ನಗೆ ನಗಾರಿ ಡಾಟ್ ಕಾಮ್

ಸ್ಕೂಪ್: ಆಸ್ಟ್ರೇಲಿಯಾದಿಂದ ದೀಪಿಕಾ ಬುಕ್ಕಿಂಗ್!

March 13, 2008 · 2 Comments

(ಅಂತರಾಷ್ಟ್ರೀಯ ಕ್ರೀಡಾ ಬ್ಯೂರೋ)

ಈ ಸ್ಫೋಟಕವಾದ ಹಾಗೂ ನೆಲಬಿರಿಯುವಂತಹ ಸುದ್ದಿಯನ್ನು ‘ನಗೆ ನಗಾರಿ’ ಅತಳ, ಸುತಳ, ಪಾತಾಳಗಳನ್ನು ಜಾಲಾಡಿ ಹೆಕ್ಕಿ ಕೊಂಡು ಬಂದು ನಿಮ್ಮ ಮುಂದೆ ಕುಕ್ಕುತ್ತಿದೆ. ಈ ತನಿಖಾ ವರದಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದ ವಿವಾದಗಳು ಏಳಬಹುದೆಂಬ ಮುನ್ಸೂಚನೆಯನ್ನು ನಮ್ಮ ಹವಾಮಾನ ಇಲಾಖೆ ಕೊಟ್ಟಿರುವುದರಿಂದ ಯಾರೂ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸುತ್ತಿದ್ದೇವೆ.

ಕ್ರಿಕೆಟ್ ಎಂಬ ‘ಮೆಂಟಲ್ ಮನ್’ಗಳ ಆಟವನ್ನು ಹುಟ್ಟಿಸಿದ ಇಂಗ್ಲೆಂಡಿನ ತಂಡ ಅಂದು ಆತ್ಮಹತ್ಯೆ ಮಾಡಿಕೊಳ್ಳಲು ನೂರೆಂಟು ವಿಧಾನಗಳು ಎಂಬ ಪುಸ್ತಕವನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದರು. ಅದಕ್ಕೆ ಕಾರಣವಿಷ್ಟೇ, ಸ್ಟುವರ್ಟ್ ಅಗಲ (Stuart Broad)ನ ಆರು ಎಸೆತಗಳ ಒಂದು ಓವರಿನಲ್ಲಿ ಆರು ಸಿಕ್ಸರ್ ಚಚ್ಚುವ ಮೂಲಕ ನಮ್ಮ ನಿಮ್ಮೆಲ್ಲರ ಮೆಚ್ಚಿನ ಯುವರಾಜ್ ಸಿಂಗ್ ಜಗತ್ತು ಬೆಚ್ಚುವಂತೆ ಬೊಬ್ಬಿರಿದು ಅಬ್ಬರಿಸಿ ಕೊಬ್ಬಿಳಿಸಿದ್ದರು. ಅವರನ್ನು ಕೆಣಕಿದ ಆಂಡ್ರೂ ಪ್ಲಿಂಟಾಫ್ ಅಡಗಿಕೊಳ್ಳಲು ಸೌತ್ ಆಫ್ರಿಕಾದ ಸ್ಟೇಡಿಯಮ್ಮಿನಲ್ಲಿ ಬಿಲವನ್ನು ಹುಡುಕುತ್ತಿದ್ದರು. ತಮ್ಮ ಕೆಚ್ಚೆದೆಯ ಚಚ್ಚುವ ಆಟವನ್ನು ಪ್ರದರ್ಶಿಸಿ ಯುವಿ ಆಸ್ಟ್ರೇಲಿಯಾಕ್ಕೆ ಟಿಕ್- ಟ್ವೆಂಟಿ -ಟ್ವೆಂಟಿ ಆಟದಲ್ಲಿ ಬೆವರಿಳಿಸಿದ್ದರು.

