ಬಹು ಹಿಂದೆ ಸಾಮ್ರಾಟರ alter ego ವೈಕುಂಟದ ಶ್ರೀ ಕೃಷ್ಣನನ್ನೂ, ಮಹಾರಾಷ್ಟ್ರದಿಂದ ಕನ್ನಡ ನಾಡಿಗೆ ಅವತರಿಸಿದ ಎಸ್.ಎಂ.ಕೃಷ್ಣರನ್ನೂ ಒಟ್ಟಿಗೇ ಕೂರಿಸಿಕೊಂಡು ಸಂದರ್ಶನ ಮಾಡಿಬರುತ್ತೇನೆ ಎಂದು ಹೋಗಿದ್ದು ನಿನ್ನೆ ರಾತ್ರಿ ಬರಿಗೈಯಲ್ಲಿ ನಗೆ ನಗಾರಿ ಕಛೇರಿಗೆ ವಾಪಸ್ಸಾಯಿತು. ವೈಕುಂಟಕ್ಕೆ ಸಾಗುವ ದಾರಿ ಮಧ್ಯದಲ್ಲಿ ಭಾರಿ ಅಪಘಾತವುಂಟಾಗಿ ನಗೆ ಸಾಮ್ರಾಟರ ‘ತದ್ರೂಪು’ ಮದ್ಯದ ದೊರೆ ಮಲ್ಯನ ಕಿಂಗ್ ಫಿಶರಿನ ರೆಕ್ಕೆಯ ಮೇಲೆ ಹಾರಿ ಒಳಕ್ಕೆ ತೂರಿಕೊಂಡು ಬಿಟ್ಟಿತು. ಅಲ್ಲಿನ ಗಗನ ಸಖಿಯರ ಸ್ಕರ್ಟಿನ ಜೊತೆಗೆ ಡಾ|| ವಿಜಯ ಮಲ್ಯರ ಟಾನಿಕ್ಕಿನ ಕಿಕ್ಕು ಸೇರಿ ತಾನು ಹೊರಟಿದ್ದ ಕೆಲಸವೇ ಮರೆತುಹೋಗಿತ್ತು. ಆ ಕಿಕ್ಕು ಇಳಿದ ನಂತರ ನೇರವಾಗಿ ನಿನ್ನೆ ರಾತ್ರಿ ನಮ್ಮ ಕಛೇರಿಗೆ ಮರಳಿದ ತದ್ರೂಪಿಗೆ ನಗೆ ಸಾಮ್ರಾಟರಿಂದ ಸಮನಾದ ‘ಸ್ವಾಗತ’ ಸಿಕ್ಕಿತು.
ನಗೆ ಸಾಮ್ರಾಟರು ತನ್ನನ್ನು ಅವಮಾನಿಸಿದ್ದರಿಂದ ಕಿಡಿಕಿಡಿಯಾದ ಅವರ ತದ್ರೂಪು ಬಹುದೊಡ್ಡದೊಂದು ಸಂದರ್ಶನವನ್ನು ಮಾಡಿಕೊಂಡು ಬಂದು ಬಿಟ್ಟಿತು. ಉತ್ತಮ ಸಮಾಜವನ್ನು ಕಟ್ಟಲೇ ಬೇಕೆಂದು ತಮ್ಮ ತನು-ಮನ-ಧನವನ್ನು ಒತ್ತೆ ಇಟ್ಟು ಕೈಲಾದಷ್ಟು ಪರಿಶ್ರಮಪಡುತ್ತಿರುವ ಸುದ್ದಿ ಮಾಧ್ಯಮದ ಜಗತ್ತಿನ ಪ್ರತಿನಿಧಿಯೊಬ್ಬನನ್ನು ಹೆಕ್ಕಿಕೊಂಡು ಸಂದರ್ಶನ ಮಾಡಿಕೊಂಡು ಬಂದಿದ್ದಾರೆ. ಆ ಸಂದರ್ಶನ ನಿಮ್ಮ ಮುಂದಿದೆ:

ನಗೆ ಸಾಮ್ರಾಟ್: ನಮಸ್ಕಾರ ಸರ್, ಬಹುಶಃ ನಿಮಗೆ ಇದು ಸ್ವಲ್ಪ ವಿಚಿತ್ರವಾಗಿ ಕಾಣಬಹುದು. ಯಾವಾಗಲೂ ನೀವು ಕಂಡಕಂಡವರನ್ನು ಅಲ್ಲಿ ಕೂರಿಸಿಕೊಂಡು ನೀವು ಇತ್ತಲಿಂದ ಸವಾಲು ಎಸೆಯುತ್ತಿದ್ರಿ ಈಗ ನೀವೇ ಪ್ರಶ್ನೆಗಳನ್ನು ಎದುರಿಸಬೇಕಿದೆ. ಏನನ್ನಿಸುತ್ತೆ ನಿಮಗೆ?
ಮಾಧ್ಯಮ ಪ್ರತಿನಿಧಿ: ಏನಿಲ್ಲ ಬಿಡ್ರಿ. ಅಂಥಾ ದೊಡ್ಡ ವ್ಯತ್ಯಾಸವೇನಾಗೊಲ್ಲ.
ನ.ಸಾ: ಏನೂ ವ್ಯತ್ಯಾಸವಾಗಲ್ಲ ಅಂತೀರಾ? ಹೇಗೆ ಸಾರ್?
ಮಾ.ಪ್ರ: ನೋಡ್ರಿ, ಒಬ್ಬರನ್ನ ಸಂದರ್ಶನ ಮಾಡುವಾಗ ಪ್ರಶ್ನೆಗಳು ಮಾತ್ರ ನಮ್ಮವಾಗಿರ್ತವೆ ಅಂತ ನೀವು ತಪ್ಪು ತಿಳಿದುಕೊಂಡಿದ್ದೀರಿ.
ನ.ಸಾ: ಮತ್ತೆ, ಇನ್ನೇನು ಸಾರ್?
ಮಾ.ಪ್ರ: ಅತಿಥಿಗೆ ನಾವು ಕೇಳುವ ಪ್ರಶ್ನೆಗಳು ಮಾತ್ರ ನಮ್ಮವಲ್ಲ. ಆತನಿಂದ ಹೊರ ತೆಗೆಯುವ ಉತ್ತರವೂ ನಮ್ಮದೇ. ಈ ರಹಸ್ಯ ಜನಸಾಮಾನ್ಯರಿಗೆ ತಿಳಿದಿಲ್ಲ.
ನ.ಸಾ: ಏನೋ ಅರ್ಥವಾಗಲಿಲ್ಲ.
ಮಾ.ಪ್ರ: ಅಂದರೆ ನಾವು ಸಂದರ್ಶನಕ್ಕೆ ಕರೆಸಿದ ಅತಿಥಿ ತನಗೆ ಬೇಕಾದ್ದನ್ನು ಹೇಳುವ ಹಾಗಿಲ್ಲ. ವಿವಾದವನ್ನೆಬ್ಬಿಸದ, ಇನ್ನೊಬ್ಬನನ್ನು ಕೆಣಕದ, ಕನಿಷ್ಠ ಪಕ್ಷ ನಾಲ್ಕು ಜನ ಬೆಚ್ಚುವಂತೆ ಹೇಳದ ಹೊರತು ಅವರ ಮಾತನ್ನು ನಾವು ಪ್ರಸಾರ ಮಾಡುವುದಿಲ್ಲ. ಉದಾಹರಣೆಗೆ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿರುತ್ತವೆ.ಮಕ್ಕಳು ರಸ್ತೆಯ ಮೇಲೆ ಆಡುವುದು ಅಪಾಯಕಾರಿ. ಹಾಗಾಗಿ ಮಕ್ಕಳು ರಸ್ತೆಯ ಮೇಲೆ ಆಟವಾಡಬಾರದು ಎಂದು ಅತಿಥಿ ಹೇಳಬೇಕೆಂದಿರುತ್ತಾನೆ. ಆದರೆ ನಾವು ನಮಗೆ ಬೇಕಾದ ಹಾಗೆ ಅವರಿಂದ ಆ ಉತ್ತರವನ್ನು ಪಡೆದುಕೊಳ್ಳುತ್ತೇವೆ.
ನ.ಸಾ: ಅದು ಹೇಗೆ?
