ನಗೆ ನಗಾರಿ ಡಾಟ್ ಕಾಮ್ ವಾರ್ಷಿಕೋತ್ಸವ ವಿಶೇಷಾಂಕಕ್ಕಾಗಿ ಖ್ಯಾತ ಪತ್ರಕರ್ತ, ಪತ್ರಿಕೋದ್ಯಮಿ, ರೇಡಿಯೋ ಜಾಕಿ, ಟಿವಿ ಆಂಕರ್, ನಟ, ನಿರ್ದೇಶಕ, ನಿರ್ಮಾಪಕ, ತಮ್ಮ ಸಿನೆಮಾದ ಏಕೈಕ ವೀಕ್ಷಕರಾದ ಗವಿ ಬಿಳಿಗೆರೆ ಬರೆದ ಲೇಖನವಿದು.
ನಾನು ಬೆಂಗಳೂರನ್ನು ಬಿಟ್ಟು ಹೋಗುವುದು ಬಂಗಾರಪ್ಪ ಒಂದು ಪಕ್ಷ ಬಿಟ್ಟು ಹೋಗುವಷ್ಟೇ ಸಾಮಾನ್ಯ. ಪತ್ರಿಕೆಯ ಕೆಲಸವನ್ನೆಲ್ಲಾ
ಮಾಡಿ ಮುಗಿಸಿ ದಣಿದ ಬೆರಳುಗಳನ್ನು ಲೈಟ್ ಆಗಿ ಮಸಾಜ್ ಮಾಡುವುದಕ್ಕೆ ರವೀಶನಿಗೆ ಬಿಟ್ಟುಬಿಡುತ್ತೇನೆ.
ರವೀಶ ನನಗೆ ಬೆನ್ನಲ್ಲಿ ಹುಟ್ಟಿದ ತಮ್ಮನಂಥ ಹುಡುಗ. ವರದಿಯೊಂದಕ್ಕೆ ಸಂಬಂಧಿಸಿದ ಇನ್ಪರ್ಮೇಶನ್ ಪಡೆಯುವುದಕ್ಕಾಗಿ ಇಡೀ ಬೆಂಗಳೂರಿನಲ್ಲಿ ಕುಖ್ಯಾತವಾದ ಕಲಾಸಿ ಪಾಳ್ಯದ ರಸ್ತೆಗಳಲ್ಲಿ ತಿರುಗುತ್ತಿದ್ದೆ. ಆ ಮಬ್ಬುಗತ್ತಲೆಯಲ್ಲಿ ನನ್ನ ಯಾರೂ ಗುರುತು ಹಿಡಿಯುವಂತಿರಲಿಲ್ಲ. ಮುಖ ಯಾವುದು ತಲೆ ಯಾವುದು ಎಂದು ತಿಳಿಯದಷ್ಟು ಹುಲುಸಾಗಿ ಬೆಳೆದ ಗಡ್ಡವಿತ್ತು ಜೊತೆಗೆ ವಿಲಕ್ಷಣವಾದ ಹ್ಯಾಟ್ ಇತ್ತು. ನನ್ನ ಮುಖ ಪರಿಚಯ ಯಾರಿಗಾದರೂ ಸಿಕ್ಕುವ ಛಾನ್ಸೇ ಇರಲಿಲ್ಲ. ವರದಿಗೆ ಬೇಕಾದ ಇನ್ಫರ್ಮೇಶನ್ ಹುಡುಕುವುದು ಸಾಮಾನ್ಯ ಕೆಲಸವಲ್ಲ. ಈ ಕೆಲಸ ಮಾಡುವ ಕ್ರೈಂ ರಿಪೋರ್ಟರ್ ಒಬ್ಬನಿಗೆ ಪಾತಕ ಲೋಕದ ಗಲ್ಲಿಗಲ್ಲಿಯ ಪರಿಚಯವಿರಬೇಕು. ರೌಡಿಯೊಬ್ಬ ಕನಸಿನಲ್ಲಿ ಹಾಕುವ ಹೊಂಚಿನ ವಾಸನೆ ರಿಪೋರ್ಟರ್ ಆದವನಿಗೆ ಹಿಂದಿನ ರಾತ್ರಿ ಗುಂಡು ಹಾಕುವಾಗಲೇ ಮೂಗಿಗೆ ಬಡಿದಿರಬೇಕು. ನಾನು ಆ ಅಮವಾಸ್ಯೆ ಕಳೆದ ರಾತ್ರಿಯಲ್ಲಿ ಕಲಾಸಿ ಪಾಳ್ಯದ ಬಸ್ ಸ್ಟ್ಯಾಂಡಿನ ಕಲ್ಲು ಬೆಂಚಿನ ಮೇಲೆ ಕುಳಿತು ಸಿಗರೇಟು ಹಚ್ಚಿದೆ. ಇನ್ಫರ್ಮೆಂಟ್ ಬರುವುದು ತಡವಾಗುವ ಸೂಚನೆ ಸಿಕ್ಕಿತು. ನಾನು ತುಸುವೂ ಯೋಚನೆಯಿಲ್ಲದೆ ಯಾರ ಮಾನವನ್ನಾದರೂ ಕಳೆದುಬಿಡಬಲ್ಲೆ ಆದರೆ ಸಮಯವನ್ನು ವ್ಯರ್ಥವಾಗಿ ಕಳೆಯಲಾರೆ. ಕಿಸೆಯಿಂದ ಪುಟ್ಟ ನೋಟ್ ಬುಕ್ ತೆರೆದು ಬಸ್ ಸ್ಟ್ಯಾಂಡಿನ ಸೋಡಿಯಂ ದೀಪದ ಮಬ್ಬು ಬೆಳಕಿನಲ್ಲಿ ಬರೆಯ ತೊಡಗಿದೆ. ಹಾಗೆ ಬರೆಯಲು ಕೂತವನಿಗೆ ಸಮಯ ಕಳೆದದ್ದೇ ತಿಳಿವಿಗೆ ಬರಲಿಲ್ಲ, ಅಂಗೈ ಅಗಲದ ನೋಟ್ ಬುಕ್ಕಿನ ಹಾಳೆಗಳೆಲ್ಲಾ ತುಂಬಿ ಹೋದದ್ದು ತಿಳಿದ ಮೇಲೆ ತಲೆ ಮೇಲಕ್ಕೆ ಎತ್ತಿದ್ದೆ. ಮಬ್ಬು ಬೆಳಕಿನಲ್ಲಿ ಬರೆದದ್ದಕ್ಕೋ ಏನೋ ಕಣ್ಣುಗಳು ವಿಪರೀತ ಉರಿಯುತ್ತಿದ್ದವು. ಬೆರಳುಗಳಲ್ಲಿ ಸಣ್ಣಗೆ ನೋವು ಕಾಣತೊಡಗಿತ್ತು. ಬೆರಳುಗಳನ್ನು ಹಿಚುಕಿಕೊಳ್ಳುತ್ತಾ ಅತ್ತಿತ್ತ ಓಡಾಡತೊಡಗಿದೆ.
“ಅಣ್ಣಾ, ಬೆರಳು ಒತ್ತಲಾ?” ಹಿಂದಿನಿಂದ ಪುಟ್ಟ ಆಕೃತಿಯೊಂದು ಚಲಿಸಿತು. ನಾನು ಕೂಡಲೇ ಅಲರ್ಟ್ ಆದೆ. ಕಿಸೆಯಲ್ಲಿದ್ದ ರಿವಾಲ್ವರ್ ತಡಕಿದೆ. ಹಿಂತಿರುಗಿ ನೋಡಿದೆ. ಆತ ಯಾವುದೋ ಕಥೆಯಿಂದ ಇಳಿದು ಬಂದ ಪಾತ್ರದಂತಿದ್ದ. ಮಾಸಲು ಬಟ್ಟೆ, ಬರ್ಮುಡ ಥರದ್ದೊಂದು ಹಳಸಲು ಚಡ್ಡಿ ಹಾಕಿದ್ದ. ಕೂದಲು ಕರೆಗಟ್ಟಿತ್ತು. ಮತ್ತೊಮ್ಮೆ ಗೊರಲು ಧ್ವನಿಯಲ್ಲಿ, “ಅಣ್ಣಾ ಬೆರಳು ನೋಯ್ತಿದ್ರೆ, ನಾನು ಮಸಾಜ್ ಮಾಡ್ತೀನಿ” ಅಂದ.