ಯುವಿಯ ಸ್ಫೋಟಕ, ಭಯಾನಕ, ಭೀಭತ್ಸಕಾರಿ ಬ್ಯಾಟಿಗೆ ಯಾವ ಎಣ್ಣೆಯನ್ನು ಸವರಿದರೂ ಅದು ಆತನ ಕೈಯಿಂದ ಜಾರಿ ಆತ ಬೋಲ್ಡ್ ಆಗುತ್ತಿರಲಿಲ್ಲ. ಈ ಭಯಾನಕ ಸತ್ಯದಿಂದ ಕಂಗೆಟ್ಟು ಹಗಲಿಡೀ ನಿದ್ರೆ ಮಾಡಲಾರದೆ, ರಾತ್ರಿಯಿಡೀ

ಎಚ್ಚರವಿರಲಾರದೆ ಕಂಗಾಲಾದ ಆಸ್ಟ್ರೇ-ಲಿಯಾದ ಆಟಗಾರರು ವಿಪರೀತವಾದ ಆತಂಕದಲ್ಲಿದ್ದರು. ಇದು ಸಾಲದು ಎಂಬಂತೆ ನಮ್ಮ ಯವ್ವಿ-ಯವ್ವೀ ರಾಜ ಸಿಂಗರು ಭಾರತದ ಥೇಮ್ಸಾಫಿಂಡಿಯಾ ಪತ್ರಿಕೆಗೆ ಕೊಟ್ಟ ಸಂಶಯ-ದರ್ಶನದಲ್ಲಿ ”ಆಸ್ಟ್ರೇಲಿಯಾದ ಪಿಚ್ಚುಗಳು ನನಗೆ ಅಚ್ಚುಮೆಚ್ಚಿನವು, ಅಲ್ಲಿ ಬೌಲರ್‌ಗಳನ್ನು ಚಚ್ಚುವುದಕ್ಕೆ ನಾನು ಹಲ್ಲು ಕಚ್ಚಿ ಕಾಯುತ್ತಿದ್ದೇನೆ” ಅಂದಾಗ ಕಿರ್ ಕಿರಿ ಪೇಂಟಿಂಗ್ ಬೆಸ್ತು ಬಿದ್ದರು.

ಅಂದು ರಾತ್ರಿಯೇ ಕಿರ್ ಕಿರಿ ಪೇಂಟಿಂಗ್, ಹೇ-ದನಾ, ಸೈಮೊಂಡು, ಬೆಟ್ಟದ ಇಲಿ ಗುಪ್ತ ಸಭೆ ಸೇರಿ ಈ ಯವ್ವಿ ರಾಜನ ಕಿರೀಟ ಉರುಳಿಸೋದಕ್ಕೆ, ಆತನ ಬ್ಯಾಟಿನ ತಪಸ್ಸನ್ನು ಕೆಡಿಸೋದಕ್ಕೆ ಏನು ಮಾಡಬೇಕು ಅಂತ ಮಧ್ಯರಾತ್ರಿಯವರೆಗೂ ಮದ್ಯದ ಜೊತೆ ಸಮಾಲೋಚನೆ ನಡೆಸಿದರು. ಆದರೆ ಅವರ ತಲೆಯಿಂದ ಹತ್ತಾರು ಹೇನುಗಳು ಹೊರಬಂದವೇ ವಿನಃ ಯಾವ ಉಪಾಯವೂ ಬರಲಿಲ್ಲ. ಕೊನೆಗೆ ಕಿರ್ ಕಿರಿ ಪೇಂಟಿಂಗರು ಎಲ್ಲೋ ಕದ್ದು ಓದಿದ್ದ ಸುದ್ದಿಯನ್ನಾಧರಿಸಿ ನೇರವಾಗಿ ಪದ್ಮನಾಭನಗರದ ಮಹಾಮಾಂತ್ರಿಕನ ಬಂಗಲೆಗೆ ಎಸ್.ಟಿ.ಡಿ ಮಾಡಿ ದೀರ್ಘ ಸಮಾಲೋಚನೆ ನಡೆಸಿದ್ದಾಗಿ ತಿಳಿದು ಬಂದಿದೆ.

