ಚರ್ಚೆ: ಜೋಕು ಹುಟ್ಟುವ ಸಮಯ!

20 Feb

 

ಕವಿತೆ ಹುಟ್ಟುವುದು ಹೇಗೆ, ಕವಿತೆಯ ಅಪ್ಪ ಅಮ್ಮ ಯಾರು, ಕಥೆ ಜನ್ಮ ತಾಳುವ ಪರಿಸರ ಎಂಥದ್ದು, ಕಾದಂಬರಿ ಮೊಟ್ಟೆ ಒಡೆದು ಮರಿಯಾಗುವದಕ್ಕೆ ಬೇಕಾದ ಕಾವು ಎಷ್ಟು ಎಂದೆಲ್ಲಾ ಅಳತೆ ಮಾಪಕಗಳನ್ನು ಹಿಡಿದು jokes ಬೆವರು ಹರಿಸುವ ಸಂಶೋಧಕ, ಪಂಡಿತರಿಂದ ತಪ್ಪಿಸಿಕೊಂಡಿರುವ ಪ್ರಶ್ನೆ- ಜೋಕುಗಳು ಹುಟ್ಟುವುದು ಹೇಗೆ? ಈ ಜಗತ್ತಿನಲ್ಲಿರುವ ಅಸಂಖ್ಯಾತ ದಾಖಲಿತ ಜೋಕುಗಳಿಗೆ ಅಪ್ಪ ಅಮ್ಮಂದಿರು ಯಾರೂ ಇಲ್ಲವೇ? ಒಂದು ಜೋಕು ಹುಟ್ಟು ಪಡೆದು ಬೇರೆ ಬೇರೆ ಸಂಸ್ಕೃತಿಯ ಜನರ ನಡುವೆ ನಲುಗಿ ಹೊಸ ರೂಪ ಪಡೆದು ದೂರ ದೂರದವರೆಗೆ ಪಸರಿಸುವ ರೀತಿಯೇ ಅದ್ಭುತ. ಎಲ್ಲಿಯೋ ಸಿಕ್ಕ ಉತ್ಕೃಷ್ಟವಾದ ಹೇಳಿಕೆಯನ್ನು ದಾಖಲಿಸುವಾಗಲೂ, ಭಾಷಣದಲ್ಲಿ, ಬರವಣಿಗೆಯಲ್ಲಿ, ಪತ್ರಿಕೆಗಳ ಸಂಪಾದಕೀಯ ಪುಟದ ಮೂಲೆಯಲ್ಲಿ ಬಳಸುವಾಗಲೂ ಅದನ್ನುದುರಿಸಿದ ವ್ಯಕ್ತಿಯ ಹೆಸರನ್ನು ಹಾಕಲಾಗುತ್ತದೆ. ಹೆಸರು ತಿಳಿಯದ ಹೇಳಿಕೆಗಳಿಗೆ ‘ಅನಾಮಿಕ’ನ ಹೆಸರನ್ನಾದರೂ ಅಂಟಿಸಿ ಕೈತೊಳೆದುಕೊಳ್ಳಲಾಗುತ್ತದೆ. ಆದರೆ ಮನುಷ್ಯ ತನ್ನೆಲ್ಲಾ ಸಂಕಟವನ್ನು ಕ್ಷಣಕಾಲ ಮರೆತು ನಕ್ಕು ಹಗುರಾಗಲು ನೆರವಾಗುವ ಅಕ್ಷರಗಳ ಈ ಆಭರಣಗಳನ್ನು ಕಡೆದಿರಿಸಿದ ಅಗೋಚರ ಶಿಲ್ಪಿಗಳ ನೆನಪೂ ನಮಗೆ ಆಗುವುದಿಲ್ಲ!

