್ಪಾದ್ರೂ ಸೀರಿಯಸ್ ಆಗ್ರಿ! […]

  6. ನಗೆಜ್ವರ! « ನಗೆ ನಗಾರಿ ಡಾಟ್ ಕಾಮ್ - ಆಗಷ್ಟ್ 20, 2009

    […] ಸ್ವಲ್ಪಾದ್ರೂ ಸೀರಿಯಸ್ ಆಗ್ರಿ! « ಹಳೆಯ ಕಂತೆ: ಲಾರ್ಡ್ ವಿನಾಯಕನ ಸಂದರ್ಶನ […]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: