ನಗೆ ನಗಾರಿ ಡಾಟ್ ಕಾಮ್

ಕಂತೆಯ ಧೂಳು ಕೊಡವಿ…

July 10, 2008 · Leave a Comment

ನಗೆ ನಗಾರಿ ಡಾಟ್ ಕಾಮ್‌ನ ಹಳೆಯ ಕಂತೆಯ ಕಡತಗಳ ಸಂತೆ ನೆರೆದಿತ್ತು ಮೊನ್ನೆ. ಹಳೆಯ ಕಂತೆಯಿಂದ ಧೂಳು ಕೊಡವಿದ ಕೆಲವು ತುಣುಕುಗಳನ್ನು ನೆನಪಿಸಿಕೊಳ್ಳುವ ಮನಸ್ಸಾಯಿತು. ಗಾಯವನ್ನು ನಾಯಿ ನೆಕ್ಕಿಕೊಳ್ಳುತ್ತಾ ದಿವ್ಯ ಸುಖವನ್ನು ಪಡೆವಂತೆ!

ಓಲ್ಡ್ ಈಸ್ ಗೋಲ್ಡ್ ಎನ್ನುತ್ತಾರೆ. ಹಳೆಯದೆಲ್ಲಾ ಬಂಗಾರದ ಹಾಗೆ. ಬಂಗಾರದ ಬೆಲೆ ರಾಕೆಟ್‌ಗೆ ಪೈಪೋಟಿ ಕೊಡುವ ವೇಗದಲ್ಲಿ ಏರುತ್ತಿರುವುದನ್ನು ಗಮನಿಸಿದರೆ ಹಳೆಯದರ ಬೆಲೆ ಹೆಚ್ಚುತ್ತಿದೆ ಎಂದು ಭಾವಿಸಬಹುದು. ಹಳೆಯದೆಲ್ಲವಕ್ಕೂ ಬೆಲೆ ಬರುತ್ತದೆ ಎಂದರೆ ಜನರು ತಮ್ಮ ಅನುಭವದ ಕಂತೆಯನ್ನೇ ಸಂತೆಯಲ್ಲಿ ಬಿಕರಿಗಿಟ್ಟು ಬಿಡುತ್ತಿದ್ದರು. ಇರಲಿ, ಈಗ ಹಳೆಯ ಕಂತೆಯ ಮೇಲೆ ಕೈ ಮಡಗೋಣ!

ನಗೆ ನಗಾರಿ ಡಾಟ್ ಕಾಮ್ ಎಂಬ ಬ್ಲಾಗು ತೆರೆದುಕೊಂಡದ್ದು ಏತಕ್ಕೆ? ಜಗತ್ತಿನಲ್ಲಿ ಲಕ್ಷಾಂತರ ಮನುಷ್ಯರು, ಜೀವಿ ಜಂತುಗಳು ಯಾವ ಕಾರಣವಿಲ್ಲದೆಯೇ ಹುಟ್ಟಿದರೂ ಕೆಲವು ಅವತಾರಗಳು ಹುಟ್ಟುವುದಕ್ಕೆ ಕಾರಣವನ್ನಿಟ್ಟುಕೊಂಡೇ ಹುಟ್ಟಿಬರುತ್ತವೆ. ಹಾಗೆಯೇ ನೂರಾರು ಬ್ಲಾಗುಗಳ ಮಧ್ಯದಲ್ಲಿ ನಗಾರಿಯ ಸದ್ದು ಶುರುವಾಗುವುದಕ್ಕೆ ಕಾರಣವಿಲ್ಲದೆ ಇರಲಿಲ್ಲ. ಒಂದರ್ಥದಲ್ಲಿ ನಮ್ಮದೂ(ಬಹುವಚನದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ) ಒಂದು ಅವತಾರ. ಆದರೆ ಯಾರ ಉಪಯೋಗಕ್ಕೆ ಬರುತ್ತದೋ ಕಾಣೆವು (ಹೇಳಲಿಲ್ಲವಾ, ಬಹುವಚನ ಇಂಪಾರ್ಟೆಂಟ್ ಅಲ್ಲಾ ಅಂತ)!

ನಗಾರಿ ಸದ್ದು ಮಾಡಾಲು ತೊಡಗಿದ್ದೇ ಅದಕ್ಕೆ!

…ಈ ನಿಟ್ಟಿನಲ್ಲಿ ಹಾಸ್ಯವನ್ನು ಟಿ.ವಿ ಚಾನೆಲ್ಲುಗಳ ದಿನಗೂಲಿ ಜೋಕರ್‌ಗಳ ಹಳಸಲು ಜೋಕುಗಳಿಂದ, ದಿನ ಪತ್ರಿಕೆಗಳ ಸ್ಥಳ ತುಂಬಿಸುವ ನಗೆ ಹನಿಗಳಿಂದ, ವಾರಪತ್ರಿಕೆಗಳ ಅನಿವಾರ್ಯ ‘ಹಾಸ್ಯ ಲೇಖನ’ಗಳಿಂದ, ಸಿನೆಮಾಗಳ ಆಟಕ್ಕುಂಟು ಲೆಕ್ಕಕ್ಕಿಲ್ಲವೆನ್ನುವ ಸಂಪ್ರದಾಯದಿಂದ ಮುಕ್ತಗೊಳಿಸಿ ಹೊಸ ಹೊಳಪು ಕೊಟ್ಟು ಅದರ ಹೊಸ ಸಾಧ್ಯತೆಗಳನ್ನು, ಹೊಸ ಆಯಾಮಗಳನ್ನು ಅನ್ವೇಷಿಸುವುದಕ್ಕಾಗಿಯೇ ಈ ಪ್ರಯತ್ನ. ಅದಕ್ಕಾಗಿಯೇ ನಗೆಯ ನಗಾರಿ ಸದ್ದು ಮಾಡಲು ಆರಂಭಿಸಿದ್ದು!…

ಹಳೆಯ ಕಂತೆಗೆ ಕೈ ಇಡುವ ಮುನ್ನ ಸ್ವಲ್ಪ ಚೆನ್ನಾಗಿ ಧೂಳು ಕೊಡವಿ.

Categories: ಇತರೆ
Tagged: , , ,

0 responses so far ↓

  • There are no comments yet...Kick things off by filling out the form below.

Leave a Comment