ನಗೆ ನಗಾರಿ ಡಾಟ್ ಕಾಮ್ ನಲ್ಲಿರುವ ಸಮಸ್ತ ಯೋಗಿಗಳಿಗೆ ಈ ಹುಟ್ಟು ಸಾವಿನ ಬಂಧನವಿಲ್ಲವಾದರೂ ಈ ತಾಣದ ಮಾನವ ಮಾತ್ರ ಓದುಗರಾದ ತಮಗೆಲ್ಲರಿಗೂ ಸಂಭ್ರಮದ ಹಾಗೂ ಆತಂಕದ ಸುದ್ದಿಯೊಂದಿದೆ. ಬರುವ ಜನವರಿ ೨೭ಕ್ಕೆ ನಗೆ ನಗಾರಿ ಕಣ್ತೆರೆದು ಸರಿಯಾಗಿ ಒಂದು ವರ್ಷ ಪೂರೈಸಲಿದೆ. ನಮಗೆ ಹುಟ್ಟು ಹಬ್ಬಗಳಲ್ಲಿ ಆಸಕ್ತಿಯಿಲ್ಲ. ನಾವು ಹುಟ್ಟುವುದೂ ಇಲ್ಲ ಸಾಯುವುದೂ ಇಲ್ಲ, ಭೂಮಿಯಂಬ ಬ್ರಹ್ಮಾಂಡದ ಧೂಳಿಗೆ ಸಮಾನವಾದ ಈ ಭೂಮಿಯಲ್ಲಿ ನಾಲ್ಕು ದಿನ ಇದ್ದು ಹೋಗಲು ಬಂದಿರುವವರು ನಾವು, ಇದು ಒಂದು ವೇಯ್ಟಿಂಗ್ ರೂಂ ಇದ್ದಂತೆ ಅಷ್ಟೇ ಎಂದು ನಂಬಿರುವವರು ನಾವು. ನಮ್ಮ ಬ್ಲಾಗ್ ಕೂಡ ಹೀಗೆ ನಂಬಿಕೊಂಡಿದೆ.
ಆದರೆ ವೇಯ್ಟಿಂಗ್ ರೂಮಿನಲ್ಲಿರುವಷ್ಟು ಕಾಲವಾದರೂ ಅಲ್ಲಿನ ನಿಯಮಗಳಿಗೆ ಬದ್ಧರಾಗಿರಬೇಕಲ್ಲವೇ? ವೇಯ್ಟಿಂಗ್ ರೂಮ್ ಆದ ಮಾತ್ರಕ್ಕೆ ದೇಹವನ್ನು ಬಜಾಜ್ ಸ್ಕೂಟರ್ ವಾಲಿಸಿದ ಹಾಗೆ ವಾಲಿಸಿ ತಕ್ಕಮಟ್ಟಿಗಿನ ಸದ್ದಿನ ಜೊತೆಗೆ ಅಪಾನವಾಯು ಬಿಡುಗಡೆ ಮಾಡಲು ಸಾಧ್ಯವೇ? ಖಂಡಿತಾ ಇಲ್ಲ. ಹಾಗೆಯೇ ಈ ಲೋಕದಲ್ಲಿರುವವರೆಗೂ ನಾವು ಲೌಕಿಕದ ನಿಯಮಗಳನ್ನು ಪಾಲಿಸಲೇ ಬೇಕು. ಅದಕ್ಕಾಗಿ ನಾವು ಆಗಾಗ ನಮ್ಮ ಪವಿತ್ರ ಆತ್ಮದ ಆಣತಿಯನ್ನು ಮರೆತು ವರ್ತಿಸಬೇಕಾಗುತ್ತದೆ.
ನಮ್ಮ ಒಂದು ವರ್ಷದ ‘ಜಯಂತಿ’ಯ ಅಂಗವಾಗಿ ನಾವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ. ನಮ್ಮ ಒಂದು ವರ್ಷದ ಜಯಂತಿಯನ್ನು ಜಗತ್ತು ಕನಿಷ್ಠ ಪಕ್ಷ ಒಂದು ನಿಮಿಷವಾದರೂ ನೆನಪಿಟ್ಟುಕೊಳ್ಳಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆ. ನಾವು, ನಮ್ಮ ನಿಯತ್ತಿನ ಚೇಲ ಕುಚೇಲ ನಮ್ಮ ಗತಕಾಲದ ಗೆಳೆಯ ತೊಣಚಪ್ಪ ಸೇರಿ ಅದ್ಭುತವಾದ ಕಾರ್ಯಕ್ರಮವೊಂದನ್ನು ನಡೆಸುಕೊಡಲು ಯೋಜಿಸಿದ್ದೇವೆ.
ಅಷ್ಟೇ ಅಲ್ಲದೆ ನಗೆ ನಗಾರಿಯ ವಾರ್ಷಿಕೋತ್ಸವದ ಅಂಗವಾಗಿ ಹತ್ತು ಹಲವು ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಬೇಕು ಎಂದು ತೀರ್ಮಾನಿಸಿದ್ದೇವೆ. ಅದರಂತೆ ಮೂರು ದಿನಕ್ಕೊಂದರಂತೆ ಇಂದಿನಿಂದ ಹಲವು ಸ್ಪರ್ಧೆಗಳನ್ನು ನಾವು ಇಲ್ಲಿ ನಡೆಸಲಿದ್ದೇವೆ. ಆಸಕ್ತರು, ನಗೆ ನಗಾರಿ ಅಭಿಮಾನಿಗಳು, ದ್ವೇಷಿಗಳು ಇದರಲ್ಲಿ ಭಾಗವಹಿಸಿ ಪುಣ್ಯ ಸಂಪಾದಿಸಿಕೊಳ್ಳಬೇಕಾಗಿ ವಿನಂತಿ.
ಅಷ್ಟೇ ಅಲ್ಲದೆ, ನಗೆ ನಗಾರಿಯ ಹುಟ್ಟು ಹಬ್ಬ ವರ್ಣರಂಜಿತವಾಗಿಸುವಲ್ಲಿ ನಿಮ್ಮ ಐಡಿಯಾಗಳನ್ನು, ಸಲಹೆಗಳನ್ನು ನಮಗೆ ಪ್ರತಿಕ್ರಿಯೆಯ ಮೂಲಕ ತಿಳಿಸಬಹುದು.
ನಿಮ್ಮದೊಂದು ಉತ್ತರ