ಇತರೆ ಮಾಧ್ಯಮಗಳಲ್ಲಿ ನಗೆ ನಗಾರಿ ಏನು ಸದ್ದು ಮಾಡುತ್ತಿದೆ? ನಮ್ಮ ಬೆನ್ನು ತಟ್ಟಿದವರು, ಕಾಲೆಳೆದವರಿಗೆ ನಗಾರಿಯಿಂದ ನಗೆಯ ವಂದನೆ!
………………………………………………………………………………………………..
ಅವಧಿಯಲ್ಲಿ ನಾವು!
ಅವಧಿಯಲ್ಲಿ ನಗೆ ನಗಾರಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಬರಹ…
ಬ್ಲಾಗ್ ಲೋಕದಲ್ಲಿ ನಗೆ ಹಂಚುತ್ತಲೇ ಸಮಾಜವನ್ನು ಬೆಳಕಿಗೆ ಒಡ್ಡುತ್ತಿರುವ ‘ನಗೆ ನಗಾರಿ ಡಾಟ್ ಕಾಂ’ ಗೆ ಈಗ ಒಂದು ವರ್ಷದ ಸಂಭ್ರಮ.
ಕನ್ನಡದಲ್ಲಿ ಪ್ರಜಾವಾಣಿಯಲ್ಲಿ ‘ಛೂ ಬಾಣ’ ಬರೆದ ಟಿಎಸ್ ಆರ್ ಸಹಾ ಹೀಗೆ ವ್ಯಂಗ್ಯ ಬಾಣಗಳ ಮೂಲಕವೇ ಸಮಾಜವನ್ನು ಸರಿದಾರಿಗೆ ತರಲು ಯತ್ನಿಸಿದ್ದರು. ‘ಎಡಗಾಲು ಮುಂದಿಟ್ಟು ಬನ್ನಿ’ ಎಂದು ತನ್ನ ಬ್ಲಾಗ್ ಗೆ ಬರುವವರಿಗೆ ಆಹ್ವಾನ ನೀಡುವ ನಗೆ ನಗಾರಿ ಹಾಸ್ಯದ ಬಾಣದ ಮೂಲಕವೇ ಸಮಾಜವನ್ನು ಚುಚ್ಚಿ ಎಬ್ಬಿಸಲು ನೋಡುತ್ತಿದೆ.
ಟಿ ಪಿ ಕೈಲಾಸಂ ಹೇಳಿದ್ದರಲ್ಲ-
ಕಿರುಆಳದ ನಗೆ ನೀರಿನ ಮೇಲೆ
ತಿರುಗುತ ಬಹುವೇಳೆ
ಕಣ್ಣೀರಿನ ಕಡಲಿನ ಪಾಲು
ಹಾಸ್ಯದ ಹರಿಗೋಲು
ಅಂತ ಅಂತಹ ಹಾಸ್ಯದ ಹರಿಗೋಲನ್ನು ಹಿಡಿದು ನಗೆ ನಗಾರಿ ಬಳಗ ಹೊರಟಿದೆ. ಬೆಸ್ಟ್ ಆಫ್ ಲಕ್..
