ನಗೆ ನಗಾರಿ ಡಾಟ್ ಕಾಮ್

ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್

July 7, 2008 · 2 Comments

(ನಗೆ ನಗಾರಿ ಕ್ರೀಡಾ ಬ್ಯೂರೋ)

ದೇಶ ಬಿಟ್ಟು ನೂರಾರು ಮೈಲು ದೂರ ಹಾರಿ ಹೋಗಿ ಅಲ್ಲಿನ ತಂಡದ ಆಟಗಾರನೊಬ್ಬನಿಗೆ ತನ್ನ ಭಾಷೆಯಲ್ಲಿಯೇ ‘ತೆರೆ ಮಾ ಕೀ..’ ಎಂದು ಮೈದನದಲ್ಲೇ ಬೈದು ಅದನ್ನು ಆ ಆಸ್ಟ್ರೇಲಿಯನ್ನು ‘ಮಂಕೀ’ ಎಂದು ಅರ್ಥೈಸಿಕೊಂಡು ಅವಮಾನಿತನಾದವನಂತೆ ನಟಿಸಿ ಕೇಸು ಜರುಗಿಸಿ ಸುಸ್ತಾದದ್ದು ಹಳೆಯ ಸಂಗತಿಯಾದರೂ ಆ ಮಂಕೀ ವೀರನಿಗೆ ಟಾಂಗುಕೊಟ್ಟ ಹರ್‌ಭಜನ್ ಸಿಂಗ್ ದೇಶದ ಜನರ ಕಣ್ಣಿನಲ್ಲಿ ಹೀರೋ ಆಗಿದ್ದ. ಅವನ ವಿರುದ್ಧ ಪ್ರಪಂಚದ ಪತ್ರಿಕೆಗಳೆಲ್ಲಾ ಮುರಕೊಂಡು ಬಿದ್ದರೂ ನಮ್ಮ ಜನರು ಎರಡೂ ಕೈಚಾಚಿ ಆತನನ್ನು ಬರಸೆಳೆದು ಅಪ್ಪಿಕೊಂಡರು. ಏನೋ ಸ್ವಲ್ಪ ಒರಟ ಅನ್ನೋ ಕಾರಣಕ್ಕೆ ಮನೆ ಮಗನನ್ನು ದೂರಲು ಸಾಧ್ಯವಾಗುತ್ತದೆಯೇ ನೀವೇ ಹೇಳಿ. (ಅಲ್ಲದೆ ಒರಟ ಐ ಲವ್ ಯೂ ಎಂದು ಹಾಡುವವರ ನಾಡು ನಮ್ಮದು!)

ದುಡ್ಡಿನ ಜಾತ್ರೆಯ ನೆಪದಲ್ಲಿ ನಲವತ್ತು ಚಿಲ್ಲರೆ ದಿನಗಳಲ್ಲಿ ಆಡಿಸಿದ ಕ್ರಿಕೆಟ್ ಎಂಬ ಆಟದಲ್ಲಿ ನಮ್ಮ ಭಜ್ಜಿ ರಾಂಗಾದದ್ದನ್ನು ಯಾರೂ ಮರೆತಿಲ್ಲ. ತನ್ನ ತಂಡ ಹೀನಾಯವಾಗಿ ಸೋತಾಗ ಎದುರಾಳಿ ತಂಡದಲ್ಲಿರುವ ತನ್ನದೇ ಸಹೋದ್ಯೋಗಿಗೆ ಕಪಾಳಮೋಕ್ಷ ಮಾಡಿದ. ಅವನ ಸಿಟ್ಟು, ಒರಟುತನ ಗೊತ್ತಿದ್ದವರಿಗೇ ಗಾಬರಿಯಾಯಿತು. ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು ಎಂದು ಬುದ್ಧಿ ಮಾತು ಹೇಳಲು ಹೋದರೆ ನಮ್ಮ ಕೆನ್ನೆಗೊಂದು ಬಾರಿಸಿ ‘ಇದೂ ಕ್ರೀಡಾ ಮನೋಭಾವವೇ, ಬಾಕ್ಸಿಂಗಿನದು’ ಎನ್ನಬಹುದು ಎಂಬ ಭಯದಿಂದ ಬುದ್ಧಿಜೀವಿಗಳು ತೆಪ್ಪಗಾದರು. ಸಿಂಗಿಗೆ ಪನಿಶ್ ಮೆಂಟ್ ಕೊಟ್ಟು ಶಾಂತನಿಗೆ ಉಶ್..ಉಶ್ ಮಾಡಿ ಕೈತೊಳೆದುಕೊಂಡರು.

