(ನಗಾರಿ ಮನೋರಂಜನಾ ಬ್ಯೂರೋ)
ಆ ರಕ್ಕಸ ಭೀಕರವಾದ ತಪಸ್ಸನ್ನಾಚರಿಸುತ್ತಿದ್ದ. ಅವನ ಭಕ್ತಿ, ಶ್ರದ್ಧೆ, ಛಲಕ್ಕೆ ಮಣಿದು ಬ್ರಹ್ಮದೇವನೇ ಪ್ರತ್ಯಕ್ಷನಾದ. ಈ ಬ್ರಹ್ಮ ದೇವ ಹಿಂದೆ ಸಹ ಹಲವಾರು ಬಾರಿ ಹೀಗೆ ತಪಸ್ಸನ್ನಾಚರಿಸಿದ ರಕ್ಕಸರಿಗೆ ದರ್ಶನ ನೀಡಿದ್ದುಂಟು. ಆ ರಕ್ಕಸರೆಲ್ಲರೂ ಕೇಳುತ್ತಿದ್ದದ್ದು ಒಂದೇ ವರವನ್ನು: ನಾನು ಚಿರಜೀವಿಯಾಗಬೇಕು. ನನಗೆ ಸಾವು ಬರಬಾರದು. ಆದರೆ ಬ್ರಹ್ಮದೇವ ಅವರಿಗೆಲ್ಲಾ ನನ್ನ ಬಳಿ ಆ ರೀತಿಯ ವರವನ್ನು ಕೊಡುವ ಸರ್ವಾಧಿಕಾರ ಇಲ್ಲವೆಂದು ಸ್ಪಷ್ಟಪಡಿಸುತ್ತಾ ಅಂಥದ್ದೇ ಅರ್ಥ ಬರುವ ಬೇರಾವ ವರವನ್ನಾದರೂ ಕೇಳಿಕೋ ಎಂದು ನುಣುಚಿಕೊಳ್ಳುತ್ತಿದ್ದ. ಆ ಹಿರಣ್ಯ ಕಶುಪು ತಾನು ಮನೆಯ ಹೊರಗೂ ಸಾಯಬಾರದು, ಒಳಗೂ ಸಾಯಬಾರದು, ಹಗಲೂ ಸಾಯಬಾರದು ರಾತ್ರಿಯೂ ಸಾಯಬಾರದು, ಮನುಷ್ಯನಿಂದಲೂ ಸಾಯಬಾರದು, ಪ್ರಾಣಿಯಿಂದಲೂ ಸಾಯಬಾರದು ಎಂದು ಇದ್ದ ಬದ್ದ ಬುದ್ಧಿಯನ್ನೆಲ್ಲಾ ಉಪಯೋಗಿಸಿ ಪಟ್ಟಿ ಸಿದ್ಧ ಪಡಿಸಿಕೊಂಡು ವರವನ್ನು ಕೇಳಿದ ಬ್ರಹ್ಮದೇವ ತಥಾಸ್ತು ಎಂದ. ದಡ್ಡನಾದ ಹಿರಣ್ಯಕಶುಪು ತಾನು ಚಿರಂಜೀವಿಯಾದೆ ಎಂದು ಬೀಗಿದ. ಆದರೆ ಯಾವಾಗ ನರಸಿಂಹಾವತಾರವೆತ್ತಿ ಬಂದ ಮಹಾವಿಷ್ಣು ಆತನನ್ನು ಆತನ ಎಲ್ಲಾ ಕಂಡೀಶನ್ನುಗಳನ್ನು ಮನ್ನಿಸುವ ಮೂಲಕವೇ ಹೊಟ್ಟೆ ಬಗಿದು ಕೊಂದನೋ ಆಗಲೇ ತನ್ನ ಮೂರ್ಖತನದ ಅರಿವಾದದ್ದು.
ಬಹುಶಃ ಈ ರಕ್ಕಸನಿಗೆ ಇದೆಲ್ಲಾ ಹಿಸ್ಟರಿ ತಿಳಿದಿತ್ತೇನೋ. ಬ್ರಹ್ಮ ಏನು ವರ ಬೇಕು ಕೇಳಿಕೋ ವತ್ಸಾ ಎಂದೊಡನೆ ಆತ ಅತ್ಯಂತ ಆತ್ಮ ವಿಶ್ವಾಸದಿಂದ ನನ್ನನ್ನು ಚಿರಂಜೀವಿಯಾಗಿಸು ಎಂದು ಕೇಳಿದ. ಬ್ರಹ್ಮ ಮತ್ತದೇ ಪ್ಲೇಟನ್ನು ಹಾಕಿ ಅಂಥ ವರವನ್ನು ಕೊಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಬೇರ್ಯಾವುದಾದರೂ ವರ ಕೇಳು ಎಂದ. ಅದಕ್ಕೆ ಆ ರಕ್ಕಸನು ಕೊಂಚ ಯೋಚಿಸಿ ಕುಟಿಲ ನಗೆಯನ್ನು ಬೀರುತ್ತಾ, “ಹಾಗಾದರೆ ನನ್ನನ್ನು ಟಿವಿ ಸೀರಿಯಲ್ ಮಾಡಿ ಬಿಡು” ಎಂದ. ಬ್ರಹ್ಮದೇವ ಹಿಂದೆ ಮುಂದೆ ನೋಡದೆ ತಥಾಸ್ತು ಎಂದುಬಿಟ್ಟ. ಆಮೇಲೆ ಆದ ಪ್ರಮಾದವನ್ನು ನೆನೆದು ಕುಸಿದು ಕುಳಿತ. ಟಿವಿ ಸೀರಿಯಲ್ ಆಗಿಬಿಡು ಎಂದರೆ ಚಿರಂಜೀವಿಯಾಗು ಎಂದು ವರ ಕೊಟ್ಟಂತೆಯೇ ಎಂಬುದನ್ನು ತಿಳಿದು ಹಳಹಳಿಸಿದ. 
ಹೀಗೆ ಚಿರಂಜೀವಿಯಾದ ರಕ್ಕಸ ಪ್ರತಿದಿನ ಜಗತ್ತನ್ನು ಕಣ್ಣೀರಿನ ಹೊಳೆಯಲ್ಲಿ ತೇಲಿ ಮುಗಿಸುತ್ತಾನೆ, ಪ್ರಾಣ ತಿನ್ನುತ್ತಾನೆ. ತಾನು ಚಿರಂಜೀವಿ ಎಂದು ಬೀಗುತ್ತಿದ್ದಾನೆ. ತನಗೆ ಸಾವೇ ಇಲ್ಲ ಎಂದು ಅಬ್ಬರಿಸುತ್ತಿದ್ದಾನೆ. ಆದರೆ ಸದ್ದಿಲ್ಲದೆ ಆತನಿಗೆ ಸಾವಿನ ದರ್ಶನವನ್ನು ಮಾಡಿಸುವ ಪ್ರಚಂಡ ಹುಟ್ಟಿಬಿಟ್ಟಿದ್ದಾನೆ. ಐಪಿಲ್ ಎಂಬ ಮಹಾ ಕರ್ಮಯುದ್ಧದ ರುವಾರಿ ಅಜೇಯನಾದ ಧಾರಾವಾಹಿ ರಕ್ಕಸನಿಗೆ ಸಾವಿನ ಮನೆಯ ಅಡ್ರೆಸ್ಸನ್ನು ದಪ್ಪ ಅಕ್ಷರಗಳಲ್ಲಿ ಬರೆದುಕೊಟ್ಟಿದ್ದಾನೆ. ಅತ್ತ ದೇವಲೋಕದಲ್ಲಿ ಬ್ರಹ್ಮ ದೇವ ನಿರಾಳವಾಗಿ ನಿಡಿದಾದ ನಿಟ್ಟುಸಿರನ್ನು ಬಿಟ್ಟಿದ್ದಾನೆ!
5 responses so far ↓
Ganesh K // April 27, 2008 at 12:11 pm |
ರಕ್ಕಸತಂಗಡಿ ಯುದ್ಧ ಚೆನ್ನಾಗಿದೆ. ಇಲ್ಲಿ ಒಂದು ಗಂ’ಬೀರ’ ವಿಷಯವನ್ನ ಪ್ರಸ್ತಾಪಿಸಬೇಕು.
ನೀವು ಎರಡನೇ ಸಾಲಿನಲ್ಲಿ ‘ಚಿರಜೀವಿ’ ಎಂದದ್ದು ತಪ್ಪು.
ಚಿ’ರಂ’ಜೀವಿ ಆಗಬೇಕಿತ್ತು. ಕೋನೆಯಿಂದ ಆರನೇ ಸಾಲಿನಲ್ಲಿ ಸರಿಯಾಗಿದೆ. ಅರ್ಥ ವ್ಯತ್ಯಾಸಗಳಿಲ್ಲದಿದ್ದರೂ it makes sense..!