ಮರುದಿನವೇ ಕಿರ್ ಕಿರಿ ಪೇಂಟಿಂಗ್ ದೀಪಕ್ಕಂಗೂ ಯವ್ವೀ ರಾಜಂಗೂ ಅಫೇರು ಅಂತ ಪೇಪರ್‌ಗಳಿಗೆ ರದ್ದಿ ಹರಿಬಿಟ್ಟಿದ್ದಾನೆ. ರದ್ದಿಯನ್ನು ಸುದ್ದಿಯನ್ನಾಗಿ ಓದಿ ದೀಪಕ್ಕ ಬಿಟ್ಟಿ ಪ್ರಚಾರ ಗಟ್ಟಿ ಪ್ರಚಾರ ಅಂದುಕೊಂಡು ಆಸ್ಟ್ರೇಲಿಯಾಕ್ಕೆ ಕಾಲ್ಕಿತ್ತಿದ್ದಾಳೆ. ಅವಳು ಬಂದದ್ದು ತನ್ನ ಆಟ ನೋಡೋದಕ್ಕೋ, ನನ್ನನ್ನು ನೋಡೋದಕ್ಕೋ ಅಂತ ಭಾರಿ ಕನ್ ಫೂಸ್ ಆದ ಯವ್ವಿರಾಜ ಕಿರಿಕಿರಿ ಮಾಡುವ ಬೌಲರ್‌ಗಳಿಗೆ ಬೇಗ ಔಟ್ ಆಗುವ ಮೂಲಕ ಸರಿಯಾದ ಪಾಠ ಕಲಿಸುತ್ತಾ ಕನಸಿನ ಲೋಕದಲ್ಲಿ ಮುಳುಗಿದ್ದ.

ಇನ್ನೇನು ಶಾಂತಿ ನಂಗೆ ಸಿಕ್ಕರೆ ದೀಪಕ್ಕನ ಜೊತೆ ಪಕ್ಕದ ‘ಕೋಣೆ’ ಸೇರಬಹುದು ಅಂತ ಮನಸ್ಸಲ್ಲಿ ಮಂಡಿಗೆ ಮುರಿಯುತ್ತಿದ್ದ ಯವ್ವಿರಾಜನ ಹೃದಯ ಒಡೆದು ಚೂರಾಗುವಂತೆ ಪಕ್ಕದ ಕೋಣೆ ದೀಪಕ್ಕ ‘ಸಾವು ಹರಿಯಾ’ ನಾಯಕ ರಣ ‘ಬೀರ’ನಿಗೆ ಪ್ರಪೋಸ್ ಮಾಡಿಬಿಟ್ಟಳು. ಈ ಸುದ್ದಿ ಕೇಳಿ ಯುವ್ವಿ ಎದೆ ಬಕ್ಕ ಬಾರಲು ಬಿದ್ದದ್ದನ್ನು ಕಂಡ ಅತ್ತ ರಣಬೀರನ ಮುಖದಲ್ಲಿ ಪ್ಯಾದೆ ನಗೆಯಿದ್ದರೆ, ಇತ್ತ ಪೇಂಟಿಂಗ್‌ನ ಮುಖದ ಮೇಲೆ ವಿಕಟ ಹಾಸವಿತ್ತು ಎಂಬುದು ತಿಳಿದುಬಂದಿದ್ದು ಹೆಚ್ಚಿನ ಮಾಹಿತಿಗಾಗಿ ಎದುರು ನೋಡಲಾಗುತ್ತಿದೆ.

Categories: ಕ್ರೀಡೆ
Tagged: , , , , ,

2 responses so far ↓

Leave a Comment