ಜೋಕು ಹುಟ್ಟುವುದು ಹೇಗೆ ಎನ್ನುವುದು  ಸಿಲ್ಲಿ ಪ್ರಶ್ನೆ ಎಂದು ಭಾವಿಸುವವರು ಒಂದು ಪ್ರಯತ್ನ ಮಾಡಬಹುದು. ಇದುವರೆಗೂ ತಾವು ಎಲ್ಲೂ ಕೇಳಿರದ, ಎಲ್ಲೂ ಓದಿರದ ತಮ್ಮದೇ ಒಂದೈದು ಜೋಕುಗಳನ್ನು ಸೃಷ್ಟಿಸುವುದು. ಜೋಕ್ ಎಂದ ಮೇಲೆ ಅದರ ಸಾರ್ಥಕ್ಯವಿರುವುದು ಅದು ಕೇಳುಗನ ತಲೆಗೆ ಅಪ್ಪಳಿಸಿ ಆತನಲ್ಲಿ ನಗುವಿನ ಅಲೆ ಎಬ್ಬಿಸಿದಾಗಲೇ. ನಾವೆಷ್ಟೇ ಹಾಸ್ಯ ಪ್ರವೃತ್ತಿಯವರು, ಸರಸ ಮಾತುಗಾರರು ಎಂದು ಭ್ರಮೆ ಇರಿಸಿಕೊಂಡಿದ್ದರೂ ನಮ್ಮ ಕೈಲಿ ನಾಲ್ಕು ಪಂಚಿಂಗ್ ಜೋಕುಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಆ ಕುಸುರಿ ಕೆಲಸ ಬಲು ನಾಜೂಕಿನದು.

ಬಹುಶಃ ಈ ಜೋಕುಗಳೆಂಬುವು ಉರುಟುರುಟಾದ ನಾಣ್ಯದ ಹಾಗೆ ಅನ್ನಿಸುತ್ತದೆ. ಅವು ಹೆಚ್ಚು ಹೆಚ್ಚು ಕೈಗಳನ್ನು ಬದಲಾಯಿಸುತ್ತಾ ಹೋದಂತೆ, ಹೆಚ್ಚು ಚಲಾವಣೆಯಾಗುತ್ತಾ ಹೋದಂತೆ ನುಣುಪಾಗುತ್ತ ಹೋಗುತ್ತವೆ. ಹೆಚ್ಚು ಶಾರ್ಪ್ ಆಗುತ್ತಾ ಹೋಗುತ್ತವೆ. ಹೆಚ್ಚು ಪಂಚಿಂಗ್ ಎನ್ನಿಸುತ್ತವೆ. ಎಲ್ಲೂ ಪಂಡಿತೋತ್ತಮರ ಕತ್ತರಿ, ಬ್ಲೇಡುಗಳಿಗೆ ಈಡಾಗದೆ, ಹಾರ ತುರಾಯಿಯ ವೈಭೋಗವನ್ನು ಅನುಭವಿಸದೆ ಜನ ಮಾನಸದಲ್ಲಿ ಹಸಿರಾಗಿರುವ ಜೋಕುಗಳು ನಿಜಕ್ಕೂ ವಿಸ್ಮಯದ ಸಾಹಿತ್ಯವೇ ಸರಿ.

ನಿಮಗೇನನ್ನಿಸುತ್ತೆ?

Tags: , , ,

10 Responses to “ಚರ್ಚೆ: ಜೋಕು ಹುಟ್ಟುವ ಸಮಯ!”

  1. ಪ್ರಸಾದ್ February 20, 2009 at 8:31 pm #

    ಹಾಸ್ಯದ ಮೂಲದ ಪತ್ತೇದಾರಿಗೆ ಶುರುವಿಟ್ಟುಕೊಂಡಿರುವ ನಿಮಗೆ ಹಾರ್ದಿಕ ಶುಭಾಶಯಗಳು. ಜೋಕುಗಳ ಉಳಿವು, ಹೇಳುವವರ ನಾಲಿಗೆಗಿಂತ ಕೇಳುವವರ ಕಿವಿಯಿಂದಲೆ ಬದುಕಿರುವುದು ಎಂಬುದು ನನ್ನ ಅಂಬೋಣ. “ಕೆಣಕುವ” ಮೊನಚು ಜೋಕುಗಳು ಶುದ್ಧ ಹಾಗು ಚುರುಕು ಮಾನವರ(ನೀವೂ ಸಹ) ತಲೆಯಿಂದ , ಹಾಸ್ಯ , ಮನರಂಜನೆ ಹುಡುಕಿಕೊಂಡು ಎಲೆಲ್ಲೂ ಜಾಲಾಡುವ ನನ್ನಂತಹ “ಪ್ರೇತ್”ಕ್ಷಕ ಎದೆಗೆ ಇಳಿಯುವುತ್ತವೆ ಅಷ್ಟೇಯ. :)