ನಗೆ ನಗಾರಿ ಮೊದಲ ವರ್ಷದ ಆಚರಣೆಗಾಗಿ ಅವರೇ ಬರೆದ ಒಂದು ಬರಹ ಇಲ್ಲಿದೆ. ಸ್ಯಾಂಪಲ್ ರುಚಿಗಾಗಿ-
ವೇದಿಕೆಯ ಮೇಲಿದ್ದ ಗಣ್ಯರಲ್ಲೇ ಅತಿ ಗಣ್ಯರಾದ ನಾವು ಮೊದಲು ಮಾತಾಡಿ ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ಇಂದು ಸರಕಾರಗಳು ನೂರು ದಿನ ಪೂರೈಸಿದ್ದಕ್ಕೇ ರಾಜ್ಯ ಮಟ್ಟದ ಪತ್ರಿಕೆಗಳಿಂದ ಹಿಡಿದು ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರ ನಡುವೆ ಖಾಸಗಿಯಾಗಿ ಪ್ರಸಾರ ಹೊಂದಿರುವ ‘ಜಾಗತಿಕ’ ಪತ್ರಿಕೆಗಳವರೆಗೆ ಪ್ರತಿಯೊಂದರಲ್ಲೂ ಪುಟಗಟ್ಟಲೆ ಜಾಹೀರಾತು ನೀಡಿ ಬೆನ್ನು ತಟ್ಟಿಸಿಕೊಳ್ಳುತ್ತವೆ. ತಮ್ಮ ಸರಕಾರದ ಸಾಧನೆಗಳ ವಿಷಯವನ್ನು ಜನರ ಮುಂದಿಡುವಾಗ ನೂರು ದಿನ ಪೂರೈಸಿದ್ದೂ ಬಹುದೊಡ್ಡ ಸಾಧನೆ ಎಂದು ಹೇಳಲು ಮರೆಯುವುದಿಲ್ಲ. ನೂರು ದಿನ ಪೂರೈಸುವುದು ಸಾಮಾನ್ಯ ಸಂಗತಿಯೇ? ಯಾಮಾರಿದ್ರೆ ಕುರ್ಚಿ ಎಳೆಯಲು ಕಾದಿರುವ ಪ್ರತಿಪಕ್ಷಗಳು, ಕೈ ಕಾಲು ಮುಂತಾದವನ್ನು ಬಿಸಿ ಮಾಡುವಲ್ಲಿ ಕೊಂಚ ಆಲಸ್ಯವನ್ನು ತೋರಿದರೆ ಬೆಣ್ಣೆಯಂತೆ ಕರಗಿ ಬೇರೆಯವರ ತಟ್ಟೆಗೆ ಬೀಳುವ ಸ್ವಂತ ಪಕ್ಷ ಬಾಂಧವರು- ಇವರನ್ನೆಲ್ಲಾ ಸಂಭಾಳಿಸುತ್ತಾ ನೂರು ದಿನ ಪೂರೈಸುವುದು ಹನ್ನೊಂದು ಮಂದಿ ಎದುರಾಳಿಗಳು ಹಾಗೂ ಇಬ್ಬರು ಅಂಪೈರುಗಳು ಜೊತೆಗೆ ಒಬ್ಬ ತನ್ನದೇ ತಂಡದ ದಾಂಡಿಗನ ವಿರುದ್ಧ ಹೋರಾಡಿ ಸೆಂಚುರಿ ಹೊಡೆಯುವ ಕ್ರಿಕೆಟ್ ಆಟಗಾರನ ಸಾಧನೆಯಷ್ಟೇ ಪ್ರಯಾಸದಾಯಕವಾದದ್ದು. ಐದು ದಿನ ಹತ್ತು ದಿನ, ಹದಿನೈದು ದಿನ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರನ್ನು ಹಿಂಸಿಸುವಲ್ಲಿ ಯಶಸ್ವಿಯಾದ ಸಿನೆಮಾಗಳು ಸಹ ಪತ್ರಿಕೆಗಳಲ್ಲಿ, ಜನರ ಮೂತ್ರವನ್ನು ಸವಿಯುವ ಗೋಡೆಗಳ ಮೇಲೆ ದೊಡ್ಡ ದೊಡ್ಡ ಜಾಹೀರಾತು, ಪೋಸ್ಟರ್‍ಗಳ ರೂಪದಲ್ಲಿ ತಮ್ಮ ಸಾಧನೆಯನ್ನು ಡಂಗೂರ ಬಾರಿಸಿ ಸಾರುತ್ತವೆ. ಹೀಗಿರುವಾಗ ಒಂದು ವರ್ಷ ಪೂರೈಸಿದ ನಮ್ಮ ಸಾಧನೆ ಯಾರಿಗೂ ಕಡಿಮೆಯಾದುದಲ್ಲ.
