ಭಾರತೀಯ ಜತನ ಪಕ್ಷ
ನಿಮಗೆ ಮಳೆಗಾಲದಲ್ಲಿ ಮಳೆ ಬಂತೇ? ಇಲ್ಲ!
ಬೇಸಿಗೆಯಲ್ಲಿ ಅಕಾಲಿಕ ಮಳೆ ಬಂದು ತೊಂದರೆಯಾಯ್ತೇ? ಹೌದು!
ಇದಕ್ಕೆಲ್ಲಾ ಕಾರಣ ಅರವತ್ತು ವರ್ಷಗಳಿಂದ ನಿಮ್ಮನ್ನಾಳಿದ ಕಾಂಗ್ರೆಸ್…
ಇಷ್ಟು ವರ್ಷಗಳಿಂದ ಅವರು ನಿಮ್ಮನ್ನು ದೋಚಿದ್ದಾರೆ, ನಿಮ್ಮನ್ನು ಮೋಸ ಮಾಡಿದ್ದಾರೆ, ನಿಮ್ಮನ್ನು ಗೋಳು ಹೋಯ್ದುಕೊಂಡಿದ್ದಾರೆ, ನಿಮ್ಮ ನೆಮ್ಮದಿಯನ್ನು ಕಸಿದಿದ್ದಾರೆ…
ನಮಗೂ ಒಂದು ಅವಕಾಶ ಕೊಡಿ!
(ಈ ಜಾಹೀರಾತಿನ ಖರ್ಚಿನ ಅರ್ಧ ಭಾಗವನ್ನು ಜೆಟ್ ಲೀ ಹಾಗೂ ಉಳಿದ ಭಾಗದ ಮೂರನೇ ಒಂದು ಭಾಗವನ್ನು ಚೆಡ್ಡಿ, ಕರೆಂಟು ಅಂದಾಜೆ, ಕುಮಾರಾನಂತರು ಕೊಟ್ಟಿದ್ದಾರೆ)
ಕೈ ಎಸ್ಸು
ನಿಮಗೆ ದಿನಾ ನಮ್ಮ ಮುಖಗಳನ್ನು ನೋಡಲು ಸಾಧ್ಯವಾಗುತ್ತದೆಯೇ? ಇಲ್ಲ. ನಾವು ನಿಮಗೆ ಸಿಕ್ಕುವುದಕ್ಕೆ ಸಾಧ್ಯವೇ ಆಗುವುದಿಲ್ಲ (ನಾವು ಯಾವಾಗಲೂ ದೆಹಲಿಯಲ್ಲಿರುತ್ತೇವಲ್ಲಾ?)
ಹೀಗಾಗಿ ನಾವು ನಿಮಗೆಲ್ಲಾ ಉಚಿತವಾಗಿ ಕಲರ್ ಟಿವಿ ಕೊಡ್ತೀವಿ. ಅದರಲ್ಲಿ ದಿನಾ ನಮ್ಮ ಬ್ಲಾಕ್ ಅಂಡ್ ವೈಟ್ ಮುಖವನ್ನು ನೋಡುತ್ತಾ ಕೂರಬಹುದು.
ನಿಮಗೆ ಅಕ್ಕಿ, ಕೊಡ್ತೇವೆ, ನೀವು ಸೋಮಾರಿ ಯುವಕರಾದರೆ ಸ್ಟೈಫಂಡ್ ಕೊಡ್ತೇವೆ….
ಏನೂ ಕೊಡಲಾಗದಿದ್ದರೂ ನಮ್ಮ ಚಿಹ್ನೆಯನ್ನೇ ಕೊಡುತ್ತೇವೆ… ಹೊಸಬರಿಗಿಂತ ಹಳೆಯರು ವಾಸಿ ಅಲ್ಲವೇ?
(ಈ ಜಾಹೀರಾತಿನ ಖರ್ಚು ಭಾಗ ಭಾಗವಾಗಿ ಹತ್ತೆಂಟು ಮಂದಿ ಭರಿಸಿದ್ದು, ಕುರ್ಚಿಯನ್ನು ಕಂಚಿಕೊಳ್ಳಲು ಸಮ್ಮಿಶ್ರ ಸಿ.ಎಂ ಪ್ರಹಸನ ನಡೆಯಬಹುದಾದ ಸಂಭವನೀಯತೆ ಇದೆ)
ತಂದೆ ಮಕ್ಕಳ ಪಕ್ಷ
ನಮ್ಮದು ಮಕ್ಕಳ ಪಕ್ಷ. ನೋಡಿ ನೀವು ಧೃತರಾಷ್ಟ್ರನ ಕಥೆಯನ್ನು ಓದಿಕೊಂಡು ಬಂದವರು. ನಮ್ಮ ಸುಯೋಧನನಂಥ ಮಗನನ್ನು ಬಿಟ್ಟು ರಾಜ್ಯ ನಡೆಸಲು ಸಾಧ್ಯವಾಗುತ್ತದಾ?