ಈ ಬಗ್ಗ್ಗೆ ಸಮಗ್ರವಾಗಿ ಪರಿಶೀಲಿಸಿ ಪ್ರತಿಕ್ರಿಯಿಸಲಾಗುತ್ತಿದೆ.
ಇದು ಅಖಿಲ ಭಾರತ ಪಾನಿಗಳ, ಮಲ್ಯ ಅಭಿಮಾನಿಗಳಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗಿದೆ. ನಗೆ ನಗಾರಿಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಲುವರೆಂಬ ಭರವಸೆಯೊಂದಿಗೆ….
nagenagaaridotcom // April 27, 2008 at 7:30 pm |
ಗಣೇಶರೇ,
ನಿಮ್ಮ ಗಮ್‘ಬೀರ’ ವಿಷಯವನ್ನು ನಾವು ಬೀರ್ ಹಾಕಿ ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಧಾರಾವಾಹಿಗಳ ‘ಚೀರುವ’ಜೀವಿಗಳಿಗಿಂತ ಚೀ‘ರಂ’ಜೀವಿಗಳು ವಾಸಿ ಎಂದು ಜನರು ಆಯ್ಕೆ ಮಾಡಿರುವುದು ಮಲ್ಯದ ಮೋರೆಯಲ್ಲಿ ಸಂತಸ ತಂದಿದೆ.
ತಪ್ಪೊಪ್ಪಿಗೆಯನ್ನು ಮಾಡಿಕೊಳ್ಳಲು ನಾವೊಂದು ಗುಂಡು ಪಾರ್ಟಿಯನ್ನು ಹಮ್ಮಿಕೊಳ್ಳಲಿದ್ದೇವೆ ಅದರಲ್ಲಿ ನೀವೇ ನಮಗೆ ‘ಗುಂಡು’ ಹಾಕಿಸಬೇಕು. ಏನಂತೀರಿ…?
ನಗೆ ಸಾಮ್ರಾಟ್
Ganesh K // April 29, 2008 at 10:51 am |
ನಗೆ ಸಾಮ್ರಾಟರೇ,
ನಿಮ್ಮ ‘ತನಿಖಾ ವರದಿಯ ಫಲಶ್ರುತಿ’ಯಾಗಿ ನನ್ನಲ್ಲೊಂದು ಪಂಚ್ ಲೈನ್ ಹುಟ್ಟಿದೆ. ಒಮ್ಮೆ ಕಣ್ಣುಹಾಯಿಸಿ.
http://www.punchline.wordpress.com/
ಇನ್ನು ನಿಮ್ಮ ಹಿಂದಿನ ಪ್ರತಿಕ್ರಿಯೆಗೆ ಪ್ರತಿ ಪ್ರತಿಕ್ರಿಯೆ. ನಾನಿನ್ನೂ ಮಲ್ಯ ಅಭಿಮಾನಿಗಳ ಸಂಘಕ್ಕೆ ಸೇರಿಕೊಂಡಿಲ್ಲ. ಆದರೆ, ಅವರ ಪರವಾಗಿ ನಾನು ಬೆಂಬಲಕ್ಕೆ ನಿಂತಿದ್ದೇನೆ. ಗುಂಡು ಪಾರ್ಟಿ ಬದಲು ‘ಗಂಡು ಪಾರ್ಟಿ’ ಹಮ್ಮಿಕೊಂಡರೆ, ನಾನು ಬರಲು ಸಿದ್ಧ ಎಂದು ಇಲ್ಲಿ ಸ್ಪಷ್ಟಪಡಿಸುತ್ತೇನೆ..!
nagenagaaridotcom // April 29, 2008 at 3:07 pm |
ಗಣೇಶರೇ,
ತನಿಖಾವರದಿ ಹುಟ್ಟಿಸಿದ ಪಂಚನ್ನು ಓದಿ ನಮ್ಮ ಚೇಲ ಮುಚೇಲ ಎಗರಿ ಎಗರಿ ಕುಣಿದು ಸಂಭ್ರಮಿಸುತ್ತಿದ್ದಾನೆ.
ಮಲ್ಯ ಅಭಿಮಾನಿ ಸಂಘ ಸೇರುತ್ತೀರೋ ಬಿಡುತ್ತೀರೋ ಮದ್ಯ ಅಭಿಮಾನಿ ಸಂಘಕ್ಕಂತೂ ಸೇರಿಬಿಡಿ….
ನಗೆ ಸಾಮ್ರಾಟ್
vishwanath // January 6, 2009 at 10:10 am |
Hai iiiiiiiiiiiiiiiiiiiiiiiiii