ಈ ಒಂದು ವರ್ಷದಲ್ಲಿ ನಾವು ಗಳಿಸಿದ ‘ಒದೆತಗಳು’, ನಾವು ಸಂಪಾದಿಸಿದ ಅಭಿಮಾನಿಗಳು, ಭಕ್ತರು, ಭಕ್ತೆಯರನ್ನು ಒಂದು ಕ್ಷಣ ನೆನೆಸಿಕೊಂಡೆವು. ಆದರೆ ಈ ಒಂದು ವರ್ಷದಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಶತ್ರುಗಳನ್ನು ಸಂಪಾದಿಸಲು ಸಾಧ್ಯವಾಗಲಿಲ್ಲ. ಆ ಮೂಲಕ ಲೇಖನಿ ಖಡ್ಗಕ್ಕಿಂತ ಹರಿತ ಎಂಬ ಮಾತನ್ನು ಪರೀಕ್ಷಿಸಿ ನೋಡಲು ತಕ್ಕುದಾದ ಅವಕಾಶದಿಂದ ವಂಚಿತರಾಗಬೇಕಾಯಿತು. ಆತ್ಮಾವಲೋಕನ ಹಾಗೂ ಸತ್ಯಾನ್ವೇಣೆಗಳೇ ನಮ್ಮ ಜನ್ಮ ಸಿದ್ಧ ಗುಣಗಳಾಗಿರುವುದರಿಂದ ನಾವು ಮಾಡಿದ ಸಾಧನೆಯ ಜೊತೆಗೆ ನಾವು ಎಡವಿದ್ದೆಲ್ಲಿ ಎಂಬುದೂ ನಮಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ನಮ್ಮ ಭಕ್ತ ವೃಂದ, ಭಜನಾ ಮಂಡಳಿಯ ಜೊತೆಗೆ ನಾವು ಹೆಚ್ಚಿನ ಗಮನವನ್ನು ನಮ್ಮ ಶತ್ರುಪಡೆಯನ್ನು ಸೃಷ್ಟಿಸಿಕೊಳ್ಳುವುದರಲ್ಲೂ ವಿನಿಯೋಗಿಸಲಿದ್ದೇವೆ. ಇಷ್ಟು ದಿನ ನಾಟಕ ರಂಗದಲ್ಲಿ ಜನರನ್ನು ರಂಜಿಸಲೆಂದು ನಾವು ನುಡಿಸುತ್ತಿದ್ದ ನಗಾರಿ ಇನ್ನು ಮುಂದೆ ಯುದ್ಧ ಭೂಮಿಯಲ್ಲಿ ಬಾರಿಸುವ ನಗಾರಿಯೂ ಆಗಲಿದೆ. ಸಾಮ್ರಾಟರು ಪೆನ್ನನ್ನು ಹಿಡಿದು ಯುದ್ಧ ಭೂಮಿಗೆ ಧುಮಕಲಿದ್ದಾರೆ, ಗೆದ್ದರೆ ಜಯ, ಸತ್ತರೆ ವೀರ ಸ್ವರ್ಗ!
ನಗೆ ನಗಾರಿಯಲ್ಲಿನ ಲೇಖನಗಳನ, ಹರಟೆಗಳ, ಸಂದರ್ಶನಗಳ ಗುಣ ಮಟ್ಟ ಹೇಗಿತ್ತು, ಓದುಗರು ಇವುಗಳನ್ನು ಹೇಗೆ ಗ್ರಹಿಸಿದರು, ಅವರು ಗುರುತಿಸಿದ ದೋಷಗಳು ಯಾವುವು, ಅವರ ಸಲಹೆಗಳೇನು, ಮುಂದೆ ಇದು ಹೇಗೆ ನಡೆಯಬೇಕು ಎಂದು ನಿರೀಕ್ಷಿಸುತ್ತಿರುವಿರಿ ಎಂದೆಲ್ಲಾ ನಾವು ಓದುಗರನ್ನು ಕೇಳಬೇಕೆಂದುಕೊಂಡಿದ್ದೆವು. ಆದರೆ ಈ ಮೊದಲೇ ತಮ್ಮ ಧಾರಾವಾಹಿಗಳಿಗೆ ಸಂವಾದಗಳನ್ನು ಏರ್ಪಡಿಸಿ ಟಿ.ಆರ್.