  2. ರಂಜಿತ್ February 22, 2009 at 10:51 am #

    ಜೋಕುಗಳನ್ನು ಚಿಲ್ಲರೆ ನಾಣ್ಯಕ್ಕೆ ಹೋಲಿಸಿದ್ದಕ್ಕೆ ನನ್ನ ವಿರೋಧವಿದೆ.

    ಅದು ಗರಿ ಗರಿ ಸಾವಿರದ ನೋಟಿನ ತರಹ… ಎಷ್ಟು ಜನರ ಬಾಯಲ್ಲಿ ನಲಿದಾಡಿದರೂ (ಎಂಜಲು ತಾಕಿದರೂ) ಅದರ ಬೆಲೆ ಕಿಂಚಿತ್ ಕೂಡ ಕಡಿಮೆಯಾಗದು.

    • Nage samrat February 23, 2009 at 11:47 pm #

      ಜೋಕುಗಳನ್ನು ಗರಿ ಗರಿ ನೋಟು ಎಂದ ನಿಮ್ಮ ಮಾತಿನ ಹಿಂದೆ ರೊಕ್ಕಸ್ತರು ಮಾತ್ರ ನಗುವಿಗೆ ಅರ್ಹರು, ನಗು ಶ್ರೀಮಂತರ ಐಶಾರಾಮ ಎಂಬ ಪಟ್ಟಭದ್ರ, ಬಂಡವಾಳ ಶಾಹಿ, ಊಳಿಗಮಾನ್ಯ, ಶೋಷಕ ಮನಸ್ಥಿತಿ ಕೆಲಸ ಮಾಡಿದೆ ಎಂದು ನಾವು ಪತ್ತೆ ಹಚ್ಚಿದ್ದೇವೆ.
      ಚಿಲ್ಲರೆಯನ್ನು ಯಕಶ್ಚಿತ್ ಚಿಲ್ಲರೆ ಎಂದ ನಿಮ್ಮ ಚಿಲ್ಲರೆ ಮನಸ್ಥಿತಿಗೆ ನಾವು ಚಿಲ್ಲರೆಯಷ್ಟೂ ಗಮನ ಕೊಡುವುದಿಲ್ಲ ಎಂದು ತಿಳಿಸುತ್ತಿದ್ದೇವೆ.

      ನಗೆ ಸಾಮ್ರಾಟ್

  3. Nage samrat February 23, 2009 at 11:57 pm #

    ನಮ್ಮ ತಲೆಯ ಚುರುಕುತನದ ಬಗ್ಗೆ ಸಾಕಷ್ಟು ಭ್ರಮೆಗಳನ್ನಿರಿಸಿಕೊಂಡಿರುವ ಪ್ರಸಾದರೆ ನೀವು ಸದಾ ‘ಪ್ರೇತ್’ಕ್ಷಕ ಆಗಿರಬೇಡಿ, ನಿಮಗೊಂದು ದಿನ ನಾವು ಮುಕ್ತಿ ಕರುಣಿಸಿ ಪೂರ್ಣ ಪ್ರಮಾಣದ ಡೆವಿಲ್ ಆಗಿಸುತ್ತೇವೆ. ಆ ದಿನವನ್ನು ನಿರೀಕ್ಷಿಸುತ್ತಿರಿ…

    -ನಗೆ ಸಾಮ್ರಾಟ್

  4. ranjith February 25, 2009 at 2:23 pm #

    ನನ್ನ ವಿರೋಧವನ್ನು ವಿರೋಧಿಸಿದ್ದಕ್ಕೆ ವಿಪರೀತ ವಿರೋಧವಿದೆ.

