ಕನ್ನಡದ ಟಿವಿ ಚಾನಲುಗಳಲ್ಲು ಹಾಸ್ಯ ಧಾರಾವಾಹಿಯ ಜಮಾನ ಶುರುವಾಗಿದ್ದು ಯಾವ ಎಂದು ನೆನೆದರೆ ನೆನಪಾಗುವುದು ಪೀಚಲು
ದೇಹದ ಗಂಡನನ್ನು ಬಾಲ್ಕನಿಯಿಂದ ಎಸೆಯುವ ದಢೂತಿ, ಘಟವಾಣಿ ಮಡದಿಯ ಕತೆಯ ‘ಪಾ.ಪ.ಪಾಂಡು’. ಕೌಟುಂಬಿಕ ಹಾಸ್ಯಕ್ಕೆ ಹೇಳಿ ಮಾಡಿಸಿದ ವಸ್ತುವಾದ ದಾಂಪತ್ಯವನ್ನು ಆಧಾರವಾಗಿಟ್ಟುಕೊಂಡು ಮೂಡಿಬಂದ ಈ ಧಾರಾವಾಹಿ ಬಹುಬೇಗ ಯಶಸ್ಸಿನ ಮೆಟ್ಟಿಲೇರಿತು. ಹಿರಿತೆರೆಯ ಹಾಸ್ಯದ ಪಾತ್ರಗಳಲ್ಲಿ ಪಳಗಿದ್ದ ಸಿಹಿ ಕಹಿ ಚಂದ್ರು ದಂಪತಿಗಳ ಫೈನಲ್ ಕಟ್ ಪ್ರೊಡಕ್ಷನ್ ನಿರ್ಮಾಣದ ಈ ಧಾರಾವಾಹಿಗೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆಯುತ್ತಿದ್ದವರು ಎಂ.ಎಸ್.ನರಸಿಂಹಮೂರ್ತಿ .
ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿದ್ದ ಧಾರಾವಾಹಿಗೆ ಪ್ರತಿದಿನ ಚಿತ್ರಕತೆ, ಸಂಭಾಷಣೆ ಬರೆಯುವುದು ಸುಲಭದ ಮಾತಲ್ಲ. ಸುಸಜ್ಜಿತವಾದ ಬರಹಗಾರರ ತಂಡವನ್ನೇ ಇಟ್ಟುಕೊಂಡು ಇಂಗ್ಲೀಷಿನ ‘ಸೈನ್‌ಫೆಲ್ಡ್’ನಂತಹ ಸಿಟ್‌ಕಾಮ್‌ಗಳು ವಾರಕ್ಕೊಂದು ಎಪಿಸೋಡ್ ನಿರ್ಮಿಸುತ್ತವೆ. ಪಾ.ಪ.ಪಾಂಡು ಯಶಸ್ಸಿನ ಶಿಖರವನ್ನೇರಿದ್ದ ಸಮಯದಲ್ಲೇ ಮುಖ್ಯಪಾತ್ರಧಾರಿ ಬದಲಾಗಿ ನಾನಾ ರೀತಿಯ ತೊಂದರೆಗಳಾದವು.
ಮೊದಲ ಯಶಸ್ಸು ಅತಿ ಅಪಾಯಕಾರಿಯಾದದ್ದು. ಅದರ ನೆರಳು ಮುಂದಿನ ಎಲ್ಲಾ ಪ್ರಯತ್ನಗಳ ಮೇಲೆ ಗಾಢವಾಗಿರುತ್ತದೆ. ಪಾ.ಪ ಪಾಂಡು ಯಶಸ್ಸಿನ ನಂತರ ಅದಕ್ಕಿಂತಲೂ ಹೆಚ್ಚಿನ ಮಟ್ಟದ ಜನಪ್ರಿಯತೆಯನ್ನು ಪಡೆದದ್ದು ಈ ಟಿವಿಯಲ್ಲಿಯೇ ಪ್ರಸಾರವಾದ, ಫೈನಲ್ ಕಟ್ ಪ್ರೊಡಕ್ಷನ್ನಿನದೇ ಕೊಡುಗೆಯಾದ ‘ಸಿಲ್ಲಿ ಲಲ್ಲಿ’. ಲವಲವಿಕೆಯ ಸಂಭಾಷಣೆ, ಐಕಾನಿಕ್ ಪಾತ್ರಗಳು, ಜಾಣ್ಮೆಯ ಚಿತ್ರಕತೆ ಇವುಗಳಿಂದ ವಿಠ್ಠಲ್‌ರಾವ್ ಸರ್ಜರಿ ಹಾಗೂ ಭರ್ಜರಿಯಲ್ಲಿ ಫೇಮಸ್ಸಾದಷ್ಟೇ ಸೀರಿಯಲ್ ಕೂಡ ಫೇಮಸ್ಸಾಯಿತು.
ಸಿಲ್ಲಿ ಲಲ್ಲಿ ಧಾರಾವಾಹಿಯ ಕೆಲವು ಎಪಿಸೋಡುಗಳನ್ನು ಆನ್ ಲೈನ್ ವೀಕ್ಷಿಸಲು ಇಲ್ಲಿ ಭೇಟಿ ನೀಡಬಹುದು. ಇದು ಈ ಸಂಚಿಕೆಯ ನಗಾರಿ ರೆಕಮಂಡೇಶನ್!
Tags: ಎಂ.ಎಸ್.ನರಸಿಂಹಮೂರ್ತಿ, ಡಾಕ್ಟರ್ ವಿಠ್ಠಲರಾವ್, ನಗಾರಿ ರೆಕಮಂಡೇಶನ್, ಸಿಲ್ಲಿ ಲಲ್ಲಿ, nagaari recommandation

ಇತ್ತೀಚಿನ ಪ್ರಜಾ ಉವಾಚ