ಪಿ ಗಗನಕ್ಕೇರಿಸಿಕೊಂಡ ಸೀತಾರಾಂರ ಪದ್ಧತಿಯನ್ನು ಕಾಪಿ ಮಾಡಿದಂತಾಗುತ್ತದೆಂದು ತಿಳಿದು ಅವರ ಹಾಗೆಯೇ ‘ಇಂದಿನ ಪುಟ್ಟಣ್ಣ ಕಣಗಾಲ್’ ಪಟ್ಟದ ಆಕಾಂಕ್ಷಿಯಾಗಿರುವ ನಾವು ಅದನ್ನು ಕೈಬಿಟ್ಟೆವು. ಆದರೆ ಆ ಸಂವಾದವನ್ನು ಇಲ್ಲಿ ನಮ್ಮ ಬ್ಲಾಗಿನಲ್ಲಿ ಮುಂದುವರೆಸಲಡ್ಡಿಯಿಲ್ಲ. ಒಂದು ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ನಮ್ಮ ಬ್ಲಾಗನ್ನು ಪೂಜಿಸಿದ ಆರಾಧಿಸಿದ, ಪ್ರತಿದಿನ ನಮ್ಮ ನಾಮಸ್ಮರಣೆಯನ್ನು ಮಾಡುತ್ತಾ, ಇಲ್ಲಿನ ಪುರಾಣ ಪಠಣ-ಶ್ರವಣವನ್ನು ಮಾಡುತ್ತಾ ಲೋಡುಗಟ್ಟಲೆ ಪುಣ್ಯ ಸಂಪಾದಿಸಿದ ಓದುಗರೇ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಸಲಹೆಗಳನ್ನು, ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಖುದ್ದು ಸಾಮ್ರಾಟರಿಗೆ ತಿಳಿಸಬಹುದು. ನಿಮ್ಮ ಯಾವುದೇ ಪ್ರತಿಕ್ರಿಯೆಯನ್ನು ಸೆನ್ಸಾರ್ ಮಾಡುವುದಿಲ್ಲ ಎಂಬ ಭರವಸೆಯನ್ನು ನಾವು ನೀಡುತ್ತಿದ್ದೇವೆ.
ಅಂದ ಹಾಗೆ ವಾರ್ಷಿಕೋತ್ಸವಕ್ಕೆಂದು ನಾವು ವಿಶೇಷ ಸಂಚಿಕೆಯೊಂದನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದೆವು. ಕನ್ನಡ ನಾಡಿನ ಹೆಸರಾಂತ ಬರಹಗಾರರಿಂದ ಲೇಖನಗಳನ್ನು, ಬರಹಗಳನ್ನು ಆಹ್ವಾನಿಸಿದ್ದೆವು. ಅವುಗಳು ಒಂದೊಂದಾಗಿ ನಗೆ ನಗಾರಿಯಲ್ಲಿ ಪ್ರಕಟವಾಗಲಿವೆ. ಪ್ರಕಟಿಸುವ ಖುಶಿ ನಮ್ಮದಾದರೆ ಓದುವ ಕರ್ಮ ನಿಮ್ಮದು!
ಏನೇ ಅನ್ನಿ, ನಿಮ್ಮ ಅನುಪಸ್ಥಿತಿಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು!
…………………………………..
ಕೆಂಡಸಂಪಿಗೆಯ ಕಂಪಿನ ಜೊತೆಗೆ ನಗಾರಿ ಸದ್ದು!
ನಮ್ಮೆಲ್ಲರ ನೆಚ್ಚಿನ ಕೆಂಡಸಂಪಿಗೆ ತನ್ನ ತಾಣದಲ್ಲಿ ಪ್ರತಿದಿನ ಒಂದೊಂದು ಕನ್ನಡ ಬ್ಲಾಗನ್ನು ಪರಿಸಯಿಸುವ ಪರಿಪಾಟವನ್ನು ಇಟ್ಟುಕೊಂಡಿದೆ. ಈ ದಿನದ(೩೦-೪-೨೦೦೮) ಬ್ಲಾಗ್ ಆಗಿ ಆಯ್ಕೆಯಾಗಿರುವುದು ನಮ್ಮ ‘ನಗೆ ನಗಾರಿ ಡಾಟ್ ಕಾಮ್’.
ನಗೆ ನಗಾರಿ ಡಾಟ್ ಕಾಮ್ದಿನದ ಬ್ಲಾಗಿನಂಗಳ ಹೊಕ್ಕು ನಗೆಯ ನಗಾರಿ ಬಾರಿಸುತ್ತಿರುವ ಬ್ಲಾಗಿನ ಹೆಸರೇ ನಗೆ ನಗಾರಿ ಡಾಟ್ ಕಾಮ್.
