( ನಗಾರಿ ಅನುಕಂಪ ಬ್ಯೂರೋ)
ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಚುನಾವಣೆಯನ್ನು ನಡೆಸಲು ಸರ್ವ ಸನ್ನದ್ಧರಾಗಿ ನಿಂತಿರುವ ಗೋಪಾಲಸ್ವಾಮಿಯವರ ನೇತೃತ್ವದ ಚುನಾವಣಾ
ಆಯೋಗ ಪ್ರಜಾತಂತ್ರ ವಿರೋಧಿಯಾದದ್ದು ಎಂದು ಸರ್ವಪಕ್ಷಗಳ ನಾಯಕರು ಖಾಸಗಿ ವೇದಿಕೆಯಲ್ಲಿ ಊಳಿಡುತ್ತಿರುವುದು ವರದಿಯಾಗಿದೆ. ನಾಯಕರುಗಳ ಆಲಾಪವನ್ನು ಬೆಂಬಲಿಸಿರುವ ಕೆಲವು ಅನಧಿಕೃತ, ಕೆಲವು ಅಧಿಕೃತ ಬುದ್ಧಿಜೀವಿಗಳು ಮತ್ತು ಕೆಲವು ಸಾರ್ವತ್ರಿಕ ಲದ್ದಿ ಜೀವಿಗಳು ಸಹ ಚುನಾವಣಾ ಆಯೋಗ ಜನರ ವಿರೋಧಿ ಎಂದು ಬೊಬ್ಬಿರಿಯುತ್ತಿವೆ.
ಚುನಾವಣೆ ನೀತಿ ಸಂಹಿತೆ ಎಂಬುದೇ ಸಮಾಜಕ್ಕೆ ಮಾರಕವಾದದ್ದು. ಜನತೆಗೆ ವಿರೋಧಿಯಾದದ್ದು ಎಂದು ಮಾತು ಪ್ರಾರಂಭಿಸಿದ ನಾಯಕವರೇಣ್ಯನೊಬ್ಬ, “ಹೇಳ್ರಿ, ನಾವು ನಮ್ಮದೇ ಕ್ಷೇತ್ರದ ಮತಬಾಂಧವರಿಗೆ ಅವರ ಮದುವೆ, ಮುಂಜಿಗಳಿಗೆ, ಮೋಜು, ಮಸ್ತಿಗಳಿಗೆ, ಕಷ್ಟಕ್ಕೆ ಹಣ ಕೊಡಬಾರದಂತೆ, ಅವರು ಬಯಸುವ ಹೆಂಡವನ್ನೂ ಸಹ ಉಚಿತವಾಗಿ ಕೊಡಬಾರದಂತೆ, ಸೀರೆ, ಚೈನು, ವಾಲೆ, ಉಂಗುರ, ಪಂಚೆ, ಶರ್ಟು ಪೀಸು ಊಹುಂ ಒಂದು ಗುಂಡು ಸೂಜೀನೂ ಕೊಡಬಾರದು ಅನ್ನುತ್ತಾರೆ. ನಾವೇನೋ ಅಧಿಕಾರದಲ್ಲಿದ್ದಾಗ ‘ನಮ್ಮ ಸೇವೆ’ಯ ಮಧ್ಯೆ ಸಮಯ ಮಾಡಿಕೊಂಡು ಜನರ ಸೇವೆ ಮಾಡಲಿಕ್ಕಾಗಲಿಲ್ಲವಲ್ಲ, ಈಗಾದರೂ ಜನರ ಸೇವೆಯನ್ನು ಮಾಡೋಣ ಅಂದರೆ ಇದಕ್ಕೆ ಕಲ್ಲು ಹಾಕುವ ಚುನಾವಣಾ ಆಯೋಗ ಜನರ ವಿರೋಧಿಯೇ ಆಗಿದೆ.” ಎಂದು ಕಾರ್ಯಕರ್ತ ಹಿಡಿದಿದ್ದ ಚೊಂಬಿನಲ್ಲಿ ತುಪಕ್ಕೆಂದು ಉಗಿದ.
ಅವನಿಂದ ಮಾತು ಎತ್ತಿಕೊಂಡ ಇನ್ನೊಂದು ಪಕ್ಷದ ನಾಯಕ, “ನೋಡಿ, ಈ ನೀತಿ ಸಂಹಿತೆ ಅಂತ ಮಾಡಿ ಏನೇನೆಲ್ಲಾ ಅವಾಂತರ ಮಾಡಿದ್ದಾರೆ. ನಮ್ಮ ಜನರು ಹೊಂದಿದ್ದ ಶ್ರದ್ಧೆಗಳಿಗೆಲ್ಲಾ ಕೊಡಲಿ ಪೆಟ್ಟು ನೀಡುವ ಕೆಲಸ ಮಾಡುತ್ತಿದ್ದಾರೆ ಇವತ್ತು. ಜೈಲಲ್ಲೇ ಹುಟ್ಟಿ ಬಂದರೂ, ಬೆಣ್ಣೆಯನ್ನೂ, ಸ್ನಾನ ಮಾಡುತ್ತಿದ್ದ ಗೋಪಿಯರ ಬಟ್ಟೆಯನ್ನು ಕದ್ದರೂ ಕೃಷ್ಣ – ಎಸ್.ಎಂ.ಕೃಷ್ಣ ಅಲ್ಲಾರಿ- ನನ್ನು ಅದ್ಭುತ ರಾಜಕೀಯ ಮುತ್ಸದ್ಧಿ ಅಂತ ಪರಿಗಣನೆ ಮಾಡಲಿಲ್ಲವೇನ್ರೀ? ಇನ್ನು ಎಷ್ಟೆಷ್ಟೋ ಮಂದಿಯನ್ನು ಕೊಂದವರನ್ನು ನಾವು ದೇವರು ಅಂತ ಪೂಜಿಸುವುದಿಲ್ಲವೇನ್ರಿ? ಹೀಗಿರುವಾಗ ನಮ್ಮ ಚುನಾವಾಣಾ ಆಯೋಗ ಕ್ರಿಮಿನಲ್ ಕೇಸುಗಳಿರುವವರು ಚುನಾವಣೆಗೆ ನಿಲ್ಲಬಾರದು ಎಂದರೆ ಅದು ಜನರಿಗೆ ಮಾಡುವ ಅನ್ಯಾಯ ಅಲ್ಲವೇನ್ರಿ? ನಮ್ಮಂಥವರು ಚುನಾವಣೆಗೇ ನಿಲ್ಲದ ಹಾಗೆ ಹೀಗೆ ಅವಕಾಶವಂಚಿತರಾದರೆ ಇನ್ನು ಗೆದ್ದು ‘ಜನರ ಸೇವೆ’ ಮಾಡುವುದಾದರೂ ಹೇಗೆ ಹೇಳಿ?” ಎಂದ.
ಇವರ ಮಾತಿಗೆ ದನಿಕೂಡಿಸಿದ ಬುದ್ಧಿಜೀವಿಯೊಬ್ಬ, “ನೋಡಿ ಬ್ಯಾನರ್ ಬಂಟಿಂಗ್‌ಗಳನ್ನು ಹಾಕಲೇ ಬಾರದು ಅಂತ ಎಂಥಾ ತುಘಲಕ್ ಶಾಸನ ಹೊರಡಿಸಿದ್ದಾರೆ. ಇದನ್ನೇ ನಂಬಿಕೊಂಡ ಎಷ್ಟು ಮಂದಿಯ ಕುಟುಂಬ ಬೀದಿಗೆ ಬೀಳುವುದಿಲ್ಲ? ಬ್ಯಾನರ್, ಕಟೌಟು, ಬಂಟಿಂಗುಗಳನ್ನು ತಯಾರು ಮಾಡುವ ಅವುಗಳನ್ನು ಕಟ್ಟಲು ಮರಗಳನ್ನು ಕಡಿದು ಜಾಗ ಮಾಡಿ ಕರೆಂಟು ಕಂಬಗಳಿಗೆ ಕಟ್ಟಿ ಹೊಟ್ಟೆ ಹೊರೆಯುತ್ತಿದ್ದ ಜನ ಎಲ್ಲಿಗೆ ಹೋಗಬೇಕು? ಏನೋ ಪರಿಸರ ಮಾಲಿನ್ಯ ಕಡಿಮೆಯಾಗುತ್ತೆ, ನಗರ ಸ್ವಚ್ಛವಾಗಿರುತ್ತದೆ, ಮರಗಳು ವಿರೂಪವಾಗಲ್ಲ, ಕರೆಂಟು ವೈರುಗಳು ಸುರಕ್ಷಿತವಾಗಿರುತ್ತವೆ ಅನ್ನೋ ಕಾರಣಕ್ಕೆ ಇಷ್ಟು ಮಂದಿಗೆ ಅನ್ಯಾಯ ಮಾಡುವುದು ಯಾವ ನ್ಯಾಯ? ಇಷ್ಟಕ್ಕೂ ಚುನಾವಣಾ ಆಯೋಗವೇನು ಜನರಿಂದ ಆಯ್ಕೆಯಾದದ್ದಲ್ಲವಲ್ಲ, ಹಾಗಾಗಿ ಇದು ಅಪ್ಪಟ ಪ್ರಜಾತಂತ್ರ ವಿರೋಧಿ” ಎಂದ ಗಡ್ಡನೀವಿಕೊಳ್ಳುತ್ತಾ.
ಈ ಮಧ್ಯೆ ಚುನಾವಣೆ ಆಯೋಗದ ವೀರಭದ್ರಗಾಸೆ ನೃತ್ಯವನ್ನು ಜನರು ಸುಖಾಸನದಲ್ಲಿ ಕುಳಿತು ಆಸ್ವಾದಿಸಬೇಕಾಗಿ ನಗೆ ಸಾಮ್ರಾಟರು ಕೋರಿಕೊಳ್ಳುತ್ತಿದ್ದಾರೆ.
0 responses so far ↓
There are no comments yet...Kick things off by filling out the form below.