ಮಾ.ಪ್ರ: ನಾವು ಆ ಅತಿಥಿ ಹೇಳಿದ ಎಲ್ಲಾ ಅನವಶ್ಯಕವಾದ ಮಾತನ್ನು ಕತ್ತರಿಸಿ ಒಗೆದು ‘ಮಕ್ಕಳು ಆಟವಾಡಬಾರದು’ ಎಂದು ಚಿಕ್ಕದಾಗಿ ಚೊಕ್ಕದಾಗಿ ಸುದ್ದಿಯನ್ನು ಕೊಡುತ್ತೇವೆ. ಏಕೆಂದರೆ ವೀಕ್ಷಕರ ಸಮಯ ತುಂಬಾ ಅಮೂಲ್ಯ ಎಂಬ ನಂಬಿಕೆ ನಮ್ಮದು.
ನ.ಸಾ: ತುಂಬಾ ರಸವತ್ತಾಗಿದೆ. ಇರಲಿ… ನಿಮ್ಮ ಬಗ್ಗೆ ಒಂದು ಆರೋಪ ಇದೆಯಲ್ಲಾ, ನೀವು ಕೇವಲ ವಿವಾದಗಳನ್ನೇ ಸುದ್ದಿ ಮಾಡುತ್ತೀರಿ ಇಲ್ಲವಾದರೆ ಸುದ್ದಿಯನ್ನೇ ವಿವಾದಾಸ್ಪದವಾಗಿಸುತ್ತೀರಿ. ಇದಕ್ಕೆ ಏನೆಂದು ಸಮರ್ಥನೆ ಕೊಡುತ್ತೀರಿ?
ಮಾ.ಪ್ರ: ನೋಡಿ ಹಾಗೆ ಆರೋಪ ಮಾಡುವವರು ಪತ್ರಿಕೋದ್ಯಮದ ‘ಓ’ ನಾಮ ಗೊತ್ತಿಲ್ಲದವರು. ನೀವು ಅಂಥವರ ಮಾತುಗಳನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಬಾರದು. ಸುದ್ದಿ ಯಾವುದು ಎನ್ನುವುದುಕ್ಕೆ ನೂರರಲ್ಲಿ ತೊಂಭತ್ತು ವರೆ ಮಂದು ಪತ್ರಕರ್ತರು ಏನೆಂದು ಹೇಳುತ್ತಾರೆ ಗೊತ್ತೆ: ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿ ಅಲ್ಲ. ಮನುಷ್ಯ ನಾಯಿಯನ್ನು ಕಚ್ಚಿದರೆ ಅದು ಸುದ್ದಿ. ಅಲ್ಲವೇ?
ನ.ಸಾ: ಹೌದು ಸಾರ್. ಅದಕ್ಕೂ ವಿವಾದಕ್ಕೂ ಏನು ಸಂಬಂಧ?
ಮಾ.ಪ್ರ: ಹೇಳುತ್ತೇನೆ ಕೇಳಿ. ನಾಯಿ ಮನುಷ್ಯನನ್ನು ಕಚ್ಚಲಿ ಬಿಡಲಿ ಅದು ಸುದ್ದಿಯಾಗುವುದಿಲ್ಲ ಅಲ್ಲವೇ? ಹೀಗೆ ಸುದ್ದಿಗಳೇ ಇಲ್ಲದೆ ಇದ್ದರೆ ಇಪ್ಪತ್ತು ನಾಲ್ಕು ಘಂಟೆಗಳ ನ್ಯೂಸ್ ಚಾನೆಲ್ ತೆರೆದುಕೊಂಡು ನಾವು ಏನು ಮಾಡುವುದು? ಅದಕ್ಕೇ ನಾವು ಸುದ್ದಿಯಾಗದ- ನಾಯಿ ಮನುಷ್ಯನಿಗೆ ಕಚ್ಚಿದ- ಸಂಗತಿಯನ್ನು ಸುದ್ದಿಯಾಗಲು ಅರ್ಹತೆ ಪಡೆಯುವಂತೆ ಮಾಡುತ್ತೇವೆ. ನಾಯಿಯಿಂದ ಕಚ್ಚಿಸಿಕೊಂಡ ಮನುಷ್ಯನಿಗೆ ಅಗತ್ಯವಾದ ಪ್ರೇರಣೆ, ಪ್ರಚೋದನೆಯನ್ನು ಕೊಟ್ಟು ಆತನೂ ನಾಯಿಯನ್ನು ಕಚ್ಚುವಂತೆ ಮಾಡುತ್ತೇವೆ ಆಗ ಅದು ಸುದ್ದಿಯಾಗುತ್ತದೆ. ಕೆಲವೊಮ್ಮೆ ಇದೂ ನಮ್ಮ ಸಹಾಯಕ್ಕೆ ಬರುವುದಿಲ್ಲ. ಯಾವ ನಾಯಿಯೂ ಯಾರನ್ನೂ ಕಚ್ಚದಿದ್ದಾಗ ಏನು ಮಾಡಬೇಕು? ಆಗ ನಾವೇ ನಾಯಿಯನ್ನು ಹುಡುಕಿಕೊಂಡು ಹೋಗಿ ಅದು ಮನುಷ್ಯನನ್ನು ಕಚ್ಚುವಂತೆ ಅದಕ್ಕೆ ಸ್ಪೂರ್ತಿ ಕೊಡುತ್ತೇವೆ. ಸುದ್ದಿ ನಮ್ಮನ್ನು ಹುಡುಕಿಕೊಂದು ಬರುವುದಿಲ್ಲ; ಸುದ್ದಿಯನ್ನು ನಾವು ಹುಡುಕಿಕೊಂಡು ಹೋಗಬೇಕು. ಒಂದು ವೇಳೆ ಸಿಕ್ಕದಿದ್ದರೆ ಹಿಡಿದದ್ದನ್ನೇ ಸುದ್ದಿ ಎಂದು ನಂಬಿಸಬೇಕು.
ನ.ಸಾ: ಅರ್ಥವಾಯಿತು ಸಾರ್. ಅದಕ್ಕಾಗಿಯೇ ನಿಮಗೆ ರೈತರು ರಸಗೊಬ್ಬರ ಸಿಗದಿದ್ದಾಗ ಏನು ಮಾಡಬೇಕು ಎಂಬ ಪ್ರಶ್ನೆಗಿಂತ ಶಾಸಕರು ಪತ್ನಿಯನ್ನು ಹೇಗೆ ನೋಡಿಕೊಳ್ಳಬೇಕಿತ್ತು ಎಂಬ ಪ್ರಶ್ನೆ ಬಹುಮುಖ್ಯವಾಗಿ ಕಾಣುತ್ತದೆ. ಅಲ್ಲವೇ?
ಮಾ.ಪ್ರ: ಹೌದ್ರೀ ಅದರಲ್ಲಿ ತಪ್ಪೇನು? ರೈತರೇನು ನಮ್ಮ ಟಿವಿ ಚಾನೆಲ್ ನೋಡಿ ವ್ಯವಸಾಯ ಮಾಡುತ್ತಾರಾ? ಅವರಿಗೆ ರಸಗೊಬ್ಬರ, ಬೀಜ ಕೊಳ್ಳೋದಕ್ಕೇ ಕಾಸಿರೋದಿಲ್ಲ ಇನ್ನು ಟಿವಿ ತಗೊಂಡು ತಿಂಗಳಿಗೆ ನೂರು ನೂರೈವತ್ತು ಕೊಟ್ಟು ಡಿಶ್ ಹಾಕಿಸಿಕೊಂಡು ನಮ್ಮ ಚಾನಲ್ಲು ನೋಡುತ್ತಾ ಕೂರುತ್ತಾರಾ? ಹಾಗೆ ನೋಡುತ್ತಾ ಕೂರುವವರು ಮಾಡಲು ಕೆಲಸವಿಲ್ಲದವರು. ಅಂಥವರಿಗಾಗಿ ನಾವು ಸುದ್ದಿಯನ್ನು ಕೊಡಬೇಕಾಗುತ್ತದೆ. ಅವರಿಗೋ ಸುಳ್ಳು ಸುಳ್ಳು ಕಥೆಗಳಿರುವ ಧಾರಾವಾಹಿಗಳನ್ನು ನೋಡಿ ತಲೆ ಚಿಟ್ಟು ಹಿಡಿದಿರುತ್ತದೆ ಅದಕ್ಕೇ ನಾವು ಸತ್ಯ ಕಥೆಯನ್ನು ಬಳಸಿಕೊಂಡು ಅದಕ್ಕೆ ನಮ್ಮೆಲ್ಲಾ ಕ್ರಿಯೇಟಿವಿಟಿಯನ್ನು, ರಿಸರ್ಚನ್ನು ಸೇರಿಸಿ ವರದಿ ಮಾಡುತ್ತೇವೆ. ಕೆಲವೊಮ್ಮೆ ಕೇಸುಗಳಲ್ಲಿ ಟ್ವಿಸ್ಟೇ ಇರೋದಿಲ್ಲ ಆಗ ಜನರಿಗೆ ಅಗತ್ಯವಾದ ಮನರಂಜನೆ ದೊರೆಯುವುದಿಲ್ಲ. ಅದಕ್ಕಾಗಿ ನಾವೇ ಕೆಲವೊಂದು ಟ್ವಿಸ್ಟುಗಳನ್ನು ಸೇರಿಸುತ್ತೇವೆ.