ಕೇವಲ ನಗೆಗಷ್ಟೆ ಮೀಸಲಾಗಿರುವ ಈ ನಗೆಯಂಗಳದಲ್ಲಿ ಒಂದಿಷ್ಟು ಹರಟೆ, ಕುಚೋದ್ಯ, ಲೈಟಾಗಿ ಕಾಲೆಳೆಯುವ ಬರಹಗಳು ಹೀಗೆ ತರಾವರಿ ನಗೆ ಬುಗ್ಗೆಗಳುಂಟು. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ ಅನ್ನುವ ಸಂಪಾದಕರು ಇಲ್ಲಿ ಒಂದಿಷ್ಟು ನಗೆ ಬಾಂಬು ಸಿಡಿಸುವುದನ್ನು ಮರೆತಿಲ್ಲ. ತಮ್ಮ ಪತ್ತೆದಾರಿ ಚೇಲನನ್ನು ಕಟ್ಟಿಕೊಂಡು ಗಸ್ತು ತಿರುಗುವ ನಗೆ ಸಾಮ್ರಾಟರು ಸೆರೆ ಸಿಕ್ಕ ಸಂಗತಿಗಳನ್ನೆಲ್ಲ ನಗಾರಿಯಲ್ಲಿ ಕೆಡವುತ್ತಾ ನಗೆ ಚಟಾಕಿ ಹಾರಿಸಿದ್ದಾರೆ. ನಗೆ ನಗಾರಿ ಬ್ಯೂರೋ ಇತ್ತೀಚೆಗೆ ಕನ್ನಡದ ಸುದ್ದಿ ಚಾನೆಲ್ಲೊಂದರ ಕುರಿತು ಕುಟುಕು ಕಾರ್ಯಾಚರಣೆ ನಡೆಸಿದೆ.
ಸಿನಿಮಾ, ಕ್ರೀಡೆ, ರಾಜಕೀಯ, ಚರ್ಚೆಯ ಕಡೆಗೆಲ್ಲ ಅವರ ದೃಷ್ಟಿ ಹರಿದಿದೆ. ಅವರ ಸೀರಿಯಸ್ಲೀ ಸೀರಿಯಸ್ಸು, ಅವರಿವರ ಬಯಾಗ್ರಫಿ ಇತ್ಯಾದಿ ಕಾಲಮ್ಮುಗಳನ್ನು ಓದಿಯೇ ಅನುಭವಿಸಬೇಕು. ನಗೆಚಿತ್ರಗಳನ್ನು ನೋಡಿಯೇ ತೀರಬೇಕು. ಒಮ್ಮೆ ಹೊಟ್ಟೆ ಹುಣ್ಣಾಗುವಂತೆ ನಗಬೇಕು ಅಂತಂದುಕೊಂಡವರು ಈ ಬ್ಲಾಗಿಗೊಮ್ಮೆ ಭೇಟಿ ಕೊಡಬಹುದು.
ನಗೆ ಸಾಮ್ರಾಟ್
…………………………………..
ಕನ್ನಡದ ಹೆಸರಾಂತ ದೈನಿಕ ‘ಕನ್ನಡ ಪ್ರಭ’ದ ಸಾಪ್ತಾಹಿಕ ಪುರವಣಿಯ ಸಂಪಾದಕರು ‘ಜೋಗಿ’. ಕನ್ನಡ ಬ್ಲಾಗ್ ಜಗತ್ತಿನೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿರುವ ಇವರು ಸಾಪ್ತಾಹಿಕ ಪುರವಣಿಯಲ್ಲಿ ವಾರಕ್ಕೊಂದು ಬ್ಲಾಗ್ ಬರಹವನ್ನು ಆಯ್ದು “ಬ್ಲಾಗ್ ಬುಟ್ಟಿ” ಅಂಕಣದಲ್ಲಿ ಪ್ರಕಟಿಸುತ್ತಾರೆ.
ಫೆ. 3,2008 ರ ಭಾನುವಾರದಂದು ಬ್ಲಾಗ್ ಬುಟ್ಟಿಯಲ್ಲಿ ಅನುರಣಿಸಿದ್ದು ‘ನಗೆ ನಗಾರಿ’. ನಗಾರಿಯಲ್ಲಿ ಪ್ರಕಟವಾದ ‘ಅವರಿವರ ಭಯಾಗ್ರಫಿ’ ಯ ಲೇಖನಗಳನ್ನು ಪ್ರಕಟಿಸಿದ್ದರು. ಅದರ ಲಿಂಕು ಇಲ್ಲಿದೆ.