ನಾನು respond ಮಾಡುವ ಮೊದಲೇ ನನ್ನ ಕೈ ಸೆಳೆದುಕೊಂಡು ಬೆರಳುಗಳನ್ನು ನೀವಲು ಶುರು ಮಾಡಿದ. ನನಗೆ ಹಾಯೆನಿಸಿತು. ಅಲ್ಲಿಗೆ ನಾನು ಬಂದಿದ್ದ ಕೆಲಸವೇ ಮರೆತುಹೋಗುವಷ್ಟರ ಮಟ್ಟಿಗೆ relax ಆಗಿದ್ದೆ. ಆಗಿನಿಂದ ಬೆನ್ನಿಗೆ ಬಿದ್ದವನು ಈ ರವೀಶ.
ಆತ ನನ್ನ ಬೆರಳುಗಳಿಗೆ ಅದೆಂಥದ್ದೋ ಎಣ್ಣೆಯನ್ನು ತಿಕ್ಕಿ ಮಸಾಜ್ ಮಾಡುವಾಗ ನಾನು ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸುತ್ತೇನೆ. ಮಳೆ ಕರೆಯದೆ ಮುಂದೆ ಹೋಗುತ್ತಿರುವ ಮೋಡಗಳು ಕಾಣುತ್ತವೆ. ಇದೇ ಕಪ್ಪು ಆಕಾಶವನ್ನು ಎಂತೆಂಥ ನೆಲದ ಮೇಲೆ ನಿಂತು ನೋಡಿಲ್ಲ? ಎನ್ನಿಸತೊಡಗುತ್ತೆ.
ಅದು ೨೦೦೧ರ ಆಸುಪಾಸು. ಪತ್ರಿಕೆಯ ಕೆಲಸ ಮುಗಿಸಿ ಹುಡುಗರಿಗೆ instructions ಕೊಟ್ಟು ನಾನು ವಿಮಾನ ನಿಲ್ದಾಣಕ್ಕೆ ಹೊರಟೆ. ದಕ್ಷಿಣ ಆಫ್ರಿಕಾಕ್ಕೆ ನೆಗೆಯಲು ವಿಮಾನ ಕಾದು ನಿಂತಿತ್ತು. ಉಳಿದೆಲ್ಲರೂ ಸಾಲ ಸೋಲ ಮಾಡಿಯೋ, ಸರ್ಕಾರದ sponsorship ನಿಂದಲೋ ವಿದೇಶ ಸುತ್ತುವುದಕ್ಕೆ ಹೋಗುವಾಗ ಅಮೇರಿಕಾ, ಫ್ರಾನ್ಸು, ಸ್ವಿಟ್ಜರ್ ಲ್ಯಾಂಡುಗಳಂಥ ದೇಶಗಳಿಗೆ ಹೋಗುತ್ತಾರೆ. ನನಗೆ ಅದೇನು ತೆವಲೋ, ಇದುವರೆಗೂ ಯಾರೂ ಕಾಲಿಡದಿದ್ದ ದೇಶಗಳಿಗೆ ಅಲೆದಿದ್ದಾನೆ, ಅಜ್ಞಾತವಾದ ದೇಶಗಳ ದುರ್ಗಮವಾದ ಕಾಡುಗಗಳಲ್ಲಿ ಬರಿಗಾಲ ಫಕೀರನಂತೆ ನಡೆದಿದ್ದೇನೆ. ಹಾಗೆ ಅಲೆಯುವಾಗ ನೆರಿಗೆ ಲಂಗದ ಹುಡುಗಿ ನೆನೆಪಾಗುತ್ತಾಳೆ, ತುಮಕೂರಿನ ರಸ್ತೆಗಳು ನೆನಪಾಗುತ್ತವೆ. ಅವಳ ಮೋಸದಿಂದಲೇ ಅಲ್ಲವೇ ನಾನಿವತ್ತು ಅವಡುಗಚ್ಚಿ ಈ ಕಾಡಿನಲ್ಲಿ ಹೆಜ್ಜೆ ಹಾಕುತ್ತಿರುವುದು ಅನ್ನಿಸುತ್ತದೆ.
