ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
……………………………………………………..
ಮಜಾವಾಣಿ ಪಲಾಯನ
ಬ್ಲಾಗ್ ಸ್ಪಾಟಿನ ಅಂಗಳದಿಂದ ಮಜಾವಾಣಿ ಎಂಬ ವಸ್ತು ನಿಷ್ಟ ಪತ್ರಿಕೆ ಪಲಾಯನ ಗೈದಿದ್ದು ಇದರಲ್ಲಿ ನಮ್ಮ ಕೈವಾಡವೇನೂ ಇಲ್ಲ ಎಂದು ಬೊಗಳೆ ಬ್ಯೂರೋ ನೀಡಿದ ಸ್ಪಷ್ಟನೆ ಎಲ್ಲೂ ಪ್ರಕಟವಾಗಿಲ್ಲ.
ತನ್ನದೇ ಆದ ತಾಣವನ್ನು ತೆರೆದುಕೊಂಡು ಸಂಪದದ ಶಾಮಿಯಾನದಲ್ಲಿ ಅಂಗಡಿ ತೆರೆದಿರುವ ‘ಮಜಾವಾಣಿ’ ತನ್ನ ಪ್ರತಿಸ್ಪರ್ಧಿ ಪತ್ರಿಕೆಗಳಿಗಿಂತ ಗಾವುದ ದೂರ ಓಡಿ ತನಗೆ ಉಸೇನ್ ಬೋಲ್ಟ್ ಆದರ್ಶ ಎಂಬುದನ್ನು ಸಾಬೀತು ಪಡಿಸಿದೆ. ಇಷ್ಟೇ ವೇಗವಾಗಿ ಓಡುತ್ತಿದ್ದರೆ ಪ್ರತಿಸ್ಪರ್ಧಿಗಳು ಮುನಿಸಿಕೊಂಡು ರೇಸಿನಿಂದಲೇ ಹಿಂದಕ್ಕೆ ಸರಿಯಬಹುದು ಎಂಬ ಎಚ್ಚರಿಕೆಯನ್ನು ನಗೆಸಾಮ್ರಾಟರು ರವಾನಿಸಿದ್ದಾರೆ!
ಬೊಗಳೆ
ಬ್ಲಾಗು ಎಂಬುದನ್ನು ಕನ್ನಡದಲ್ಲಿ ಏನೆಂದು ಕರೆಯಬೇಕು ಎಂಬುದಕ್ಕೆ ಉತ್ತಮವಾದ ಜನಾಭಿಪ್ರಾಯವನ್ನು ಮೂಡಿಸುವಲ್ಲಿ, ಜನರ ಕೆನ್ನೆಗೆ ಬೆಣ್ಣೆ ತಿಕ್ಕಿ ತಮ್ಮ ಪತ್ರಿಕೆಯ ಹೆಸರೇ ಅದಕ್ಕೆ ಸೂಚಿತವಾಗುವಂತೆ ಮಷ್ಕಿರಿ ಮಾಡುವಲ್ಲಿ ಅಸತ್ವ ಅನ್ವೇಷಿಗಳು ಯಶಸ್ವಿಯಾಗಿದ್ದಾರೆ. ಬ್ಲಾಗೆಂಬ ಒಲಿಂಪಿಕ್ಸಿನಲ್ಲಿ ಒಂದೊಂದು ಪತ್ರಿಕೆ ಒಂದೊಂದು ಸಾಧನೆ ಮಾಡುತ್ತಿದ್ದರೂ ನಗೆಸಾಮ್ರಾಟರು ಏನನ್ನೂ ಮಾಡದೆ ಸುಮ್ಮನಿದ್ದು ಮಾಡಿರುವ ಸಾಧನೆಯನ್ನು ಯಾರೂ ನೆನೆಸಿಕೊಳ್ಳುತ್ತಿಲ್ಲ ಎಂದು ಅವರ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಬೀಜಿಂಗಿಗೆ ತೆರಳದ ಸುದ್ದಿ ಮೂಲಗಳಿಂದ ತರಿಸಿಕೊಂಡ ವರದಿಯ ಪ್ರಕಾರ ಬೀಜಿಂಗಿನಲ್ಲಿ ಎಂಟು ಬಂಗಾರದ ಪದಕಗಳನ್ನು ನುಂಗಿದ ಮೀನನ್ನು ಅಮೇರಿಕಾಕ್ಕೆ ವಾಪಸ್ಸು ಕಳುಹಿಸಿದ ವರದಿಯನ್ನು ಪ್ರಕಟಿಸಿದೆ.