ಥ್ಯಾಂಕ್ಸ್ ಟು ‘ಕನ್ನಡ ಪ್ರಭ’
ನಗೆ ಸಾಮ್ರಾಟ್
…………………………………..
Dear Nage Samrat,
I did my best to think of something to write but couldn’t come up with anything. Since you are planning to launch your blog, I don’t want you to wait till the last moment.
If I can come up with anything that’s worth publishing, I will definitely send it over to you.
I really thank you for your very kind invitation.
I wish you all the best and look forward to read your blog.
Regards,
Seshadri
…………………………………..
ಮಾನ್ಯರೆ,
ಏನೋ ಒಂದಿಷ್ಟು ನಾವು ಗೀಚಿ ಹಾಕುವ ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ನಾವು ಅನಾಮಿಕನಾಗಿಯೇ ಕಾರ್ಯನಿರ್ವಹಿಸುತ್ತಿರುವುದು ನಮ್ಮದೇ ಬ್ಲಾಗಿಗೆ ಸೀಮಿತ. ಓದುಗರಿಗೆ ನಾವು ಯಾರೆಂಬುದು ಅಗತ್ಯವೂ ಇರುವುದಿಲ್ಲ. ಲೇಖನ ಓದುತ್ತಾರೆ, ಮೆಚ್ಚುಗೆ ಸೂಸುತ್ತಾರೆ. ಮತ್ತೆ ಕೆಲವರು ದೂರುತ್ತಾರೆ. ಈ ಬ್ಲಾಗು ಅನಿಯತಕಾಲಿಕವೂ ಹೌದು ಎಂಬುದು ನಿಮಗೆ ತಿಳಿದೇ ಇದೆ. ಸಮಯಾಭಾವದ ನಡುವೆ ಸಮಯ ಸಿಕ್ಕಾಗ ತೋಚಿದ್ದನ್ನು ಗೀಚುವುದು. ಹಾಗಾಗಿ ಯಾವುದೇ ಕಮಿಟ್ಮೆಂಟ್ ಮಾಡೋದು ಕಷ್ಟವೇ ಅನಿಸುತ್ತದೆ.
ಆದರೂ ನಿಮ್ಮ ಪ್ರಯತ್ನ ಶ್ಲಾಘನೀಯ. ನೀವು ಆರಂಭಿಸುತ್ತಾ ಇರೋದು ಬ್ಲಾಗೋ ಅಥವಾ ಪ್ರತ್ಯೇಕ ಸೈಟೋ ಎಂಬ ಕುತೂಹಲ ನಮ್ಮದು.
ಧನ್ಯವಾದಗಳು.
ಅಸತ್ಯಾನ್ವೇಷಿ
…………………………………..
ನಿಮ್ಮ ಪತ್ರ ನೋಡಿ ಖುಷಿಯಾಯಿತು. ಒಳ್ಳೆಯ ಪ್ರಯತ್ನವೊಂದಕ್ಕೆ ಕೈಹಾಕಿದ್ದೀರಿ. ಅದು ಯಶಸ್ವಿಯಾಗಲೆಂದು ಹಾರೈಸುತ್ತೇನೆ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಆದರೆ ನೀವು ನನಗೆ ಕೊಡುತ್ತಿರುವ ಅವಕಾಶವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ದಯವಿಟ್ಟು ಅನ್ಯಥಾ ಭಾವಿಸಬೇಡಿ. ಖಂಡಿತ ನಾನು ಯಾವುದಾದರೂ ಬರಹ ಬರೆದಾಗ ನಿಮಗೆ ತಿಳಿಸುತ್ತೇನೆ. ನಿಮಗೆ ಸೂಕ್ತವೆನಿಸಿದರೆ ಅದನ್ನು ಬಳಸಿಕೊಳ್ಳಬಹುದು. ನಿಮ್ಮ ಬ್ಲಾಗ್ ನ ಲಿಂಕ್ ಮತ್ತು ನಿಮ್ಮ ಪರಿಚಯವನ್ನು ತಿಳಿಸಿ. ಯಾವುದೇ ರೀತಿಯ ಸಹಾಯ ಅಥವಾ ಕೆಲಸವಿದ್ದರೆ ತಿಳಿಸಿ. ಕೈಲಾದ ಮಟ್ಟಿಗೆ ಮಾಡುವೆ.