    ಜುಟ್ಟು ಹಿಡಿದು ಕುಲುಕಿಸಿದರೂ ಚಿಕ್ಕಾಸು ಚಿಲ್ಲರೆಯೂ ಬೀಳದ ಚಿಲ್ಲರೆ ಮನುಷ್ಯನಿಗೆ ಐಶಾರಾಮಿ( ಐಶ್ ಆರಾಮಿ?) ಎಂಬ ಸುಂದರ ಕನಸನ್ನು ಆರೋಪಿಸಿದ್ದಕ್ಕೆ ನಿಮ್ಮ ಪತ್ತೇದಾರರನ್ನು ಪತ್ತೆ ಮಾಡಿ ಫೇಡವನ್ನು ತಿನ್ನಿಸಲಿದ್ದೇನೆ.

    • Nage samrat February 26, 2009 at 12:47 pm #

      ನಮ್ಮ ವಿರೋಧಕ್ಕೆ ನಿಮ್ಮ ವಿಪರೀತ ವಿರೋಧಕ್ಕೆ ನಮ್ಮ ಸಹಮತವಿದೆ.
      ಚಿಲ್ಲರೆ ಚಿಕ್ಕಾಸಿನ ವಿಷಯಕ್ಕೆ ಬಂದಾಗ ನೆನಪಾಯ್ತು, ಕಳೆದ ಸಲ ಭೇಟಿಯಾದಾಗ ನೀವು ಸಾಮ್ರಾಟರಿಗೆ ಕೊಡಬೇಕಿದ್ದ ಚಿಲ್ಲರೆಯನ್ನು ನೆನಪಿಸಿಕೊಳ್ಲಿ.

      - ನಗೆ ಸಾಮ್ರಾಟ್

  5. ರಂಜಿತ್ February 28, 2009 at 9:28 am #

    “ಸಾಮ್ರಾಟ”ರಾಗಿ ಚಿಲ್ಲರೆ ವಿಷಯಗಳನ್ನೆಲ್ಲ ಕೇಳುವುದು ವಿಹಿತವಲ್ಲ.

    ಇದನ್ನು ಕೇಳಿದರೆ ಮಂತ್ರಿಗಳು ಬಿಡಿ, ನಿಮ್ಮ ಆಸ್ಥಾನದ ಪದಾತಿಗಳೂ ಬಿಕ್ಕಿ ಬಿಕ್ಕಿ ನಕ್ಕು ಬಿಟ್ಟಾರು..:)

    • Nage samrat February 28, 2009 at 6:55 pm #

      ನಮ್ಮ ಆಸ್ಥಾನದ ಪದಾತಿಗಳನ್ನು ಸಮಾಧಾನಿಸಲು ನಿಮ್ಮ ಕವನ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಸಿದ್ಧರಾಗಿರಿ…

      -ನಗೆ ಸಾಮ್ರಾಟ್

  6. ರಂಜಿತ್ March 2, 2009 at 1:53 pm #

    ಬುದ್ಧಿ ಇಲ್ಲದೇ ಕವನ ವಾಚನ ಕೇಳಲು ಬಂದ ಪದಾತಿಗಳು ಕಾಲಿಗೆ ಬುದ್ಧಿ ಹೇಳುವುದರಲ್ಲಿ ಸಂಶಯವಿಲ್ಲ.

    • Nage samrat March 2, 2009 at 7:08 pm #

      ನಿಮ್ಮ ಕವನಗಲ್ಲಿ ಬುದ್ಧಿ ಇರುತ್ತೆ ಅಂತ ತಿಳಿದು ಆಶ್ಚರ್ಯದಿಂದ ನಮ್ಮ ಕಿವಿಗಳು ಸ್ಪೋಟಿಸುವ ಹಂತ ತಲುಪಿವೆ!
      ನಿಮ್ಮ ಕವನಗಳಲ್ಲಿ ಹೆಚ್ಚು ಹೃದಯಗಳು ತುಂಬಿರುತ್ತವೆ ಎಂದು ಹೃದಯವ ಕಳೆದುಕೊಂದವರು ಆರೋಪಿಸುತ್ತಾರೆ.

      ನಗೆ ಸಾಮ್ರಾಟ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.

Join 36 other followers