ನ.ಸಾ: ಸತ್ಯವನ್ನು ಬಳಸಿಕೊಂಡು… ಅಲ್ಲಾ ಸಾರ್ ನೀವು ವರದಿ ಮಾಡೋದು ಸತ್ಯ ಕಥೆಯನ್ನು ಮಾತ್ರ ಅಲ್ಲವೇ?
ಮಾ.ಪ್ರ: ಏನ್ರೀ ಸತ್ಯ? ಯಾವುದು ಸತ್ಯ? ಸತ್ಯ ಕೊನೆಗೆ ಗೆಲ್ಲುತ್ತದೆ ಅನ್ನೋದು ಸತ್ಯವಾದ ಮಾತ್ರ. ಆದರ ನಮಗೆ ಕೊನೆಗೆ ಗೆಲ್ಲುವುದು ಬೇಕಾಗಿಲ್ಲ. ನಾವು ಪ್ರತಿಕ್ಷಣವೂ ಗೆಲ್ಲುತ್ತಲೇ ಇರಬೇಕು. ಹೀಗಾಗಿ ಕೊಲೆಯಾದ ತಕ್ಷಣವೇ ನಾವು ಜನರಿಗೆ ಕೊಲೆಯಾದದ್ದು ಹೆಣ್ಣೋ ಗಂಡೋ ಎಂದು ತಿಳಿಸಿಬಿಡುತ್ತೇವೆ. ಹೆಣ್ಣಾಗಿದ್ದರೆ ಆಕೆಗೊಂದು ಕ್ಯಾರಕ್ಟರ್ ಸರ್ಟಿಫಿಕೇಟು ಕೊಡುತ್ತೇವೆ. ಗಂಡಾಗಿದ್ದರೆ ಆತನಿಗೆ ಇನ್ನೊಂದು. ಕೊಲೆಗಾರ ಯಾರು ಅನ್ನೋ ತೀರ್ಪನ್ನೂ ಕೊಟ್ಟುಬಿಡುತ್ತೇವೆ. ಜನರೂ ಬಾಯಿ ಚಪ್ಪರಿಸಿಕೊಂಡು ನೋಡುತ್ತಾರೆ, ನಂಬುತ್ತಾರೆ. ಅಷ್ಟಕ್ಕೂ ಜನರಿಗೆ ಸತ್ಯವೇ ಬೇಕು ಅನ್ನೋದಾದರೆ ಅದಕ್ಕೆ ಕೋರ್ಟಿದೆ, ಕಾನೂನಿದೆ, ಪೊಲೀಸರಿದ್ದಾರೆ, ತನಿಖೆಯ ಪ್ರಕ್ರಿಯೆಯಿದೆ. ಅದಕ್ಕೆ ನಾವೇ ಬೇಕು ಅಂತೇನಿಲ್ಲ. ತಿಳಿಯಿತಾ?

ನ.ಸಾ: (ಸಾವರಿಸಿಕೊಳ್ಳುತ್ತಾ) ನೀವು ಜನರ ಖಾಸಗಿ ವಿವರಗಳಿಗೆ ಕೈ ಹಾಕುತ್ತೀರಿ ಎಂಬ ಆರೋಪವಿದೆ. ವರದಿ ಮಾಡುವಾಗ ಬೇರೊಬ್ಬರ ಖಾಸಗಿ ಬದುಕಿನ ರಹಸ್ಯಗಳನ್ನು ಬಯಲು ಮಾಡುವುದಕ್ಕೆ ನಿಮಗೆ ಅಧಿಕಾರ ಇಲ್ಲ ಎನ್ನುತ್ತಾರೆ ಜನರು. ಇದರ ಬಗ್ಗೆ ಏನನ್ನುತ್ತೀರಿ.
