ನಗೆ ನಗಾರಿ ಡಾಟ್ ಕಾಮ್

ಮಾನವನಿಗೆ ದೇವನ ಮೊರೆ!

July 10, 2008 · Leave a Comment

(ನಗೆ ನಗಾರಿ ಆಧ್ಯಾತ್ಮ ಬ್ಯೂರೋ)

ಜಗತ್ತಿನ ಸಮಸ್ತ ಲೌಕಿಕ ಸಂಗತಿಗಳ ಬಗ್ಗೆ ಹೆಕ್ಕಿ, ಹರಡಿ ವರದಿ ಮಾಡುವ ನಗೆ ಸಾಮ್ರಾಟರಿಗೆ ಒಂದು ಅನಾಮಧೇಯ ಸಂಖ್ಯೆಯಿಂದ ಫೋನ್ ಬಂದಿತು. ಯಾವುದೋ ಅಪರೂಪದ ವರದಿಯಿರಬೇಕೆಂದು ನಗೆ ಸಾಮ್ರಾಟರು ಹಿಗ್ಗಿದರು. ಹೀಗೆ ಅನಾಮಧೇಯ, ಅವಿಶ್ವಾಸನೀಯ, ಅಗೋಚರ ಸುದ್ದಿ ಮೂಲಗಳಿಂದ ಪಡೆದ ಸುದ್ದಿಯನ್ನು ರಸವತ್ತಾಗಿ ಪ್ರಕಟಿಸಿ ಕೊನೆಗೆ ಇದು ನಮ್ಮ ‘ನಂಬಲರ್ಹ’ ಮೂಲಗಳಿಂದ ಬಂದದ್ದು ಎಂದು ಹೇಳುವ ಸಂಪ್ರದಾಯವನ್ನು ಸಾಮ್ರಾಟರು ನಮ್ಮ ಮುಖ್ಯವಾಹಿನಿಯ ಸುದ್ಧಿ ಮಾಧ್ಯಗಳಿಂದ ಕಲಿತುಕೊಂಡಿದ್ದಾರೆ. ಗುರುವಿಲ್ಲದೆಯೇ, ಏಕಲವ್ಯನ ಥರ.


‘ಪ್ರಿಯ ಸಾಮ್ರಾಟ್!’ ಎಂದಿತು ಅತ್ತಲಿನ ದನಿ. ‘ನನ್ನ ದುಃಖ, ಸಂಕಟಗಳು ನಿನಗೆ ಮಾತ್ರ ತಿಳಿಯುತ್ತವೆ ಎಂದು ನಿನಗೆ ಫೋನ್ ಮಾಡಿರುವೆ.’

‘ಹೇಳಿ. ಏನಾಗಬೇಕಿತ್ತು. ನಾನು ಸದಾ ನಿಮ್ಮ ಸೇವೆಗೆ ಸಿದ್ದ, ಸಮರಕ್ಕೂ ಬದ್ಧ (ಅಯ್ಯೋ, ಅದು ಇಲ್ಲಿ ಬಳಸೋದಲ್ಲ, ಬಿಡಿ). ನೀವೇ ನಮ್ಮ ಓದುಗ ಮಹಾಶಯರು.’ ಪೀಟಿಕೆ ಹಾಕಿದರು ಸಾಮ್ರಾಟರು ಸುದ್ದಿಯನ್ನು ಪೀಕಲು.

‘ನಾನು ನಗೆ ನಗಾರಿಯ ಸ್ಕೂಪ್ ವರದಿಗಳನ್ನ ಆಗಾಗ ನಮ್ಮ ಗಣೇಶ್‌ನ ಲ್ಯಾಪ್‌ಟಾಪಿನಲ್ಲಿ ಓದುತ್ತಿರುತ್ತೇನೆ. ಅದಕ್ಕಾಗಿಯೇ ನಿಮ್ಮನ್ನು ಸಂಪರ್ಕಿಸಿದ್ದು. ಬೇರೆಯವರ ಬಳಿಗೆ ನಾನು ಹೋಗಬಹುದಿತ್ತು. ಆದರೆ ಅವರು ನಾನು ಹೇಳಿದ್ದನ್ನು ಇನ್ನು ಹೇಗೋ ತಿರುಚಿ ಬರೆದು ಅದು ಕ್ಯಾತೆಯಾಗಿ ಆಮೇಲೆ ನಾನು ಪತ್ರಿಕೆಗಳಿಗೆ ಮಾತಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಆಮೇಲೆ ಪ್ರಚಾರ ಬೇಕಾದಾಗ ಅದನ್ನು ಮುರಿಯುವುದು… ಇವೆಲ್ಲಾ ಸರಿ ಕಾಣಲಿಲ್ಲ.

