ನಗೆ ನಗಾರಿ ಡಾಟ್ ಕಾಮ್

ಬ್ಲಾಗ್ ಬೀಟ್ 5

March 13, 2008 · 1 Comment

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

ಅನಿವಾರ್ಯ ಕಾರಣಗಳಿಂದಾಗಿ ತುಂಬಾ ದಿನಗಳ ಕಾಲ ಸಾಮ್ರಾಟರಿಗೆ ಬ್ಲಾಗ್ ಬೀಟ್ ಹೊಡೆಯಲು ಸಾಧ್ಯವಾಗೇ ಇರಲಿಲ್ಲ. ಇದೇ ಸುಸಂದರ್ಭವನ್ನು ಬಳಸಿಕೊಂಡು ಅನೇಕ ಬ್ಲಾಗಿಗರು ಹುಲುಸಾದ ಬ್ಲಾಗಿನ ಬೆಳೆಯನ್ನು ತೆಗೆದು ಬ್ಲಾಕ್‌ನಲ್ಲಿ ಮಾರಿಕೊಂಡು ರತುನ ಟಾಟಾನ ‘ನಾನೋ’ ಕಾರ್ ಕೊಳ್ಳುವುದಕ್ಕಾಗಿ ಕೂಡಿಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಂದಾಗ ಸಾಮ್ರಾಟರು ಎದ್ದು ಬಿದ್ದು ಉಟ್ಟ ಬಟ್ಟೆಯಲ್ಲಿ ಬೀಟಿಗೆ ಹೊರಟರು. ಅವರ ಬೀಟಿನ ಏಟಿಗೆ caught ಆದ ಬರಹಗಳು ಇಲ್ಲಿವೆ.

ಪಂಚ್ ಕಾ ಸರಪಂಚ್

ಮರ್ಮಾಘಾತುಕ ಪಂಚ್ ಕೊಡುವುದರಲ್ಲಿ ನಿಸ್ಸೀಮರಾದ ಗಣೇಶ್ ಈ ಬಾರಿಯ ಬೀಟಿನಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರುವುದು ಪತ್ತೆಯಾಗಿದೆ. ಬಿದ್ದರೂ ಮೀಸೆ ಮಣ್ಣಾಗಬಾರದೆಂದರೆ ಏನು ಮಾಡಬೇಕು… ಎಂಬ ಪ್ರಶ್ನೆಗೆ ಮೀಸೇನೇ ಇಟ್ಟುಕೊಂಡಿರಬಾರದು ಎಂಬ ಅಭೂತ ಪೂರ್ವ ಉತ್ತರ ಕಂಡುಕೊಂಡಿದ್ದಾರೆ. ಹಾಗೆಯೇ ನಾಸ್ತಿಕರಿಗೆ ದೇವರಿಲ್ಲ ಎಂಬ ಲೋಕವಿದಿತ ಸತ್ಯವನ್ನು ಖಡಾಖಂಡಿತವಾಗಿ ತುಂಡು ತುಂಡು ಮಾಡಿದ್ದಾರೆ.

…………………………………………..

ಮದ್ಯಸಾರ

ಜಿ.ಪಿ.ರಾಜರತ್ನಂರ ರತ್ನಂಗೆ ಒಬ್ಬ ಸಮರ್ಥ ಗೆಳೆಯ ಹುಟ್ಟಿಕೊಂಡವ್ನೆ… ಗುರ್…ಅಪಾರ ಬ್ಲಾಗಲ್ಲಿ. ಮದ್ಯ ಸಾರದ ಮಾದಕತೆಯ ಮಧ್ಯದಲ್ಲಿ ಆತ ಆಲಾಪಿಸುತ್ತಿದ್ದ ಪದ್ಯವೊಂದನ್ನು ಕೇಳದೆ ಕದ್ದು ತಂದಿದ್ದಾರೆ ನಗೆ ಸಾಮ್ರಾಟ್:

ಚಳಿಗಾಲದ ಸಂಜೆ ಹಿತವಾಗಿ ಆವರಿಸಿದೆ

ಸುರಿಯುತಿಹ ಮಳೆ ಹೂವಂತೆ ನೇವರಿಸಿದೆ

ಈ ಖುಷಿಗೆ ಕುಡಿಯಲು ಗೆಳೆಯರೊಬ್ಬರೂ ಇಲ್ಲ

ಹಾಗೆಂದು ಸುಮ್ಮನುಳಿದರೆ ದೇವರೂ ಕ್ಷಮಿಸಲ್ಲ.

