( ನಗೆ ನಗಾರಿ ಸಿನಿಮಾ ಬ್ಯೂರೋ)
‘ಕನ್ನಡದ ಹಿರಿಯ ನಾಯಕ ನಟರುಗಳಿಗೆ ಇತ್ತೀಚೆಗೆ ತೀರಾ ಅವಮಾನವಾಗುತ್ತಿದೆ. ಸಿನೆಮಾಗಳಿಗೆಲ್ಲಾ ಶಾಲಾ ಕಾಲೇಜು ಹುಡುಗರು ನಾಯಕರಾಗುತ್ತಿದ್ದಾರೆ. ವರ್ಷಕ್ಕೆ ಡಬ್ಬಾದಿಂದ ಹೊರಬರುವ ಚಿತ್ರಗಳಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಯುವ ನಾಯಕರೇ ಹೆಚ್ಚಾಗಿದ್ದಾರೆ. ಇದು ಚಿತ್ರರಂಗದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರ್ವ ಸಮಾನತೆಯ ಸಿದ್ಧಾಂತದ ಮೇಲೆ ಸಿನೆಮಾಗಳು ತಯಾರಾಗಬೇಕು. ಹೀಗಾಗಿ ನಾವು ಹಿರಿಯ ನಾಯಕರಿಗೆ ವರ್ಷಕ್ಕೆ ಕನಿಷ್ಟ ಪಕ್ಷ ಇಪ್ಪತ್ತು ಪರ್ಸೆಂಟ್ ಸಿನೆಮಾಗಳಲ್ಲಾದರೂ ಹೀರೋ ಪಾತ್ರವನ್ನು ಮೀಸಲು ಇಡಬೇಕು ಎಂದು ಒತ್ತಾಯ ಪಡಿಸುತ್ತಿದ್ದೇವೆ.’ ಎನ್ನುತ್ತದೆ ಚಿತ್ರರಂಗದಲ್ಲಿ ಮಾಡಲು ಕೆಲಸವಿಲ್ಲದ ‘ಕ್ರಿಯಾಶೀಲ’ರ ಸಂಘಟನೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ. ಈ ಪ್ರಕಟಣೆ ಕೇವಲ ನಗೆ ನಗಾರಿಯ ಕಛೇರಿಯನ್ನು ತಲುಪಿರುವುದರ ಹಿಂದಿನ ರಹಸ್ಯದ ಬಗ್ಗೆ ಪ್ರತಿಸ್ಪರ್ಧಿ ಪತ್ರಿಕೆಗಳು ತನಿಖೆ ನಡೆಸಬಹುದು!
‘ಕನ್ನಡದಲ್ಲಿ ಅನಾರೋಗ್ಯಕರವಾದ ಬೆಳವಣಿಗೆಯೊಂದು ನಡೆಯುತ್ತಿದೆ. ಇದರಿಂದ ನಟನೆ ಎಂಬ ಕಲೆಗೇ ಅವಮಾನ ಮಾಡಿದ ಹಾಗಾಗುತ್ತದೆ.’ ಎಂದು ನಗೆ ಸಾಮ್ರಾಟರೊಂದಿಗೆ ಮಾತಿಗಿಳಿದ ನಿರುದ್ಯೋಗಿ ಕ್ರಿಯಾಶೀಲರ ಸಮಿತಿಯ ಕಾರ್ಯದರ್ಶಿ ‘ ಈಗ ನೋಡಿ ಕಲಾವಿದನ ನಿಜವಾದ ಸಾಮರ್ಥ್ಯ ಹಾಗೂ ಪ್ರತಿಭೆಯ ಅನಾವರಣವಾಗುವುದು ಆತ ಪಾತ್ರವೊಂದನ್ನು ಆವಾಹಿಸಿಕೊಂಡು ನಟಿಸಿದಾಗ. ಉದಾಹರಣೆಗೆ ರಾಜನ ಪಾತ್ರವನ್ನು ಮಾಡುವಾಗ ನಾಯಕ ನಟ ಬಡವನಾದರೂ, ಸಿರಿವಂತಿಕೆಯ ಗತ್ತನ್ನು ಒಂದು ದಿನವೂ ಅನುಭವಿಸಿ ಗೊತ್ತಿರದಿದ್ದರೂ ರಾಜನ ಪಾತ್ರಕ್ಕೆ ತಕ್ಕ ಹಾಗೆ ಅಭಿನಯಿಸಬೇಕು. ಪಾತ್ರಕ್ಕೂ, ನಿಜ ವ್ಯಕ್ತಿತ್ವಕ್ಕೂ ನಡುವಿರುವ ಕಂದಕ ಹೆಚ್ಚಿದಷ್ಟೂ ಅದು ಕಲಾವಿದನಿಗೆ ಬಲವಾದ ಸವಾಲನ್ನು ಒಡ್ಡುತ್ತದೆ. ಅದನ್ನು ನಿಭಾಯಿಸುವವನು ಒಳ್ಳೆಯ ನಟ.’ ಎಂದರು.