‘ಹ್ಹಾ… ವಿಷಯಕ್ಕೆ ಬರುತ್ತೀನಿ. ನಾನು ದೇವರು. ನಾನು ಒಬ್ಬನೇ ಅಂತೆ, ನನಗೆ ನೂರು ನಾಮಗಳು ಎನ್ನುತ್ತಾರೆ ನನ್ನ ಭಕ್ತರು. ಆದರೆ ಒಬ್ಬೊಬ್ಬರೂ ನನಗೆ ನೂರು ನೂರು ‘ನಾಮ’ಗಳನ್ನು ತಿಕ್ಕುತ್ತಿದ್ದಾರೆ. ನನ್ನ ಸಂಕಟಗಳನ್ನು ಕೇಳುವವರು ಗತಿಯಿಲ್ಲ.

‘ನನ್ನ ಗೋಳು ಹೇಳುತ್ತಾ ಹೋದರೆ ಇಲ್ಲಿ ಮೊಬೈಲ್ ಬಿಲ್ಲು ಜಾಸ್ತಿ ಬರಬಹುದು ಎಂದು ಸುಬ್ರಹ್ಮಣ್ಯ ಎಚ್ಚರಿಸುತ್ತಿದ್ದಾನೆ. ಅದಕ್ಕೆ ಒಂದೇ ಒಂದು ಸಂಗತಿಯನ್ನು ಹೇಳುತ್ತೇನೆ. ಈ ಜನರು ನನ್ನ ಮೂರ್ತಿ ಎಂದು ಎಲ್ಲಿಂದಲೇ ತಂದ ಕಲ್ಲನ್ನು ಸಮನಾಗಿ ಕಟೆದು ದೇವಸ್ಥಾನದಲ್ಲಿ ನಿಲ್ಲಿಸುತ್ತಾರೆ. ಕೆಲವೊಮ್ಮೆ ಭೂಮಿಯಲ್ಲಿತುವ ಯಾವುದೋ ಕಲ್ಲನ್ನು ದೇವರು ಎಂದು ಉದ್ಭವ ಮೂರ್ತಿಯಾಗಿಸುತ್ತಾರೆ. ಅಸಲಿಗೆ ನಾನು ಬ್ರಹ್ಮಾಂಡದ ಎಲ್ಲಾ ಕಲ್ಲು, ಬಂಡೆ, ಮಣ್ಣು, ಚರಾಚರ ಜೀವಿಗಳಲ್ಲಿ ಇದ್ದೇನೆ. ಆದರೆ ಇವರು ಸಾಂಕೇತಿಕವಾಗಿ ಒಂದು ಕಲ್ಲನ್ನು ದೇವರು ಅಂದಾಗ ನಾನೇನು ಬೇಡ ಅನ್ನಲಿಲ್ಲ. ಕಲ್ಲಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲಾ ಸುರಿಯುತ್ತಾರೆ. ನಾನು ಅವರಿಗೆ ಇದೆಲ್ಲಾ ಏನಕ್ಕಯ್ಯಾ? ನಿಮ್ಮ ಮಧ್ಯೆಯೇ ಹಸಿವು, ನೀರಡಿಕೆ ಇರುವಾಗ ಮೊದಲು ಅದನ್ನು ತಣಿಸಿಕೊಳ್ಳಿ ನನಗ್ಯಾಕೆ ಎಂದು ಹೇಳಬೇಕೆನ್ನಿಸಿದರೂ ಸುಮ್ಮನಾದೆ.

‘ಆದರೆ ಈ ಒಂದು ಸಂಗತಿಯ ಬಗ್ಗೆ ಹೇಳಲೇಬೇಕು. ಇದು ನನಗೆ ವಿಪರೀತ ಕಿರಿಕಿರಿ ಮಾಡುತ್ತಿದೆ. ಈ ಜನರಿಗೆ ನನಗೆ ಹೂವಿನ ಮಾಲೆಯನ್ನಾಗಲೀ, ಬಿಡಿಹೂಗಳ ಅಲಂಕಾರವನ್ನಾಗಲೀ, ಚಿನ್ನದ ಬೆಳ್ಳಿಯ ತೊಡುಗೆಗಳನ್ನಾಗಲೀ ಹಾಕಬೇಡಿ ಎಂದು ಆಗ್ರಹಿಸಬೇಕು.