ಈ ಎಂಡ್ಕುಡ್ಕನ ಪದಗಳನ್ನು ಕೇಳಿದರೆ ಎಂಥಾ ಸಾಚಾನಿಗಾದರೂ ನಿಶೆಯ ಕಿಕ್ ಏರದಿರದು.

…………………………………………..

ಮಜಾವಾಣಿ

ಬಹಳ ದಿನಗಳ ನಂತರ ಮಜಾವಾಣಿಯ ವದರಿಗಾರರು ಕಾರ್ಯಪ್ರವೃತ್ತರಾಗಿ ಹಲವು ಕೌತುಕದ ವದರಿಗಳನ್ನು ಹೆಕ್ಕಿತಂದಿದ್ದಾರೆ. ” ನೀವು ತಿಂದ ನಂತರ ಎಸೆಯುವ ಎಂಜೆಲೆಯಲ್ಲಿ ಕೊಲೆಸ್ಟ್ರಾಲ್, ಸಕ್ಕರೆ ಅಂಶವಿರದಂತೆ ನೋಡಿಕೊಳ್ಳಿ, ನಾಯಿಗಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ” ಎಂದುಠರಾವು ಹೊರಡಿಸಿರುವ ಮೇಡಮ್ ಮನೇಕಾರ ಮಾತುಗಳು ಮಜಾವಾಣಿಯಲ್ಲಿ ಪ್ರಕಟವಾಗಿವೆ.

ನಾಯಿಗಳು ನನ್ನ ಮಕ್ಕಳಿದ್ದಂತೆ ಎಂದು ಅವರು ಹೇಳಿದ್ದನ್ನೇ ಕೆಲವು ಕುಹಕಿಗಳು ಅಪಾರ್ಥಮಾಡಿಕೊಂಡಿರುವುದು ಸಾಮ್ರಾಟರ ಗಮನಕ್ಕೆ ಬಂದಿದೆ.

…………………………………………..

ಬರೀ ಬೊಗಳೆ

ಇಡೀ ಜಗತ್ತಿನ ಸುದ್ದಿಗಾರರು ಮಲಗಿದರೂ, ಮೈಮರೆತರೂ ಬೊಗಳೂರಿನ ‘ಸದ್ದು’ಗಾರರು ಮಾತ್ರ ಏನಾದರೊಂದು ರದ್ದಿ ಹುಡುಕುತ್ತಲೇ ಇರುತ್ತಾರೆ. ಅಂಪೈರ್ ಬೆರೆಳೆತ್ತೋದೂ ಜನಾಂಗೀಯ ನಿಂದನೆ ಎಂದು ಕಿರ್ ಕಿರಿ ಪೇಂಟಿಂಗ್ ಅವರಿಗಾಗಿ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾನೆ.

ಅತ್ತ ಆಸ್ಟ್ರೇಲಿಯಾದಲ್ಲಿ ಕ್ರೀಡಾ ಬೊಗಳೆ ಸುತ್ತಿಕೊಂಡು ಇತ್ತ ಬೊಗಳೂರಿನಲ್ಲಿ ಯಾವ ಪಕ್ಷದಲ್ಲಿದ್ದೇನೆ ಎಂಬುದನ್ನೇ ಮರೆತ ಎಂಪಿಯನ್ನು ಬೆನ್ನತ್ತಿದ್ದಾರೆ. ಮಧ್ಯ ಸ್ವಲ್ಪ ಸಮಯ ಮಾಡಿಕೊಂಡು ಅಪರೂಪದ ಸಂಶಯ-ಶೋಧನೆಗಳ ಬಗ್ಗೆ ವದರಿ ಮಾಡಿದ್ದಾರೆ.

(ಕಳೆದ ವಾರದ ಬ್ಲಾಗ್ ಬೀಟ್)

Categories: ಬ್ಲಾಗ್ ಬೀಟ್
Tagged: , , ,

1 response so far ↓

Leave a Comment