ಕೆನ್ನೆಗೆ ಬಾರಿಸಿದ ತಪ್ಪಿಗಾಗಿ ಭಜ್ಜಿ ಈಗ ಶಾಂತನಿಗೆ ಕಂಡಕಂಡಲ್ಲಿ ಡಿನ್ನರ್ ಕೊಡಿಸುವ ಕರ್ಮ ಅಂಟಿಸಿಕೊಂಡಿದ್ದಾನೆ. ಈ ನಡುವೆ ಬೇರಾವ ಪತ್ರಿಕೆ, ನ್ಯೂಸ್ ಚಾನಲ್ಲು, ಟ್ಯಾಬಲಾಯ್ಡು, ಸುದ್ದಿ ಸಂಸ್ಥೆಗಳಿಗೆ, ಬೊಗಳೆ ಮಜಾದ ಬ್ಯೂರೋಗೂ ದಕ್ಕದ ಸುದ್ದಿ ನಗೆ ನಗಾರಿಯ ಒನ್ ರೂಂ ಕಚೇರಿಯನ್ನು ತಲುಪಿದೆ.

ಅದೇನೆಂದರೆ ಐಪಿಎಲ್ ಎಂಬ ಹಣದ ತೈಲಿಯ ಜಾತ್ರೆಯ ನೆಪದಲ್ಲಿ ನಡೆಯುವ ಕ್ರಿಕೆಟ್ ಆಟದಲ್ಲಿ ಭಾರೀ ಕಾಸನ್ನು ಹೂಡಿರುವ ಕುಳಕ್ಕೆ ಸಿಂಗನ ಬಗ್ಗೆ ಚಿಂತೆಯಾಗಿದೆಯಂತೆ. ಆತನ ಕೋಪಕ್ಕೆ, ಒರಟುತನಕ್ಕೆ ಒಳ್ಳೆ ಇಲಾಜು ಕೊಡಿಸಬೇಕೆಂದು ಆತ ಅವನನ್ನು ಕೋಚಿಂಗಿಗೆ ಕಳುಹಿಸುತ್ತಿದ್ದಾನಂತೆ. ಯಾರ ಬಳಿ ಅಂದಿರಾ? ನಂಬ್ತೀರೋ ಬಿಡ್ತೀರೋ ಕೇಳಿ, ಶಾಂತನ ಬಳಿ! ಹೌದು ಹೌಹಾರಬೇಡಿ. ಈ ಹಿಕಮತ್ತಿನ ಹಿಂದಿನ ಮರ್ಮ ತಿಳಿಯಲು ನಗೆ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಅಟ್ಟಿದ್ದು ವರದಿ ಈಗ ತಾನೆ ಟೆಲಿ ಪ್ರಿಂಟರಿನಿಂದ ತಲೆಗೆ ಹಾರಿದೆ.

