ನಗೆ ನಗಾರಿ ಡಾಟ್ ಕಾಮ್

ಬ್ಲಾಗ್ ಬೀಟ್ 10

July 2, 2008 · Leave a Comment

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

………………………………………………………………

ಬೊಗಳೆ ರಗಳೆ

ತಮ್ಮನ್ನು ಉಚ್ಛಾಟಿಸಿದ ಪಕ್ಷ ಯಾವುದು ಎಂಬುದೇ ತಿಳಿಯದೆ ಅಪಾರ ಗೊಂದಲದಲ್ಲಿರುವ ಸಿಂಧ್ಯಾರವರನ್ನು ಖಾಸಗಿಯಾಗಿ ಸಂದರ್ಶನ ಗೈದ ಬೊಗಳೆ ರಗಳೆ ವರದ್ದಿಗಾರ ಸಿಂಧ್ಯಾರವರು ಆ ವರದ್ದಿಗಾರ ನಗೆ ನಗಾರಿಗೆ ಹಾರಬಹುದು ಎಂದು ಹೇಳುತ್ತಿದ್ದಂತೆಯೇ ಸಂದರ್ಶನವನ್ನು ಅರ್ಧಕ್ಕೆ ನಿಲ್ಲಿಸಿ ಓಡಿದ್ದು ನಗೆ ಸಾಮ್ರಾಟರ ಗಮನಕ್ಕೆ ಬಂದಿದೆ. ವರದ್ದಿಗಾರನಿಗೆ ಗಾಳ ಹಾಕುವುದು ಹೇಗೆ ಎಂಬ ಬಗ್ಗೆ ಸಾಮ್ರಾಟರು ಬಳ್ಳಾರಿಯ ಫಾರ್ಮುಲಾದ ಬಗ್ಗೆ ಆಲೋಚಿಸುತ್ತಿದ್ದಾರೆ.

ಪಂಚ್ ಲೈನ್

ಯಡ್ಯೂರಪ್ಪ ಯಾಕೆ ಯಾವಾಗಲೂ ಹಣೆಗೆ (ಇನ್ನೆಲ್ಲಿಗೆ ಇಟ್ಟುಕೊಳ್ಳಲು ಸಾಧ್ಯ?!) ಕುಂಕುಮ ಹಚ್ಚಿಕೊಂಡು ಓಡಾಡುತ್ತಾರೆ ಎಂದು ಪಂಚ್ ಕೊಟ್ಟಿದ್ದಾರೆ ಪಂಚ್ ಲೈನ್ ಗಣೇಶ್. ಹಾಗೆಯೇ ಯಡ್ಯೂರಪ್ಪನವರ ಅಯೋಗ್ಯತೆಯನ್ನು ಪತ್ತೆ ಹಚ್ಚಿರುವ ದೇವೇಗೌಡರು ಏನಂತ ಉಲಿದಿದ್ದಾರೆ ಎನ್ನುವ ಘನ ಘೋರ ಗಂಭೀರ ಸಂಗತಿಯನ್ನು ಮಷ್ಕಿರಿಯಲ್ಲೇ ಪಂಚಿಸಿದ್ದಾರೆ.

ಕಾಲಚಕ್ರ

ಪದ್ಮಪ್ರಿಯ ಪ್ರಕರಣದ ಬಗ್ಗೆ ಬ್ಲಾಗ್ ಬೀಟಿನಲ್ಲಿ ಯಾವುದೂ ಬೀಟಾಗಲಿಲ್ಲವಲ್ಲ ಎಂದು ಪೇಚಾಡುತ್ತಿದ್ದ ಸಾಮ್ರಾಟರಿಗೆ ‘ಕಾಲಚಕ್ರ’ವೇ ಸಮಾಧಾನ ನೀಡಿತು. ‘ಲೇ, ಯಾವನಿಗ್ ಹೇಳ್ತಿ…ಈ ವಯ್ಯಾ ಅದ್ಯಾರ್ನೋ ಇಟ್‌ಕಂಡಿದ್ನಲಾ ಅದು ತಪ್ಪಲ್ವಾ, ಈ ಹಾಳ್ ಸಮಾಜಕ್ಕೆ ಬರೀ ಹೆಂಗುಸ್ರುದ್ದೇ ಕಾಣ್ಸುತ್ತೇ’ ಎಂದು ಹೇಳುತ್ತಾ ಕೈ ನಟಿಕೆ ಮುರಿದ ತಿಮ್ಮಕ್ಕನನ್ನು ಕಂಡು ಸಾಮ್ರಾಟರು ಕೈಮುಗಿದು ಬಂದರು.

ಕೆಂಡಸಂಪಿಗೆಯ  ಸುದ್ದಿ ಕ್ಯಾತ

ಸರ್ಕಸ್ಸಿನ ಟೆಂಟಿನಿಂದ ತನ್ನ ಸಹೋದ್ಯೋಗಿಗಳು ಪರಾರಿಯಾಗಲು ನೆರವು ನೀಡಿದ ಜಿರಾಫೆಯನ್ನು ಪೋಲೀಸರು ಬಂಧಿಸಿರುವ ಸಂಗತಿಯನ್ನು ವರದಿ ಮಾಡಿದ್ದಾನೆ ಸುದ್ದಿಕ್ಯಾತ. ಜಿರಾಫೆಯನ್ನು ಬಂಧಿಸಿರುವ ಪೊಲೀಸರು ಏಣಿ ಹಾಕಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾನೆ ಸುದ್ದಿ ಕ್ಯಾತ. ಪ್ರಾಣಿ ದಯಾ ಸಂಘದ ಮನೇಕಾ ಗಾಂಧಿ ನಾಯಿ ಕೇಸಿನಲ್ಲಿ ಬ್ಯುಸಿ ಇದ್ದು ಜಿರಾಫೆಯನ್ನು ನೋಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಕ್ಯಾತೆಯನ್ನು ತೆಗೆಯಲು ಸುದ್ದಿ ಕ್ಯಾತ ಮರೆತಂತಿದೆ!

Categories: ಇತರೆ
Tagged: , , , , , ,

0 responses so far ↓

  • There are no comments yet...Kick things off by filling out the form below.

Leave a Comment