ನಿಜ ಹೇಳಬೇಕೆಂದರೆ, ಈ ಬಾರಿ ನಾನು ದಕ್ಷಿಣ ಆಫ್ರಿಕಾಕ್ಕೆ ಹೊರಟಿದ್ದು ಅಲ್ಲಿ ತಲೆ ಮರೆಸಿಕೊಂಡಿರುವ ಮುಂಬೈ ಭೂಗತ ಜಗತ್ತಿನ ಡಾನ್‌ನನ್ನು ಭೇಟಿಯಾಗಲು. ಜೊಹಾನ್ಸ್ ಬರ್ಗಿನ ಗ್ರ್ಯಾಂಡ್ ಸೆಂಟ್ರಲ್ ಏರ್‌ಪೋರ್ಟಿನಲ್ಲಿ ಇಳಿದು ವಿಮಾನ ನಿಲ್ದಾಣದ ಹೊರಗಿನ ಅಂಗಡಿಯೊಂದರಲ್ಲಿ ಸಿಗರೇಟು ಖರೀದಿಸಿ ಬೆಂಕಿ ಹೊತ್ತಿಸಲು ತುಸು ಧಾವಂತದಲ್ಲಿ ಪಕ್ಕಕ್ಕೆ ತಿರುಗಿದೆ.
“Easy Gentleman!” ಕಂಚಿನ ಕಂಠದ ಧ್ವನಿಯೊಂದು ಮೊಳಗಿತು. ಕತ್ತೆತ್ತಿ ನೋಡಿದೆ. ಆಜಾನುಬಾಹು ವ್ಯಕ್ತಿಯೊಬ್ಬ ನಗುತ್ತ ನಿಂತಿದ್ದ. ನನಗಿಂತ ಸುಮಾರು ಎರಡು ಅಡಿ ಎತ್ತರವಿದ್ದ ಆತನನ್ನು ನಾನು ಕತ್ತೆತ್ತಿ ನೋಡಬೇಕಾಯಿತು. ಆತನ ಬಿಗಿ ದೇಹ ಒಮ್ಮೆಗೇ ನನ್ನನ್ನು attract ಮಾಡಿತು. ಕೂಡಲೇ ಈತ ರೆಗ್ಯುಲರ್ ಆಗಿ exercise ಮಾಡುವಾತ ಎಂದು ತಿಳಿಯಿತು. ಆತನ ಮುಖವನ್ನು ಗಮನಿಸಿದೆ. ಎಲ್ಲೋ ನೋಡಿದ ನೆನಪಾಯಿತು.
ನೆಲ್ಸನ್ ಮಂಡೇಲ!
ದಕ್ಷಿಣ ಆಫ್ರಿಕಾದಲ್ಲಿ ಕರಿಯರನ್ನು exploit ಮಾಡುವ ವರ್ಣ ಪದ್ಧತಿಯ ವಿರುದ್ಧ ಹೋರಾಡಿ, ಅಪಾದನೆಗೊಳಗಾಗಿ ಇಪ್ಪತ್ತೇಳು ವರ್ಷ ರೊಬೆನ್ ದ್ವೀಪದಲ್ಲಿ ಸೆರೆವಾಸ ಅನುಭವಿಸಿದವ ಮಂಡೇಲ. ವರ್ಣ ವ್ಯವಸ್ಥೆಯನ್ನು ಕಿತ್ತೊಗೆದು ನಂತರ ದಕ್ಷಿಣ ಆಫ್ರಿಕಾದ ಅಧ್ಯಕ್ಷನಾದ.