‘ಏಕೆ ಅನ್ನುತ್ತೀರಾ? ನೋಡಪ್ಪಾ, ನೂರಾರು ನಮೂನೆಯ ಹೂಗಳನ್ನು ತಂದು ಕಲ್ಲ ಮೇಲೆ ಜೋಡಿಸಿ ದೇವರಿಗೆ ಅಲಂಕಾರ ಮಾಡಿದೆವು ಅಂದುಕೊಳ್ತಾರೆ. ನಾನೂ ಅವರ ಮೇಲಿನ ಮಮತೆಗೆ ಕಲ್ಲೊಳಗೆ ಬಂದು ಕುಳಿತರೆ ಕಾಣುವುದು ಏನು? ಬರೀ ಹೂಗಳ ತುಂಬುಗಳು! ಚಿನ್ನದ ತೊಡುಗೆ, ಒಡವೆಯ ಹಿಂಬದಿಯನ್ನು ನಾನು ನೋಡಿ ಸಮಾಧಾನ ಪಟ್ಟುಕೊಳ್ಳಬೇಕು. ಹುಂಡಿಗೆ ದುಡ್ಡು ಹಾಕಲು ಬರುವವರ ಕಣ್ಣುಗಳಿಗೆ ತಂಪು ಕೊಡುವ ಅಲಂಕಾರ. ಈ ದೇವಸ್ಥಾನದವರಿಗೆ ದೇವರಾದ ನನಗಿಂಥಾ ಹುಂಡಿಗೆ ಹಾಕುವ ಭಕ್ತ-ಯ್ಗ್ಗಿಗಳೇ ಮುಖ್ಯವಾದರಾ? ಸರಿ, ಏನೋ ಹುಚ್ಚಾಟ ಮಾಡಿಕೊಳ್ಳಲಿ, ನಾನೇ ಆ ಭಕ್ತರ ಕಣ್ಣುಗಳನ್ನು ಸೇರಿ ನನ್ನ ಅಲಂಕಾರವನ್ನು ನೋಡೋಣ ಎಂದುಕೊಂಡರೆ ಅದೂ ಸಾಧ್ಯವಿಲ್ಲ.

‘ಹೂಂ, ಹೇಳ್ತೇನೆ ಇರು. ಜಗತ್ತಿನ ಬೇರೆಲ್ಲಾ ವಸ್ತು, ಜೀವಿಗಳಲ್ಲಿ ನಾನು ವಾಸವಿದ್ದೇನೆ. ನಾನು ಯಾವುದನ್ನಾದರೂ ಪ್ರವೇಶಿಸಬಹುದು. ಆದರೆ ಈ ಮನುಷ್ಯನನ್ನು ಮಾತ್ರ ನಾನು ಪ್ರವೇಶಿಸಲಾಗದು. ಆತ ತನ್ನ ಸ್ವಂತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾನೆ. ಅದಕ್ಕೇ ನಾನು ಅವನ ಕಣ್ಣು ಸೇರಿ ನನ್ನ ಅಲಂಕಾರ ನೋಡಲಾಗದು.

‘ನನಗೊಂದು ಸಹಾಯ ಮಾಡಪ್ಪ. ನೀನು ಜನರಿಗೆ ಇನ್ನು ಮುಂದೆ ದೇವರಿಗೆ ಯಾವ ಹೂವು, ಹೂಹಾರ, ಫಲ, ಪತ್ರೆ, ಒಡವೆ, ಕವಚಗಳ ಅಲಂಕಾರ ಬೇಡವಂತೆ ಎಂಬ ಸಂದೇಶವನ್ನು ತಲುಪಿಸಿಬಿಡಪ್ಪ. ನೀನು ನನ್ನ ಆಶಯದ ‘ಆವರಣ’ದಲ್ಲಿ ನಿನ್ನ ಆಶಯವನ್ನು ತುಂಬಿ ಹೂರಣವನ್ನು ಕೆಡಿಸಿ ವರದಿ ಮಾಡುವುದಿಲ್ಲ ಅನ್ನೋ ನಂಬಿಕೆ ನನಗಿದೆ.

‘ಸರಿಯಪ್ಪ, ಸುಬ್ರಹ್ಮಣ್ಯ ಎಚ್ಚರಿಸ್ತಾ ಇದ್ದಾನೆ. ಇಡಲಾ ಫೋನು. ದೇವರು ನಿನಗೆ ಒಳ್ಳೆಯದು ಮಾಡಲಿ’

‘ಫೋನಿ’ಗನ ಮಾತಿನ ಕೊನೆಯ ಸಾಲನ್ನು ಕೇಳಿ ಸಾಮ್ರಾಟರಿಗೆ ದಿಗ್ಧರ್ಶನವಾದ ಹಾಗಾಗಿ ಜ್ಞಾನೋದಯವಾಗಿದೆ. ಮಠ, ಮಂದಿರ, ಬದುಕಿನ ಆರ್ಟು, ‘ಕಾಮ’ರ್ಸು ಕಲಿಸುವ ಶಾಲೆ ತೆರೆಯುವ ಉದ್ದೇಶವಿರುವವರು ಆವಶ್ಯಕವಾಗಿ ಸಂಪರ್ಕಿಸಬಹುದು.

Categories: ಆಧ್ಯಾತ್ಮ
Tagged: , , , , , , ,

0 responses so far ↓

  • There are no comments yet...Kick things off by filling out the form below.

Leave a Comment