ಮಾ.ಪ್ರ: ಪರವಾಗಿಲ್ಲ ಕಣ್ರೀ ಚೆನ್ನಾಗಿ ಪ್ರಶ್ನೆ ಕೇಳೋದನ್ನ ಕಲಿತುಕೊಂಡಿದ್ದೀರಿ. ನಿಮ್ಮ ಪ್ರಶ್ನೆಯನ್ನೇ ಜನರ ಪ್ರಶ್ನೆ ಅನ್ನುತ್ತೀರಿ. ನೀವು ಮಾಡುವ ಆರೋಪವನ್ನು ಜನರು ಮಾಡುತ್ತಿದ್ದಾರೆ ಅನ್ನುತ್ತೀರಿ. ಇದನ್ನೇ ನಾವು ಟಿವಿ ಚಾನಲ್‌ಗಳಲ್ಲಿ ಮಾಡುವುದು. ತುಂಬಾ ಬೇಗ ಅದನ್ನ ಕಲಿತುಕೊಳ್ಳುತ್ತಿದ್ದೀರಿ ನಗೆ ಸಾಮ್ರಾಟ್, ಗುಡ್. ವೆರಿ ಗುಡ್.
ನ.ಸಾ: (ಕಕ್ಕಾ ಬಿಕ್ಕಿಯಾಗಿ) ಇಲ್ಲ ಸರ್, ಥ್ಯಾಂಕ್ಯೂ ಸರ್. ಇರಲಿ ಬಿಡಿ ಸರ್… ಅಯ್ಯೋ, ನನ್ನ ಪ್ರಶ್ನೆಗೆ ಉತ್ತರಾನೇ ಕೊಡಲಿಲ್ಲವಲ್ಲ ಸಾರ್!
ಮಾ.ಪ್ರ: ಜನರ ಖಾಸಗಿ ಸಂಗತಿಗಳನ್ನು ಬಹಿರಂಗ ಪಡಿಸುವ ಹಕ್ಕು ನಮಗಿಲ್ಲ ಎಂದು ಹೇಳುತ್ತಿದ್ದೀರಿ. ಒಪ್ಪಿಕೊಳ್ಳೋಣ, ಆದರೆ ಬೇರೊಬ್ಬರ ಖಾಸಗಿ ಸಂಗತಿಯನ್ನು ತಿಳಿದುಕೊಳ್ಳುವ ಹಕ್ಕು ಜನಸಾಮಾನ್ಯರಿಗಿಲ್ಲ ಅಂತ ಘಂಟಾಘೋಷವಾಗಿ ಹೇಳಿ ನೋಡೋಣ. ಜನರಿಗೆ ಸಾರ್ವಜನಿಕವಾದ ಸುದ್ದಿಗಳು ಬೇಕಿಲ್ಲ ಕಣ್ರೀ, ಖಾಸಗಿ ಸುದ್ದಿಗಳೇ ಬೇಕು. ಅದು ಜನರ ರೋಗ. ನಾವು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿಕೊಂಡು ಟಿವಿ ಚಾನಲ್ ತೆರೆಯುವುದು ಜನರಿಗೆ ನೈತಿಕ ಶಿಕ್ಷಣವನ್ನು ಬೋಧಿಸುವುದಕ್ಕೆ ಅಲ್ಲ ಅನ್ನೋದು ತಿಳಿದಿರಲಿ.