ಇಂತಿ,
ವಿಕಾಸ್ ಹೆಗಡೆ
…………………………………..
ಹೆಚ್.ಪಿ.ನಾಡಿಗ್ (‘ಸಂಪದ’ದ ವ್ಯವಸ್ಥಾಪಕರು)
ನಗೆ ಸಾಮ್ರಾಟರೆ, ನಿಮ್ಮ
ಪರಿಚಯವಾಗಬಹುದೆ?
ಬ್ಲಾಗ್ ಚೆನ್ನಾಗಿ ಬರುತ್ತಿದೆ.
🙂
…………………………………..
ನಗೆ ಸಾಮ್ರಾಟರೆ,
ತೆಳುಹಾಸ್ಯ ತುಂಬಿದ ನಿಮ್ಮ ಬ್ಲಾಗ್ ಹೀಗೇ ಮುಂದುವರೆಯಲಿ. ಗೋಡೆಯನ್ನು – ಮೋಟು ಗೋಡೆಯಾಗಲಿ, ಎತ್ತರದ ಗೋಡೆಯಾಗಲಿ- ಯಾವುದನ್ನೂ ದಾಟಿ ಹೋಗದಿರಿ 😉
-ನೀಲಾಂಜನ
…………………………………..
ನಗೆ ಸಾಮ್ರಾಟರಿಗೆ ನನ್ನ ವಂದನೆಗಳು,
ನಿಮ್ಮ ಬ್ಲಾಗಿನಲ್ಲಿನ ನಗೆ ಬರಹಗಳು ಚುಟುಕಾಗಿ ಸೊಗಸಾಗಿವೆ.ಉತ್ತಮ ಪ್ರಯತ್ನ. ಯಾವುದೇ ಇಸಂ ಗಳಿಗೆ ಬಲಿಯಾಗದೆ ಇದೇ ರೀತಿ ತಿಳಿ ಹಾಸ್ಯ ರಸಾಯನವನ್ನು ಉಣಬಡಿಸುತ್ತಿರಿ.
ನಿಮ್ಮ ಬ್ಲಾಗಿನಲ್ಲಿ ಇಷ್ಟವಾದ ಸಾಲುಗಳಿವು….
ನಾನು ಯಾರು? ಬುದ್ಧಿ ತಿಳಿದಾಗಿನಿಂದಲೂ ಕೇಳಿಕೊಂಡು ಬರುತ್ತಿದ್ದೇನೆ. ಅದನ್ನು ತಿಳಿಯುವುದಕ್ಕೆ ನಿಮಗಿಂತ ಹೆಚ್ಚಿನ ಕುತೂಹಲ ನನಗಿದೆ.
ಏನು ಮಾಡುತ್ತಿದ್ದೇನೆ? ಹೇಗೆ ಬದುಕಬೇಕು ಎಂದು ಅನ್ವೇಷಿಸುತ್ತಿದ್ದೇನೆ. ಬದುಕುವುದಕ್ಕೆ ಪ್ರಯತ್ನಿಸುತ್ತಿದ್ದೇನೆ, ನೂರಾರು ದಿಕ್ಕುಗಳಲ್ಲಿ ಸ್ವಚ್ಚಂದವಾಗಿ ಹಾರಲು ಬಯಸುತ್ತೇನೆ. ಅದಕ್ಕಾಗಿ ಈಗ ಪರಿಚಯ, ವಾತಾವರಣಾ, ಸ್ವಭಾವ, ವ್ಯಕ್ತಿತ್ವದ ಗುರುತನ್ನು ಕಳಚಿಹಾಕಿ ‘ನಗೆ ಸಾಮ್ರಾಟ’ನಾಗಿದ್ದೇನೆ.
ಹೇಗಿದ್ದೇನೆ? ನಿನ್ನೆಗಿಂತಲೂ ಇಂದು ಚೆನ್ನಾಗಿದ್ದೇನೆ, ಇಂದಿಗಿಂತಲೂ ನನ್ನ ನಾಳೆ ಚೆನ್ನಾಗಿರುತ್ತದೆ ಎಂದು ನಂಬಿದ್ದೇನೆ.