‘ನಿಮ್ಮ ಫಿಲಾಸಫಿ ಎಲ್ಲಾ ಸರಿ ಸಾರ್. ಅದಕ್ಕೂ ಪ್ರಸ್ತುತ ನೀವು ಮಾಡುತ್ತಿರುವ ಹಕ್ಕೊತ್ತಾಯಕ್ಕೂ ಏನು ಸಂಬಂಧ ಸಾರ್?’ ತಲೆ ಕೆರೆದುಕೊಂಡು ಪ್ರಶ್ನಿಸಿದರು ನಗೆ ಸಾಮ್ರಾಟ್.
‘ಸಂಬಂಧವಿಲ್ಲದೆ ಮಾತನಾಡುವುದು ನನಗೆ ಸಂಬಂಧಿಸಿದ ವಿಚಾರವಲ್ಲ. ನಾನಿನ್ನೂ ರಾಜಕೀಯಕ್ಕೆ ಇಳಿಯುವ ಮನಸ್ಸು ಮಾಡಿಲ್ಲ. ಒಂದು ವೇಳೆ ಜನಪ್ರಿಯತೆಯ ಭಾರ ಜಾಸ್ತಿಯಾದರೆ ಅದನ್ನು ಕಳೆದುಕೊಂಡು ಸ್ವಲ್ಪ ನಿರಾಳವಾಗುವುದಕ್ಕೆ ಆ ಯೋಚನೆ ಮಾಡಬಹುದು. ಆಗ ಸಂಬಂಧವಿಲ್ಲದ ಹಾಗೆ ಮಾತನಾಡುವುದಕ್ಕೆ ಪ್ರಯತ್ನ ಪಡುತ್ತೇನೆ.
‘ಈಗ ಪ್ರಸ್ತುತ ಹಕ್ಕೊತ್ತಾಯದ ವಿಷಯಕ್ಕೆ ಬರುತ್ತೇನೆ. ನೋಡಿ ಈಗ ಕಾಲೇಜು ಹುಡುಗ ಪಾತ್ರಕ್ಕೆ ಕಾಲೇಜಿನಲ್ಲಿ ಓದುತ್ತಿರುವ ಹುಡುಗನನ್ನೇ ಹಾಕಿಕೊಳ್ಳುತ್ತಿದ್ದಾರೆ. ಯುವಕನ ಪಾತ್ರಕ್ಕೆ ಯುವ ನಟನನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಪಾತ್ರವನ್ನು ಆವಾಹಿಸಿಕೊಳ್ಳುವ ಅವಕಾಶವನ್ನೇ ಕೊಟ್ಟಂತಾಗುವುದಿಲ್ಲ. ಯುವಕರು ಯುವಕರ ಹಾಗೆ ನಟಿಸಲು ಏನು ಮಹಾ ಪ್ರತಿಭೆ ಬೇಕು ಹೇಳಿ? ಪ್ರಾಣಿ ಪ್ರಾಣಿಯಂತಿರುವುದಕ್ಕೆ ಯಾವುದಾದರೂ ಪರಿಶ್ರಮ ಬೇಕೇ? ಪ್ರಾಣಿ ಮನುಷ್ಯನ ಹಾಗೆ ಮಾಡುವುದಕ್ಕೆ ಅಗಾಧವಾದ ಪ್ರತಿಭೆ ಬೇಕು. ವಯಸ್ಸು ನಲವತ್ತು ದಾಟಿ, ಕ್ರಾಪಿನ ಜಾಗದಲ್ಲಿ ಜಾರುವ ಬುರುಡೆ ಬಂದವರಿಗೆ ಇಪ್ಪತ್ತರ ಹರೆಯದ ನಾಯಕನ ಪಾತ್ರವನ್ನು ಕೊಡಬೇಕು. ಆಗ ನಟನಾ ಸಾಮರ್ಥ್ಯ ಅನಾವರಣ ಗೊಳ್ಳುತ್ತದೆ. ಇಪ್ಪತ್ತರ ತರುಣನಿಗೆ ಹದಿನೆಂಟರ ತರುಣಿಯ ಸೊಂಟ ಬಳಸಿ ಕುಣಿಯುವುದು ಕಷ್ಟವಾಗುವುದಿಲ್ಲ ಅದಕ್ಕೆ ಯಾವ ಸಾಧನೆಯೂ ಬೇಕಿಲ್ಲ. ಆದರೆ ನಲವತ್ತೈದರ ನಟ ತನ್ನ ಮಗಳ ವಯಸ್ಸಿನ ನಟಿಯೊಂದಿಗೆ ಮರ ಸುತ್ತುವುದು ನಿಜಕ್ಕೂ ಎಕ್ಸ್ಟ್ರಾರ್ಡಿನರಿ. ಅದಕ್ಕಾಗಿಯೇ ನಾವು ಕನ್ನಡದಲ್ಲಿ ತಯಾರಾಗುವ ಸಿನೆಮಾಗಳಲ್ಲಿ ಶೇ. ೨೦ರಷ್ಟು ಸಿನೆಮಾಗಳಿಗೆ ನಲವತ್ತು ದಾಟಿದವರನ್ನೇ ಯುವ ನಾಯಕನ ಪಾತ್ರಕ್ಕೆ ಆರಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ.’ ಎಂದು ವಿವರಿಸಿದರು.
ಸಂದರ್ಶನ ಮುಗಿಸಿದ ನಗೆ ಸಾಮ್ರಾಟರಿಗೆ, ಹೌದು ಇವರು ಬರೀ ನಾಯಕ ನಟರುಗಳ ಬಗ್ಗೆ ಮಾತನಾಡುತ್ತಿದ್ದಾರಲ್ಲ, ನಟೀ ಮಣಿಯರ ವಿಚಾರವೇನು ಎಂದು ಕೇಳುವ ಮನಸ್ಸಾಯಿತು. ಆದರೆ ನಲವತ್ತು ಮೀರಿದ ನಟಿ ಮಣಿಯರು ಹದಿನೆಂಟರ ಹುಡುಗನ ಬೆನ್ನು ತಬ್ಬಿಕೊಂಡು ಬೈಕಿನಲ್ಲಿ ಕಾಲೇಜಿಗೆ ಬರುವ ದೃಶ್ಯವನ್ನು ಕಲ್ಪಿಸಿಕೊಂಡು ತಮ್ಮ ಪ್ರಶ್ನೆ ಮಹಿಳಾ ಉಟ್ಟು ಓರಾಟಗಾರ್ತಿಯರ್ಯಾರ ಕಿವಿಗೂ ಬೀಳದಂತೆ ಎಚ್ಚರವಹಿಸಿ ಅಲ್ಲಿಂದ ಜಾರಿಕೊಂಡರು!
0 responses so far ↓
There are no comments yet...Kick things off by filling out the form below.