ಬೆಂಕಿ ಕೊಡಬೇಕಿದ್ದ ಸಿಗರೇಟನ್ನು ಕೈಲಿ ಹಿಡಿದುಕೊಂಡು ನಾನು ಕಣ್ಣು ಬಾಯಿ ಬಿಟ್ಟು ನೋಡನೋಡುತ್ತಿದ್ದಂತೆಯೇ ಆತ ಸರಸರನೆ ನಡೆದು ಏರ್ ಪೋರ್ಟಿನೊಳಕ್ಕೆ ಹೊರಟುಹೋದ. ನಾನು ಸಿಗರೇಟ್ light ಮಾಡಿ ಹೊರಗೆ ಕಾರಿಡಾರಿನಲ್ಲಿ ನಾಲ್ಕು ಹೆಜ್ಜೆ ಹಾಕತೊಡಗಿದೆ. ಇದು ಈ ದಿನದ ಕಡೆಯ ಸಿಗರೇಟು ಎಂದು ನೆನಪಾಯಿತು. ಹದಿನೈದು ವರ್ಷಗಳಿಂದ ಸಿಗರೇಟು ಸಂಪೂರ್ಣವಾಗಿ ಬಿಟ್ಟು ಬಿಡುವ ಪ್ರಯತ್ನ ಮಾಡುತ್ತಲೇ ಇರುವೆ. ಹತ್ತನೆಯ ಸಂಚಿಕೆಯ ಪತ್ರಿಕೆಯಲ್ಲಿ ಸಿಗರೇಟಿನ ಬಗ್ಗೆ ಬರೆಯುವಾಗ ದಿನಕ್ಕೆ ಇಪ್ಪತ್ತಕ್ಕಿಂತ ಹೆಚ್ಚು ಸಿಗರೇಟು ಸೇದುತ್ತಿದ್ದೆ. “ಹೀಗೆ ಹೊಗೆ ಚಿಮಣಿಯ ಹಾಗೆ ಸೇದುತ್ತಿದ್ದರೆ
lungs ಸುಟ್ಟುಹೋಗುತ್ತವೆ. ಸತ್ತು ಹೋದರೆ ಬರೆಯೋಕೆ ಹೇಗೆ ಸಾಧ್ಯ? ನೀನು ಬರೆಯದೆ ಪತ್ರಿಕೆ ಹೊರಬರಲು ಹೇಗೆ ಸಾಧ್ಯ? ಅಸಂಖ್ಯಾತ ಓದುಗ ದೊರೆಗಳಿಗೆ ನೀನು ದ್ರೋಹ ಮಾಡಿದಂತಾಗುವುದಿಲ್ಲವಾ ರವೀ” ಎಂದು ಹಿರಿಯಣ್ಣನಂತಹ ಡಾಕ್ಟರ್ ಹೊಗೆಬತ್ತಿಯವರು ಗದರಿದಾಗಿನಿಂದ ಸಿಗರೇಟಿಗೆ ಕಡಿವಾಣ ಹಾಕ ತೊಡಗಿದೆ. ಈಗ ದಿನಕ್ಕೆ ಇಪ್ಪತ್ತು ಸಿಗರೇಟು ಸೇದುವುದಿಲ್ಲ. ಎರಡು ದಿನಕ್ಕೆ ನಲವತ್ತು ಮಾತ್ರ ಸೇದುವುದು.
ರಾತ್ರಿ ಹೊಟೇಲ್‌ನಲ್ಲಿ ಅನುವಾದಿಸಿ ಮುಗಿಸಬೇಕಾದ ಸಿಡ್ನಿ ಶೆಲ್ಡನ್ನನ ಕಾದಂಬರಿಯ ಬಗ್ಗೆ ಚಿಂತಿಸುತ್ತಾ ಹೆಜ್ಜೆ ಹಾಕುತ್ತಿರುವಾಗ ಮೊಬೈಲ್ ರಿಂಗ್ ಆಯಿತು. ಫೋನ್ ಮಾಡಿದ್ದು ನಗೆ ಸಾಮ್ರಾಟರು , ಅದೀಗ ತಾನೆ ನಗೆನಗಾರಿಗೆ ಬರೆದು ಮುಗಿಸಿ ಆಫೀಸಿನ ಬಾಗಿಲು ಹಾಕಿ ನನಗೆ ಫೋನ್ ಮಾಡಿದ್ದರು. ಅಲ್ಲಿ ನಾನಿದ್ದ ದೇಶದಲ್ಲಿ ಆಗ ಮಧ್ಯಾನ ಎರಡೂವರೆ ಗಂಟೆ, ಇಲ್ಲಿ ಬೆಂಗಳೂರಲ್ಲಿ ಸಂಜೆ ಆರರ ಸಮಯ. ವಿಷಯ ಏನೆಂದು ಕೇಳಿದೆ.