ಉತ್ಸಾಹ, ಸ್ವಾತಂತ್ರ್ಯ, ಛಲ ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ತಿಳಿಯಾಗಿ ಹೇಳಿದ್ದೀರಾ. ಮೇಲಿನ ವಾಕ್ಯಗಳನ್ನು ನೋಡಿದರೆ, ಹಾಸ್ಯ ಬರಹಗಾರರ ಕೈ ಬರಹವಲ್ಲ ಎಂದು ಸ್ಪಷ್ಟವಾಗಿ ಹೇಳಬಲ್ಲ. ಅನುಭವದ ಮೂಸೆಯಿಂದ ತೇಲಿಬಂದ ಸಾಲಿನಂತೆ ಗೋಚರಿಸುತ್ತವೆ.
ನಿಮ್ಮ ಪ್ರಯತ್ನಕ್ಕೆ ನನ್ನ ಬೆಂಬಲ ಇದೆ. ನಿಮ್ಮ ಬ್ಲಾಗಿನ ಲಿಂಕ್ ಹಾಕುತ್ತೇನೆ. ಇಷ್ಟವಾದರೆ ನನ್ನ http://nirachitha.blogspot.com/ ಬ್ಲಾಗಿನ ಲಿಂಕ್ ನಿಮ್ಮ ಬ್ಲಾಗ್ ಸರಣಿಗೆ ಪೋಣಿಸಿಕೊಳ್ಳಿ.
ಇಂತಿ…
ನಿ.ರಚಿತ
ಮಲೆನಾಡ ಮಗಳು
…………………………………..
blagu chennagide…;-)
blagu chennagide…;-)..
ಅನಾಮಿಕರೇ ಹಾಗೂ ಅರುಣ್,
ನಗಾರಿಗೆ ದನಿ ಸೇರಿಸಿದ್ದಕ್ಕೆ ಧನ್ಯವಾದಗಳು… ಅಗಾಗ ಬರುತ್ತಿರಿ…
ನಗೆ ಸಾಮ್ರಾಟರೆ,
ತೆಳುಹಾಸ್ಯ ತುಂಬಿದ ನಿಮ್ಮ ಬ್ಲಾಗ್ ಹೀಗೇ ಮುಂದುವರೆಯಲಿ. ಗೋಡೆಯನ್ನು – ಮೋಟು ಗೋಡೆಯಾಗಲಿ, ಎತ್ತರದ ಗೋಡೆಯಾಗಲಿ- ಯಾವುದನ್ನೂ ದಾಟಿ ಹೋಗದಿರಿ 😉
-ನೀಲಾಂಜನ
ನಿಮ್ಮ ಮಾರ್ಮಿಕವಾದ ಸಲಹೆಗೆ ನಾವು ತಲೆಬಾಗುತ್ತೇವೆ. ಗೋಡೆ ಹಾರುವ ತವಕ ಹಾಗೂ ಉನ್ಮಾದ ನಗಾರಿಗಿಲ್ಲ ಎಂದು ತಿಳಿಸಲು ಸಂತೋಷ ಪಡುತ್ತೇವೆ.
very nice…nagariya saddu yavagalu kelisuttirali…
ನಗಾರಿಯ ಸದ್ದು ನಿಮ್ಮ ಎದೆಗಳಲ್ಲಿ ಮಾರ್ದನಿಸುತ್ತಿದೆಯಲ್ಲಾ ಅಷ್ಟು ಸಾಕು ನಮಗೆ…
ನಗೆ ಸಾಮ್ರಾಟ್
hasyavannu tumbi needuthiruva nimage thanks , muduvrsi
so nice
ನಗೆನಗಾರಿ ಸದ್ದಡಗಿದೆ ಯಾಕೆ?
ನಗೆ ಸಾಮ್ರಾಟರು ಭೂ ಗತ ರಾಗಿದ್ದಾರೋ?
ಅಥ ವಾ
ಭೂತ ಕೊಂಡುಹೊಯಿತೋ ?
— ಅ.ನಾ.ಡಿ.
ನಗಾರಿ ಸದ್ದು ಎಂದೂ ಅಡಗುವುದಿಲ್ಲ. ಐ ಪಾಡು, ಫೋನುಗಳ ಗದ್ದಲದಲ್ಲಿ ಕೊಂಚ ನಿಶ್ಯಕ್ತವಾಗಬಹುದಷ್ಟೇ.