ಅದು ಆಸ್ಟ್ರೇಲಿಯಾದ ಆಂಡ್ರೂ ಸಾಯಿ-ಮೊಂಡನೇ ಆಗಿರಲಿ, ಹೇ-ಡಾನ್ ಆಗಲಿ, ಸೋತ ಆಫ್ರಿಕಾದ ಆಂಡ್ರೂ ನೆಲ್ಲಿಯಾಗಲಿ ಎಲ್ಲರ ವಿರುದ್ಧವೂ ಮೂಗಿನ ಹೊಳ್ಳೆ ಅಗಲಿಸಿಕೊಂಡು ಡ್ರಾಗನ್ನಿನ ಹಾಗೆ ಘರ್ಜಿಸುವ ಶಾಂತನಿಗೆ ಏಕೆ ಯಾರೂ ಶಿಕ್ಷೆ ವಿಧಿಸಿಲ್ಲ? ಅದಕ್ಕೆ ಕಾರಣವಿದೆ. ಶಾಂತನು ತನ್ನ ಎದುರಾಳಿಯ ಮೇಲಿನ ಸಿಟ್ಟು, ಸೆಡುವುಗಳನ್ನೆಲ್ಲಾ ಹೊರಹಾಕಲು ಅತ್ಯಂತ ಚಾಣಾಕ್ಷವಾದ ವಿಧಾನವೊಂದನ್ನು ಕಂಡುಕೊಂಡಿದ್ದಾನಂತೆ. ಕ್ರಿಕೆಟ್ ಮೈದಾನದ ಪಿಚ್‌ನ್ನೇ ಎದುರಾಳಿಯ ಕೆನ್ನೆ ಎಂದುಕೊಂಡು ಅದಕ್ಕೇ ತನ್ನೆರಡು ಹಸ್ತಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವಷ್ಟು ಹೊತ್ತು ‘ನಗಾರಿ’ ಬಾರಿಸುತ್ತಾನಂತೆ. ಇತ್ತ ಹಾವೂ ಸಾಯಬೇಕು ಅತ್ತ ಕೋಲೂ ಮುರಿಯಬಾರದು ಎಂಬ ಬುದ್ಧಿವಂತಿಕೆ. ಇದನ್ನು ಕಲಿಯುವುದಕ್ಕೆ ಭಜ್ಜಿಯನ್ನು ಶಾಂತನ ಬಳಿಗೆ ಕೋಚಿಂಗಿಗೆ ಕಳಿಸಲಾಗುತ್ತಿದೆಯಂತೆ. ಹೀಗಾಗಿ ಭಜ್ಜಿ ಶಾಂತನಿಗೆ ಬಿಟ್ಟಿ ಡಿನ್ನರುಗಳಿಗೆ ಕರೆಯುವ ಅನಿವಾರ್ಯತೆಯಿದೆಯಂತೆ.

ಈ ಮಧ್ಯೆ ನಮ್ಮ ವರದಿ ಮಧ್ಯದಲ್ಲೆಲ್ಲೋ ಲೀಕ್ ಆಗಿ ಕ್ರಿಕೆಟ್ ಮೈದಾನದ ಅಂಗಳದ ಕ್ಯೂರೇಟರ್‌ ನಮ್ಮನ್ನು ಸಂಪರ್ಕಿಸಿ ಈ ಸುದ್ದಿಯಿಂದ ನಮಗೆ ತೀವ್ರವಾದ ಹಾನಿಯಾಗುತ್ತದೆ. ಎಲ್ಲಾ ಕ್ರಿಕೆಟ್ ಮಂದಿಯೂ ಶಾಂತನ ಟೆಕ್ನಿಕ್ ಬಳಸಲು ಶುರು ಮಾಡಿಕೊಂಡರೆ ನಮ್ಮ ಪಿಚ್ಚುಗಳ ಕೆನ್ನೆ ಜಖಂ ಗೊಳ್ಳುತ್ತದೆ ಎಂದು ಅವರು ತಮ್ಮ ಆತಂಕ ತೋಡಿಕೊಂಡಿದ್ದಾರೆ.

Categories: ಕ್ರೀಡೆ
Tagged: , , , , , , , ,

2 responses so far ↓

  • hema // July 8, 2008 at 3:50 pm | Reply

    ivaru dinner maduvaga yaryarige hoditharo varadhiyagillavalla……

  • Nage samrat // July 8, 2008 at 8:06 pm | Reply

    ಅದನ್ನ ತಿಳಿಯೋಕೆ ಹೋಗಿ ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯ ವರದ್ದಿಗಾರ ಕೆನ್ನೆ ಊದಿಸಿಕೊಂಡು ಬಂದಿರುವುದಾಗಿ ತಿಳಿದುಬಂದಿದೆ :)

    ನೆಗೆ ಸಾಮ್ರಾಟ್

Leave a Comment