ಇನ್ನು ನಾವು ವರದಿಯನ್ನೇನು ಆಕಾಶದಿಂದ ತಂದು ಮಾಡುವುದಿಲ್ಲ. ಒಂದು ಮನೆಯ ಹೆಣ್ಣು ಮಗಳು ಓಡಿ ಹೋಗಿರುತ್ತಾಳೆ ಅಂದುಕೊಳ್ಳಿ. ಆಗ ನಾವು ಅವರ ಅಕ್ಕಪಕ್ಕದ ಮನೆಯವರನ್ನು ಮಾತನಾಡಿಸುತ್ತೇವೆ. ಆಕೆಯ ಕ್ಯಾರಕ್ಟರ್ ಹೇಗಿತ್ತು ಎನ್ನುತ್ತೇವೆ. ಅವರು ತಮ್ಮ ಪಾಂಡಿತ್ಯಕ್ಕೆ ತಕ್ಕ ಹಾಗೆ ಮಾಹಿತಿಯನ್ನು ಕೊಡುತ್ತಾರೆ. ಆಕೆ ಯಾರ್‍ಯಾರ ಜೊತೆಗೆಲ್ಲಾ ಒಡಾಡಿದ್ದಳು, ಆಕೆ ಮನೆಗೆ ಎಷ್ಟೊತ್ತಿಗೆ ಬರುತ್ತಿದ್ದಳು, ಆಕೆಯ ಮನೆಗೆ ಯಾರ್ಯಾರು ಬಂದು ಹೋಗುತ್ತಿದ್ದರು ಎಂಬ ಬಗ್ಗೆ ಜನರು ಮಾಹಿತಿ ಕೊಡುತ್ತಾರೆ. ಬೇರೊಬ್ಬರ ಖಾಸಗಿ ಬದುಕಿನ ಸಂಗತಿಗಳ ಬಗ್ಗೆ ತಿಳಿಯುವ, ಅದನ್ನು ಬಹಿರಂಗ ಪಡಿಸುವ ಅಧಿಕಾರ ತಮಗಿಲ್ಲ ಎಂದು ಗೊತ್ತಿದ್ದರೂ ಜನರು ನಮ್ಮ ಕ್ಯಾಮರಾ ಕಂಡ ಕೂಡಲೇ ಕ್ರಾಪು ತೀಡಿಕೊಂಡು ರೆಡಿಯಾಗುತ್ತಾರಲ್ಲ ಇದಕ್ಕೇನನ್ನುತ್ತೀರಿ? ಜನರ ಧ್ವನಿಗೆ ನಾವು ವೇದಿಕೆ ಒದಗಿಸಿ ಕೊಡುತ್ತೇವೆ ಅಷ್ಟೇ. ಅದೇ ಪ್ರಜ್ಞಾವಂತ ಮಾಧ್ಯಮದ ಜವಾಬ್ದಾರಿ ಕೂಡ.
ಈಗ ನೋಡಿ ನಿಮ್ಮ ಬಗ್ಗೆಯೇ ನಾವು ನಾಲ್ಕು ಮಂದಿಯಲ್ಲಿ ವಿಚಾರಿಸಿದೆವು. ಬೊಗಳೆ ರಗಳೆ, ಮಜಾವಾಣಿ, ಪಂಚ್ ಲೈನ್ ಗಣೇಶ್ ಬಳಿಗೆ ಹೋಗಿದ್ದೆವು. ಅವರು ಹೇಳಿದ್ದೇನೆಂದರೆ…
ನ.ಸಾ: (ದಡಬಡಿಸುತ್ತಾ) ಧನ್ಯವಾದಗಳು ಸರ್. ಸಮಯಾವಕಾಶ ಕೊರತೆಯಿಂದ ನಮ್ಮ ಮಾತುಕತೆ ಇಲ್ಲಿಗೇ ನಿಲ್ಲಿಸಬೇಕಿದೆ. ಥ್ಯಾಂಕ್ಯೂ
ಎಂದು ಪರಾರಿ ಗೈದ ನಗೆ ಸಾಮ್ರಾಟ್‌ರ ತದ್ರೂಪು ನಗೆ ನಗಾರಿ ಡಾಟ್ ಕಾಮ್‌ನ ಕಛೇರಿ ತಲುಪಿದರು.
2 responses so far ↓
ಗಣೇಶ್ // July 15, 2008 at 3:24 pm |
ಮಾಧ್ಯಮದವರ ಈ “ನಗೆ ವಿರೋಧಿ” ನೀತಿಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಯಡ್ಯೂರಪ್ಪನವರನ್ನ ಕಂಡು ಈ ಬಗ್ಗ್ತೆ ಕ್ರಮ ಕೈಗೊಳ್ಳಲಿಕ್ಕೆ ಒತ್ತಾಯಿಸುತ್ತೇವೆ. ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಬೇಕಾಗಿದೆ.
ಗಣೇಶ್
Nage samrat // July 15, 2008 at 6:13 pm |
ಅದಿರಲಿ, ಮಾಧ್ಯಮದವರು ನಿಮ್ಮ ಬಳಿ ಬಂದಾಗ ನಮ್ಮ ಬಗ್ಗೆ ಏನು ಹೇಳಿದಿರಿ?
ನಗೆ ಸಾಮ್ರಾಟ್