“ರವೀ, ನಮ್ಮ ನಗೆನಗಾರಿ ಡಾಟ್ ಕಾಮ್‌ಗೆ ಒಂದು ವರ್ಷ ತುಂಬುತ್ತೆ ವಿಶೇಷಾಂಕ ತರ್ತಾ ಇದೀನಿ. ನೀನು ಏನಾದರೂ ಬರೀಬೇಕಲ್ಲ” ಅಂದಿತು ಅತ್ತಲಿನ ಧ್ವನಿ.
ನಗೆಸಾಮ್ರಾಟ ನನಗೆ ಅಣ್ಣನಂಥ ಗೆಳೆಯ. ನಾನು ಅದೆಷ್ಟೇ ತಮಾಶೆ ಮಾತಾಡಿದರೂ, ಟಿವಿ, ರೇಡಿಯೋದಲ್ಲಿ ಹಾಸ್ಯ ಮಾಡಿದರೂ, ಪತ್ರಿಕೆಯಲ್ಲಿ ಪೋಲಿ ಪ್ರಶ್ನೆಗಳಿಗೆ ಪೋಲಿಯಾಗಿ ಉತ್ತರ ಕೊಟ್ರೂ ಇದುವರೆಗೂ ಪಟ್ಟಾಗಿ ಕೂತು ಒಂದು ಹಾಸ್ಯ ಬರಹ ಅಂತ ಬರೆಯೋಕಾಗಿಲ್ಲ.
ನಂಗೆ ಈ ಮನುಷ್ಯನ ಬಗ್ಗೆ ಆಶ್ಚರ್ಯ ಆಗುತ್ತೆ. ಒಂದು ಚಿಕ್ಕಾಸೂ ಹುಟ್ಟದ ನಗೆನಗಾರಿ ಡಾಟ್ ಕಾಮ್ ನಂತಹ ಅದ್ಭುತ ಬ್ಲಾಗ್ ನಡೆಸುತ್ತಿದ್ದಾನೆ. ಒಬ್ಬನೇ ಕೂತು ಸಾಕಷ್ಟು ಬರೀತಾನೆ. ನನ್ನಷ್ಟು ವರ್ಕೋಹಾಲಿಕ್ ಅಲ್ಲದಿದ್ರೂ ಚೆನ್ನಾಗಿ ಕೆಲಸ ಮಾಡ್ತಾನೆ. ಅದ್ಭುತವಾದದ್ದೊಂದು ಟೀಮ್ ಕಟ್ಟಿಕೊಂಡಿದ್ದಾನೆ. ಅವರಿವರ ಅನುಕರಣೆಗೆ ಬಿದ್ದು ಹಾಳಾಗದೆ ಬರೆದರೆ ಒಳ್ಳೆಯ ನಗೆ ಬರಹಗಾರನಾಗುವ future ಇದೆ.
ನಗೆ ನಗಾರಿ ಡಾಟ್ ಕಾಮ್‌ನ ಫರ್ಸ್ಟ್ ಹ್ಯಾಪಿ ಬರ್ತಡೇ ಗೆ ಚಿಯರ್ಸ್!
ನಿಮ್ಮವನು
ಗವಿ ಬಿಳಿಗೆರೆ

Soooper.
ಗವಿಯವರು ಯಾವಾಗಲೂ ಸೂಪರ್!
ಇದನ್ನೋದಿ ಗವಿಯವರು ನಿಮ್ಮ ಜೊತೆ ಶರಂಪರ ಜಗಳಕ್ಕೆ ಬರದಿದ್ದರೆ ಸರಿ.
ಇಷ್ತ ಆಯಿತು ನಿಮ್ಮ ಬ್ಲಾಗ್. ವರ್ಷ ತುಂಬಿದ್ದಕ್ಕೆ ಶುಭಾಶಯಗಳು.
