ನಗೆ ನಗಾರಿ ಡಾಟ್ ಕಾಮ್

ನಗಾರಿಯ ಸಂಚಿಕೆ ಹೇಗಿತ್ತು?

July 14, 2008 · 4 Comments

ಅಸಲಿಗೆ ನಗೆ ನಗಾರಿ ಡಾಟ್ ಕಾಮ್ ಎಂಬ ವಿಚಿತ್ರ ಹೆಸರಿನ ಬ್ಲಾಗನ್ನು ತೆರೆದು ಹತ್ತಿರ ಆರು ತಿಂಗಳುಗಳು ಕಳೆದಿವೆ. ಆದರೂ ಪೂರ್ಣ ಪ್ರಮಾಣದ ಸಂಚಿಕೆಯನ್ನು ರೂಪಿಸಲು ಸಾಧ್ಯವಾಗಿರಲಿಲ್ಲ. ಎಲ್ಲಾ ವಿಭಾಗಗಳಲ್ಲೂ ಬರಹಗಳನ್ನು ದಾಖಲಿಸಲು ನಮ್ಮಿಂದ ಆಗಿರಲಿಲ್ಲ. ಮೊದಲು ಇದನ್ನು ವಾರಕ್ಕೊಮ್ಮೆ ಅಪ್‌ಡೇಟ್ ಮಾಡುವ ಇರಾದೆ ನಮ್ಮದಾಗಿತ್ತಾದರೂ ಅದು ಸುಲಭದ ಕೆಲಸವಲ್ಲ ಎಂದುಕೊಂಡು ಸುಮ್ಮನಾದೆವು. ಆದರೆ ಈಗ ಹದಿನೈದು ದಿನಕ್ಕೊಮ್ಮೆ ಬ್ಲಾಗಿನ ಸಂಚಿಕೆಯನ್ನು ರೂಪಿಸಬಹುದು ಎಂಬ ಧೈರ್ಯ ಬಂದಿದೆ. ಅದಕ್ಕೇ ಪ್ರಾಯೋಗಿಕವಾಗಿ ಈ ಸಂಚಿಕೆಯನ್ನು ರೂಪಿಸಿದ್ದೇವೆ. ಈ ಹಿಂದಿನ ಹದಿನೈದು ದಿನಗಳಲ್ಲಿ ನಗೆ ನಗಾರಿ ಡಾಟ್ ಕಾಮ್ ಅರಳಿದ ರೀತಿಯನ್ನು ಗಮನಿಸಿದವರಿಗೆ ನಮ್ಮ ಪ್ರಯತ್ನದ ಅರಿವಾಗಬಹುದು.

ಇನ್ನು ಮುಂದೆ ಹದಿನೈದು ತಿಂಗಳಿಗೊಂದು ಸಂಚಿಕೆಯನ್ನು ಹೊರ ತರುವ ಯೋಜನೆಯನ್ನು ನಾವು ಹಾಕಿಕೊಂಡಿದ್ದೇವೆ. ನಗೆ ನಗಾರಿ ನಿರಂತರವಾಗಿ ಅನುರಣಿಸುತ್ತಿರಬೇಕು ಎಂಬ ಆಶಯ ನಮ್ಮದು. ನಗುವುದು ಸಹಜ ಧರ್ಮ ಎಂದರು ಡಿ.ವಿ.ಜಿ ಆದರೆ ನಾವು ಅದೊಂದು ಧರ್ಮವನ್ನು ಬಿಟ್ಟು ಬೇರೆಲ್ಲಾ ಧರ್ಮದ ಬೆನ್ನು ಹತ್ತಿ ನಗುವುದನ್ನು ಮರೆತಿರುವುದು ವಿಷಾದನೀಯ. ಇಲ್ಲಿರುವ ಬರಹಗಳು ಬೇಕಾದ ಎಲ್ಲಾ ಮಾಹಿತಿ, ವಿಶ್ಲೇಷಣೆ, ಟೀಕೆ- ಟಿಪ್ಪಣಿಗಳನ್ನೆಲ್ಲಾ ನಗೆಯ ಮಾರುವೇಷದಲ್ಲಿ ನಿಮಗೆ ತಲುಪಿಸುವ ಉದ್ದೇಶ ಹೊಂದಿರುವಂಥವು. ಇಲ್ಲಿನ ಬರಹಗಳು ನಿಮ್ಮ ಮನಸ್ಸನ್ನು ಕೊಂಚ ಸಡಿಲವಾಗಿಸಿ ಸ್ವಲ್ಪ ಮನರಂಜನೆಯನ್ನು, ಒಂದಿಷ್ಟು ಚಿಂತನೆಯನ್ನು ಹುಟ್ಟಿಸುವ ಇಶಾರೆಯನ್ನು ನೀಡಿದರೆ ಸಾಕು ನಮ್ಮ ಪ್ರಯತ್ನ ಸಾರ್ಥಕ.

ಈ ಬ್ಲಾಗಿನಿಂದ ನಗು ಹುಟ್ಟುತ್ತದೆ ಎಂಬುದು ಶುದ್ಧ ಭ್ರಮೆ. ನಗು ಎನ್ನುವುದು ನಮ್ಮ ಉಸಿರಾಟದ ಹಾಗೆ ನಮ್ಮನ್ನು ಆವರಿಸಬೇಕು. ಅದು ನಮ್ಮ ವ್ಯಕ್ತಿತ್ವದ ಹಾಗೆಯೇ ಹೊರಹೊಮ್ಮಬೇಕು. ಇಷ್ಟಕ್ಕೂ ನಮಗಿರುವ ನಾಲ್ಕು ದಿನದ ಬದುಕಲ್ಲಿ ಎಷ್ಟನ್ನು ಅಂತ ಚಿಂತೆಯಲ್ಲಿ, ರೋದನೆಯಲ್ಲಿ, ದ್ವೇಷದಲ್ಲಿ, ಬಿಗುಮಾನದಲ್ಲಿ ಕಳೆಯುವುದು ಹೇಳಿ…

-ನಗೆ ಸಾಮ್ರಾಟ್

Categories: ಸಂಪಾದಕೀಯ
Tagged: , , ,

4 responses so far ↓

Leave a Comment