ಇಪ್ಪತ್ತು ತಿಂಗಳಲ್ಲಿ ನಾವು ಏನು ಅಂತ ತೋರಿಸಿದ್ವಿ. ಅದನ್ನೇ ಪೂರ್ತಿ ಸಿನೆಮಾ ಅಂದ್ಕೋಬೇಡಿ. ನೀವು ನಂಬಲಿಕ್ಕಾಗದ್ದನ್ನೆಲ್ಲಾ ಮಾಡಲು ನಮಗೆ ಸಾಧ್ಯವಿದೆ. ಒಂದು ಅವಕಾಶ ಕೊಟ್ಟು ನೋಡಿ…
ನಮ್ಮ ಪಕ್ಷದ ಚಿಹ್ನೆ ‘ಹೊರೆ ಹೊತ್ತ ಮಹಿಳೆ’ ಆದರ್ಶವನ್ನು ನಾವು ಜಾರಿಗೆ ತರುವೆವು….
(ಈ ಜಾಹೀರಾತಿನ ಖರ್ಚಿನ ಅರ್ಧ ಭಾಗ ಕಸ್ತೂರಿಯಿಂದ ಹರಿದು ಬಂದಿದ್ದರೆ ಮತ್ತರ್ಧ ಅತ್ತ ರಾ..ಅಧಿಕರ ಅನಧಿಕೃತ ಅಕೌಂಟಿನಿಂದ ಬಂದಿದೆ)
ಕೆಂಪು ಪಕ್ಷ
ಕೋಮುವಾದಿ ಜಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಕ್ಕೆ ನಮ್ಮ ಹೋರಾಟ!
ಜಾತಿವಾದಿ ಜೆಡಿಸ್ಸುನ್ನು ಅಧಿಕಾರದಿಂದ ದೂರವಿಡಲು ನಮ್ಮ ಹೋರಾಟ!
ಇನ್ನು ನಾವು ನಾಲ್ಕೈದು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇವೆ. ನಮ್ಮ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಿದರೂ ನಾವು ಸರಕಾರ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ನಮಗೆ ಕಾಂ-ಗೆಸ್ಸಿನ ಆಸರೆ ಬೇಕು. ಅವರೊಂದಿಗೆ ಸೇರಿ ಸರಕಾರ ಮಾಡುತ್ತೇವೆ.
ಆಮೇಲೆ ಮತ್ತೆ ನಮ್ಮ ಹೋರಾಟ ಮುಂದುವರೆಸುತ್ತೇವೆ… ಬೆಲೆಯೇರಿಕೆ ವಿರುದ್ಧ, ಸರಕಾರದ ವಿರುದ್ಧ… ಹಾಗಂತ ಸರಕಾರ ಬೀಳಿಸುವ ಅಪಾಯ ಒಡ್ಡುವುದಿಲ್ಲ….
(ಜಾಹೀರಾತಿಗೆ ಹಣ ಹೊಂದಿಸುವುದಕ್ಕೆ ಕಾಡಿಗೆ ಹೋದವರು ಇನ್ನೂ ಹಿಂದಿರುಗಿಲ್ಲ)
(ಉಳಿದ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಜೇಬಲ್ಲಿ ಕಾಸಿಲ್ಲದೆ ಜಾಹೀರಾತು ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. -ನಗೆ ಸಾಮ್ರಾಟ್)
2 responses so far ↓
M G Harish // May 12, 2008 at 1:21 pm |
ನಗೆ ಸಾಮ್ರಾಟರೆ, ನಿಮ್ಮ ಜಾಹೀರಾತುಗಳು ಚೆನ್ನಾಗಿವೆ.. ಹೀಗೇ ಮುಂದುವರೆಸಿ..
nagenagaaridotcom // May 18, 2008 at 3:07 pm |
ಹರೀಶರೇ,
ಇವು ನಮ್ಮ ಜಾಹೀರಾತುಗಳಲ್ಲ, ನಮ್ಮನ್ನಾಳಲು ಕ್ಯೂ ನಿಂತಿರುವ ಅರಾಜಕೀಯ ಪಕ್ಷಗಳ ಜಾಹೀರು-ಮಾತುಗಳು. ಇರಲಿ, ಧನ್ಯವಾದಗಳು…
ನಗೆ ಸಾಮ್ರಾಟ್