ತಾವು ಬರೆದದ್ದನ್ನು ತಾವೇ ಮತ್ತೊಮ್ಮೆ ಓದುವುದಿರಲಿ ಕಣ್ಣೆತ್ತಿಯೂ ನೋಡುವುದಿಲ್ಲ ಎನ್ನುವುದು ತಿಳಿದಿಲ್ಲವೇ?
- ನಗೆಸಾಮ್ರಾಟ್
ಗವಿ ಬಿಳಿಗೆರೆ ಅವರ ಎಂದಿನ ಅರ್ಥಪೂರ್ಣ ಬರಹ! ಒಂದೇ ಉಸಿರಿಗೆ ಓದಿಸಿಕೊಂಡಿತು, ನಿಮ್ಮ ಬಗ್ಗೆ ಅವರ ತಮ್ಮನಂತಹ ಪ್ರೀತಿ ನೋಡಿ ಕಣ್ತುಂಬಿ ಬಂದಿದೆ, ಒರೆಸಲು ಕರ್ಚೀಫು ಸಿಗದೆ ನಮ್ಮ ವೇಲ್ ಎಲ್ಲ ನೆಂದಿದೆ!
ನೀವು ಹರಿಸಿದ್ದ ನೀರನ್ನು ನಮ್ಮ ಬರಗಾಲ ಪೀಡಿತ ಊರಿನ ಇಂಗುಗುಂಡಿಗಳಲ್ಲಿ ಹರಿಸಿ ಬರುವುದಕ್ಕೆ ಇಷ್ಟು ತಡವಾಯಿತು.
- ನಗೆ ಸಾಮ್ರಾಟ್
Hema,
Bennige bidda annuva pada miss maadikoMDu baree tammanaMtaha preeti eMdu gavi belegere ge avamaana maadtideeri..
ನೆನಪಿಸಿದ್ದಕ್ಕೆ ಹ್ಯಾಟ್ಸಾಫ್!
ha ha ha!
ಮಾನ್ಯ ಗವಿ ಅವರು “ಚ೦ದ, ತೆರಿಗೆ…” ಮು೦ತಾದ ಪದಗಳನ್ನು ಬಳಸುವುದನ್ನು ಮರೆತ೦ತೆ ಕಾಣುತ್ತಿದೆ…..
ಅಧ್ಬುತವಾದ ಬರಹ ಕಣ್ರಿ…. ಭಯ೦ಕರ ಚನ್ನಾಗಿದೆ.
ಹ್ಯಾಪ್ಪಿ ಬರ್ತ್ ಡೆ…
ಗವಿಯವರ ಬರಹದಲ್ಲಿ ಏನೆಲ್ಲಾ ಇರಬೇಕೆಂದು ಓದುಗ ದೊರೆಗಳಿಗಿಂತ ಹೆಚ್ಚಾಗಿ ಯಾರು ಬಲ್ಲರು ಅಲ್ಲವೇ?
- ನಗೆ ಸಾಮ್ರಾಟ್
and
- Che
doubt E illa bidi, Adre I websitalli kannada phontge EnAguththo EnO AkSharad kela bhAga maththe swaragLu EnEnO mOdige sik hAkoMD biduthve,adrallU kyApShanlE Eru pEru
ಕಂಪ್ಯೂಟರ್ ಎಂಬ ಯಕ್ಷಿಣಿ ವಿದ್ಯೆಯ ಬಗೆಗಿನ ನಮ್ಮ ತಿಳುವಳಿಕೆ ನಮ್ಮ ರಾಜಕಾರಣಿಗಳ ಐಕ್ಯು ಮಟ್ಟದಷ್ಟೇ ಇರುವಂಥದ್ದು! ಸಮಸ್ಯೆಯೇನು ಎಂಬುದನ್ನು ನಮ್ಮ ಟೆಕ್ನಿಕಲ್ ಟೀಮಿನ ಗಮನಕ್ಕೆ ತಂದಿರುವೆವು. ಇನ್ನು ಹುಳಗಳು ಅವರ ತಲೆಗೆ ವರ್ಗಾವಣೆಗೊಂಡಿವೆ!
- ನಗೆ ಸಾಮ್ರಾಟ್