ಕೆಂಡಸಂಪಿಗೆಯ ಸುದ್ದಿಕ್ಯಾತ
ಹುಡುಗರೇ ನೀವು ಎಷ್ಟಾದರೂ ಮಂದಿ ಹುಡುಗಿಯರನ್ನು ಗರ್ಲ್‌ಫ್ರೆಂಡ್‌ಗಳಾಗಿ ಹೊಂದಿರಿ, ಅವರಿಗೆ ಎಷ್ಟಾದರೂ ಮಿಸ್ ಕಾಲ್ ಕೊಡಿ ಇಲ್ಲವೇ ಸ್ವೀಕರಿಸಿ ಆದರೆ ಮೆಸೇಜು ಮಾತ್ರ ಮಾಡಬೇಡಿ. ಹಾಗೊಂದು ವೇಳೆ ನೀವು ಮೇಸೇಜು ಮಾಡಿದರೆ ನಿಮಗೇ ಆಪತ್ತು ಎಂದು ಸರ್ವೆ ತಿಳಿಸಿದ ಸಂಗತಿಯನ್ನು ಸುದ್ದಿ ಕ್ಯಾತ ವರದಿ ಮಾಡಿದ್ದಾನೆ,
ಇತ್ತೀಚೆಗೆ ಈಸೋಪನ ಕಥೆಗಳಂತೆ ತನ್ನ ಪ್ರತಿಯೊಂದು ವರದಿಗೂ ನೀತಿಯನ್ನು ಕೊಡಮಾಡುತ್ತಿರುವ ಸುದ್ದಿ ಕ್ಯಾತ ಈ ವರದಿಗೆ ಕೊಟ್ಟ ನೀತಿ: ಹುಡುಗಿಯರು ಹತ್ತಿರ ಇದ್ದರೆ ಮೊಬೈಲ್ ಹೊರತೆಗೆಯಬೇಡಿ.
ಪಂಚ್ ಲೈನ್
ಬಿಜೆಪಿಯವರು ಏನೇನನ್ನೋ ಗಾಳಿಗೆ ತೂರಿ ಮತ್ತೇನನ್ನೋ ಹಿಡಿದುಕೊಳ್ಳುತ್ತಾರೆ ಎಂದು ಮರ್ಮಾಘಾತುಕಕಾರಿ ಪಂಚನ್ನು ಕೊಟ್ಟಿದ್ದ ಗಣೇಶ್ ಹಠಾತ್ತನೆ ಬ್ಲಾಗಿನ ಅಂಗಳದಿಂದ ಮರೆಯಾಗಿಬಿಟ್ಟಿದ್ದಾರೆ.
ನಗೆ ಸಾಮ್ರಾಟರು ನಮ್ಮ ಪಂಚಿನ ಚಾಂಪಿಯನ್ ಗಣೇಶರನ್ನು ಇತರ ದೇಶದವರು ಅಪಹರಿಸಿ ಒಲಿಂಪಿಕ್ಕಿನಲ್ಲಿ ಪಂಚಿಸಿ ಚಿನ್ನ ಗೆದ್ದು ತರಲು ಕಳುಹಿಸಿದ್ದಾರೇನೋ ಎಂದು ಸಂಶಯಿಸಿದ್ದರು. ಇದನ್ನು ಪತ್ತೇ ಹಚ್ಚಲು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದರು. ಆದರೆ ಪಂಚು ಕೊಡುವುದರಲ್ಲಿ ಚಿನ್ನವಿರಲಿ ತಗಡೂ ಸಹ ಗಣೇಶ್‌ಗೆ ಒಲಿಯದಿದ್ದುದರಿಂದ ಸಾಮ್ರಾಟರು ನೆಮ್ಮದಿಯಾಗಿದ್ದಾರೆ.